Site icon Vistara News

Teachers Transfer: 10 ವರ್ಷ ಒಂದೇ ಕಡೆ ಇದ್ದ 5,000 ಶಿಕ್ಷಕರ ವರ್ಗಾವಣೆ

Teachers Transfer

Teachers Transfer

ನವದೆಹಲಿ: ಒಂದೇ ಕಡೆ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ದೆಹಲಿ ಸರ್ಕಾರ ಶಾಕ್‌ ನೀಡಿದೆ. ಒಂದೇ ಶಾಲೆಯಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಸುಮಾರು 5,000 ಶಿಕ್ಷಕರ ವರ್ಗಾವಣೆ (Teachers Transfer) ಆಗಲಿದೆ. ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಯನ್ನು ನಿಲ್ಲಿಸುವಂತೆ ಶಿಕ್ಷಣ ಸಚಿವೆ ಅತಿಶಿ (Atishi) ಸೂಚಿಸಿದ ಎರಡು ದಿನಗಳ ನಂತರ ಈ ಹೊಸ ಆದೇಶ ಹೊರಬಿದ್ದಿದೆ.

ಸರ್ಕಾರಿ ಶಾಲಾ ಶಿಕ್ಷಕರ ಸಂಘ (Government Schools Teachers’ Association) ಈ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜಿಎಸ್‌ಟಿಎ ಪ್ರಧಾನ ಕಾರ್ಯದರ್ಶಿ ಅಜಯ್ ವೀರ್ ಯಾದವ್ ಅವರು ಶಿಕ್ಷಣ ನಿರ್ದೇಶನಾಲಯ (Directorate of Education) ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆದಿದ್ದು, ವರ್ಗಾವಣೆಗೊಂಡ ಎಲ್ಲ ಶಿಕ್ಷಕರಿಗಾಗಿ ಕುಂದುಕೊರತೆ ಪರಿಹಾರ ಸಮಿತಿಯನ್ನು ರಚಿಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

ಅಜಯ್ ವೀರ್ ಯಾದವ್ ಸೇರಿದಂತೆ ನಾಲ್ಕೈದು ಸರ್ಕಾರಿ ಶಾಲಾ ಶಿಕ್ಷಕರ ನಿಯೋಗ ಗುರುವಾರ ಶಿಕ್ಷಣ ನಿರ್ದೇಶಕರನ್ನು ಭೇಟಿ ಮಾಡಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಲಿದೆ ಎಂದು ಮೂಲಗಳು ತಿಳಿಸಿವೆ. ವರ್ಗಾವಣೆಗೆ ಮುನ್ನ ಶಿಕ್ಷಕರ ವೈದ್ಯಕೀಯ ಸ್ಥಿತಿ, ವಯಸ್ಸು, ಅಂಗವಿಕಲತೆ ಮುಂತಾದ ಅಂಶಗಳನ್ನು ಪರಿಗಣಿಸಬೇಕು ಎಂದು ಮನವಿ ಸಲ್ಲಿಸಲಿದೆ.

ಕಳೆದ 14 ವರ್ಷಗಳಿಂದ ಸುಲ್ತಾನ್ಪುರಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ 36 ವರ್ಷದ ಪ್ರವೀಣ್ ಶರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿ, “ಈ ನಿರ್ಧಾರವು ವಿದ್ಯಾರ್ಥಿ-ಶಿಕ್ಷಕ ಸಂಬಂಧದ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುತ್ತದೆ. ಇದಲ್ಲದೆ ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಅಂಗವಿಕಲರಾಗಿರುವ ಶಿಕ್ಷಕರ ಮೇಲೆ ದುಷ್ಪರಿಣಾಮ ಬೀರುತ್ತದೆʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಸುಶಿತಾ ಬಿಜು ಅವರು ಜೂನ್ 11ರಂದು ಹೊರಡಿಸಿದ ಸುತ್ತೋಲೆಯಲ್ಲಿ, ಸರ್ಕಾರಿ ಶಾಲೆಗಳಲ್ಲಿನ ಬೋಧಕ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಆನ್‌ಲೈನ್‌ ಮೂಲಕ ಮನವಿ ಸಲ್ಲಿಸುವಂತೆ ಸೂಚಿಸಿದ್ದರು. “ಒಂದೇ ಶಾಲೆಯಲ್ಲಿ ಸತತವಾಗಿ 10 ವರ್ಷಗಳನ್ನು ಪೂರ್ಣಗೊಳಿಸಿದ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು” ಎಂದು ಸುತ್ತೋಲೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: Board Exam: ಈ ವರ್ಷ 5, 8, 9ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಇಲ್ಲ: ಶಿಕ್ಷಣ ಇಲಾಖೆ

ಈ ಸುತ್ತೋಲೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಳಿಕ ಜಿಎಸ್‌ಟಿಎ, ಈ ನಿರ್ಧಾರವು ವಿದ್ಯಾರ್ಥಿ-ಶಿಕ್ಷಕರ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಈ ಅಂಶವನ್ನು ಪರಿಗಣಿಸಬೇಕು ಎಂದು ಡಿಒಇಗೆ ಮನವಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರವು ವರ್ಗಾವಣೆಗಳನ್ನು ಜಾರಿಗೊಳಿಸುವುದಿಲ್ಲ ಎಂದು ಮೌಖಿಕ ಭರವಸೆ ನೀಡಿತ್ತು ಮತ್ತು ವರ್ಗಾವಣೆ ಐಚ್ಛಿಕವಾಗಿರುತ್ತದೆ ತಿಳಿಸಿತ್ತು. ಇದೀಗ ವರ್ಗಾವಣೆ ನಿರ್ಧಾರವನ್ನು ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸಲಾಗುತ್ತಿದೆ ಎಂದು ಅಜಯ್ ವೀರ್ ಯಾದವ್ ಆರೋಪಿಸಿದ್ದಾರೆ. ಸದ್ಯ ಸರ್ಕಾರಿ ಶಾಲಾ ಶಿಕ್ಷಕರ ನಿಯೋಗ ಶಿಕ್ಷಣ ನಿರ್ದೇಶಕರನ್ನು ಭೇಟಿಯಾಗಲಿದ್ದು, ಅವರು ಆದೇಶದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Exit mobile version