ಇಂದಿನ ವಿದ್ಯಾರ್ಥಿಗಳ ಬದುಕು ಹಿಂದಿನಂತಲ್ಲ, ಹಲವಾರು ಪರೀಕ್ಷೆಗಳಲ್ಲಿ ತಮ್ಮ ಸಾಮರ್ಥ್ಯ ಒರೆಗೆ ಹಚ್ಚಬೇಕು. ಹತ್ತು ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಯಾವುದರಲ್ಲೂ ಹಿಂದುಳಿಯಬಾರದು- ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ಸಂದರ್ಭದಲ್ಲಿ ದೇಹ ಮತ್ತು ಮನಸ್ಸುಗಳಿಗೆ ಸಾಕಷ್ಟು ಚೈತನ್ಯ ತುಂಬಿಸುವುದು ಹೇಗೆ? ಒತ್ತಡವನ್ನು ಮೀರಿ ಏಕಾಗ್ರತೆಯನ್ನು ಸಾಧಿಸುವುದು ಮತ್ತು ಈ ಮೂಲಕ ಫಲಿತಾಂಶವನ್ನು ತರುವುದು ಸುಲಭದ ಮಾತು ಖಂಡಿತಕ್ಕೂ ಅಲ್ಲ.. ಯೋಗ ಮತ್ತು ಪ್ರಾಣಾಯಾಮದ (pranayama for students) ಮೂಲಕ ಒತ್ತಡ ನಿವಾರಣೆ ಮತ್ತು ನೆನಪಿನ ಶಕ್ತಿ ವೃದ್ಧಿಸಿಕೊಳ್ಳಲು ಸಾಧ್ಯವಿದೆ.
ಯೋಗ ಮತ್ತು ಪ್ರಾಣಾಯಾಮಕ್ಕೆ ಹೋಗುವ ಮುನ್ನ ವಿದ್ಯಾರ್ಥಿಗಳು ತಮ್ಮ ಮೆದುಳಿನ ಕ್ಷಮತೆ ಹೆಚ್ಚಿಸಿಕೊಳ್ಳಲು ಮಾಡಲೇಬೇಕಾದ ಕೆಲವು ಕೆಲಸಗಳಿವೆ. ಎಂಥಾ ತಲೆ ಹೋಗುವಂಥ ಪರೀಕ್ಷೆಯೇ ಆದರೂ ದಿನಕ್ಕೆ ೭-೮ ತಾಸು ನಿದ್ದೆಯನ್ನು ಮಾಡಲೇಬೇಕು. ಇಡೀ ಧಾನ್ಯಗಳು ಮತ್ತು ಋತುಮಾನಕ್ಕೆ ತಕ್ಕ ಹಣ್ಣುತರಕಾರಿಗಳ ಸೇವನೆ ಅಗತ್ಯ. ಪರೀಕ್ಷೆಯ ಹೊತ್ತಿಗೆ ಆರೋಗ್ಯ ಹದಗೆಡದೆ ಕಾಪಾಡಿಕೊಳ್ಳಲು ನೀರು ಮತ್ತು ಆಹಾರದ ಶುದ್ಧತೆಯ ಬಗ್ಗೆ ಗಮನ ಹರಿಸಲೇಬೇಕು. ಇವೆಲ್ಲಾ ದೇಹ ಮತ್ತು ಮೆದುಳಿನ ಸಾಮರ್ಥ್ಯ ಕಾಪಾಡುವ ಮೂಲ ಅಗತ್ಯಗಳು. ಇವೆಲ್ಲವುಗಳ ಜೊತೆಗೆ ದಿನಕ್ಕೆ ೩೦ ನಿಮಿಷಗಳ ದೈಹಿಕ ಚಟಿವಟಿಕೆಯೂ ಅವಶ್ಯಕ. ಈ ಹೊತ್ತಿನಲ್ಲಿ ಯೋಗ ಮತ್ತು ಪ್ರಾಣಾಯಾಮ (pranayama for students) ಎಷ್ಟು ನೆರವಾಗುತ್ತವೆ ಎಂಬುದನ್ನು ನೋಡೋಣ…
ಪ್ರಾಣಾಯಾಮ
ಶಕ್ತಿ-ಚೈತನ್ಯಗಳು ಸೋರಿದಂತೆ ಭಾಸವಾಗುವುದು ಹೆಚ್ಚಿನ ಸಾರಿ ಸಾಕಷ್ಟು ಆಮ್ಲಜನಕ ದೇಹಕ್ಕೆ ದೊರೆಯದೆ ಇದ್ದಾಗ. ಒತ್ತಡ, ಆತಂಕ ಮುಂತಾದ ಕಾರಣಗಳಿಂದ ಉಸಿರನ್ನು ಪೂರ್ಣವಾಗಿ ತೆಗೆದುಕೊಳ್ಳುವ ಅಭ್ಯಾಸ ಮರೆಯಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ದಿನದಲ್ಲಿ ಕೆಲಸಮಯ ಪ್ರಾಣಾಯಾಮದಲ್ಲಿ ತೊಡಗಿಕೊಳ್ಳುವುದು ಉತ್ತಮ ಫಲಿತಾಂಶ ನೀಡಬಲ್ಲದು. ಮೆದುಳಿಗೆ ಬೇಕಷ್ಟು ಪ್ರಾಣವಾಯು ದೊರೆಯುತ್ತಿದ್ದಂತೆ, ಆ ಅಂಗದ ಕ್ಷಮತೆ ಸಹಜವಾಗಿಯೇ ಹೆಚ್ಚುತ್ತದೆ.
ನಾಡಿಶೋಧನ / ಅನುಲೋಮ ವಿಲೋಮ ಪ್ರಾಣಾಯಾಮ
ಸರಳವಾದ ಆದರೆ ಪರಿಣಾಮಕಾರಿಯಾದ ಉಸಿರಾಟ ತಂತ್ರವಿದು. ಮೂಗಿನ ಒಂದೊಂದೇ ಹೊರಳೆಗಳಲ್ಲಿ ಪರ್ಯಾಯವಾಗಿ ಉಸಿರಾಡುತ್ತಾ ಹೋಗುವ ಈ ಕ್ರಮದಿಂದ ಮನಸ್ಸಿನ ಉದ್ವೇಗ ಶಮನವಾಗುತ್ತದೆ. ಅಸಹಜ ಅಥವಾ ಅತಿ ಎನ್ನುವಂಥ ಮನಸ್ಸಿನ ಚಟುವಟಿಕೆಗಳು ಶಾಂತಗೊಳ್ಳುತ್ತಿದ್ದಂತೆ, ಮನಸ್ಸಿನ ಏಕಾಗ್ರತೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತದೆ. ಶ್ವಾಸಕೋಶಗಳ ಉಸಿರಾಡುವ ಸಾಮರ್ಥ್ಯ ವೃದ್ಧಿಸಿ, ಸಹಜವಾಗಿ ಈ ಅಂಗಗಳೆಲ್ಲಾ ಬಲಗೊಳ್ಳುತ್ತವೆ.
ಭ್ರಮರಿ
ದುಂಬಿಯಂತೆ ಝೇಂಕರಿಸುತ್ತಾ ನಡೆಸುವ ಉಸಿರಾಟ ಕ್ರಿಯೆಯಿದು. ಮುಚ್ಚಿದ ಕಣ್ಣು ಮತ್ತು ಕಿವಿಗಳ ಕಾರಣದಿಂದ, ನಾವೇ ಮಾಡುವ ಝೇಂಕಾರದ ನಾದ ನಮ್ಮೊಳಗೇ ಅನುರಣಿಸುವ ಮೂಲಕ ಬೇಡದ ಆಲೋಚನೆಗಳಿಗೆ ಕಡಿವಾಣ ಹಾಕುತ್ತದೆ. ಮುಖ್ಯವಾಗಿ ಬೇಡದ ಆಲೋಚನೆಗಳಿಂದ ಅಥವಾ ಪರೀಕ್ಷೆಯ ಭೀತಿಯಿಂದ ನಿದ್ದೆ ದೂರವಾಗಿದ್ದರೆ ಮಾಡಲೇಬೇಕಾದ ಪ್ರಾಣಾಯಾಮವಿದು. ಇದು ಮನದ ಉದ್ವಿಗ್ನತೆಯನ್ನು ಶಮನಗೊಳಿಸಿ, ಕಣ್ತುಂಬಾ ನಿದ್ದೆ ಬರಿಸುತ್ತದೆ.
ಭಸ್ತ್ರಿಕಾ
ಬಲವಾದ ನಿಟ್ಟುಸಿರೊಂದನ್ನು ಹೊರಹಾಕಿದಾಗ ಆಗುವ ಅನುಭವವೇ ಈ ಪ್ರಾಣಾಯಾಮದಲ್ಲಿ ಉಂಟಾಗುತ್ತದೆ. ಶ್ವಾಸನಾಳಗಳಲ್ಲಿ ಮತ್ತು ಮನಸ್ಸಿನಲ್ಲಿ ಇರುವಂಥ ಬೇಡದ್ದನ್ನು ಹೊರಹಾಕುವ ವಿಧಾನವಿದು. ತಿದಿಯೂದಿದಾಗ ಒಮ್ಮೆ ಜ್ವಲಿಸಿ ಶಮನವಾಗುವ ಬೆಂಕಿಯಂತೆ, ಕ್ರಮೇಣ ಮನಸ್ಸು ಶಮನವಾಗುತ್ತದೆ ಎನ್ನುವುದಾಗಿ ಯೋಗ ಪರಿಣತರು ಹೇಳುತ್ತಾರೆ. ಇದಲ್ಲದೆ, ಶೀತ್ಕಾರಿ ಮತ್ತು ಉಜ್ಜಯಿ ಪ್ರಾಣಾಯಾಮಗಳೂ ಲಾಭದಾಯಕ.
Education Guide: ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕಗಳಿವು
ತ್ರಾಟಕ
ಒಂದು ಬಿಂದುವಿನಲ್ಲೇ ಮನಸ್ಸನ್ನು ನೆಡುವ ಮೂಲಕ ದೃಷ್ಟಿಯನ್ನು ಮತ್ತು ಮನಸ್ಸನ್ನು ದೃಢಗೊಳಿಸುತ್ತದೆ. ನೆನಪಿನ ಶಕ್ತಿಯನ್ನು ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳಿಗೆ ಅತಿ ಉಪಯುಕ್ತವಿದು. ಮಾತ್ರವಲ್ಲ, ಒತ್ತಡದಿಂದ ಬರುವ ತಲೆನೋವು, ನಿದ್ರಾಹೀನತೆಯನ್ನು ನಿವಾರಿಸುತ್ತದೆ. ಎಲ್ಲೆಂದರಲ್ಲಿ ಹಾರಾಡುವ ಮನವೆಂಬ ಮರ್ಕಟವನ್ನು ಒಂದು ಬಿಂದುವಿನಲ್ಲಿ ಹಿಡಿದು ನಿಲ್ಲಿಸುವುದರಿಂದ ಮೆದುಳು ಶಾಂತವಾಗುತ್ತದೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಸಹನೆ ಮತ್ತು ಇಚ್ಛಾಶಕ್ತಿಯನ್ನು ವರ್ಧಿಸಿಕೊಳ್ಳಬಹುದು.
ಯೋಗ ಭಂಗಿಗಳು
ಸೂರ್ಯ ನಮಸ್ಕಾರ ದಿನವೂ ಮಾಡುವುದು ವಿದ್ಯಾರ್ಥಿಗಳಿಗೆ ಲಾಭದಾಯಕ. ದೇಹ ಮತ್ತು ಮನಸ್ಸನ್ನು ಹಗುರವಾಗಿಟ್ಟು, ಸ್ನಾಯುಗಳ ಬಲವರ್ಧನೆ ಮಾಡುತ್ತದೆ. ಜೊತೆಗೆ, ಬಗ್ಗಿ ಮಾಡುವ ಬಹಳಷ್ಟು ಆಸನಗಳು ಮೆದುಳಿಗೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆ. ಉದಾ, ಹಸ್ತಪಾದಾಸನ, ಪಶ್ಚಿಮೋತ್ತಾನಾಸನ, ಚಕ್ರಾಸನ ಮುಂತಾದವು. ಇವುಗಳಲ್ಲದೆ, ವಜ್ರಾಸನ, ವೀರಾಸನ, ಮತ್ಸ್ಯಾಸನ, ಮಾರ್ಜರಿಯಾಸನಗಳು ಕುತ್ತಿಗೆ, ಬೆನ್ನು, ಭುಜ, ಕಾಲು ಮತ್ತು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿಟ್ಟು, ದೇಹ-ಮನಸ್ಸುಗಳು ಸ್ಥಿರತೆ ಮತ್ತು ಸ್ವಾಸ್ಥ್ಯವನ್ನು ಕಾಪಾಡಬಲ್ಲವು.