Site icon Vistara News

ಪದವಿ, ಸ್ನಾತಕೋತ್ತರ ಪದವಿ ಸೀಟುಗಳು ಖಾಲಿ ಉಳಿದರೆ ಸಿಇಟಿ ನಡೆಸಲು ವಿವಿಗಳಿಗೆ ಯುಜಿಸಿ ಅನುಮತಿ!

Students

UGC permits universities to hold UG and PG entrance exams if seats remain vacant

ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗವು (UGC) ಪದವಿ ಹಾಗೂ ಸ್ನಾತಕೋತ್ತರ ಪದವಿ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ (CUET) ಬಳಿಕ ಕೋರ್ಸ್‌ಗಳಿಗೆ ಪ್ರವೇಶಾತಿ ಮಾಡಿಕೊಂಡರೂ ಸೀಟುಗಳು ಖಾಲಿ ಉಳಿದರೆ ಕೇಂದ್ರೀಯ ವಿಶ್ವವಿದ್ಯಾಲಯಗಳೇ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (CUET) ನಡೆಸುವ ಮೂಲಕ ಉಳಿದ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಯುಜಿಸಿಯು ಅನುಮತಿ ನೀಡಿದೆ.

ಯುಜಿಸಿ ಚೇರ್ಮನ್‌ ಪ್ರೊ.ಎಂ.ಜಗದೇಶ ಕುಮಾರ್‌ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಪ್ರವೇಶಾತಿ ಪ್ರಕ್ರಿಯೆ ಮುಗಿದ ಬಳಿಕವೂ ವಿಶ್ವವಿದ್ಯಾಲಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಸೀಟುಗಳು ಖಾಲಿ ಉಳಿಯುವುದು ಸಮಂಜಸ ಅಲ್ಲ. ಹಾಗಾಗಿ, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಸೀಟುಗಳು ಖಾಲಿ ಉಳಿಯಬಾರದು ಎಂಬ ದೃಷ್ಟಿಯಿಂದ ವಿವಿಗಳೇ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕವೇ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲು ಅನುಮತಿ ನೀಡಲಾಗಿದೆ” ಎಂದು ತಿಳಿಸಿದರು.

ಸಾಮಾನ್ಯ ಪ್ರವೇಶ ಪರೀಕ್ಷೆ ಕೈಗೊಳ್ಳಲು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಕೆಲ ಪ್ರಕ್ರಿಯೆಗಳನ್ನು ಸೂಚಿಸಲಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸದಿದ್ದರೆ ಸಿಯುಇಟಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಬಹುದಾಗಿದೆ ಎಂದು ಯುಜಿಸಿ ತಿಳಿಸಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್‌ಗಳಿಗೆ ಸೀಟುಗಳು ಬಾಕಿ ಉಳಿಯುವುದು ಮೂಲ ಸಂಪನ್ಮೂಲದ ಸದ್ಬಳಕೆಯಾದಂತೆ ಆಗುವುದಿಲ್ಲ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂಬ ಕಾರಣಕ್ಕಾಗಿ ಯುಜಿಸಿ ಈ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಸೀಟುಗಳು ಏಕೆ ಖಾಲಿ ಉಳಿಯುತ್ತಿದ್ದವು?

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿಗಾಗಿ ಸಿಯುಇಟಿ ನಡೆಸಲಾಗುತ್ತದೆ. ಮೂರು ಸುತ್ತಿನ ಪರೀಕ್ಷೆ, ಕೌನ್ಸೆಲಿಂಗ್ ನಡೆಸಿದ ಬಳಿಕ, ಅಂಕಗಳ ಆಧಾರದ ಮೇಲೆ ಪ್ರವೇಶಾತಿ ನೀಡಲಾಗುತ್ತದೆ. ಇಂತಹ ವಿಶಿಷ್ಟ ಪರೀಕ್ಷೆ, ಸೀಟು ಹಂಚಿಕೆ ಪದ್ಧತಿ ಇರುವ ಕಾರನ ಕೇಂದ್ರೀಯ ವಿವಿಗಳಲ್ಲಿ ಸೀಟುಗಳು ಬಾಕಿ ಉಳಿಯುತ್ತಿವೆ. ಹಾಗಾಗಿ, ಯುಜಿಸಿಯು ವಿಶ್ವವಿದ್ಯಾಲಯಗಳೇ ವಿವಿ ಮಟ್ಟದಲ್ಲಿ ಪರೀಕ್ಷೆ ನಡೆಸಿ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಿದೆ.

ಕಳೆದ ವಾರವಷ್ಟೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಸಿಯುಇಟಿ ಯುಜಿ 2024ರ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ದೇಶದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಎನ್‌ಟಿಎ ಮೇ 15 ಹಾಗೂ 24ರಂದು ಸಿಯುಇಟಿಯನ್ನು ನಡೆಸಿತ್ತು. ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು 13.48 ಲಕ್ಷ ಹಾಗೂ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆಯಲು 2.62 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

ಇದನ್ನೂ ಓದಿ: Puja Khedkar: ನಕಲಿ ದಾಖಲೆ ಸೃಷ್ಟಿ; ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ನೇಮಕ ರದ್ದು, ಪರೀಕ್ಷೆಯಿಂದಲೇ ಯುಪಿಎಸ್‌ಸಿ ಬ್ಯಾನ್!

Exit mobile version