ಬೆಂಗಳೂರು: ಸರ್ಕಾರದ (Karnataka Government) ಅನುಮತಿ ಪಡೆಯದೆ ಕೇಂದ್ರ ಪಠ್ಯಕ್ರಮದಲ್ಲಿ ಬೋಧನೆ ಮಾಡುವ ಶಿಕ್ಷಣ ಸಂಸ್ಥೆಗಳೂ (Educational institutes) ಸೇರಿದಂತೆ ರಾಜ್ಯದಲ್ಲಿ 1300ಕ್ಕೂ ಅಧಿಕ ಅನಧಿಕೃತ ಶಾಲೆಗಳಿಗೆ (Unauthorised Schools) ಅಪಾಯ ಎದುರಾಗಿದೆ. ಅನಧಿಕೃತ ಶಾಲೆಗಳ ವಿಚಾರದಲ್ಲಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ವರದಿ ಕೇಳಿದ ಬೆನ್ನಿಗೇ ಈಗ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಮುಚ್ಚುಗಡೆ (Fear of Closing anauthorised schools) ವಿಚಾರವನ್ನು ಮುನ್ನೆಲೆಗೆ ತಂದಿದೆ.
ಆಗಸ್ಟ್ 14ರ ಒಳಗಾಗಿ ರಾಜ್ಯದಲ್ಲಿರುವ ಎಲ್ಲ ಅನಧಿಕೃತ ಶಾಲೆಗಳನ್ನು ಗುರುತಿಸಿ ನಿಯಮಾನುಸಾರ ಮುಚ್ಚಿಸಬೇಕು, ಆ. 16ರ ಒಳಗಾಗಿ ದೃಢೀಕೃತ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಈ ಹಿಂದೆಯೇ ಇದರ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಅದರ ಜ್ಞಾಪನಾಪತ್ರವನ್ನು ಮತ್ತೆ ಕಳುಹಿಸಲಾಗಿದೆ.
ಜ್ಞಾಪನಾ ಪತ್ರದಲ್ಲಿರುವ ಮುಖ್ಯಾಂಶಗಳೇನು?
- ನೋಂದಣಿ, ಅನುಮತಿ ಪಡೆಯದೆ ನಡೆಸುತ್ತಿರುವ ಶಾಲೆಗಳನ್ನು ನಿಯಮಾನುಸಾರ ಮುಚ್ಚಬೇಕು.
- ಆ.14ರ ಒಳಗಾಗಿ ಮುಚ್ಚಿ ಪತ್ರಿಕಾ ಪ್ರಕಟಣೆ ನೀಡಬೇಕು. ಜತೆಗೆ ನೋಂದಣಿ ಇಲ್ಲದೆ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ಆ.14ರೊಳಗೆ ರದ್ದುಪಡಿಸಬೇಕು.
- ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸಲು ಅನುಮತಿ ಪಡೆದು ಅನಧಿಕೃತವಾಗಿ ಕೇಂದ್ರ ಪಠ್ಯದಲ್ಲಿ ಬೋಧಿಸುತ್ತಿರುವವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು.
- ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಿದ ಬಳಿಕವೂ ರಾಜ್ಯ ಪಠ್ಯಕ್ರಮ ಮುಂದುವರೆಸುತ್ತಿರುವವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು.
- ನೋಂದಣಿ ಪಡೆದ ಮಾಧ್ಯಮದಲ್ಲಿ ಬೋಧಿಸದೆ ಅನಧಿಕೃತವಾಗಿ ಬೇರೆ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳಿಗೆ ಸೂಚನೆ ಕೊಡಬೇಕು.
- ಅನಧಿಕೃತ ಪಠ್ಯ ಕ್ರಮ ಬೋಧಿಸುತ್ತಿರುವುದು, ಅನಧಿಕೃತವಾಗಿ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವುದು ಸೇರಿದಂತೆ ಎಲ್ಲಾ ನಿಯಮ ಉಲ್ಲಂಘನೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ: Hijab Row : ಹಿಜಾಬ್ಗೆ ಅವಕಾಶವಿಲ್ಲ, ಸಮವಸ್ತ್ರ ಕಡ್ಡಾಯ ; ವಿವಾದಿತ ಚಿಕ್ಕಮಗಳೂರು ಕಾಲೇಜಿನಲ್ಲಿ ಹೊಸ ಆದೇಶ
ನಿಯಮ ಉಲ್ಲಂಘನೆ ಸರಿ ಮಾಡಿಕೊಳ್ಳಲು ಅವಕಾಶವಿತ್ತು
ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳನ್ನು ಕ್ರಮಬದ್ಧಗೊಳಿಸಲು ಏ.13ರಿಂದ ಜೂ.20 ರವರೆಗೆ ನೋಟಿಸ್ ಅವಧಿ ನೀಡಲಾಗಿತ್ತು. ಜು. 1ರಂದು ಮತ್ತೆ 45 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಇಷ್ಟೆಲ್ಲ ಅವಕಾಶ ಕೊಟ್ಟ ಬಳಿಕವೂ ನಿಯಮ ಉಲ್ಲಂಘನೆಗೆ ಕ್ರಮ ಕೈಗೊಂಡಿರಲಿಲ್ಲ.
ರಾಜ್ಯದಲ್ಲಿ 1,300ಕ್ಕೂ ಅನಧಿಕೃತ ಶಾಲೆಗಳಿವೆ. ಸರ್ಕಾರದ ಸೂಚನೆ ಇದ್ದರೂ ಇಲಾಖೆ ಕ್ರಮ ವಹಿಸುವುದಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಈ ಬಗ್ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಜಿಲ್ಲಾ ಶಿಕ್ಷಣ ಇಲಾಖೆ ಈಗ ಏನು ಮಾಡಬೇಕು?
- ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಅನಧಿಕೃತ ಶಾಲೆಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಬೇಕು.
- ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದಾದರೂ ಅನಧಿಕೃತ ಶಾಲೆಗಳಿದ್ದರೆ ಅವುಗಳನ್ನು ಗುರುತಿಸಿ ರಾಜ್ಯ ಮತ್ತು ಸ್ಥಳೀಯ ಪತ್ರಿಕೆಯನ್ನು ಪ್ರಕಟಣೆ ನೀಡಬೇಕು.
- ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಶಾಲೆ ಇಲ್ಲದೆ ಇದ್ದರೆ ಅದರ ಬಗ್ಗೆಯೂ ಸ್ಪಷ್ಟತೆಯನ್ನು ನೀಡಬೇಕು.
- ಈ ಕುರಿತ ಅನುಪಾಲನಾ ವರದಿ ದೃಡೀಕರಿಸಿ ಆ.16ರೊಳಗೆ ಮುಖ್ಯಮಂತ್ರಿಗಳ ಕಚೇರಿಗೆ ಸಲ್ಲಿಸಬೇಕು.
- ಒಂದು ವೇಳೆ ನಿಗದಿತ ಅವಧಿಯೊಳಗೆ ಯಾವುದೇ ಮಾಹಿತಿ ಸಲ್ಲಿಸದಿದ್ದರೆ ಕರ್ತವ್ಯ ಲೋಪವೆಂದು ಭಾವಿಸಿ ಶಿಸ್ತು ಕ್ರಮವಹಿಸುವ ಕುರಿತು ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
- ಅನಧಿಕೃತ ಶಾಲೆಗಳ ಬಗ್ಗೆ ಕ್ರಮವಹಿಸುವ ಕಾರ್ಯದಲ್ಲಿ ವಿಳಂಬಕ್ಕೆ ಆಸ್ಪದ ನೀಡದೇ ವೈಯಕ್ತಿಕ ಗಮನಹರಿಸಿ ನಿಗದಿತ ದಿನಾಂಕದೊಳಗೆ ಮಾಹಿತಿಯನ್ನು ಕಚೇರಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
74 ಶಾಲೆಗಳನ್ನು ಮುಚ್ಚಲು ಅಂತಿಮ ಆದೇಶವಾಗಿದೆ
ಈ ನಡುವೆ, ಸಿಗುತ್ತಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ, 1300 ಶಾಲೆಗಳ ಪೈಕಿ ಹೆಚ್ಚಿನ ಶಾಲೆಗಳು ತಮ್ಮ ದಾಖಲೆಗಳನ್ನು, ಮಾನ್ಯತೆ ಕ್ರಮಗಳನ್ನು ಸರಿಪಡಿಸಿಕೊಂಡಿದ್ದು, ತೂಗುಗತ್ತಿಯಿಂದ ಪಾರಾಗಿವೆ. ಈಗ ಒಟ್ಟು 74 ಶಾಲೆಗಳ ಮುಚ್ಚುಗಡೆಗೆ ಶಿಕ್ಷಣ ಇಲಾಖೆ ಆದೇಶ ಮಾಡಿದೆ.
ತೂಗುಗತ್ತಿಯಡಿಯಲ್ಲಿದ್ದ 1300 ಶಾಲೆಗಳ ಪೈಕಿ 74 ಶಾಲೆಗಳು ತಮಗೆ ಅನುಮತಿ ನೀಡಿದ್ದಕ್ಕಿಂತ ಮೇಲ್ಮಟ್ಟದ ತರಗತಿಗಳನ್ನು ನಡೆಸುತ್ತಿದ್ದವು, 95 ಶಾಲೆಗಳು ತಾವು ಸಿಬಿಎಸ್ಸಿ ಪಠ್ಯಕ್ರಮದಲ್ಲಿ ಪಾಠ ಮಾಡುವುದಾಗಿ ಹೇಳುತ್ತಿದ್ದವು, ಆದರೆ, ಅನುಮತಿಯನ್ನು ಪಡೆದುಕೊಂಡಿರಲಿಲ್ಲ. 294 ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ನಡೆಯುತ್ತಿದ್ದವು, ಆದರೆ, ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ಪಡೆದುಕೊಂಡಿರಲೇ ಇಲ್ಲ. ಈಗ ಹೆಚ್ಚಿನವು ತಮ್ಮ ದಾಖಲೆಗಳನ್ನು ಸರಿ ಮಾಡಿಕೊಂಡಿವೆ.