ನವ ದೆಹಲಿ: ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ (Union Budget 2023) ಶಿಕ್ಷಣಕ್ಕೆ 1,12,898.97 ಕೋಟಿ ರೂ. ನೀಡಿದ್ದು, ಇದೊಂದು ದಾಖಲೆಯಾಗಿದೆ. ಇದುವರೆಗೆ ಯಾವುದೇ ಬಜೆಟ್‌ನಲ್ಲಿ ಇಷ್ಟೊಂದು ಹಣವನ್ನು ಶಿಕ್ಷಣಕ್ಕೆ ಮೀಸಲಿಡಲಾಗಿರಲಿಲ್ಲ. ಕಳೆದ ವರ್ಷದ ಶಿಕ್ಷಣ ಬಜೆಟ್‌ಗೆ ಹೋಲಿಸಿದರೆ ಇದು ಶೇ.8 ರಷ್ಟು ಹೆಚ್ಚಳವಾಗಿದೆ.
ಇದರಲ್ಲಿ ಶಾಲಾ ಶಿಕ್ಷಣಕ್ಕೆ 68,804.85 ಕೋಟಿ ರೂ. ಮತ್ತು ಉನ್ನತ ಶಿಕ್ಷಣಕ್ಕೆ 44,094.62 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ಒಟ್ಟಾರೆಯಾಗಿ ಶಿಕ್ಷಣಕ್ಕೆ 1,04,277.72 ಕೋಟಿ ರೂ. ನೀಡಲಾಗಿತ್ತು. ಮುಖ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ಜಾರಿಗೆ ತರುವ ಕುರಿತು ಬಜೆಟ್‌ನಲ್ಲಿ ಬದ್ಧತೆ ವ್ಯಕ್ತಪಡಿಸಲಾಗಿದೆ.
ಕುತೂಹಲಕಾರಿ ಸಂಗತಿ ಎಂದರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಸರ್ವ ಶಿಕ್ಷಣ ಅಭಿಯಾನಕ್ಕೆ ಬಜೆಟ್‌ನಲ್ಲಿ 37,453 ಕೋಟಿ ರೂ. ನಿಗದಿಪಡಿಸಲಾಗಿದೆ. ಕಳೆದ ವರ್ಷ 37,383 ಕೋಟಿ ರೂ. ನೀಡಲಾಗಿತ್ತು. ಇದರಲ್ಲಿ ಬಹಳ ಹೆಚ್ಚಳ ಮಾಡಲಾಗಿಲ್ಲ.
ಮಕ್ಕಳಿಗೆ ಅಗತ್ಯ ಪಠ್ಯ ಸಾಮಗ್ರಿಗಳು ದೊರೆಯುವಂತೆ ಮಾಡಲು ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಆರಂಭಿಸಲಾಗುವುದು ಎಂದು ಕೂಡ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ೨೦೧೮ ರ ಬಜೆಟ್‌ನಲ್ಲಿಯೂ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ರೂಪಿಸುವ ಕುರಿತು ಪ್ರಕಟಿಸಲಾಗಿತ್ತು. ಈ ಯೋಜನೆ ಅದಕ್ಕಿಂತ ಹೇಗೆ ಭಿನ್ನವಾಗಿರಲಿದೆ ಎಂಬುದು ಸ್ಪಷ್ಟವಾಗಿಲ್ಲ.
ಹೊಸ ಶೈಕ್ಷಣಿಕ ನೀತಿಯ ಜಾರಿಗೆ ಅಗತ್ಯವಾಗಿರುವಂತೆ ಶಿಕ್ಷಕರಿಗೆ ಸೂಕ್ತ ತರಬೇತಿಯನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಇದಕ್ಕೂ ಬಜೆಟ್‌ನಲ್ಲಿ ಹಣ ತೆಗೆದಿರಿಸಲಾಗಿದೆ. ದೇಶದಲ್ಲಿರುವ 157 ವೈದ್ಯಕೀಯ ಕಾಲೇಜುಗಳ ಜತೆಯಲ್ಲಿಯೇ 157 ನರ್ಸಿಂಗ್ ಕಾಲೇಜ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಈ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಮುಂದಿನ ಮೂರು ವರ್ಷದೊಳಗೆ ಏಕಲವ್ಯ ಮಾದರಿ ವಸತಿ ಶಾಲೆಗಳಿಗಾಗಿ 38,800 ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಶಿಕ್ಷಕರನ್ನು ಮಾತ್ರವಲ್ಲದೆ, ಬೋಧಕೇತರ ಸಿಬ್ಬಂದಿಯನ್ನೂ ನೇಮಕ ಮಾಡಿಕೊಳ್ಳಲಾಗುತ್ತದೆ. ಈಗ 740 ಏಕಲವ್ಯ ಮಾದರಿ ಶಾಲೆಗಳಲ್ಲಿ 3.5 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಬಜೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಇದನ್ನೂ ಓದಿ: Union Budget 2023: ಆಸಕ್ತಿಕರ ಸಂಗತಿಗಳೇನು?