Site icon Vistara News

Vistara Campaign | ವಿಸ್ತಾರ ನ್ಯೂಸ್‌ನ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನದ ಉದ್ದೇಶವೇನು? ಹೇಗೆ ನಡೆಯುತ್ತದೆ?

Vistara Campaign nammura shale nammellara shale

ದೇಶ, ಸಮಾಜ ಸಶಕ್ತವಾಗಬೇಕಾದರೆ ಆರ್ಥಿಕವಾಗಿ ಮಾತ್ರವಲ್ಲ ಶೈಕ್ಷಣಿಕವಾಗಿಯೂ ಸಂಪದ್ಭರಿತವಾಗಿರಬೇಕು. ಇದಕ್ಕಾಗಿ ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯೂ ಅತ್ಯುತ್ತಮ ಕಲಿಕಾ ತಾಣವಾಗಿಸಬೇಕು ಎಂಬ ಉದ್ದೇಶದಿಂದ ʻವಿಸ್ತಾರ ನ್ಯೂಸ್‌ʼ ಆರಂಭಿಸಿರುವ ʻನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼ ಅಭಿಯಾನಕ್ಕೆ (Vistara Campaign) ಚಾಲನೆ ನೀಡಲಾಗಿದೆ.

ದೇಶದ ವಿಕಾಸ ಎಂದರೆ ವ್ಯಕ್ತಿಯ ವಿಕಾಸ. ವ್ಯಕ್ತಿಯ ವಿಕಾಸದ ಮೂಲಕವೇ ದೇಶದ ವಿಕಾಸವಾಗಬೇಕು. ವ್ಯಕ್ತಿಯ ವಿಕಾಸ ಶಿಕ್ಷಣದ ಮೂಲಕವೇ ಆಗಬೇಕಿದೆ. ಇಂದು ಶೇ.50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ. ಪ್ರಾಥಮಿಕ ಶಿಕ್ಷಣಕ್ಕಂತೂ ಸರ್ಕಾರಿ ಶಾಲೆಗಳೇ ಮೂಲಾಧಾರ. ಹೀಗಾಗಿ ಪ್ರತಿಯೊಂದು ಸರ್ಕಾರಿ ಶಾಲೆಯನ್ನೂ ಅತ್ಯುತ್ತಮ ಕಲಿಕೆಯ ತಾಣವಾಗಿಸಬೇಕಾದ ಅನಿವಾರ್ಯತೆ ಇದೆ.

ದೇಶದಲ್ಲಿಯೇ ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ. ಇದನ್ನು ಇನ್ನಷ್ಟು ಬಲಪಡಿಸುವ ಮೂಲಕ ಪ್ರತಿಯೊಬ್ಬರಿಗೂ ಗಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.

ಈ ಅಭಿಯಾನ ಖಾಸಗಿ ಶಾಲೆಗಳ ವಿರುದ್ಧ ಅಲ್ಲ. ಎಲ್ಲರಿಗೂ ಶಿಕ್ಷಣ ದೊರೆಯಬೇಕಾದರೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಸೇರಿಯೇ ಈ ಕೆಲಸ ಮಾಡಬೇಕು. ಇಂದು ಸುಮಾರು ಶೇ. 50ರಷ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಈ ಶಾಲೆಗಳನ್ನು ನಡೆಸುವವರು ಬಂಡವಾಳ ಹೂಡಿ, ಕಷ್ಟ-ನಷ್ಟಗಳನ್ನು ಎದುರಿಸುತ್ತಾ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಶಿಕ್ಷಣದಲ್ಲಿ ಸುಧಾರಣೆ ತರಲು ಬಹು ದೊಡ್ಡ ಕೊಡುಗೆ ನೀಡುತ್ತಿದ್ದಾರೆ.

ಈ ಅಭಿಯಾನದ ವಿಶೇಷತೆ ಏನೆಂದರೆ, ಖಾಸಗಿ ಶಾಲೆಗಳನ್ನು ನಡೆಸುತ್ತಿರುವ ಅನೇಕ ಪ್ರಮುಖರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಮ್ಮ ಈ ಅಭಿಯಾನಕ್ಕೆ ಕೈ ಜೋಡಿಸಿರುವುದು. ಕಳೆದ 50 ವರ್ಷಗಳಿಂದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ರೂಪಿಸಬೇಕೆಂದು ಶ್ರಮಿಸುತ್ತಾ ಬಂದಿರುವ, ಪಿಇಎಸ್‌ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಪ್ರೊ. ಎಂ.ಆರ್‌. ದೊರೆಸ್ವಾಮಿ ಅವರು (ಮುಖ್ಯ ಪ್ರಯೋಜಕರಾಗಿ) ಕೈ ಜೋಡಿಸಿದ್ದಾರೆ. ಅಂತೆಯೇ ವಾಗ್ದೇವಿ ವಿಲಾಸ್‌ ಇನ್‌ಸ್ಟಿಟ್ಯೂಷನ್ಸ್‌ನ ಕೆ. ಹರೀಶ್‌, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ನೆಕ್ಕಂಟಿ ಸೂರಿಬಾಬು ಜತೆಯಾಗಿದ್ದಾರೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ, ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರ ಮತ್ತು ಈ ಸಮಾಜ ಮೂವರೂ ಸೇರಿ ಹೇಗೆ ನಡೆಸಬಹುದು ಎಂಬುದಕ್ಕೆ ಇದು ಮಾದರಿಯಾಗುವ ಅಭಿಯಾನವಾಗಲಿದೆ.

ವಿಸ್ತಾರ ನ್ಯೂಸ್‌ನಲ್ಲಿ ವಿಶೇಷ ಕಾಯಕ್ರಮ
ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಸರ್ಕಾರಿ ಶಾಲೆ, ಉತ್ತಮ ಕೆಲಸ ಮಾಡುತ್ತಿರುವ ಶಿಕ್ಷಕರು, ಶಿಕ್ಷಣಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಾಧಕರ ಪರಿಚಯವನ್ನು ಪ್ರತಿನಿತ್ಯ ವಿಸ್ತಾರ ನ್ಯೂಸ್‌ನ ಬೆಳಗ್ಗೆಯೇ ಪ್ರೈಮ್‌ ಟೈಮ್‌ ನ್ಯೂಸ್‌ (ನ್ಯೂಸ್‌ ಮಾರ್ನಿಂಗ್‌ ವಿಥ್‌ ಎಚ್‌ಪಿಕೆ) ಕಾರ್ಯಕ್ರಮದಲ್ಲಿ ಮಾಡಿಕೊಡಲಾಗುತ್ತದೆ. ಜತೆಗೆ ನಮ್ಮ ಅಭಿಯಾನದ ಮೂಲಕ ಮಾದರಿ ಶಾಲೆಯಾಗಿ ರೂಪಗೊಳ್ಳಲು ಆಯ್ಕೆಯಾಗಿರುವ ಶಾಲೆಯ ಪರಿಚಯ, ಕೊಡುಗೆ ನೀಡಿದ ದಾನಿಗಳೊಂದಿಗೆ ಸಂವಾದ, ನಾವೇನು ಮಾಡಿದ್ದೇವೆ ಎಂಬ ಮಾಹಿತಿಯನ್ನೂ ಈ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.

ಈ ಅಭಿಯಾನದಲ್ಲಿ ನೀವು ಹೇಗೆ ಭಾಗವಹಿಸಬಹುದು, ಸಹಕಾರ ನೀಡಬಹುದು ಎಂದರೆ ಶಾಲೆಗಳ ಅಭಿವೃದ್ಧಿಗೆ ಅಗತ್ಯವಾಗಿರುವ ಕೆಲಸ ಮಾಡಲು ಒಂದು ರೂಪಾಯಿಯಿಂದ ಸಾವಿರ, ಲಕ್ಷ, ಕೋಟಿಯವರೆಗೆ ಎಷ್ಟು ಬೇಕಾದರೂ ಹಣ ನೀಡಬಹುದು.

ನಾನು ನಮ್ಮೂರಿನ ಶಾಲೆಯನ್ನು ಪ್ರತಿನಿತ್ಯ ಸ್ವಚ್ಛಗೊಳಿಸಿ, ಮಕ್ಕಳಿಗೆ ಅಹ್ಲಾದಕರ ವಾತಾವರಣ ನಿರ್ಮಾಣ ಮಾಡುತ್ತೇನೆ ಎಂದರೆ ಆ ಕೆಲಸವನ್ನೂ ಮಾಡಬಹುದು. ವಸ್ತುಗಳ ರೂಪದಲ್ಲಿ ಅಂದರೆ, ಶಾಲೆಗೆ ಬೇಕಾಗಿರುವ ಕುಡಿಯುವ ನೀರಿನ ಫಿಲ್ಟರ್‌, ಕಂಪ್ಯೂಟರ್‌, ಸ್ಮಾರ್ಟ್‌ ಕ್ಲಾಸ್‌ ಸಾಮಗ್ರಿಗಳು, ಇಂಟರ್‌ನೆಟ್‌ ಸೌಕರ್ಯ, ಪುಸ್ತಕಗಳನ್ನು, ಕೂರಲು ಬೇಕಾದ ಬೆಂಚ್‌, ಕುರ್ಚಿಗಳನ್ನು ನೀಡಬಹುದು, ಕಾಂಪೌಂಡ್‌, ಕಟ್ಟಡ, ಶೌಚಾಲಯ ಕಟ್ಟಿಸಿಕೊಡಬಹುದು, ಇಲ್ಲ, ನಾನು ಪದವೀಧರ, ನನ್ನ ಬಿಡುವಿನ ಸಮಯದಲ್ಲಿ ಯಾವುದಾದರೂ ವಿಷಯದ ಕುರಿತು ಪಾಠ ಮಾಡುತ್ತೇನೆ, ಅಥವಾ ಪಠ್ಯೇತರ ಚಟುವಟಿಕೆಗಳನ್ನು ಕಲಿಸುತ್ತೇನೆ ಎಂದರೆ ಅದನ್ನೂ ಮಾಡಬಹುದು.

ಶಾಲೆಗಳ ಅಭಿವೃದ್ಧಿಗೆ ಅಗತ್ಯವಾಗಿರುವ ಕೊಡುಗೆ ನೀಡುವ ಶಕ್ತಿಯನ್ನು ನಮ್ಮ ಸಮಾಜ ಹೊಂದಿದೆ. ಅದನ್ನು ಶಾಲೆಗಳಿಗೆ ಜೋಡಿಸುವ ಕೆಲಸವನ್ನು ನಾವು ಪಾರದರ್ಶಕವಾಗಿ ಈ ಆಂದೋಲನದಲ್ಲಿ ಮಾಡುತ್ತೇವೆ.

ಇದನ್ನೂ ಓದಿ | ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಉದ್ಘಾಟನೆ | ಸಕಾರಾತ್ಮಕ ಭಾಗೀದಾರಿಕೆಯ ಮಾದರಿ: ಶಿಕ್ಷಣ ಸಚಿವ ಬಿ.ಸಿ ನಾಗೇಶ್

Exit mobile version