Site icon Vistara News

SSLC Result 2023 : ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?; ಇಲ್ಲಿದೆ ಉಪಯುಕ್ತ ಟಿಪ್ಸ್‌

ಎಸ್‌ಎಸ್‌ಎಲ್‌ಸಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ (SSLC Result 2023) ಪ್ರಕಟಗೊಂಡ ನಂತರ ಬಹುತೇಕ ಪೋಷಕರನ್ನು, ವಿದ್ಯಾರ್ಥಿಗಳನ್ನು ಕಾಡುವ ಬಹುದೊಡ್ಡ ಪ್ರಶ್ನೆ ಎಂದರೆ ʼಮುಂದೇನು?ʼ ಎಂಬುದು. ವಿದ್ಯಾರ್ಥಿಗಳು ʼಮುಂದೆ ನಾನು ಇದನ್ನು ಓದುತ್ತೇನೆ… ಅದನ್ನು ಮಾಡುತ್ತೇನೆʼ ಎಂದು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿರುತ್ತಾರೆ. ಪೋಷಕರು ಕೂಡ ತಮ್ಮ ಮಕ್ಕಳ ಓದಿನ ಬಗ್ಗೆ ಸಾಕಷ್ಟು ಕನಸು ಹೊತ್ತಿರುತ್ತಾರೆ. ಆದರೆ ಫಲಿತಾಂಶ ಬಂದಾಗ ವಿದ್ಯಾರ್ಥಿಗಳು ಪಡೆದ ಅಂಕಗಳು (ನಿರೀಕ್ಷಗಿಂತ ಹೆಚ್ಚಿರಲಿ, ಕಡಿಮೆ ಇರಲಿ) ಅವರನ್ನು ಇನ್ನೊಮ್ಮೆ ಈ ಬಗ್ಗೆ ಯೋಚಿಸುವಂತೆ ಮಾಡುವುದಂತೂ ಖಚಿತ.

ಇಷ್ಟು ಅಂಕ ಬಂದಿರುವುದರಿಂದ ಈಗ ಏನು ಓದಿದರೆ ಒಳ್ಳೆಯದು ಯಾವ ವಿಷಯ ತೆಗೆದುಕೊಂಡರೆ ಮುಂದೆ ಹೆಚ್ಚು ಅಂಕ ಪಡೆಯಬಹುದು? ಯಾವ ಶಿಕ್ಷಣಕ್ಕೆ ಸ್ಕೋಪ್ ಇದೆ? ಏನು ಓದಿದರೆ ಭವಿಷ್ಯ ಚೆನ್ನಾಗಿರುತ್ತದೆ? ಹೀಗೆ ಪ್ರಶ್ನೆಗಳ ಸರಮಾಲೆಯೆ ವಿದ್ಯಾರ್ಥಿಗಳ ಮತ್ತು ಪೋಷಕರ  ಮುಂದೆ  ಇರುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ” ರೆಡಿಮೇಡ್” ಉತ್ತರ ಖಂಡಿತಾ ಇಲ್ಲ.

ಒಬ್ಬೊಬ್ಬ ವಿದ್ಯಾರ್ಥಿಯದು ಒಂದೊಂದು ರೀತಿಯ ಪರಿಸ್ಥಿತಿ. ಸೌಕರ್ಯಗಳ ಕೊರತೆಯಿಂದಾಗಿ ಕೆಲವರಿಗೆ ಸೀಮಿತ ಅವಕಾಶಗಳು ಕೂಡ ಇರುತ್ತವೆ. ಹೀಗಾಗಿ ಇರುವುದರಲ್ಲಿಯೇ ಅತ್ಯುತ್ತಮವಾದ ತೀರ್ಮಾನವನ್ನು ವಿದ್ಯಾರ್ಥಿಯು ತೆಗೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ :SSLC Result 2023 : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ನಾಲ್ವರು ವಿದ್ಯಾರ್ಥಿಗಳು ಔಟ್‌ ಆಫ್‌ ಔಟ್‌

 ಆದರೆ ಮುಂದೇನು ಎಂಬುದನ್ನು ತೀರ್ಮಾನಿಸುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಯ ಆಸಕ್ತಿ, ಪೋಷಕರ ಕನಸು ಒಂದೆಡೆಯಾಗಿರುತ್ತದೆ, ವಿದ್ಯಾರ್ಥಿಯು ಓದುವುದೇ ಮತ್ತೊಂದಾಗಿರುತ್ತದೆ. ಮುಖ್ಯವಾಗಿ ವಿದ್ಯಾರ್ಥಿಯು ಈ ಸಂದರ್ಭದಲ್ಲಿ ಎಲ್ಲರಿಂದಲೂ ಮಾಹಿತಿ ಪಡೆದುಕೊಂಡು, ಸೂಕ್ತವಾದ ತೀರ್ಮಾನ ತೆಗೆದುಕೊಂಡಲ್ಲಿ ಮಾತ್ರ ಅವರ ಭವಿಷ್ಯ ಉಜ್ವಲವಾಗಿರುತ್ತದೆ.

ʼʼತೀರ್ಮಾನ ತೆಗೆದುಕೊಳ್ಳುವಾಗ ” ಜೀವನದ ಉದ್ದೇಶ”, “ಸ್ವ -ವ್ಯಕ್ತಿತ್ವ”, “ಬೆಳೆದ ಪರಿಸರ” ಮತ್ತು “ಬಾಧ್ಯತೆ” ಈ ನಾಲ್ಕು ವಿಷಯಗಳನ್ನು ಗಮನದಲ್ಲಿರಿಸಿ, ಸೂಕ್ತವಾದ ವಿಷಯವನ್ನು ಆರಿಸಿ, ಶಿಕ್ಷಣ ಮುಂದುವರಿಸುವುದು ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಆನೀವಾರ್ಯ ಮತ್ತು ಅಗತ್ಯವಾಗಿದೆʼʼ  ಎನ್ನುತ್ತಾರೆ ಮಂಗಳೂರಿನ ಸಂತ ಅಲೋಶಿಯಸ್  ಕಾಲೇಜಿನ ಅಸೋಸಿಯೇಟ್‌ ಪ್ರೊಫೆಸರ್‌ ಡಾ. ಕೆ.ಎನ್. ಲೋಬೋ.

ನಿಮ್ಮ ಉದ್ದೇಶವೇನು, ಪೋಷಕರ ಕನುಸಗಳೇನು, ಏನಾಗಬೇಕೆಂದುಕೊಂಡಿದ್ದೀರಿ ಎಂಬುದನ್ನು ಮೊದಲು ಸ್ಪಷ್ಟಮಾಡಿಕೊಳ್ಳಿ, ನಂತರ ನಿಮ್ಮ ವ್ಯಕ್ತಿತ್ವಕ್ಕೆ ನೀವಂದುಕೊಂಡಿದ್ದು ಸೂಕ್ತವಾಗಿದೆಯೇ, ಇದರಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಮೂರನೇಯದಾಗಿ, ನೀವೇನಂದುಕೊಂಡಿದ್ದೀರೋ ಅದನ್ನು ಸಾಧಿಸುವ ಅವಕಾಶಗಳು, ಸೌಕರ್ಯಗಳು ನಿಮಗಿದೆಯೇ ಎಂದು ನೋಡಿಕೊಳ್ಳಿ. ಕೊನೆಯದಾಗಿ ನೀವಂದುಕೊಂಡಿದ್ದನ್ನು ಸಾಧಿಸುವ ಬದ್ಧತೆ ನಿಮಗಿದೆಯೇ, ನೂರಕ್ಕೆ ನೂರರಷ್ಟು ಅಂದುಕೊಂಡಿದ್ದನ್ನು ಸಾಧಿಸುವ ಛಲ ಹೊಂದಿರುವಿರಾ ಎಂಬುದನ್ನು ನೀವೇ ನೋಡಿಕೊಂಡು ತೀರ್ಮಾನಿಸಿ ಎಂದು ಅವರು ಸಲಹೆ ನೀಡಿದ್ದಾರೆ.

ಇಂದು ಯಾವುದೇ ಶಿಕ್ಷಣ ಪಡೆಯುವುದಕ್ಕೂ ತುಂಬಾ ಹಣ ಖರ್ಚು ಮಾಡಬೇಕಾಗುತ್ತದೆ. ನಾವು ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಕೊಂಡರೂ ನಮಗೆ ಗ್ಯಾರಂಟಿ /ವಾರಂಟಿ ಸಿಗುತ್ತದೆ. ಆದರೆ ನಾವು ಕಲಿತ ಶಿಕ್ಷಣಕ್ಕೆ ಅಥವಾ ಪದವಿಗೆ ಉದ್ಯೋಗ ದೊರೆಯುತ್ತದೆ ಎಂದು ಯಾವೂದೇ  ಶಿಕ್ಷಣ ಸಂಸ್ಥೆಯಾಗಲಿ ಆಥವಾ ವಿಶ್ವವಿದ್ಯಾನಿಲಯವಾಗಲಿ ಯಾವುದೇ ರೀತಿಯ ಗ್ಯಾರಂಟಿ / ವಾರಂಟಿ ಕೊಡುವುದಿಲ್ಲ. ಹೀಗಾಗಿ ನಾವು ಬಹಳ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳಬೇಕು.

ಡಾ. ಕೆ.ಎನ್. ಲೋಬೋ | ಅಸೋಸಿಯೇಟ್‌ ಪ್ರೊಫೆಸರ್‌, ಸಂತ ಅಲೋಶಿಯಸ್  ಕಾಲೇಜು ಮಂಗಳೂರು

ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿ

ಇಂದು ನೀವು ಮಾಡುವ  ತೀರ್ಮಾನ ನಾಳೆಯ ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತದೆ. ಹೀಗಾಗಿ ನೀವು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಮೊದಲಿಗೆ ಭವಿಷ್ಯದ ಕುರಿತಂತೆ ಸ್ಪಸ್ಟ ಗುರಿ ಮತ್ತು ಪರಿಕಲ್ಪನೆ ಇಟ್ಟುಕೊಂಡರೆ ಇಂತಹ ಸಂದರ್ಭದಲ್ಲಿ ಅತ್ಯುತ್ತಮ ತೀರ್ಮಾನವನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ.

ನೀವು ನಿಮ್ಮ ಗುರಿ ತಲುಪಲು ಸೂಕ್ತವಾದ ಶಿಕ್ಷಣ ವಿಷಯ ಆಯ್ಕೆ ಮಾಡಿಕೊಳ್ಳಲು ಈ ಕೆಳಗಿನ ಪ್ರಶ್ನೆಗಳನ್ನು ನೀವೇ ನಿಮಗೆ ಕೇಳಿಕೊಳ್ಳಿ.

ಹೀಗೆ ನೀವು ನಿಮಗೇ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳಿಕೊಂಡು, ಅದಕ್ಕೆ ಉತ್ತರವನ್ನು ಸಾಧ್ಯವಾದರೆ ಬರೆಯಿರಿ. ಇದರಿಂದ ನಿಮ್ಮ ಯೋಚನೆಯು ಸ್ಪಷ್ಟವಾಗುತ್ತಾ ಹೋಗುತ್ತದೆ. ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ.
ಆಲ್‌ ದಿ ಬೆಸ್ಟ್‌ !

ಇದನ್ನೂ ಓದಿ: SSLC Result 2023: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಫಸ್ಟ್‌, ಮಂಡ್ಯ ನೆಕ್ಸ್ಟ್‌, ಯಾದಗಿರಿ ಲಾಸ್ಟ್‌

Exit mobile version