Site icon Vistara News

Children’s day: ನ. 14ರಂದು ಈ ಬಾರಿ ರಜೆ, ಹಾಗಿದ್ದರೆ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಯಾವಾಗ?

Children's day 2023

ಬೆಂಗಳೂರು: ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರೂ (Jawaharlal Nehru) ಅವರ ಜನ್ಮದಿನವಾದ ನವೆಂಬರ್‌ 14ನ್ನು (November 14) ಮಕ್ಕಳ ದಿನಾಚರಣೆಯಾಗಿ Children’s day) ಶಾಲೆಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಈ ಬಾರಿ ನವೆಂಬರ್‌ 14ರಂದು ದೀಪಾವಳಿಯ ಹಬ್ಬದಲ್ಲಿ (Deepavali Festival) ಬರುವ ಬಲಿ ಪಾಡ್ಯಮಿ ನಿಮಿತ್ತ ರಜೆ ಇದೆ. ಹಾಗಿದ್ದರೆ ಈ ಬಾರಿ ಮಕ್ಕಳ ದಿನಾಚರಣೆ ಹೇಗೆ ಮಾಡುವುದು ಎನ್ನುವುದು ದೊಡ್ಡ ಪ್ರಶ್ನೆ. ಇದಕ್ಕೆ ಶಿಕ್ಷಣ ಇಲಾಖೆಯೇ (Education department) ಪರಿಹಾರ ತಿಳಿಸಿದೆ.

ಡಿಎಸ್ಇಆರ್‌ಟಿ. ಬೆಂಗಳೂರು ನಿರ್ದೇಶಕರ ಪರವಾಗಿ ಒಂದು ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಇದರಲ್ಲಿ ರಾಜ್ಯದ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸುವ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ನವೆಂಬರ್‌ 14ರ ಬದಲು ತಕ್ಷಣದ, ಸೂಕ್ತವಾದ ಬೇರೆ ದಿನದಂದು ಮಕ್ಕಳ ದಿನಾಚರಣೆ ಆಚರಿಸಲು ಸೂಚಿಸಲಾಗಿದೆ.

ಸುತ್ತೋಲೆಯಲ್ಲಿ ಏನಿದೆ?

-ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಹಾಗೂ ಇನ್ನಿತರ ಪ್ರಮುಖ ಜಯಂತಿಗಳನ್ನು ಕಡ್ಡಾಯವಾಗಿ ಆಯಾ ದಿನಗಳಂದು ಗೌರವ ಪೂರ್ವಕವಾಗಿ ಆಚರಿಸತಕ್ಕದ್ದೆಂದು, ಮಾನ್ಯ ಆಯಕ್ತರ ಕಚೇರಿಯ ದಿನಾಂಕ 30/03/2023ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

– ಪ್ರತಿ ವರ್ಷ ನವೆಂಬರ್ 14 ರಂದು ಭಾರತದ ಪಥಮ ಪ್ರಧಾನ ಮಂತ್ರಿಗಳಾದ ಪಂಡಿತ ಜವಾಹರ್ ಲಾಲ್ ನೆಹರುರವರ ಜಯಂತಿಯ ನಿಮಿತ್ತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಬಾರಿ ನವಂಬರ್ 14, ಮಂಗಳವಾರ ಆಚರಿಸಬೇಕಾದ ಮಕ್ಕಳ ದಿನಾಚರಣೆಯ ದಿನದಂದು ಬಲಿಪಾಡ್ಯಮಿ ದೀಪಾವಳಿಯ ಪ್ರಯುಕ್ತ ಸಾರ್ವತ್ರಿಕ ರಜೆ ಇರುತ್ತದೆ.

– ಈ ಹಿನ್ನೆಲೆಯಲ್ಲಿ ಈ ಸಾಲಿನ ಮಕ್ಕಳ ದಿನಾಚರಣೆಯನ್ನು ನಂತರದ ಶಾಲಾ ದಿನದಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವುದು ಅತ್ಯಗತ್ಯವಾಗಿರುತ್ತದೆ.

-ಮಕ್ಕಳ ದಿನಾಚರಣೆಯು ಕೇವಲ ಸಾಂಕೇತಿಕ ಆಚರಣೆಯಲ್ಲ, ಇದು ದೇಶದ ಭವಿಷ್ಯತ್ತನ್ನು ರೂಪಿಸುವಲ್ಲಿ ಅತ್ಯಂತ ಮಹತ್ತರವಾದ ಆಚರಣೆಯಾಗಿದೆ. ಹಾಗಾಗಿ ನವೆಂಬರ್ 14ರ ನಂತರದ ಶಾಲಾ ಕರ್ತವ್ಯದ ದಿನದಂದು, ಶಾಲಾ ಪ್ರಾರ್ಥನಾ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ರಾಜ್ಯದ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಕ್ರಮವಹಿಸತಕ್ಕದ್ದು ಎಂದು ಸೂಚನೆ ನೀಡಲಾಗಿದೆ ಎಂದು ಸುತ್ತೋಲೆ ತಿಳಿಸಿದೆ.

ಇದನ್ನೂ ಓದಿ: Deepavali 2023: ದೀಪಾವಳಿಯಂದು ಯಾವಾಗ ದೀಪ ಬೆಳಗಬೇಕು? ಇಲ್ಲಿದೆ ಮಾಹಿತಿ

ಮಕ್ಕಳ ದಿನಾಚರಣೆಗೆ ಏನೇನು ಚಟುವಟಿಕೆ?

  1. ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಟೋಟಗಳು, ಪ್ರಬಂಧ ಬರವಣಿಗೆ, ಭಾಷಣ, ಚಿತ್ರಕಲೆ, ಕೋಲ್ಯಾಜ್ ಮೇಕಿಂಗ್, ಪಾತ್ರಾಭಿನಯ, ಸ್ವರಚಿತ ಕವನ, ಪತ್ರ ಲೇಖನ, ಛದ್ಮ ವೇಷ, ಆಶು ಭಾಷಣ, ಸಮೂಹ ಗಾಯನ, ಚರ್ಚಾ ಸ್ಪರ್ಧೆ, ಘೋಷಣಾ ವಾಕ್ಯ ಬರೆಯುವುದು, ಮುಂತಾದ ಚಟುವಟಿಕೆಗಳನ್ನು, ಶಾಲಾ ಪಾಠ ಪ್ರವಚನಗಳಿಗೆ ತೊಂದರೆ ಉಂಟಾಗದಂತೆ ನಿರ್ವಹಿಸುವುದು.
  2. ಈ ಚಟುವಟಿಕೆಗಳು ಶಾಲೆಗಳಲ್ಲಿ ನಿರ್ವಹಿಸಬಹುದಾದ ಸಲಹಾತ್ಮಕ ಚಟುವಟಿಕೆಗಳಾಗಿರುತ್ತವೆ.
  3. ಶಾಲೆಯ ಸ್ಥಳೀಯ ಪರಿಸರ ಹಾಗೂ ಅಗತ್ಯಗಳಿಗನುಗುಣವಾಗಿ, ಶಾಲಾ ವೇಳಾಪಟ್ಟಿಯಲ್ಲಿ ಸಮಯ ಹೊಂದಾಣಿಕೆ ಮಾಡಿಕೊಂಡು, ಚಟುವಟಿಕೆಗಳನ್ನು ಆಯೋಜಿಸುವುದು.
  4. ವಿದ್ಯಾರ್ಥಿಗಳ ವಯಸ್ಸಿಗನುಗುಣವಾಗಿ, ಇನ್ನಿತರ ಕ್ರಿಯಾತ್ಮಕ ಮತ್ತು ಕಲಿಕಾ ಪೂರಕ ಸಹಪಠ್ಯ ಚಟುವಟಿಕೆಗಳನ್ನು ರೂಪಿಸಲು ಶಾಲೆಗಳಿಗೆ ಅವಕಾಶವಿರುತ್ತದೆ.
  5. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಶಾಲಾ ಮುಖ್ಯ ಶಿಕ್ಷಕರು ಶಾಲಾ ಎಸ್.ಡಿ.ಎಂ.ಸಿ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ, ಹಬ್ಬದ ರೀತಿಯಲ್ಲಿ ಆಚರಣೆ ಮಾಡುವುದು.
  6. ಈ ಬಗ್ಗೆ ರಾಜ್ಯದ ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಡಯಟ್ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ/ ಪ್ರೌಢಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸುವಂತೆ ಕ್ರಮವಹಿಸಬೇಕು.

Exit mobile version