ಇನ್ನು ಮುಂದೆ ಯೋಗ ಶಿಕ್ಷಣವನ್ನು ಶಾಲೆ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಮುಖ ಶಿಕ್ಷಣ ವಿಭಾಗವಾಗಿ ಪರಿಗಣಿಸಲಾಗುತ್ತಿದೆ. ಹೊಸ ಶಿಕ್ಷಣ ನೀತಿಯಲ್ಲಿ ಇದಕ್ಕೆ ಆದ್ಯತೆ ನೀಡಲಾಗಿದೆ.
ಮನ್ಯಷ್ಯನ ದೈಹಿಕ ಮತ್ತು ಮಾಸಿಕ ಆರೋಗ್ಯ ಕಾಪಾಡುವಲ್ಲಿ ಯೋಗ ಮಹತ್ತವದ ಪಾತ್ರ ವಹಿಸುತ್ತದೆ. ಹೀಗಾಗಿ ಎಲ್ಲರೂ ಯೋಗ ಕಲಿಯಬೇಕೆಂಬುದು ಸರ್ಕಾರದ ಆಶಯವಾಗಿದ್ದು, ಶಾಲಾ-ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ಯೋಗ ಶಿಕ್ಷಣ ನೀಡಲು ಮುಂದಾಗಿದೆ.
ಮುಖ್ಯವಾಗಿ ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಆರೋಗ್ಯ ನಿರ್ವಹಣೆ, ಪರೀಕ್ಷೆಗಳ ಒತ್ತಡ ನಿವಾರಣೆಯ ಮೂಲಕ ಮಾನಸಿಕ ಸ್ಥಿಮಿತ ಸಾಧನೆ, ಭಾವನಾತ್ಮಕ ವಿಷಯಗಳಲ್ಲಿ ಸ್ಥಿರತೆ, ನೈತಿಕ ವೌಲ್ಯಗಳ ಪರಿಪಾಲನೆ, ಉತ್ತಮ ಮಟ್ಟದ ಏಕಾಗ್ರತೆ ಸಾಧಿಸಲು ಯೋಗ ನೆರವಾಗುತ್ತದೆ.
ಯೋಗ ಶಿಕ್ಷಣವನ್ನು ಚಿಕ್ಕ ವಯಸ್ಸಿನಿಂದಲೇ ಆರಂಭಿಸಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದಕ್ಕೆ ಅಕಾಡೆಮಿಕ್ ಮಾನ್ಯತೆ ಬೇಕಾಗುತ್ತಿರುವುದರಿಂದ ಉನ್ನತ ಶಿಕ್ಷಣದಲ್ಲೂ ಯೋಗ ಕೋರ್ಸ್‌ಗಳು ಆರಂಭವಾಗಿವೆ. ಬೆಂಗಳೂರು ಕೇಂದ್ರ ವಿವಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತನ್ನ ಪದವಿ ಕೋರ್ಸ್‌ನಲ್ಲಿ ಯೋಗ ಕಲಿಕೆಯನ್ನು ಜಾರಿಗೆ ತಂದಿದೆ.
ಏನೇನು ಕೋರ್ಸ್‌ಗಳಿವೇ?
ಎಂಎಸ್ಸಿ ಯೋಗ ವಿಜ್ಞಾನ : ಅವಧಿ 2 ವರ್ಷ (ನಾಲ್ಕು ಸೆಮಿಸ್ಟರ್)
ಯಾವುದೇ ವಿಶ್ವವಿದ್ಯಾಲಯ ಅಂಗೀಕೃತ ಕಾಲೇಜಿನಿಂದ ಡಿಪ್ಲೊಮಾ/ಪದವಿ ಪಡೆದಿರಬೇಕು. ಶೇಕಡಾ 45 ಅಂಕ ಗಳಿಸಿರಬೇಕು. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಶೇಕಡಾ 40. ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪೂರೈಸಿದವರೂ ಈ ಕೋರ್ಸ್ ಮಾಡಬಹುದು. ಮೀಸಲಾತಿ ಮತ್ತು ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸ್ನಾತಕೋತ್ತರ ಡಿಪ್ಲೊಮಾ ಪದವಿ ಅವಧಿ: 1ವರ್ಷ
ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು. ಪದವಿಯಲ್ಲಿ ಶೇಕಡಾ 45 ಅಂಕ ಗಳಿಸಿರಬೇಕು. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಶೇಕಡಾ 40 ಪಡೆದಿರಬೇಕು.
ಸರ್ಟಿಫಿಕೇಟ್ ಕೋರ್ಸ್ ಅವಧಿ: 1ವರ್ಷ/ ಆರು ತಿಂಗಳು
ಎಸ್‌ಎಸ್‌ಎಲ್‌ಸಿ/ ಪಿಯುಸಿ ಮಾಡಿದವರು ಈ ಸರ್ಟಿಫಿಕೇಟ್ ಕೋರ್ಸ್ ಮಾಡಬಹುದಾಗಿರುತ್ತದೆ.
ನೀವು ಎಲ್ಲಿ ಓದಬಹುದು?
ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯವು ಹಲವು ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತಿದೆ. ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್, ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಈಗ ಸಂಸ್ಕೃತ ವಿವಿಯಲ್ಲಿ ಲಭ್ಯವಿದೆ.
ಬೆಂಗಳೂರು ವಿವಿಯಲ್ಲಿ ಯೋಗ ಅಧ್ಯಯನ ಕೇಂದ್ರ ವಿದ್ದು, ಇಲ್ಲಿ ಆರು ತಿಂಗಳ ಸರ್ಟಿಫಿಕೇಷನ್ ಕೋರ್ಸ್ ನಿಂದ ಹಿಡಿದು, ಡಿಗ್ರಿ, ಡಿಪ್ಲೊಮಾ ಮಾಡಬಹುದಾಗಿದೆ. ಮಂಗಳೂರು ವಿಶ್ವವಿದ್ಯಾಲಯ ಯೋಗಿಕ್ ಸೈನ್ಸ್‌ನಲ್ಲಿ ಸರ್ಟಿಫಿಕೇಷನ್ ಕೋರ್ಸ್ ಜತೆಗೆ ಪದವಿ ಮತ್ತು ಪದವಿ ನಂತರ ಡಿಪ್ಲೊಮಾ (ಪಿಜಿಡಿ) ಕೋರ್ಸ್ ಗಳಿವೆ.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಯೋಗಕ್ಕೆ ಸಂಬಂಧಿಸಿದ ಡಿಪ್ಲೊಮಾ, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಷನ್ ಕೋರ್ಸ್ ಗಳನ್ನು ನೀಡುತ್ತಿದೆ.
ಕರ್ನಾಟಕ ಜಾನಪ ವಿಶ್ವವಿದ್ಯಾಲಯ ಯೋಗದ ಕುರಿತು ಡಿಪ್ಲೊಮಾ ಕೋರ್ಸ್ ನೀಡುತ್ತಿದ್ದು, ಪಿಯುಸಿ ಅಥವಾ ತತ್ಸಮಾನ ವಿದ್ಯರ್ಹತೆ ಹೊಂದಿದವರು ಈ ಕೋರ್ಸ್‌ಗೆ ಸೇರಬಹುದಾಗಿದೆ. ತಿರುಪತಿಯ ರಾಷ್ಟೀಯ ಸಂಸ್ಕೃತ ವಿಶ್ವವಿದ್ಯಾಲಯ ದೂರ ಶಿಕ್ಷಣದ ಕೋರ್ಸ್‌ಗಳನ್ನೂ ಹೊಂದಿದೆ.
ಕಾಲೇಜುಗಳಲ್ಲಿಯೂ ಕಲಿಕೆ
ಹಲವು ಖಾಸಗಿ ಕಾಲೇಜುಗಳು ನ್ಯಾಚುರೋಪತಿಯೊಂದಿಗೆ ಯೋಗ ಶಿಕ್ಷಣ ಕಲಿಸುತ್ತಿದೆ. ಉಡುಪಿಯ ಶಾರದಾ ಕಾಲೇಜು, ಬೆಳಗಾವಿಯ ಕೆಎಲ್‌ಇ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್, ಮೈಸೂರಿನ ‘ಸಮ್ಯಕ್’ ಯೋಗ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮೂಡಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗ, ಉಜಿರೆಯ ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್, ಬೆಂಗಳೂರಿನ ಹೆಬ್ಬಾಳದ ವಿವೇಕಾನಂದ ಸ್ಕೂಲ್ ಯೋಗ ಕಲಿಸುತ್ತಿವೆ.
ಬೆಂಗಳೂರು ಸಮೀಪದ ಆನೇಕಲ್‌ನಲ್ಲಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಡೀಮ್ಡ್ ವಿಶ್ವವಿದ್ಯಾಲಯವಾಗಿದ್ದು, ಪೂರ್ಣ ಪ್ರಮಾಣದ ಯೋಗ ವಿವಿ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಇದು ವಿಶ್ವದಾದ್ಯಂತ 30 ಶಾಖೆಗಳನ್ನು ಹೊಂದಿದೆ. ಇಲ್ಲಿ ಯೋಗ ಇನ್‌ಸ್ಟ್ರಕ್ಟರ್ ಕೋರ್ಸ್‌ನಿಂದ ಹಿಡಿದು ಪಿಎಚ್.ಡಿವರೆಗೆ ಶಿಕ್ಷಣ ನೀಡಲಾಗತ್ತದೆ. ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸೆಯ ಪದವಿಯಲ್ಲದೆ ವೈದ್ಯರಿಗಾಗಿಯೇ ‘ಯೋಗ ಥೆರಪಿ ಓರಿಯಂಟೇಶನ್ ಟ್ರೇನಿಂಗ್’ (YTOT) ಎಂಬ ಕೋರ್ಸ್ ಕೂಡ ಇಲ್ಲಿ ಲಭ್ಯವಿದೆ.
ಯೋಗಕ್ಕೆ ಈಗ ಜಗತ್ತಿನಾದ್ಯಂತ ಮಾನ್ಯತೆ ದೊರಕಿರುವುದರಿಂದ ನಮ್ಮ ದೇಶದಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಯೋಗ ಕಲಿತವರಿಗೆ ಉದ್ಯೋಗಾವಕಾಶಗಳು ಹೆಚ್ಚಿವೆ. ಹೀಗಾಗಿ ಯೋಗ ಮಾಡುವುದರ ಜತೆಗೆ ಸರಿಯಾದ ಶಿಕ್ಷಣವನ್ನು ಪಡೆದರೆ ಉದ್ಯೋಗ ಪಡೆದುಕೊಂಡು, ಆರೋಗ್ಯವಂತ ಜೀವನ ನಡೆಸಬಹುದಾಗಿದೆ.
ಇದನ್ನೂ ಓದಿ| Yoga Day 2022 | ಮೈಸೂರಿಗೆ ಯೋಗ ವಿವಿ ಘೋಷಣೆ; ಹುಸಿಯಾದ ನಿರೀಕ್ಷೆ