ಬ್ರೆಸಿಲಿಯಾ: ಪ್ರತಿಯೊಂದು ದೇಶ, ಭಾಷೆ, ಸಂಸ್ಕೃತಿಗಳಿಗೆ ಅದರದ್ದೇ ಭಿನ್ನವಾದ ಸಂಪ್ರದಾಯ ಇರುವುದು ಸಹಜ. ಅದರಲ್ಲಿ ಕೆಲವು ರೀತಿ-ರಿವಾಜುಗಳು ವಿಚಿತ್ರ ಎನಿಸುವಂತದ್ದೂ ಇರಬಹುದು. ಬ್ರೆಜಿಲ್‌ನ ಅಮೆಜಾನ್ ಅರಣ್ಯಗಳಲ್ಲಿ ವಾಸಿಸುವ ಆದಿವಾಸಿಗಳು ಇಂತಹ ಹಲವಾರು ವಿಶಿಷ್ಟವಾದ, ವಿಶೇಷವಾದ ಸಂಪ್ರದಾಯಗಳನ್ನು ಹೊಂದಿದ್ದಾರೆ. ಇದರಲ್ಲಿ ಹುಡುಗರು ತಾವು ದೊಡ್ಡವರಾಗಿದ್ದೇವೆ ಎಂದು ತೋರಿಸಿಕೊಳ್ಳಲು ಬುಲೆಟ್ ಇರುವೆಗಳಿಂದ ಕಚ್ಚಿಸಿಕೊಳ್ಳುವ ಸಂಪ್ರದಾಯವೂ ಒಂದು.
ಏನಿದು ಆದಿವಾಸಿಗಳ ಸಂಪ್ರದಾಯ?
ಬಾಲಕರು ಬೆಳೆದು ದೊಡ್ಡವರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡರೆ ಸಾಲದು. ಅದನ್ನವರು ತಮ್ಮ ಸಮಾಜದ ಎದುರು ಪ್ರದರ್ಶಿಸಬೇಕು. ಅದಕ್ಕಾಗಿ ವಿಚಿತ್ರವಾದ ಮತ್ತು ಅಪಾಯಕಾರಿಯಾದ ಸಂಪ್ರದಾಯ ಅಲ್ಲಿದೆ. ಅತಿಕ್ರೂರವಾದ ಕಟ್ಟಿರುವೆಗಳಿಂದ ತುಂಬಿದ ಸಂಚಿಯಂಥದ್ದರಲ್ಲಿ ಅವರು ಕೈಯಿರಿಸಬೇಕು. ಆಗ ಅವು ಕಚ್ಚದೇ ಸುಮ್ಮನಿರುತ್ತವೆಯೇ?. ಬಾಲಕರಿಂದ ಯುವಕರಾಗಲು ಅವರು ಈ ನೋವನ್ನು ಸಹಿಸಿಕೊಳ್ಳಬೇಕು ಎಂಬುದು ಈ ಆದಿವಾಸಿಗಳ ನಂಬಿಕೆ.
ಇದೇನಿದು ಬುಲೆಟ್ ಇರುವೆ?
ವಿಶ್ವದ ಅತಿದೊಡ್ಡ ಇರುವೆಗಳ ಜಾತಿಯಲ್ಲಿ ಇವೂ ಒಂದು. ಕೆಲವು ಸುಮಾರು 3 ಸೆಂಟಿಮೀಟರ್ ಉದ್ದವಿರುತ್ತವಂತೆ. ಉದ್ದನೆಯ ಕೊಂಬು ಹೊಂದಿರುವ ಈ ಇರುವೆಗಳು ಕಚ್ಚಿದರೆ ತಡೆಯಲಾಗುವುದಿಲ್ಲ. ಗುಂಡೇಟಿನಷ್ಟು ನೋವುಂಟುಮಾಡುವ ಕಾರಣ ಇವುಗಳಿಗೆ ಬುಲೆಟ್ ಇರುವೆ ಎಂದು ಹೆಸರಿಡಲಾಗಿದೆ. ಕಚ್ಚಿಸಿಕೊಂಡವರಿಗೆ ಜ್ವರ ಬರುವುದು ಖಚಿತ ಎಂದೇ ಹೇಳಬಹುದು. ಮರದ ಬುಡದಲ್ಲಿ ಈ ಗೂಡು ಕಟ್ಟಿಕೊಂಡು ಈ ಇರುವೆಗಳು ವಾಸವಾಗಿರುತ್ತವೆ.
ಸುಮ್ಮನಿರಲಾರದೆ ಕೈಮೇಲೆ ಇರುವೆ ಬಿಟ್ಟುಕೊಂಡ ಎಂದೆಲ್ಲಾ ಹೀಗಳೆಯುವಂತಿಲ್ಲ. ಕಾರಣ, ಈ ನೋವು-ಸಹನಾ ಪರೀಕ್ಷೆ ನಡೆಯದೆ ಯುವಕರು ಮದುವೆಯನ್ನೂ ಆಗುವ ಹಾಗಿಲ್ಲವಂತೆ!
ಈ ಪರೀಕ್ಷೆ ಹೇಗೆ ನಡೆಯುತ್ತೆ?
೧೨ ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಹುಡುಗರು ಈ ಪರೀಕ್ಷೆಗೆ ಅರ್ಹರು. ಅವರೇ ಕಾಡಿನಿಂದ ಕಟ್ಟಿರುವೆಗಳ (ಬುಲೆಟ್ ಇರುವೆ) ಗೂಡನ್ನು ತರಬೇಕಾಗುತ್ತದೆ. ಆ ನಂತರ ಈ ಉರಿಬಾಯಿಯ ಕಟ್ಟಿರುವೆಗಳನ್ನು ಒಂದು ದಪ್ಪ ಕೈಗವಸುವಿನಲ್ಲಿ ತುಂಬಿಸಿಡಲಾಗುತ್ತದೆ.
ಈ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಕೈಗವಸಿನಂತಹ ಈ ಸಂಚಿಯನ್ನು ಹುಡುಗನ ಕೈಗೆ ತೊಡಿಸಲಾಗುತ್ತದೆ. ತಮ್ಮನ್ನು ಕೂಡಿಹಾಕಿದ್ದರಿಂದ ಸಹಜವಾಗಿ ಇರುವೆಗಳು ಕನಲಿರುತ್ತವೆ. ಅವು ಯಾವ ಪರಿ ಕೈಗೆ ಕಚ್ಚಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಹಾಡು-ನೃತ್ಯಗಳ ಸಂಭ್ರಮವೂ ಇರುತ್ತದೆಯಂತೆ! ಜೇನೊಂದು ಕಚ್ಚಿದ್ದಕ್ಕಿಂತ ೩೦ ಪಟ್ಟು ಹೆಚ್ಚು ನೋವಾಗುತ್ತದೆ ಅಥವಾ ಕೈಗೆ ಗುಂಡು ಹೊಡೆದಷ್ಟು ನೋವಾಗುವುದೆಂದು ಅಂದಾಜಿಸಲಾಗಿದೆ. ಅದಾದ ಕೆಲವು ದಿನಗಳವರೆಗೆ ಕೈಗಳು ಕೆಂಪಾಗಿ ಊದಿಕೊಂಡಿರುತ್ತವೆ. ಅಷ್ಟಾದರೂ, ನೋವಿಲ್ಲದೆ ಯಾವುದೂ ದಕ್ಕುವುದಿಲ್ಲ, ಅದರಲ್ಲೂ ನೋಯದೆ ಬೆಳೆಯುವುದಂತೂ ಸಾಧ್ಯವೇ ಇಲ್ಲ ಎಂಬ ಪಾಠ ಕಲಿಸುವುದಕ್ಕೆ ಆದಿವಾಸಿಗಳು ಈ ರೀತಿಯ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | ಸಂತಾಲ್‌ಗಳೆಂದರೆ ಯಾರು? ದ್ರೌಪದಿ ಮುರ್ಮು ಅವರ ಬುಡಕಟ್ಟು ಸಮುದಾಯದ ಪರಿಚಯ ಇಲ್ಲಿದೆ