-ಅರವಿಂದ ಸಿಗದಾಳ್, ಮೇಲುಕೊಪ್ಪ
ಒಂದು ನಿರ್ದಿಷ್ಟ ಪಕ್ಷ (Areca Price) ಎಲೆಕ್ಷನ್‌ನಲ್ಲಿ ಗೆಲ್ಲುತ್ತದೆ ಅಂತ ಸರ್ವೆ ಏಜೆನ್ಸಿಗಳು ಹೇಳುವಾಗ, ಷೇರು ಮಾರುಕಟ್ಟೆ ಏರುತ್ತದೆ. ಇನ್ನೊಂದು ನಿರ್ದಿಷ್ಟ ಪಕ್ಷ ಎಲೆಕ್ಷನ್‌ನಲ್ಲಿ ಗೆಲ್ಲುತ್ತದೆ ಅಂತ ಸರ್ವೆ ಏಜೆನ್ಸಿಗಳು ಹೇಳುವಾಗ ಷೇರು ಮಾರುಕಟ್ಟೆ ಕುಸಿಯುತ್ತದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಷೇರು ಮಾರುಕಟ್ಟೆಯ ಏರಿಳತವೂ ತಲ್ಲಣವನ್ನೇ ಸೃಷ್ಟಿ ಮಾಡುತ್ತದೆ. ಆದರೆ, ಈ ಬಾರಿ ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ ಏರಿಳಿತವನ್ನು ಮೀರಿಸುವಂತೆ ಅಡಿಕೆ ದರ ಗೂಳಿಯ ಕುಣಿತವಾಗಿದೆ! ಕಳೆದೆರಡು ವಾರದಲ್ಲಿ ಅಡಿಕೆಯ ಎಲ್ಲಾ ವೆರೈಟಿಗಳು ಧಾರಣೆ ಮೇಲ್ಮುಖವಾಗಿ ಏರುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ರೀತಿ 47,000-48,000 ನಡೆಯುತ್ತಿದ್ದ ರಾಶಿ ಅಡಿಕೆ ಧಾರಣೆ, ಕಳೆದ ವಾರ 50,000 ರೂ. ದಾಟಿ, ಈಗ 53,856ಕ್ಕೆ ತಲುಪಿದೆ. ಇನ್ನೂ ಏರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ. ಅದೇ ರೀತಿ, ಮೂರು ತಿಂಗಳ ಹಿಂದೆ 53,000 ಇದ್ದ ಬೆಟ್ಟ ಅಡಿಕೆ ಧಾರಣೆ ಕಳೆದ ವಾರ 55,000 ರೂ. ದಾಟಿ, ಇವತ್ತು 56,333 ರೂ.ಗೆ ತಲುಪಿದೆ. ಇದೇ ಸಮಯದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿರುವ ಆವಕವೂ ಏರುತ್ತಿದ್ದು, ಅಡಿಕೆ ಆವಕ ಏರಿದರೂ ಅಡಿಕೆ ಧಾರಣೆ ಏರುತ್ತಿರುವುದು ವಿಶೇಷವಾಗಿದೆ.
ಶಿವಮೊಗ್ಗ APMC ದಾಖಲೆಗಳ ಪ್ರಕಾರ ಹೆಚ್ಚು ವ್ಯಾಪಾರವಾಗುವ ರಾಶಿ ಇಡಿ ಅಡಿಕೆ ಆವಕ ಬಾರೀ ಏರಿಕೆ ಕಂಡಿದೆ:
ದಿನಾಂಕ 17.04.2024: 3,907 ಕ್ವಿಂಟಾಲ್
ದಿನಾಂಕ 19.04.2024: 4,378 ಕ್ವಿಂಟಾಲ್
ದಿನಾಂಕ 22.04.2024: 4543 ಕ್ವಿಂಟಾಲ್
ದಿನಾಂಕ 23.04.2024: 17,474 ಕ್ವಿಂಟಾಲ್
ರಾಶಿ ಇಡಿ ಧಾರಣೆ 53,800 ರೂ., ಬೆಟ್ಟೆ 56,300 ರೂ. ದಾಟಿದಾಗ ಸಹಜವಾಗಿಯೇ ಗೊರಬಲು 41 ಸಾವಿರದ ಸನಿಹ ತಲುಪಿದೆ. ಈ ಎಲ್ಲ ವೆರೈಟಿಗಳ ಧಾರಣೆಯ ಏರಿಕೆಯ ಹಿನ್ನೆಲೆಯಲ್ಲಿ ಸಿಪ್ಪೆ ಗೋಟು ದರವೂ ಏರುವ ನಿರೀಕ್ಷೆಯಿದ್ದು, ಸದ್ಯದಲ್ಲೇ ಓಪನ್ ನಗದು ಮಾರುಕಟ್ಟೆಯಲ್ಲಿ 20,000 ರೂ. ದಾಟುವ ನಿರೀಕ್ಷೆ ರೈತರದು. APMC ಮಂಡಿ ಮತ್ತು ಸೊಸೈಟಿಗಳಲ್ಲಿ ಸಿಪ್ಪೆ ಗೋಟು ವ್ಯವಹಾರವೂ ಬಹಳ ಕಮ್ಮಿ. APMC ಒಳಗೆ ವ್ಯಾಪ್ತಿಗೆ ಬರದೆಯೇ ಸಿಪ್ಪೆ ಗೋಟು ವ್ಯವಹಾರ ನೆಡೆಯುತ್ತದೆ. ಅದನ್ನು APMC ವ್ಯಾಪ್ತಿಯ ಒಳಗೆ ಸಂಪೂರ್ಣ ತರಲು ಪ್ರಯತ್ನ ನೆಡೆಯುತ್ತಿಲ್ಲ.
ಚುನಾವಣೆ ಬಳಿಕ ಏನಾಗಲಿದೆ?
ಎಲ್ಲಾ ವೆರೈಟಿ ಅಡಿಕೆಗಳ (ಹಸ, ಬೆಟ್ಟೆ, ಇಡಿ, ಗೊರಬಲು, ಸಿಪ್ಪೆ ಗೋಟು) ದೊಡ್ಡ ಮಟ್ಟದ ಓಪನ್ ನಗದು ವ್ಯವಹಾರಕ್ಕೆ ಒಂದಿಷ್ಟು ಚುನಾವಣೆ ನೀತಿ ಸಂಹಿತೆ ನಿರ್ಬಂಧ ಇರುವುದರಿಂದ, ಎಲೆಕ್ಷನ್ ಮುಗಿದ ಮೇಲೆ ಅಡಿಕೆ ನಗದು ವ್ಯವಹಾರ ಇನ್ನಷ್ಟು ತೀವ್ರತೆ ಪಡೆದ ಮೇಲೆ ಧಾರಣೆ ಏರಿಕೆಯ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯ ಇದೆ.
ಏನೇ ಆದರೂ, ಅಡಿಕೆ ಮಾರುಕಟ್ಟೆಯ ಧಾರಣೆ ಸಂಪೂರ್ಣ ಲೆಕ್ಕಾಚಾರಕ್ಕೆ ಸಿಗುವಂಥದ್ದಲ್ಲ! ಅದೂ ಷೇರು ಮಾರುಕಟ್ಟೆಯ ರೀತಿ, ಯಾವಾಗ ಗೂಳಿ ಮುನ್ನುಗ್ಗುತ್ತದೆ, ಕರಡಿ ಕುಣಿಯುತ್ತದೆ ಗೊತ್ತಾಗುವುದಿಲ್ಲ.
ಅಡಿಕೆ ಧಾರಣೆಯ ಗೂಳಿ ನುಗ್ಗುವ ಸಮಯದಲ್ಲೇ ಕಾಳು ಮೆಣಸಿನ ಧಾರಣೆಯೂ ಏರು ಮುಖ ಕಾಣುತ್ತಿದೆ. ಕಾಳು ಮೆಣಸಿನ ದರ ಈಗ 57,000 ರೂ. ತಲುಪಿದೆ. ಒಟ್ಟಿನಲ್ಲಿ ಅಡಿಕೆ, ಕಾಳು ಮೆಣಸು ಧಾರಣೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ನಾಲ್ಕು ಜನ ಸೇರಿದಲ್ಲಿ, ರಾಜಕೀಯ ವಿಚಾರದೊಂದಿಗೆ ಅಡಿಕೆ ಧಾರಣೆಯ ಚರ್ಚೆಯೂ ಜೋರಾಗಿ ಸೌಂಡ್ ಮಾಡ್ತಾ ಇದೆ!
ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…