Site icon Vistara News

Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!

-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿಯಮ 377ರ ಅಡಿಯಲ್ಲಿ ಹಳದಿ ರೋಗದ (Arecanut Research Centre) ಹರಡುವಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ನಷ್ಟದ ಕುರಿತು ಲೋಕಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಹಳದಿ ಎಲೆ ರೋಗ ಸಮಸ್ಯೆ ಬಗ್ಗೆ ಒಂದೇ ಹಂತದಲ್ಲಿ ಪರಿಹಾರ ನೀಡುವ ಮೂಲಕ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು. ಈ ರೋಗ ತಡೆಗೆ ಸಂಬಂಧಿಸಿ, ದಕ್ಷಿಣ ಕನ್ನಡದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಹಣಕಾಸು ನೆರವನ್ನು ನೀಡಬೇಕು ಎಂದು ಲೋಕಸಭೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.

ಇನ್ನೊಂದು ಅಡಿಕೆ ಸಂಶೋಧನಾ ಕೇಂದ್ರ ಬೇಕಾ?

ಇರುವ ಅಡಿಕೆ ಸಂಶೋಧನಾ ಕೇಂದ್ರಗಳಲ್ಲಿ ಅಡಿಕೆ ರೋಗಗಳ ವಿಚಾರದಲ್ಲಿ ಯಾವುದೇ ಮಹತ್ತರ ಸಂಶೋಧನೆ, ಅಧ್ಯಯನಗಳು ನೆಡೆಯದೆ ಇರುವಾಗ, ಮತ್ತೊಂದು ಅಡಿಕೆ ಸಂಶೋಧನಾ ಕೇಂದ್ರ ಕರ್ನಾಟಕಕ್ಕೆ ಬೇಕಾ ಎನ್ನುವುದು ಅಡಿಕೆ ಬೆಳೆಗಾರರ ಮುಂದಿರುವ ಪ್ರಶ್ನೆ.
ತೀರ್ಥಹಳ್ಳಿ ಮತ್ತು ಶೃಂಗೇರಿಗಳಲ್ಲಿ ಈಗಾಗಲೇ ಸಂಶೋಧನಾ ಕೇಂದ್ರಗಳಿದ್ದು, ಅಲ್ಲಿ ಅಡಿಕೆಗೆ ಸಂಬಂಧಿಸಿದ ಯಾವ ಮಹತ್ತರವಾದ ಸಂಶೋಧನೆಗಳೂ ನೆಡೆಯುತ್ತಿರುವ ವರದಿಗಳಿಲ್ಲ. ಅದರಲ್ಲೂ ಶೃಂಗೇರಿ ಸಂಶೋಧನಾ ಕೇಂದ್ರದ ಸುತ್ತಮುತ್ತಲಿನ ಅಡಿಕೆ ತೋಟಗಳಿಗೆ ಹಳದಿ ರೋಗ ಬಂದು, ದಶಕಗಳೇ ಕಳೆದು, ಈಗ ಎಲೆ ಚುಕ್ಕಿ ರೋಗವೂ ಜೊತೆಗೂಡಿ ತೋಟಗಳೇ ನಾಶವಾಗಿವೆ. ಶೃಂಗೇರಿ ಕ್ಷೇತ್ರದ ಸುತ್ತಮುತ್ತಲಿನ ಅಡಿಕೆ ಬೆಳೆಗಾರರು ಪರ್ಯಾಯ ಬೆಳೆಯ ದಾರಿ ಹುಡುಕುತ್ತಿದ್ದಾರೆ. ಹಳದಿರೋಗ, ಎಲೆಚುಕ್ಕಿ ರೋಗದ ಬಾಧೆ ತಾಳಲಾರದೆ ಪರ್ಯಾಯ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ವಿಜ್ಞಾನಿಗಳೆಲ್ಲಿ?

ಅಡಿಕೆ ಎಲೆಚುಕ್ಕಿ, ಹಳದಿ ರೋಗಗಳ ಬಗ್ಗೆ ಎರಡು ವರ್ಷಗಳ ಹಿಂದೆ ಸ್ಥಳೀಯ ಅಡಿಕೆ ಬೆಳೆಗಾರರ ತೀವ್ರ ಒತ್ತಡ ತಂದಾಗ, ಆಗಿನ ರಾಜ್ಯ ಸರಕಾರದ ತೋಟಗಾರಿಕೆ ಸಚಿವರು “ಅಗತ್ಯ ಬಿದ್ದರೆ ಇಸ್ರೇಲ್‌ನಿಂದ ವಿಜ್ಞಾನಿಗಳನ್ನು ಕರೆಸೋಣ. ಅತಿ ಶೀಘ್ರದಲ್ಲಿ ವಿಜ್ಞಾನಿಗಳನ್ನು ಕರೆಸಿ ಎರಡೂ ರೋಗಗಳ ಬಗ್ಗೆ ತ್ವರಿತಗತಿಯಲ್ಲಿ ಅಧ್ಯಯನ, ಸಂಶೋದನೆಗೆ ಒತ್ತು ಕೊಟ್ಟು ಅಡಿಕೆ ರೋಗಗಳಿಗೆ ಪರಿಹಾರ ಕೊಡಿಸುತ್ತೇನೆ” ಎಂದಿದ್ದರು. ಅಡಿಕೆ ಹಳದಿ ರೋಗ, ಎಲೆ ಚುಕ್ಕಿರೋಗಗಳಿಂದ ಶೃಂಗೇರಿ ಪ್ರಾಂತ್ಯದ ಅಡಿಕೆ ತೋಟಗಳು ‘ಕುರುಕ್ಷೇತ್ರದ’ ಬಣ್ಣಕ್ಕೆ ತಿರುಗಿದ್ದ ಕಾಲ ಅದು!
ನುಡಿದಂತೆ ನಡೆದ ಸಚಿವರು ಮೂರು ವಿಜ್ಞಾನಿಗಳನ್ನು ಶೃಂಗೇರಿಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಡೆಪ್ಯೂಟ್ ಮಾಡಿದರು! ಆದರೆ, ಡೆಪ್ಯೂಟ್ ಡ್ರಾಮಾ ಎಷ್ಟು ತಮಾಷೆಯಾಗಿತ್ತು ಅಂದರೆ, ಡೆಪ್ಯೂಟ್ ಆದ ಮೇಲೆ, ಆ ಮೂರು ಜನ ವಿಜ್ಞಾನಿಗಳೊಂದಿಗೆ ರೈತ ಸಂವಾದ ಕಾರ್ಯಕ್ರಮ ನೆಡೆಸಿದಾಗ ತಿಳಿದಿದ್ದು ಮೂವರೂ ವಿಜ್ಞಾನಿಗಳು ಅಡಿಕೆ ತೋಟದ ವಿಚಾರದಲ್ಲಿ ಪ್ರೀ ನರ್ಸರಿ ಮಾಹಿತಿಯೂ ಇಲ್ಲದವರು ಎಂದು! ಮೂವರು ವಿಜ್ಞಾನಿಗಳೂ ಹೊಸಬರು. ಅಡಿಕೆ ವಿಚಾರದ ವೃತ್ತಿ ಅನುಭವ ಇಲ್ಲದವರು. ಕನಿಷ್ಠ ಪಕ್ಷ ಅಡಿಕೆ ತೋಟದ ಕಪ್ಪು ದಾಟಿದ ಅನುಭವವೂ ಇಲ್ಲದವರು! ಇಸ್ರೇಲ್ ಬೇಡ ಭಾರತದಲ್ಲೇ, ಅದರಲ್ಲೂ ಕರ್ನಾಟಕದಲ್ಲೇ ನುರಿತ ಅನುಭವಿ ತಜ್ಞ ವಿಜ್ಞಾನಿಗಳು ಇರಲಿಲ್ವಾ?
ಕೆಲವು ತಿಂಗಳು ಕಳೆಯುವುದರೊಳಗೆ ಬಂದ ಅಧಿಕೃತ ಸುದ್ದಿ ‘ಆ ಮೂವರು ‘ಹೊಸ’ ವಿಜ್ಞಾನಿಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ’ ಎಂದು. ಅಲ್ಲಿಗೆ ಹಳದಿ, ಎಳೆ ಚುಕ್ಕಿ ಸಂಶೋಧನೆಗಳು, ರೋಗ ಅಧ್ಯಯನಗಳು ಶೃಂಗೇರಿ ಆಶ್ಲೇಷಾ ಮಳೆಯ ನೆರೆಯಲ್ಲಿ ಹುಣಸೇಹಣ್ಣು ಕರಗಿದಂತೆ ಕರಗಿ ತೇಲಿ ಹೋಯಿತು!

Arecanut Price

ನರಳುತ್ತಿದೆ ಸಂಶೋಧನೆ

ಲ್ಯಾಬ್ ಇಲ್ಲದ, ವಿಜ್ಞಾನಿಗಳಿಲ್ಲದ, ಸಿಬ್ಬಂದಿ ಇಲ್ಲದ, ಸಂಶೋಧನೆಗೆ ಅನುದಾನವೂ ಇಲ್ಲದೆ ನರಳುತ್ತಿರುವ ತೀರ್ಥಹಳ್ಳಿ ಮತ್ತು ಶೃಂಗೇರಿಯ ಎರಡೂ ಸಂಶೋಧನಾ ಕೇಂದ್ರಗಳನ್ನು ಕರಿ ಕಸ ಗುಡಿಸಿ ಮದುವೆ, ಮುಂಜಿಗಳಗೆ ಬಾಡಿಗೆಗೆ ಕೊಟ್ಟರೆ ಸರ್ಕಾರಕ್ಕೆ ಒಂದಿಷ್ಟು ಆದಾಯ ಬರಬಹುದು ಅಂತ ಅಡಿಕೆ ಬೆಳೆಗಾರರು ಮಾತಾಡಿಕೊಳ್ತಾ ಇದ್ದಾರೆ.
ಈಗಲೂ ಆ ಸಂಶೋಧನಾ ಛತ್ರಗಳಲ್ಲಿ ವರ್ಷಕ್ಕೊಂದೆರಡು ಕೃಷಿ ಸಮಾಲೋಚನೆ, ಮಾಹಿತಿ ಶಿಬಿರಗಳನ್ನು ನೆಡೆಸಿ ರೈತರಿಗೆ ಒಂದು ಪಲಾವ್ ಊಟ ಹಾಕಿಸಲಾಗುತ್ತದೆ! ಮಣ್ಣು ಪರೀಕ್ಷೆಗೆ ಕೊಟ್ಟರೆ, ಹದಿನೆಂಟು ಪ್ಯಾರಾಮೀಟರ್‌ಗಳಲ್ಲಿ ಮೂರು ಪ್ಯಾರಾಮೀಟರ್ ಚಕ್ ಮಾಡುವ ಉಪಕರಣಗಳೂ ಅಲ್ಲಿಲ್ಲ, ಸಿಬ್ಬಂದಿಯೂ ಇಲ್ಲ. ಅನುದಾನ ಬಂದಿದ್ದರಲ್ಲಿ ಖುರ್ಚಿ, ಪೋಡಿಯಂ, ಡೆಸ್ಕ್, ಟೇಬಲ್‌ಗಳನ್ನು ವಾಸ್ತು ಪ್ರಕಾರ ಹಾಕಿ ಮೆಯಿನ್ಟೆಯಿನ್ ಮಾಡಲಾಗುತ್ತಿದೆ!

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ಬೆಳೆಗಾರರೂ ‘ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ʼ ಸಲ್ಲಿಸಬೇಕಾ? ಸಲ್ಲಿಸದಿದ್ದರೆ ಏನಾಗುತ್ತದೆ?

ರೋಗ ಯಾವುದು? ಪರಿಹಾರ ಏನು?

ಸಂಶೋಧನೆ, ಅಧ್ಯಯನಗಳು ಮೊದಲು ಆಗಬೇಕಾಗಿದ್ದು ಹಳದಿ ರೋಗ, ಎಲೆ ಚುಕ್ಕಿ ರೋಗಗಳಿಗಲ್ಲ. ಮೊದಲು ಸಂಶೋಧನೆ ಆಗಬೇಕಾಗಿರುವುದು ಅಡಿಕೆ ಸಂಶೋಧನಾ ಕೇಂದ್ರಗಳಿಗೆ ಬಂದಿರುವ ರೋಗ ಯಾವುದು? ಪರಿಹಾರ ಏನು ಎಂದು ನೋಡುವುದಕ್ಕೆ! ಇರುವ ಎರಡು ಅಡಿಕೆ ಸಂಶೋಧನಾ ಕೇಂದ್ರಗಳಿಗೆ ಕೊರೋನಾ, ಡೆಂಗ್ಯು ಬಂದು ನರಳುತ್ತಿರುವಾಗ, ಈಗ ಇನ್ನೊಂದು ಸಂಶೋಧನಾ ಕೇಂದ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರೆಯಲು ಮುಂದಾಗುವುದು, ಅದಕ್ಕೆ ಸ್ಥಳಿಯ ಸಂಸದರು ಒತ್ತಾಯಿಸುವುದು ಸುಮ್ಮನೆ ಹಣ ವ್ಯರ್ಥ ಅನಿಸುತ್ತದೆ. ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಛತ್ರಗಳಿರುವುದರಿಂದ, ಮತ್ತೊಂದು ಛತ್ರದ ಕಟ್ಟಡ ನಿರ್ಮಾಣ ಬೇಡ ಅನಿಸುತ್ತದೆ! ಬೇಕೇ ಬೇಕು ಅನ್ನುವುದಾದಲ್ಲಿ ಘಟ್ಟದ ಮೇಲಿನ ಸಂಶೋಧನಾ ಛತ್ರಗಳ ಕಾರ್ಯಕ್ಷಮತೆಯನ್ನು ಒಮ್ಮೆ ಸಂಶೋಧನೆ ಮಾಡಿ ತೀರ್ಮಾನ ಮಾಡುವುದು ಒಳ್ಳೆಯದು. ಹೊಸ ಸಂಶೋಧನಾ ಕೇಂದ್ರದ ಹಣದಲ್ಲಿ, ಇರುವ ಸಂಶೋಧನಾ ಕೇಂದ್ರಗಳನ್ನು ಬಲ ಪಡಿಸಿ, ಅಡಿಕೆ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು.

Exit mobile version