Site icon Vistara News

Cheetah Safari: ಬನ್ನೇರುಘಟ್ಟದಲ್ಲಿ ʻಚಿರತೆ ಸಫಾರಿʼ ಶುರು; ಚಿರತೆಗಳನ್ನು ಕಾಡೊಳಗೇ ನೋಡಿ ಆನಂದಿಸಿ!

Cheetah Safari

ಬೆಂಗಳೂರು ಆಧುನಿಕ ಪ್ರವಾಸಿಗರ ಸ್ವರ್ಗ. ಇಲ್ಲೇ ಸುತ್ತಾಡಿದರೂ ಮುಗಿಯದಷ್ಟು ಸ್ಥಳಗಳಿವೆ. ಎಲ್ಲ ಬಗೆಯ ಪ್ರವಾಸಿಗರಿಗೂ ಖುಷಿಯಿಂದ ಕಾಲ ಕಳೆಯಬಹುದಾದಂತಹ ಜಾಗಗಳಿವೆ. ಇಂತಹ ಜಾಗಗಳ ಪೈಕಿ ಮಕ್ಕಳಾದಿಯಾಗಿ ಮುದುಕರವರೆಗೂ ನೋಡಬಹುದಾದ ತಾಣ ಎಂದರೆ ಅದು ಬನ್ನೇರುಘಟ್ಟ. ಬೆಂಗಳೂರಿನಲ್ಲೇ ಇರುವ ಆದರೆ ವನ್ಯಮೃಗಗಳನ್ನು ಅವುಗಳ ಆವಾಸಸ್ಥಾನದಲ್ಲೇ ನೋಡಿ ಬರಬಹುದಾದ ಸಫಾರಿಯೂ ಬನ್ನೇರುಘಟ್ಟದಲ್ಲಿರುವುದು ವಿಶೇಷ. ಈಗ ವನ್ಯಜೀವಿ ಪ್ರಿಯರಿಗೆ ಇನ್ನೂ ಒಂದು ಹೊಸ ಖುಷಿಯ ಸುದ್ದಿಯನ್ನು ಬನ್ನೇರುಘಟ್ಟ ನೀಡಿದೆ. ಇದೇ ಮೊದಲ ಬಾರಿಗೆ ʻಚಿರತೆ ಸಫಾರಿʼಯನ್ನೂ (Cheetah Safari) ಆರಂಭಿಸಿದೆ.

ದಕ್ಷಿಣ ಭಾರತದಲ್ಲೇ ಮೊದಲು

ದಕ್ಷಿಣ ಭಾರತದಲ್ಲೇ ಇದು ಮೊದಲನೆಯದಾಗಿದ್ದು, ನಮ್ಮ ಬಾರತದ ಅತ್ಯಂತ ದೊಡ್ಡ ಚಿರತೆ ಸಫಾರಿ ಇದಾಗಿದೆ. 20 ಹೆಕ್ಟೇರ್‌ ಕಾಡಿನಲ್ಲಿ ಈ ಸಫಾರಿಗೆ ಅವಕಾಶ ಮಾಡಿಕೊಡಲಾಗಿದ್ದು, ಇದರಲ್ಲಿ ಚಿರತೆ ವೀಕ್ಷಣೆಯ ಸಾಧ್ಯತೆ ಅತ್ಯಂತ ಹೆಚ್ಚಿದೆ. ರಕ್ಷಣೆಗಾಗಿ, ಎಲ್ಲ ಸುರಕ್ಷತಾ ಕ್ರಮಗಳನ್ನು ಬನ್ನೇರುಘಟ್ಟ ವನ್ಯಜೀವಿಧಾಮ ಕೈಗೊಂಡಿದ್ದು, ಸುರಕ್ಷತಾ ಬೇಲಿಗಳನ್ನು ಎಲ್ಲಡೆ ಹಾಕಲಾಗಿದೆ. ಹಾಗೂ ಯಾವುದೇ ತೊಂದರೆಯಾಗದಂತೆ ಸಫಾರಿಯನ್ನು ಮಾಡಿ ಬರಲು ಅನುಕೂಲಕರ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ.
ಬೆಂಗಳೂರಿನ ಹೊರವಲಯಗಳಲ್ಲಿ ಅನೇಕ ಕಡೆ, ಚಿರತೆಗಳ ಸಂಚಾರ ಸಾಮಾನ್ಯವಾಗಿದ್ದರೂ, ಚಿರತೆಗಳನ್ನು ಅವುಗಳ ಆವಾಸ ಸ್ಥಾನದಲ್ಲೇ ನೋಡುವ ರೋಮಾಂಚನ ವನ್ಯಜೀವಿ ಪ್ರಿಯರಿಗಷ್ಟೇ ಗೊತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಚಿರತೆಗಳ ದರ್ಶನಕ್ಕಾಗಿಯೇ ವಿಶೇಷವಾಗಿ ಈ ಸಫಾರಿ ಆಯೋಜಿಸಲಾಗಿದೆ. ತುಂಬ ಹತ್ತಿರದಿಂದ ಚಿರತೆಗಳನ್ನು ಕಾಣುವ ಸೌಭಾಗ್ಯ ಈ ಸಫಾರಿಯಲ್ಲಿ ಎಲ್ಲರಿಗೂ ಲಭ್ಯವಾಗಲಿದೆ.

ಇದನ್ನು ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಚಿರತೆ ಸಂತತಿ ಹೇರಳ

ಬನ್ನೇರುಘಟ್ಟದ ಈ ಭಾಗದಲ್ಲಿ ಚಿರತೆಗಳ ಸಂತತಿ ಹೇರಳಾಗಿದ್ದು, ಹಲವು ವರ್ಷಗಳಿಂದ ಇದು ಸಮತೋಲನವನ್ನು ಕಾಯ್ದುಕೊಂಡಿದೆ. ಬೆಂಗಳೂರು ಸುತ್ತಮುತ್ತಲ ಹಳ್ಳಿಗಳಿಗೆ ದಾಳಿ ಮಾಡುತ್ತಿದ್ದ ಚಿರತೆಗಳನ್ನು ರಕ್ಷಿಸಿ ಇಲ್ಲಿಗೆ ತರಲಾಗಿದ್ದು ಈ ಸಂಖ್ಯೆ ಇದೀಗ ವೃದ್ಧಿಸಿದೆ. ಹಾಗೂ ಬನ್ನೇರುಘಟ್ಟದ ಈ ವ್ಯಾಪ್ತಿಯ ನೈಸರ್ಗಿಕ ಪರಿಸರದಲ್ಲಿ ಓಡಾಡಿಕೊಂಡಿದ್ದು, ತಮ್ಮ ಎಂದಿನ ಶೈಲಿಯ ಬದುಕನ್ನು ಕಾಣುತ್ತಿವೆ. ಹೀಗಾಗಿ, ಅವುಗಳ ನೈಸರ್ಗಿಕವಾದ ಸಹಜ ಬದುಕನ್ನು ಹತ್ತಿರದಿಂದ ಕಾಣಲು ಈ ಸಫಾರಿ ಅತ್ಯಂತ ಸೂಕ್ತವಾದ ಮಾಧ್ಯಮವಾಗಿದೆ.
ಬನ್ನೇರುಘಟ್ಟದಲ್ಲಿ ಮೃಗಾಲಯವೂ ಇದ್ದು, ಅಲ್ಲಿ ಬಗೆಬಗೆಯ ಪ್ರಾಣಿ ಪಕ್ಷಿಗಳನ್ನು ನೋಡಬಹುದಾದರೂ, ಈ ಸಫಾರಿಯಲ್ಲಿ, ಅವುಗಳ ನೈಸರ್ಗಿಕ ಪರಿಸರದಲ್ಲೇ ವೀಕ್ಷಿಸಲು ಸಾಧ್ಯವಾಗುವುದು ವಿಶೇಷ.
ಬನ್ನೇರುಘಟ್ಟ ರಾಷ್ಟೀಯ ಉದ್ಯಾನದ ಇನ್ನೊಂದು ಬಹುಮುಖ್ಯ ವಿಶೇಷತೆ ಎಂದರೆ ಇಲ್ಲಿನ ಚಿಟ್ಟೆ ಪಾರ್ಕ್‌. ಸುಮಾರು 7.5 ಎಕರೆ ಪ್ರದೇಶದವನ್ನು ಚಿಟ್ಟೆ ಪಾರ್ಕ್‌ ಆಗಿ ಅಭಿವೃದ್ಧಿಗೊಳಿಸಲಾಗಿದ್ದು, ಇಲ್ಲಿ ನಾನಾ ಬಗೆಯ ಚಿಟ್ಟೆಗಳನ್ನು ವೀಕ್ಷಿಸಬಹುದು. ಬನ್ನೇರುಘಟ್ಟದಲ್ಲಿಯೇ ರಾತ್ರಿ ಕಳೆಯಬೇಕೆಂದರೆ, ಇಲ್ಲಿ ಟೆಂಟೆಡ್‌ ಕಾಟೇಜ್‌, ಹಟ್‌ಗಳ ಸೌಲಭ್ಯಗಳೂ ಇವೆ. ಸದ್ಯದಲ್ಲೇ ಬನ್ನೇರುಘಟ್ಟದ ಜೀವವೈವಿಧ್ಯದ ವಿಶೇಷ ವೀಕ್ಷಣೆಗಾಗಿ ಸ್ಕೈವಾಕ್‌ ಅನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ.
ಪ್ರತಿ ಮಂಗಳವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮುಚ್ಚಿರುತ್ತದೆ. ಇದನ್ನು ಹೊರತುಪಡಿಸಿ ಪ್ರತಿದಿನ 9.30ರಿಂದ ಸಂಜೆ 5ರವರೆಗೆ ಪ್ರವಾಸಿಗರಿಗಾಗಿ ಇದು ತೆರೆದಿರುತ್ತದೆ.

Exit mobile version