Site icon Vistara News

ಮೊಸಳೆ ಬಾಯಿ ತೆರೆದರೆ ಭಯಂಕರ, ಅಗಿಯೋಕೆ ಮಾತ್ರ ಬರಲ್ಲ!

crocodile

ಬಾಯಿ ಬಿಟ್ಟರೆ ತಮ್ಮ ಹಲ್ಲುಗಳ ದೆಸೆಯಿಂದಲೇ ನೋಡುಗರಲ್ಲಿ ಗಾಬರಿ ಹುಟ್ಟಿಸುವ ಮೊಸಳೆಗಳಿಗೆ ಅಗಿಯುವುದಕ್ಕೆ ಬರುವುದಿಲ್ಲ ಎಂದರೆ ನಂಬುವ ಮಾತೇ? ಆದರೆ ನಂಬಲೇ ಬೇಕು! ಗರಗಸದಂತಹ ಹಲ್ಲುಗಳಿಗೆ ಖ್ಯಾತವಾಗಿರುವ ಈ ಸರೀಸೃಪಗಳ ದವಡೆಗಳು, ಮೇಲೆ-ಕೆಳಗೆ ಮಾತ್ರ ಚಲಿಸಬಲ್ಲವು. ಉಳಿದ ಪ್ರಾಣಿಗಳಂತೆ ಅಡ್ಡಡ್ಡ ಚಲನೆ ಸಾ‍ಧ್ಯವಿಲ್ಲ.

ಹಾಗಂತ ಮೊಸಳೆ ಬಾಯಿಗೆ ತಲೆ ಕೊಡೋಕೆ ಹೋಗಬೇಡಿ. ಅದು ಸಲೀಸಾಗಿ ನಿಮ್ಮನ್ನು ಅರ್ಧಕ್ಕೆ ಕತ್ತರಿಸಿಬಿಡಬಲ್ಲುದು.

ಹಾಗಿದ್ದರೆ ಮಾಂಸಾಹಾರಿ ಪ್ರಾಣಿಗಳಾದ ಮೊಸಳೆಗಳು ಹೇಗೆ ತಿಂದು ಜೀರ್ಣಿಸಿಕೊಳ್ಳುತ್ತವೆ ಎಂಬುದು ಸಹಜ ಪ್ರಶ್ನೆ. ಮೀನು, ಹಕ್ಕಿ, ಕಪ್ಪೆ, ಇಲಿಯಂಥ ಪ್ರಾಣಿಗಳು ಅವುಗಳ ನಿತ್ಯದ ಆಹಾರ. ಹಾಗೆಂದು ಕೆಲವೊಮ್ಮೆ ದೊಡ್ಡ ಪ್ರಾಣಿಗಳನ್ನು ತಿನ್ನುವುದೂ ಉಂಟು ಅಥವಾ ಅಪರೂಪಕ್ಕೊಮ್ಮೆ ತಮ್ಮದೇ ಜಾತಿಯ ಮೊಸಳೆಯನ್ನೇ ಭಕ್ಷಿಸುವುದೂ ಹೌದು. ಬೇಟೆ ಸಣ್ಣದಾಗಿದ್ದರೆ, ಅವುಗಳನ್ನು ಹಾಗೆಯೇ ಗುಳುಂ ಮಾಡುತ್ತವೆ. ದೊಡ್ಡದಾಗಿದ್ದರೆ ಸೀಳಿ ತುಂಡಾಗಿಸಿಕೊಂಡು ನುಂಗುತ್ತವೆ. ಆದರೆ ಉಳಿದ ಪ್ರಾಣಿಗಳಂತೆ ಅಗಿದು-ನುರಿದು ತಿನ್ನುವುದು ಅವಕ್ಕೆ ಅಸಾಧ್ಯ.

ತಮ್ಮ ನೈಸರ್ಗಿಕ ಆವಾಸದಲ್ಲಿರುವ ಮೊಸಳೆಗಳು ಬೇಟೆಯಾಡಿದ ನಂತರ, ಆ ಪ್ರಾಣಿಯನ್ನು ನುಂಗಲು ಸಾಧ್ಯವಿರುವ ತುಂಡುಗಳನ್ನಾಗಿ ಮಾಡಿಕೊಳ್ಳುತ್ತವೆ. ಅದೇ ಬಂಧನದಲ್ಲಿರುವ ಮೊಸಳೆಗಳಿಗೆ ಬೇಟೆಯಾಡುವ ಕಷ್ಟ ಮತ್ತು ಆನಂದ ಎರಡೂ ಇರುವುದಿಲ್ಲವಾದ್ದರಿಂದ, ತಮಗಾಗಿ ತಂದ ಮೀನು, ಇಲಿ-ಹೆಗ್ಗಣಗಳನ್ನೇ ನುಂಗಬೇಕಾಗುತ್ತದೆ. ಮೊಸಳೆಗಳಿಗೆ ಹೊಟ್ಟೆಯಿರುವುದು ಒಂದಲ್ಲ, ನಾಲ್ಕು! ಹಾಗಾಗಿ ಪ್ರಾಣಿಗಳನ್ನು ಜಗಿಯದೆ ಇಡಿಯಾಗಿ ನುಂಗಿದರೂ ಪಚನ ಮಾಡುವ ಹೆಚ್ಚಿನ ಸವಲತ್ತು ಅದಕ್ಕೆ ನಿಸರ್ಗದತ್ತವಾಗಿ ಸಿದ್ಧಿಸಿದೆ. ಅಲ್ಲದೆ, ಬೇರೆಲ್ಲ ಪ್ರಾಣಿಗಳಿಂತ ಹೆಚ್ಚಾಗಿಯೇ ಜಠರ ರಸ ಅದರ ಉದರದಲ್ಲಿ ಇರುತ್ತದಂತೆ.

ಮಿಯಾಮಿ ವಿಜ್ಞಾನ ವಸ್ತುಸಂಗ್ರಹಾಲಯದ ತಜ್ಞರ ಪ್ರಕಾರ, ಆಸ್ಟ್ರಿಚ್‌ನಂತೆಯೇ ಮೊಸಳೆಗಳೂ ಸಣ್ಣ ಕಲ್ಲುಗಳನ್ನು ನುಂಗುತ್ತವಂತೆ… ಹೊಟ್ಟೆಯಲ್ಲಿ ಅವುಗಳನ್ನು ರುಬ್ಬುವುದು ಸುಲಭ ಎಂಬ ಕಾರಣಕ್ಕೆ! ದೊಡ್ಡ ಬೇಟೆಯನ್ನೇನಾದರೂ ನುಂಗಿದರೆ, ಮುಂದಿನ ಹಲವು ದಿನಗಳ ಕಾಲ ಅವುಗಳಿಗೆ ಆಹಾರವೇ ಬೇಕಿಲ್ಲ. ಇರುವ ನಾಲ್ಕು ಜಠರದ ಪೈಕಿ ಒಂದಾದಮೇಲೊಂದರಲ್ಲಿ ಆಹಾರವನ್ನು ಜೀರ್ಣಿಸುತ್ತಾ ಕಾಲಕಳೆಯುತ್ತವೆ.

ಹೆಣ್ಣು ಮೊಸಳೆ ೧೨-೪೮ ಮೊಟ್ಟೆಗಳನ್ನು ಒಂದು ಸಲಕ್ಕೆ ಇಡುತ್ತದೆ. ಇವು ಒಡೆಯಲು ೫೫-೧೦೦ ದಿನಗಳವರೆಗೆ ಬೇಕಾಗುತ್ತದೆ. ಹುಟ್ಟಿದ ಮರಿಗಳು ೭-೧೦ ಇಂಚು ಉದ್ದವಿರುತ್ತವೆ. ಅವುಗಳ ಪ್ರಬೇಧದ ಆಧಾರದ ಮೇಲೆ, ೪-೧೫ ವರ್ಷಗಳ ಅವಧಿಯಲ್ಲಿ ಮೊಸಳೆಗಳು ಪ್ರಾಯಪ್ರಬುದ್ಧವಾಗುತ್ತವೆ. ಜೀವಿತಾವಧಿಯೂ ಪ್ರಬೇಧವನ್ನಾಧರಿಸಿ, ೪೦-೮೦ ವರ್ಷಗಳು.

ಇದನ್ನೂ ಓದಿ | ಖ್ಯಾತ ಫುಟ್‌ಬಾಲರ್‌ ಝಿಝು ಬಗ್ಗೆ ನಿಮಗಿದು ಗೊತ್ತೆ?

Exit mobile version