ಫ್ಲೋರಿಡಾ: ಬೃಹತ್ ಗಾತ್ರದ ಹೆಬ್ಬಾವೊಂದನ್ನು ಅಮೆರಿಕದ ಫ್ಲೋರಿಡಾದಲ್ಲಿ ಹಿಡಿಯಲಾಗಿದ್ದು, ಈವರೆಗೆ ಫ್ಲೋರಿಡಾದಲ್ಲಿ ಸೆರೆ ಸಿಕ್ಕ ಉರಗಗಳ ಪೈಕಿ ಇದು ಅತಿ ದೊಡ್ಡದು ಎಂದು ಹೇಳಲಾಗಿದೆ. ಇದು ಅಮೆರಿಕದಲ್ಲಿ ಹೆಬ್ಬಾವು ಕಾಟ ಅತಿಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
೧೮ ಅಡಿ ಉದ್ದದ ಈ ಹೆಬ್ಬಾವು ೯೮ ಕೆಜಿ ತೂಗುತ್ತಿತ್ತು. ಅದರ ಹೊಟ್ಟೆಯಲ್ಲಿ ೧೨೨ ಮೊಟ್ಟೆಗಳೂ ಇದ್ದವು. ಮಾತ್ರವಲ್ಲ, ಜಿಂಕೆಯೊಂದರ ಗೊರಸುಗಳು ಅದರ ಜಠರದಲ್ಲಿದ್ದವು ಎಂದು ಇದನ್ನು ಸೆರೆ ಹಿಡಿದ ತಜ್ಞರು ಹೇಳಿದ್ದಾರೆ. ಫ್ಲೋರಿಡಾದ ನೈರುತ್ಯ ಭಾಗದ ಹುಲ್ಲುಗಾವಲು ಪ್ರದೇಶದಿಂದ ಇದನ್ನು ವನ್ಯಜೀವಿ ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ. ದೊಡ್ಡ ಜಿಂಕೆಯೊಂದನ್ನು ನುಂಗಿರುವುದರ ಕುರುಹಾಗಿ ಆ ಪ್ರಾಣಿಯ ಗೊರಸುಗಳು ಇದರ ಹೊಟ್ಟೆಯಲ್ಲಿ ದೊರೆತಿವೆ.
ಬಂದಿದ್ದೆಲ್ಲಿಂದ?: ಹೆಬ್ಬಾವುಗಳಲ್ಲೇ ಬರ್ಮಾ ಹೆಬ್ಬಾವು ಅತಿ ದೊಡ್ಡ ಗಾತ್ರದವು. ಈಗ ಸೆರೆ ಸಿಕ್ಕಿರುವ ಹೆಬ್ಬಾವು ಇದೇ ಜಾತಿಗೆ ಸೇರಿದ್ದೆಂದು ಹೇಳಲಾಗಿದೆ. ನೈರುತ್ಯ ಏಷ್ಯಾದ ಕಾಡುಗಳೇ ಇವುಗಳ ತವರು. ಇವು ಅಮೆರಿಕದ ತಲುಪಿದ್ದು ಹೇಗೆ ಎಂಬುದು ಕೂಡ ಕುತೂಹಲಕಾರಿಯಾಗಿದೆ.
ಬಹಳ ಹಿಂದೆ ಅಮೆರಿಕದ ಕೆಲವರು ಇದನ್ನು ಸಾಕುವ ಉದ್ದೇಶದಿಂದ ಏಷ್ಯಾದ ಕಾಡುಗಳಿಂದ ತರಿಸಿಕೊಂಡಿದ್ದರಂತೆ. ಇವು ತಪ್ಪಿಸಿಕೊಂಡೋ ಅಥವಾ ಅವುಗಳನ್ನು ಹೊರಗೆ ಬಿಡಲಾಯಿತೋ… ಅಂತೂ ಫ್ಲೋರಿಡಾದ ಹುಲ್ಲುಗಾವಲುಗಳಲ್ಲಿ ಸೊಂಪಾಗಿ ಬದುಕುತ್ತಿವೆ. ಇದರಿಂದಾಗಿ ಸ್ಥಳೀಯ ಆಹಾರ ಸರಪಳಿ ಏರುಪೇರಾಗಿರುವುದು ವನ್ಯಜೀವಿ ತಜ್ಞರಲ್ಲಿ ಆತಂಕ ಮೂಡಿಸಿದೆ.
ಇದನ್ನು ಸೆರೆ ಹಿಡಿದ ತಜ್ಞರ ತಂಡ, ಗಂಡು ಹೆಬ್ಬಾವುಗಳಲ್ಲಿ ರೇಡಿಯೊ ಟ್ರಾನ್ಸ್‌ಮಿಟರ್‌ಗಳನ್ನು ಅಳವಡಿಸಿ, ಅವುಗಳ ಸಂತಾನೋತ್ಪತ್ತಿ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. “ಹುಲ್ಲಿನ ಮೆದೆಯಲ್ಲಿ ಸೂಜಿ ಬಿದ್ದರೆ ಹುಡುಕುವುದು ಹೇಗೆ? ಅಯಸ್ಕಾಂತದ ನೆರವಿನಿಂದಲ್ಲವೇ? ಹಾಗೆಯೇ ಗಂಡು ಹೆಬ್ಬಾವುಗಳಿಗೆ ಟ್ರಾಕರ್ ಹಾಕಲಾಗಿದ್ದು, ಇಲ್ಲಿನ ಹೆಣ್ಣು ಹೆಬ್ಬಾವುಗಳ ಬಗ್ಗೆ ಮತ್ತು ಅವುಗಳ ಸಂತಾನೋತ್ಪತ್ತಿ ಸ್ಥಳಗಳ ಬಗ್ಗೆಯೂ ಮಾಹಿತಿ ದೊರೆಯುತ್ತದೆʼʼ ಎಂದು ವನ್ಯಜೀವಿ ತಜ್ಞ ಇಯಾನ್ ಬಾರ್ಟೋಸೆಕ್ ಹೇಳಿದ್ದಾರೆ.
ಫ್ಲೋರಿಡಾದ ಹುಲ್ಲುಗಾವಲುಗಳಲ್ಲಿ ಬರ್ಮಾ ಹೆಬ್ಬಾವುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ಕಳವಳ ಮೂಡಿಸಿದೆ. ಮಾತ್ರವಲ್ಲ, ಭಾರೀ ಗಾತ್ರದ ಈ ಉರಗಗಳು ಇಲ್ಲಿನ ಮೂಲನಿವಾಸಿ ಪ್ರಾಣಿಗಳಿಗೆ ಉಳಿಯದಂತೆ ಆಹಾರ ಕಬಳಿಸುತ್ತಿದ್ದು, ಆಹಾರ ಸರಪಳಿ ಏರುಪೇರಾಗಿದೆ. ಹಾಗಾಗಿ ಹೆಣ್ಣು ಹೆಬ್ಬಾವುಗಳ ಬಗ್ಗೆ ವನ್ಯಜೀವಿ ತಜ್ಞರು ನಿಗಾ ಇಟ್ಟಿದ್ದಾರೆ.
ಇದನ್ನೂ ಓದಿ | ಕೃತಕ ಕಾವು ನೀಡಿದ ಪರಿಣಾಮ ಹೊರಬಂತು ಹೆಬ್ಬಾವು ಮರಿಗಳು