Site icon Vistara News

ಸಕ್ಕರೆ ಕಡಿಮೆ ತಿನ್ನಿ, ಪರಿಸರ ಉಳಿಸಿ ಎನ್ನುತ್ತಿದ್ದಾರೆ ಸ್ಪೇನ್​​ ವಿಜ್ಞಾನಿಗಳು !; ಅದು ಹೇಗೆ ಸಾಧ್ಯ?

Is Sugar Help Fight Climate Change

ಹವಾಮಾನ ಬದಲಾವಣೆ (Climate Change) ಯ ಬಗ್ಗೆ ವಿಶ್ವದೆಲ್ಲೆಡೆ ಚರ್ಚೆ ನಡೆದಿರುವ ಬೆನ್ನಲ್ಲೇ, ಕಬ್ಬಿನ ಬೆಳೆಯಿಂದ ಪರಿಸರ ಸ್ನೇಹಿಯಾದ ಜೈವಿಕ ಇಂಧನ ತಯಾರಿಸುವ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಮಾತ್ರವಲ್ಲ, ಸಕ್ಕರೆಯನ್ನು ತಿನ್ನುವುದಕ್ಕೆ ಕಡಿಮೆ ಬಳಸಿ, ಭೂಮಿ ಉಳಿಸಿ ಎಂಬ ಸಂದೇಶವನ್ನೂ ನೀಡುತ್ತಿದ್ದಾರೆ.

ಆಹಾರೇತರ ಕಾರಣಗಳಿಗಾಗಿ, ಅದರಲ್ಲೂ ಮುಖ್ಯವಾಗಿ ಜೈವಿಕ ಇಂಧನ ತಯಾರಿಕೆಯ ಉದ್ದೇಶಕ್ಕಾಗಿ, ಕಬ್ಬು ಬೆಳೆಯುವ ಬಗ್ಗೆ ಸ್ಪೇನ್​ ದೇಶದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದು, ಇದರಿಂದ ಹವಾಮಾನ ಬದಲಾವಣೆಯಲ್ಲಿ ಮಾರ್ಪಾಡು ತಂದು, ಮಾಲಿನ್ಯಕ್ಕೆ ಕಡಿವಾಣ ಹಾಕಬಹುದು ಎಂಬುದು ಅವರ ಅಂಬೋಣ. ಬಾರ್ಸಿಲೋನ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಕಾರುಗಳಿಗೆ ಜೈವಿಕ ಇಂಧನ, ಮುಖ್ಯವಾಗಿ ಜೈವಿಕ ಎಥೆನಾಲ್‌, ತಯಾರಿಸುವಲ್ಲಿ ಕಬ್ಬಿನ ಬೆಳೆಗಳು ಎಷ್ಟು ಸಹಕಾರಿ ಎಂಬುದನ್ನು ಮೂರು ಭಿನ್ನ ಆಯಾಮಗಳಿಂದ ಪರಿಶೀಲಿಸಿದ್ದಾರೆ.

ಕಬ್ಬಿನ ಬೆಳೆಗಳಿಗಾಗಿ ಐರೋಪ್ಯ ಒಕ್ಕೂಟದಲ್ಲಿ ನಾಶವಾಗಿದ್ದ ಅರಣ್ಯಗಳ ಪುನರ್ನಿರ್ಮಾಣವನ್ನು ಮೊದಲ ಆಯಾಮವಾಗಿ ಪರಿಶೀಲಿಸಿದರೆ, ಕಬ್ಬಿನ ಬೆಳೆಗಳನ್ನು ಜೈವಿಕ ಎಥೆನಾಲ್‌ ತಯಾರಿಕೆಗೆ ಬಳಸುವುದನ್ನು ಎರಡನೇ ಆಯಾಮವಾಗಿ ಪರಿಶೀಲಿಸಿದ್ದಾರೆ. ಅಂತಿಮವಾಗಿ, ಬ್ರೆಜಿಲ್‌ನಲ್ಲಿ ಕಬ್ಬಿನ ಬೆಳೆಯನ್ನು ಜೈವಿಕ ಇಂಧನ ತಯಾರಿಕೆಗೆ ಮಾತ್ರವೇ ಬಳಸಿ, ತನ್ನಲ್ಲಿರುವ ಹೆಚ್ಚುವರಿ ಸಕ್ಕರೆಯನ್ನು ಐರೋಪ್ಯ ಒಕ್ಕೂಟವು ಬ್ರೆಜಿಲ್‌ಗೆ ರಫ್ತು ಮಾಡುವ ಸನ್ನಿವೇಶವನ್ನೂ ಪರಿಶೀಲಿಸಿದ್ದಾರೆ.

ಈ ಉಪಕ್ರಮಗಳಿಂದ, ಸುಮಾರು ೫೪ ಮೆಗಾಟನ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್‌ ಉಗುಳುವಿಕೆಯನ್ನು ವರ್ಷಂಪ್ರತಿ ಕಡಿಮೆ ಮಾಡಬಹುದು ಎಂಬುದು ಅಧ್ಯಯನ ನಿರತರ ಅಭಿಪ್ರಾಯ. ಆದರೆ ಇದಕ್ಕಾಗಿ ಬ್ರೆಜಿಲ್‌ ಮತ್ತು ಐರೋಪ್ಯ ಒಕ್ಕೂಟಗಳೆರಡೂ ಸಕ್ಕರೆ ಬಳಕೆಯನ್ನು ಕಡಿಮೆ ಮಾಡಬೇಕು. ಇದು ಜನರ ಆರೋಗ್ಯಕ್ಕೆ ಅನುಕೂಲ ಮಾತ್ರವಲ್ಲದೆ ಪರಿಸರಕ್ಕೂ ಪ್ರಯೋಜನಕಾರಿ ಎಂಬುದು ಅವರ ವಾದ. ʻವಿಸ್ತೃತ ಸಹಕಾರದಿಂದ ಹೇಗೆ ಸುಸ್ಥಿರವಾದ ಪರಿಣಾಮಗಳನ್ನು ಸಮಾಜದಲ್ಲಿ ತರುವುದಕ್ಕೆ ಸಾಧ್ಯ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆʼ ಎಂದು ಅಧ್ಯಯನಕಾರ ಜೆರೋನ್‌ ವ್ಯಾನ್‌ಡೆನ್‌ ಬೆರ್ಗ್‌ ಹೇಳಿದ್ದಾರೆ.

ಸಕ್ಕರೆ ಬಳಕೆಯನ್ನು ನಿಯಂತ್ರಣಕ್ಕೆ ತರುವುದಕ್ಕೆ ಸಾರ್ವಜನಿಕವಾದ ಮತ್ತು ಆಡಳಿತಾತ್ಮಕವಾದ ನೀತಿಗಳು ಅಗತ್ಯ ಎಂದಿರುವ ಅಧ್ಯಯನ ವರದಿ, ತಂಬಾಕು ಬಳಕೆಗೆ ತೆರಿಗೆ ಇರುವಂತೆಯೇ ಸಕ್ಕರೆ ಬಳಕೆಗೂ ತೆರಿಗೆ ತರುವುದನ್ನೂ ಪ್ರಸ್ತಾಪಿಸಿದೆ. ಇದರಿಂದ ಬಳಕೆದಾರರ ಮೇಲೆ ಮಾತ್ರವಲ್ಲ, ತಂಪು ಪಾನೀಯದಂಥ ಉತ್ಪನ್ನಗಳಲ್ಲಿ ಸಕ್ಕರೆ ಬಳಕೆಯನ್ನೂ ನಿಯಂತ್ರಣ ಹೇರಬಹುದು ಎಂಬ ವಾದದಲ್ಲಿ ಹುರುಳಿಲ್ಲದಿಲ್ಲ. ಇಂಥ ನೀತಿಗಳು ಉಂಟು ಮಾಡುವ ಪ್ರಾಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಮೇಲಿನ ವಿವರ ಅಧ್ಯಯನ ಅಗತ್ಯ ಎಂಬುದನ್ನು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ವಿಜ್ಞಾನಿಗಳಿಂದ ನ್ಯಾನೋ ಹಚ್ಚೆ ಸಂಶೋಧನೆ; ಆರೋಗ್ಯ ಸಮಸ್ಯೆಗಳಿಂದ ರಕ್ಷೆ?

Exit mobile version