Site icon Vistara News

Longest Rivers: ಗಂಗೆಯಿಂದ ತಪತಿವರೆಗೆ ಅತಿ‌ ಉದ್ದದ ಟಾಪ್ 10 ನದಿಗಳಿವು; ಕಾವೇರಿ ನದಿಗೆ ಎಷ್ಟನೇ ಸ್ಥಾನ?

Longest Rivers

ಹಳ್ಳಿಯಿಂದ ಪಟ್ಟಣದವರೆಗೂ ನದಿಗಳು ಜೀವನಾಡಿಯಾಗಿರುತ್ತದೆ. ನದಿ ಇಲ್ಲದ ಊರೆಂದರೆ ಅದು ಜೀವ ಇಲ್ಲದ ದೇಹದಂತೆಯೇ ಸರಿ. ಒಂದು ರೀತಿಯಲ್ಲಿ ಭಾರತೀಯರು (indians) ಅದೃಷ್ಟವಂತರು. ಇಲ್ಲಿ ಸಾಕಷ್ಟು ನದಿಗಳಿವೆ. ಅದರಲ್ಲೂ ಬಹುತೇಕ ಭೂಪ್ರದೇಶಗಳಿಗೆ ನೀರುಣಿಸುವ ಈ ನದಿಗಳು ವಿಶಾಲವಾದ (Longest Rivers) ಪ್ರದೇಶವನ್ನು ವ್ಯಾಪಿಸಿಕೊಂಡು ಕೃಷಿಯೊಂದಿಗೆ ನಾಗರಿಕತೆಗಳನ್ನು ಪೋಷಿಸುವ ಪಾತ್ರ ವಹಿಸುತ್ತಿದೆ.

ಭಾರತವು ವೈವಿಧ್ಯಮಯ ಭೂದೃಶ್ಯಗಳನ್ನು ಹೊಂದಿರುವ ಭೂಮಿಯಾಗಿದ್ದು ನದಿಗಳ ದೊಡ್ಡ ಜಾಲವು ಇಲ್ಲಿದೆ. ದೇಶದ ಹಲವಾರು ನದಿಗಳು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ . ಜೀವನವನ್ನು ಉಳಿಸಿಕೊಳ್ಳುವಲ್ಲಿ, ಕೃಷಿಯನ್ನು ಪೋಷಿಸುವಲ್ಲಿ ಮತ್ತು ನಾಗರಿಕತೆಗಳನ್ನು ಬೆಳೆಸುವಲ್ಲಿ ಇವುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ.

200ಕ್ಕೂ ಹೆಚ್ಚು ನದಿಗಳು ಭಾರತದ ವಿಶಾಲ ಭೂದೃಶ್ಯವನ್ನು ದಾಟಿ ಹರಿಯುತ್ತವೆ. ಇದರಲ್ಲಿ ಹೆಚ್ಚಿನ ನದಿಗಳು ಅರಾವಳಿ, ಕಾರಕೋರಂ ಮತ್ತು ಹಿಮಾಲಯದಲ್ಲಿ ಹುಟ್ಟಿ ತನ್ನದೇ ದಿಕ್ಕಿನಲ್ಲಿ ಸಾಗಿ ಸಮುದ್ರವನ್ನು ಸೇರುತ್ತದೆ. ಹೆಚ್ಚಿನ ನದಿಗಳು ದೇಶದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿವೆ. ದೇಶದಲ್ಲಿ ಅತೀ ಉದ್ದದ 10 ಪ್ರಮುಖ ನದಿಗಳಿದ್ದು, ಅವುಗಳ ವಿಶೇಷತೆಗಳು ಏನು ಗೊತ್ತೇ ?

ಇದನ್ನೂ ಓದಿ: Rainfall Expect: ನಕ್ಷತ್ರಗಳ ಪ್ರಕಾರ ಈ ವರ್ಷ ಯಾವಾಗ ಮಳೆ ಬರಬಹುದು? ಇಲ್ಲಿದೆ ಪಕ್ಕಾ ಲೆಕ್ಕಾಚಾರ!

ಗಂಗಾ (ganga)

ಉತ್ತರಾಖಂಡದ ಗಂಗೋತ್ರಿ ಹಿಮನದಿಯಿಂದ ಹುಟ್ಟುವ ಗಂಗಾನದಿಯು ಭಾರತದ ಅತೀ ಉದ್ದದ ನದಿಯಾಗಿದೆ. ಇದು ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ರಾಜ್ಯಗಳ ಮೂಲಕ ಹಾದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಇದರ ಉದ್ದ ಸುಮಾರು 2,525 ಕಿಲೋಮೀಟರ್. ಇದಕ್ಕೆ ಬಾಂಗ್ಲಾದೇಶದಲ್ಲಿ ಪದ್ಮಾ ನದಿ ಎಂದೂ ಕರೆಯುತ್ತಾರೆ.


ಗೋದಾವರಿ (Godavari)

ಗಂಗಾ ನದಿಯ ಅನಂತರ ಭಾರತದ ಎರಡನೇ ಅತೀ ದೊಡ್ಡ ನದಿ ಗೋದಾವರಿ. ಇದರ ಉದ್ದ ಸುಮಾರು 1,465 ಕಿಲೋಮೀಟರ್. ಮಹಾರಾಷ್ಟ್ರದ ತ್ರಯಂಬಕ್ ನಿಂದ ಹುಟ್ಟಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಗೋದಾವರಿಯು ಪ್ರವರ, ಮಂಜೀರ, ಪೆಂಗಂಗ, ವಾರ್ಧಾ, ಇಂದ್ರಾವತಿ, ಶಬರಿ ಮತ್ತು ಇತರ ಕೆಲವು ಉಪನದಿಗಳನ್ನು ಹೊಂದಿದೆ.

ಕೃಷ್ಣ (Krishna)

ಭಾರತದ ಮೂರನೇ ಅತೀ ದೊಡ್ಡ ನದಿ ಕೃಷ್ಣ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಸುಮಾರು 1,400 ಕಿಲೋ ಮೀಟರ್ ದೂರದವರೆಗೆ ಹರಿದು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಮೂಲಕ ಬಂಗಾಳ ಕೊಲ್ಲಿಗೆ ಸೇರುತ್ತದೆ, ತುಂಗಭದ್ರಾ, ಭೀಮಾ, ಘಟಪ್ರಭಾ, ಮಲಪ್ರಭಾ ಮತ್ತು ಮೂಸಿ ನದಿಗಳು ಇದರ ಉಪನದಿಗಳಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಹುಟ್ಟುವ ತುಂಗಭದ್ರಾ ನದಿಯು ಅದರ ದೊಡ್ಡ ಉಪನದಿಯಾಗಿದೆ.

ಯಮುನಾ (yamuna)

ಭಾರತದ ನಾಲ್ಕನೇ ದೊಡ್ಡ ನದಿ ಸುಮಾರು 1,376 ಕಿಲೋ ಮೀಟರ್ ದೂರದವರೆಗೆ ಹರಿಯುತ್ತದೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ಹಿಮನದಿಗಳಿಂದ ಹುಟ್ಟುವ ಇದು ಗಂಗೆಯ ಉಪನದಿ. ಉತ್ತರಪ್ರದೇಶದ ಅಲಹಾಬಾದ್ ನ ಪ್ರಯಾಗರಾಜ್ ನಲ್ಲಿ ಗಂಗಾ ನದಿಯೊಂದಿಗೆ ವಿಲೀನಗೊಳ್ಳುವ ಮೊದಲು ಹಿಮಾಚಲ ಪ್ರದೇಶ, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ನೀರುಣಿಸುತ್ತದೆ. ಗಂಗಾ-ಯಮುನಾ ಸಂಗಮದಿಂದಾಗಿ ಪ್ರಯಾಗರಾಜ್ ಅನ್ನು ಸಂಗಮ್ ನಗರಿ ಎಂದು ಕರೆಯುತ್ತಾರೆ.


ನರ್ಮದಾ (narmada)

ಭಾರತದ ಐದನೇ ದೊಡ್ಡ ನದಿಸುಮಾರು 1,312 ಕಿಲೋ ಮೀಟರ್‌ ದೂರ ಸಾಗುತ್ತದೆ. ಮಧ್ಯಪ್ರದೇಶದ ಅಮರಕಂಟಕ್ ಪ್ರಸ್ಥಭೂಮಿಯಲ್ಲಿ ಹುಟ್ಟಿ ಅರಬ್ಬೀ ಸಮುದ್ರ ಸೇರುತ್ತದೆ. ಇದಕ್ಕೂ ಮೊದಲು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ನೀರುಣಿಸುತ್ತದೆ.
ತಾವಾ, ಬರ್ನಾ, ಶಕ್ಕರ್ ಮತ್ತು ಹಿರಾನ್ ನರ್ಮದೆಯ ಪ್ರಮುಖ ಉಪನದಿಗಳಾಗಿವೆ. ನೀರಾವರಿ, ಜಲವಿದ್ಯುತ್ ಉತ್ಪಾದನೆಗಾಗಿ ಈ ನದಿಗೆ ಹಲವಾರು ಅಣೆಕಟ್ಟುಗಳು ಮತ್ತು ಜಲಾಶಯಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಗುಜರಾತ್ ನ ಸುಪ್ರಸಿದ್ಧ ಸರ್ದಾರ್ ಸರೋವರ ಅಣೆಕಟ್ಟು ಕೂಡ ಒಂದು.

ಸಿಂಧು (Indus)

ಪಾಕಿಸ್ತಾನದ ಮೂಲಕ ಹರಿಯುವ ಸಿಂಧೂ ಭಾರತದ ಪಶ್ಚಿಮ ಪ್ರದೇಶಗಳಿಗೆ ತಲುಪುತ್ತದೆ. ಇದು ಟಿಬೆಟಿಯನ್ ಪ್ರಸ್ಥಭೂಮಿಯ ಮಾನಸರೋವರದಿಂದ ಹುಟ್ಟುತ್ತದೆ. ಪಾಕಿಸ್ತಾನ ತಲುಪುವ ಮೊದಲು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಇದರ ಉದ್ದ ಸುಮಾರು 3,180 ಕಿಲೋಮೀಟರ್.

ಬ್ರಹ್ಮಪುತ್ರ (Brahmaputra)

ಹಿಮಾಲಯದ ಕೈಲಾಶ್ ಪರ್ವತದ ಬಳಿ ಚೀನಾದ ಚೆಮಯುಂಗ್‌ಡಂಗ್ ಹಿಮನದಿಯಿಂದ ಹುಟ್ಟುವ ಬ್ರಹ್ಮಪುತ್ರ ನದಿಯ ಉದ್ದ ಸುಮಾರು 2,900 ಕಿಲೋಮೀಟರ್‌. ಆದರೆ ಇದು ಭಾರತದ ಕೇವಲ 918 ಕಿಲೋ ಮೀಟರ್ ಪ್ರದೇಶಕ್ಕೆ ನೀರುಣಿಸುತ್ತದೆ. ಆಂಧ್ರಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುವ ಇದನ್ನು ಸಿಯಾಂಗ್ ನದಿ ಎಂದು ಕರೆಯಲಾಗುತ್ತದೆ. ಅಸ್ಸಾಂ ಮತ್ತು ಬಾಂಗ್ಲಾದೇಶದ ಮೂಲಕ ಹರಿದು ಗಂಗಾ ಮತ್ತು ಮೇಘನಾ ನದಿಗಳೊಂದಿಗೆ ವಿಲೀನಗೊಂಡು ಬಂಗಾಳಕೊಲ್ಲಿ ಸೇರುತ್ತದೆ. ಇದಕ್ಕೂ ಮೊದಲು ಇದು ವಿಶ್ವದ ಅತೀ ದೊಡ್ಡ ಜೌಗು ಪ್ರದೇಶವಾದ ಸುಂದರಬನ್ಸ್ ಡೆಲ್ಟಾವನ್ನು ರೂಪಿಸುತ್ತದೆ.

ಮಹಾನದಿ (mahanadi)

858 ಕಿಲೋಮೀಟರ್ ಉದ್ದದ ಭಾರತದ ಎಂಟನೇ ದೊಡ್ಡ ನದಿಯಾಗಿದೆ. ಮಹಾನದಿಯು ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯಲ್ಲಿ ಹುಟ್ಟಿ ಛತ್ತೀಸ್‌ಗಢ ಮತ್ತು ಒಡಿಶಾ ರಾಜ್ಯಗಳ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಸಿಯೋನಾಥ್, ಜೋಂಕ್, ಹಾಸ್ಡಿಯೊ, ಓಂಗ್ ಮತ್ತು ಟೆಲ್ ಇದರ ಉಪನದಿಗಳು. ಈ ನದಿಯ ನೀರು ವ್ಯಾಪಕವಾಗಿ ನೀರಾವರಿಗೆ ಬಳಸಲಾಗುತ್ತದೆ, ಛತ್ತೀಸ್ಗಢ ಮತ್ತು ಒಡಿಶಾದ ಕೃಷಿ ಚಟುವಟಿಕೆಗೆ ಇದು ಜೀವನಾಡಿಯಾಗಿದೆ.


ಕಾವೇರಿ (Kaveri)

ಭಾರತದ ಒಂಬತ್ತನೇ ದೊಡ್ಡ ನದಿ. ಕರ್ನಾಟಕದ ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ಬೆಟ್ಟಗಳಲ್ಲಿ ಹುಟ್ಟಿ ತಮಿಳುನಾಡು ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಸರಿಸುಮಾರು 800 ಕಿಲೋ ಮೀಟರ್‌ ದೂರದವರೆಗೆ ಹರಿಯುವ ಈ ನದಿಗೆ ಹೇಮಾವತಿ, ಕಬಿನಿ, ಅರ್ಕಾವತಿ, ಶಿಂಷಾ ಮತ್ತು ಅಮರಾವತಿ ಉಪನದಿಗಳಾಗಿವೆ.

ತಪತಿ (Tapti)

ಭಾರತದ ಹತ್ತನೇ ದೊಡ್ಡ ನದಿಯಾಗಿರುವ ಇದು ಮಧ್ಯಪ್ರದೇಶದ ಸಾತ್ಪುರ ಶ್ರೇಣಿಯಿಂದ ಹುಟ್ಟುತ್ತದೆ. ಮಹಾರಾಷ್ಟ್ರ ಮತ್ತು ಗುಜರಾತ್ ಮೂಲಕ ಸುಮಾರು 724 ಕಿಲೋಮೀಟರ್ ದೂರ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ.

Exit mobile version