Site icon Vistara News

Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್‌ ಮ್ಯಾನ್‌; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ

The Forest Man Of India

The Forest Man Of India

ಬೆಂಗಳೂರು: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ದೇಶದಲ್ಲಿ ಗರಿಷ್ಠ 56 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶ ದಾಖಲಾಗಿದೆ. ಬಿಸಿ ಗಾಳಿಯಿಂದ ಅನೇಕ ಮಂದಿ ತತ್ತರಿಸಿ ಹೋಗಿದ್ದಾರೆ. ಪ್ರಾಣಿ-ಪಕ್ಷಿಗಳ ಸ್ಥಿತಿಯಂತೂ ಇನ್ನೂ ಗಂಭೀರ. ವ್ಯಾಪಕ ಪ್ರಮಾಣದಲ್ಲಿ ಕಾಡುಗಳ ನಾಶವೇ ಈ ರೀತಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲು ನೇರ ಕಾರಣ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ. ಈ ಮಧ್ಯೆ ಏಕಾಂಗಿಯಾಗಿ ಹೆಕ್ಟರ್‌ಗಟ್ಟಲೆ ಪ್ರದೇಶಗಳಲ್ಲಿ ಕಾಡು ಬೆಳೆಸಿ ʼಫಾರೆಸ್ಟ್‌ ಮ್ಯಾನ್‌ ಆಫ್‌ ಇಂಡಿಯಾʼ (Forest Man Of India) ಎಂದು ಜನಪ್ರಿಯರಾಗಿರುವ ಜಾದವ್‌ ಮೊಲಾಯ್ ಪಾಯೆಂಗ್‌ (Jadav Payeng) ಅವರ ಮಹಾತ್ಕಾರ್ಯ ಎಲ್ಲಿಲ್ಲದ ಪ್ರಾಧಾನ್ಯತೆ ಪಡೆದುಕೊಂಡಿದೆ. ಇವರೊಬ್ಬರೇ ಬರೋಬ್ಬರಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ್ದಾರೆ. ಅವರ ಸ್ಫೂರ್ತಿದಾಯಕ ಕಥೆ ಇಲ್ಲಿದೆ.

ಗೋಲ್ಬಾಲ್ಫಾರೆಸ್ಟ್ ವಾಚ್ ಪ್ರಕಾರ, 2010ರಲ್ಲಿ ಭಾರತವು 31.3 ಮಿಲಿಯನ್ ಹೆಕ್ಟೇರ್ ನೈಸರ್ಗಿಕ ಅರಣ್ಯ ಹೊಂದಿತ್ತು. ಅಂದರೆ ಭೂಪ್ರದೇಶದ ಶೇ. 11ರಷ್ಟು ಪ್ರದೇಶವನ್ನು ಹಸಿರು ವ್ಯಾಪಿಸಿತ್ತು. ಸುಮಾರು 11 ವರ್ಷಗಳಲ್ಲಿ ಈ ಚಿತ್ರಣವೇ ಬದಲಾಯ್ತು. ಅಂದರೆ 2021ರಲ್ಲಿ 127 ಸಾವಿರ ಹೆಕ್ಟರ್‌ಗಳಷ್ಟು ಅರಣ್ಯ ನಾಶವಾಯ್ತು. ಮರಗಳ ಮಾರಣ ಹೋಮದ ಜತೆಗೆ ಪರಿಸರ ವ್ಯವಸ್ಥೆಯೇ ಏರುಪೇರಾಗಿದೆ.

ಜಾದವ್‌ ಪಾಯೆಂಗ್‌ ಎನ್ನುವ ಭರವಸೆಯ ಬೆಳಕು

ಗಿಡ ನೆಡಬೇಕು, ಕಾಡು ಬೆಳೆಸಬೇಕು ಎನ್ನುವ ಕನಸು ಜಾಧವ್‌ ಅವರಲ್ಲಿ ಹದಿಹರೆಯದಲ್ಲೇ ಮೊಳೆತಿತ್ತು. ಕಣ್ಣೆದುರೇ ಬೆಳದ ಕಾಡುಗಳು ನಾಶವಾಗುತ್ತಿರುವುದು ನೋಡಿ ಜಾದವ್‌ ಪಾಯೆಂಗ್‌ ಒಳಗೊಳಗೇ ನಲುಗುತ್ತಿದ್ದರು. ಇದನ್ನು ಹೇಗಾದರೂ ಮಾಡಿ ತಡೆಯಬೇಕು, ತಾನು ಕಾಡು ಬೆಳೆಸಬೇಕು ಎನ್ನುವ ಛಲ ಅವರಲ್ಲಿ ಮೊಳೆಯತೊಡಗಿತು. ಹೀಗೆ ಅಸ್ಸಾಂನ ಮಜುಲಿಯಲ್ಲಿ ಜನಿಸಿದ ಜಾಧವ್‌ ಮುಂದೆ ʼಫಾರೆಸ್ಟ್‌ ಮ್ಯಾನ್‌ ಆಫ್‌ ಇಂಡಿಯಾʼ ಎಂದು ಕರೆಸಿಕೊಂಡರು.
ಮಜುಲಿ ಎನ್ನುವುದು ಬ್ರಹ್ಮಪುತ್ರ ನದಿಯಿಂದ ರೂಪುಗೊಂಡ ಒಂದು ದ್ವೀಪ. ಇಲ್ಲಿ ಮಿಶಿಂಗ್‌ ಆದಿವಾಸಿ ಕುಟುಂಬ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದೆ.

ತಿರುವು ನೀಡಿದ ಘಟನೆ

1959ರಲ್ಲಿ ಜನಿಸಿದ್ದ ಜಾದವ್ ಸಾಮಾನ್ಯರಂತೆ ತಮ್ಮಷ್ಟಕ್ಕೆ ತಾವು ಜೀವನ ಸಾಗಿಸುತ್ತಿದ್ದರು. ಆದರೆ 1979ರಲ್ಲಿ ನಡೆದ ಘಟನೆ ಅವರ ಜೀವನವನ್ನೇ ಬದಲಾಯಿಸಿ ಬಿಟ್ಟಿತು. ಸಾಮಾನ್ಯ ವ್ಯಕ್ತಿಯನ್ನು ಅಸಮಾನ್ಯ ವ್ಯಕ್ತಿಯನ್ನಾಗಿಸಿತು. ಅಂದು ಜಾದವ್‌ ತಮ್ಮ ಮನೆಯ ಸುತ್ತ ಮರಳಿನ ನೆಲದ ಮೇಲೆ ಸತ್ತು ಬಿದ್ದಿರುವ ಅನೇಕ ಹಾವುಗಳನ್ನು ನೋಡಿದರು. ಉಷ್ಣತೆ ತಾಳಲಾರದೆ ಹಾವುಗಳು ಸತ್ತು ಬಿದ್ದಿದ್ದವು. ಈಗ ಹಾವಿನ ಪರಿಸ್ಥಿತಿ ಇದಾದರೆ ಮುಂದೊಂದು ದಿನ ಮನುಷ್ಯರಾದ ನಾವೂ ಶಾಖ ತಾಳಲಾರದೆ ಇದೇ ರೀತಿ ಸತ್ತು ಬೀಳಬಹುದು ಎನ್ನುವ ಆಲೋಚನೆ 20ರ ಹರೆಯ ಜಾದವ್‌ನ ಮನಸ್ಸಿನಲ್ಲಿ ಬೇರೂರಿತು. ಇದಕ್ಕೇನು ಪರಿಹಾರ ಎಂದು ಚಿಂತಿಸತೊಡಗಿದರು. ಆಗ ಹಿರಿಯರು ಉಷ್ಣಾಂಶದಿಂದ ಪಾರಾಗಲು ಗಿಡ ನೆಡಬೇಕು ಎನ್ನುವ ಸಲಹೆ ನೀಡಿದರು. ಹೀಗೆ ಜಾದವ್‌ ತಮ್ಮ ದ್ವೀಪದ ಖಾಲಿ ಸ್ಥಳಗಳಲ್ಲಿ ಬಿದಿರು ನೆಡಲು ಆರಂಭಿಸಿದರು. ‌

ಇದೇ ವೇಳೆ ಅಸ್ಸಾಂ ಸರ್ಕಾರ ಮಣ್ಣಿನ ಸವಕಳಿ ತಡೆಯಲು ಮತ್ತು ಪ್ರವಾಹವನ್ನು ನಿಯಂತ್ರಿಸಲು ದ್ವೀಪದಲ್ಲಿ ಗಿಡ ನೆಡುವ ಯೋಜನೆಯನ್ನು ಪ್ರಾರಂಭಿಸಿತು. ಜಾದವ್‌ ಈ ಯೋಜನೆ ಭಾಗವಾದರು. ಆ ಮೂಲಕ ಬೋಳು ಪ್ರದೇಶದಲ್ಲಿ ಹಸಿರು ಮೂಡಿಸುವ ಕಾರ್ಯಕ್ಕೆ ಮುಂದಾದರು. ಹೀಗೆ ಆರಂಭವಾದ ಜಾದವ್‌ ಅವರ ಮಿಷನ್‌ ಸುಮಾರು 40 ವರ್ಷಗಳ ಕಾಲ ಮುಂದುವರಿಯಿತು. ಇದೀಗ ಅವರು ಬೆಳೆಸಿದ ಸುಮಾರು 1,390 ಎಕ್ರೆ ಕಾಡಿಗೆ ಮೋಲಾಸ್‌ ಫಾರೆಸ್ಟ್‌ (Mola’s forest) ಎಂದು ಹೆಸರಿಡಲಾಗಿದೆ.

ವಿವಿಧ ತಳಿಗಳ ಗಿಡ

ಜಾದವ್‌ ವಿವಿಧ ರೀತಿಯ ಗಿಡಗಳನ್ನು ನೆಟ್ಟಿದ್ದಾರೆ. ವಾಲ್ಕೋಲ್, ಅರ್ಜುನ್, ಎಜರ್, ಗೋಲ್ಡ್ ಮೊಹರ್, ಕೊರೊಯಿ, ಬಿದಿರು ಸೇರಿದಂತೆ ನಾನಾ ತಳಿಯ ಗಿಡಗಳನ್ನು ನೆಟ್ಟು ದಟ್ಟ ಅರಣ್ಯ ಸೃಷ್ಟಿಸಿದ್ದಾರೆ. ಜತೆಗೆ ಈ ಕಾಡು ಅನೇಕ ವನ್ಯ ಜೀವಿಗಳ ಆವಾಸ ಸ್ಥಾನವಾಗಿಯೂ ಬದಲಾಗಿದೆ. ಹುಲಿ, ಖಡ್ಗ ಮೃಗ, ಜಿಂಕೆ, ಹಂದಿ, ಮೊಲ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳ ತವರೂರು ಎನಿಸಿಕೊಂಡಿದೆ. ಆನೆಗಳ ಗುಂಪುಗಳೂ ಕೂಡ ಆಗಾಗ ಈ ಕಾಡಿಗೆ ಭೇಟಿ ನೀಡುತ್ತವೆ.

ಎಲೆ ಮರೆಯ ಕಾಯಿ

ಜಾದವ್‌ ಇಷ್ಟೆಲ್ಲ ಸಾಧನೆ ಮಾಡಿದ್ದರೂ ಹೊರ ಜಗತ್ತಿಗೆ ಪರಿಚಿತನಾಗಿರಲಿಲ್ಲ. ಎಲೆಮರೆಯ ಕಾಯಿಯಂತೆ ತಮ್ಮ ಪಾಡಿಗೆ ತಾವಿದ್ದರು. 2009ರಲ್ಲಿ ವೈಲ್ಡ್‌ಲೈಫ್‌ ರಿಪೋರ್ಟರ್‌ ಜಾದವ್‌ ಸಾಧನೆ ಬಗ್ಗೆ ಬರೆದಿದ್ದರು. ಇದು ವೈರಲ್‌ ಆಗಿ ಜಗತ್ತು ಜಾದವ್‌ ಅವರ ಮಹತ್ಕಾರ್ಯವನ್ನು ಗುರುತಿಸತೊಡಗಿತು. 2012ರಲ್ಲಿ ಇವರಿಗೆ ʼಫಾರೆಸ್ಟ್‌ ಮ್ಯಾನ್‌ ಆಫ್‌ ಇಂಡಿಯಾʼ ಎನ್ನುವ ಬಿರುದು ನೀಡಲಾಯಿತು. ಈಗಲೂ ಅವರು ಅರಣ್ಯದ ಜತೆ ಜತೆಗೆ ವಾಸಿಸುತ್ತ ಗಿಡ ನೆಡುವ ಕಾಯಕವನ್ನು ಮುಂದುವರಿಸಿದ್ದಾರೆ.

ಪದ್ಮಶ್ರೀ ಗೌರವ

ಜಾದವ್‌ ಅವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಕೇಂದ್ರ ಸರ್ಕಾರ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತು. ಜತೆಗೆ ವಿವಿಧ ವಿಶ್ವ ವಿದ್ಯಾನಿಲಯಗಳು ಗೌರವ ಡಾಕ್ಟರೇಟ್‌ ಪ್ರದಾನ ಮಾಡಿವೆ. ಮೆಕ್ಸಿಕೋ ಕೂಡ ಅವರ ಸೇವೆಯನ್ನು ಗುರುತಿಸಿ ಮಾರ್ಗದರ್ಶನ ನೀಡಲು ತಮ್ಮ ದೇಶಕ್ಕೆ ಕರೆಸಿಕೊಂಡಿದೆ. ಜಾದವ್‌ ಅವರ ಸಾಧನೆ ಬಗ್ಗೆ 2012ರಲ್ಲಿ ʼದಿ ಮೊಲಾಯಿ ಫಾರೆಸ್ಟ್‌ʼ (The Molai Forest) ಎನ್ನುವ ಡಾಕ್ಯುಮೆಂಟ್ರಿ ತಯಾರಾಗಿದೆ.

ಈ ವಿಶ್ವ ಪರಿಸರ ದಿನದಂದು ಜಾದವ್‌ ಅವರ ನಡೆಯಿಂದ ಸ್ಫೂರ್ತಿಗೊಂಡು ಕೆಲವರಾದರೂ ಗಿಡ ನೆಡಲು ಮುಂದೆ ಬಂದರೆ ಅದೇ ನಾವು ಅವರಿಗೆ ನೀಡಬಹುದಾದ ದೊಡ್ಡ ಕೊಡುಗೆ ಎಂದು ಪ್ರಕೃತಿ ಪ್ರಿಯರು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ: Success Story: ರಾಧಾಮಣಿ ಅಮ್ಮಂಗೆ ವಯಸ್ಸು ಕೇವಲ ನಂಬರ್‌ ಅಷ್ಟೇ; 73 ವರ್ಷದ ಇವರ ಬಳಿ ಇದೆ ಬರೋಬ್ಬರಿ 11 ವಾಹನಗಳ ಲೈಸನ್ಸ್‌

Exit mobile version