-ಅರವಿಂದ ಸಿಗದಾಳ್, ಮೇಲುಕೊಪ್ಪ
ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ (ವಿಸ್ತಾರ ಗ್ರಾಮ ದನಿ) ಎಂದು ಅಧಿಸೂಚನೆ ಹೊರಡಿಸಿದ ಕರ್ನಾಟಕದ 20,668 ಹೆಕ್ಟೇರ್ಗಳಲ್ಲಿ ನಮ್ಮ ಯಾರ್ಯಾರ ಜಮೀನು, ತೋಟ, ಗದ್ದೆ, ಮನೆಗಳು ಸೇರಿಕೊಂಡಿವೆಯೋ ಗೊತ್ತಿಲ್ಲ. 60 ದಿನಗಳೊಳಗೆ ಸಾರ್ವಜನಿಕರು ಆಕ್ಷೇಪಣೆ ಇದ್ದರೆ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ಕಾಲಾವಕಾಶ ಕೊಡಲಾಗಿದೆ. ಈಗ ಪರಿಸರ ಸೂಕ್ಷ್ಮ ವ್ಯಾಪ್ತಿ ಪ್ರದೇಶದ ಸಾರ್ವಜನಿಕರು, ರೈತರು ಆಕ್ಷೇಪಣೆ ಅರ್ಜಿ ಕೊಡಲೇ ಬೇಕಾಗಿದೆಯಾ? ಯಾರ್ಯಾರೆಲ್ಲ ಕೊಡಬೇಕು? ಯಾರಿಗೆ ಕೊಡಬೇಕು? ಹೇಗೆ ಕೊಡಬೇಕು? 5-6 ವರ್ಷಗಳ ಹಿಂದೆ, ಹಿಂದಿನ ಕರಡು ಅಧಿ ಸೂಚನೆಗೆ ಆಕ್ಷೇಪಣೆ ಕೊಟ್ಟಾಗಿದೆಯಲ್ಲ? ಮತ್ತೆ ಕೊಡಬೇಕಾ? ಹೌದಾದರೆ ಕಾರಣ ಏನು?
ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ನಮ್ಮ ಕ್ಷೇತ್ರಗಳ ಶಾಸಕರು, ಸಂಸದರು, ಸಚಿವರು ಮತ್ತು ಅಧಿಕಾರಿಗಳು ತಕ್ಷಣ ಒಂದಿಷ್ಟು ಕ್ರಮಗಳನ್ನು ಸ್ಥಳೀಯ ನಿವಾಸಿಗಳ, ರೈತರ ಪರವಾಗಿ ಮಾಡಬಹುದಾ?
ಏನೇನು ಮಾಡಬಹುದು?
- ಈಗಾಗಲೆ ಪರಿಸರ ಸೂಕ್ಷ್ಮ ಪ್ರದೇಶ ಅಂತ ಗುರುತು ಮಾಡಿದ ಪ್ರತಿ ಗ್ರಾಮದ ಸರ್ವೇ ಸ್ಕೆಚ್ ಕಾಪಿಯನ್ನು ಸುಲಭವಾಗಿ ರೈತರಿಗೆ ದೊರೆಯುವಂತೆ ಮಾಡುವುದು.
- ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ ಪ್ರತಿ ಗ್ರಾಮಗಳ ಸರ್ವೇ ನಂಬರ್ಗಳ ಪಟ್ಟಿ ರೈತರಿಗೆ ದೊರೆಯುವಂತೆ ಮಾಡುವುದು. (ಆನ್ಲೈನ್ನಲ್ಲಿ ದೊರೆಯುವಂತೆ ಮಾಡುವುದು ಹೆಚ್ಚು ಸೂಕ್ತ.)
- ಈಗಾಗಲೆ ಒತ್ತುವರಿಗೆ 50,53, 57, 94c ಗಳಲ್ಲಿ ಅರ್ಜಿ ಕೊಟ್ಟಿದ್ದು, ಅದನ್ನು ಸಕ್ರಮಗೊಳಿಸುವ ಕೆಲಸ ಆಗಿಲ್ಲ. ಹಕ್ಕು ಪತ್ರ, ಖಾತಾ ವರ್ಗಾವಣೆ ಆಗದೆ ಬಾಕಿ ಉಳಿದಿರುತ್ತದೆ. ಸಮರೋಪಾದಿಯಲ್ಲಿ ಅವುಗಳನ್ನು ಪರಿಶೀಲಿಸಿ ಕ್ಲಿಯರ್ ಮಾಡಿಸುವುದು.
- ಪರಿಸರ ಸೂಕ್ಷ್ಮ ಪ್ರದೇಶದ ವಿಚಾರದಲ್ಲೇ 5-6 ವರ್ಷಗಳ ಹಿಂದೆ ಅಧಿಕೃತವಾಗಿ ಆಕ್ಷೇಪಣಾ ಅರ್ಜಿಗಳನ್ನು ಸರಕಾರ ಪ್ರತೀ ಪಂಚಾಯತಿಯಲ್ಲೂ ಅಧಿಕಾರಿಗಳನ್ನು ನೇಮಿಸಿ, ಅವರ ಮೂಲಕ ಸ್ವೀಕರಿಸಿತ್ತು. ಇದುವರೆಗೆ ಆ ಆಕ್ಷೇಪಣಾ ಅರ್ಜಿಗಳ ಯಾವುದೇ ಕ್ರಮಗಳನ್ನು ಕೈಗೊಂಡ ಮಾಹಿತಿ ಇರುವುದಿಲ್ಲ. ಈಗ ಮತ್ತೆ ಆಕ್ಷೇಪಣಾ ಅರ್ಜಿಗಳನ್ನು ಪಡೆಯಲು ಹೊರಟಿರುವುದರ ಅಗತ್ಯತೆ ಏನು ಎಂದು ಪರಶೀಲಿಸುವುದು.
- 5-6 ವರ್ಷಗಳ ಹಿಂದೆ ಅಧಿಕೃತವಾಗಿ ಸ್ವೀಕರಿಸಿದ ಆಕ್ಷೇಪಣಾ ಅರ್ಜಿಗಳ ಮೇಲೆ ಸರಕಾರ ಏನೇನು ಕ್ರಮ ಕೈಗೊಂಡಿದೆ ಎಂದು ಸರಕಾರದಿಂದ ಪಡೆದು ಸಾರ್ವಜನಿಕರ ಗಮನಕ್ಕೆ ತರುವುದು.
- ಈಗ ಬಿಡುಗಡೆಗೊಳಿಸಿದ 5ನೇ ಕರಡು ಅಧಿಸೂಚನೆಯ ಅನುಷ್ಠಾನದಿಂದ ಆಗುವ ಸ್ಪಷ್ಟ ಪರಿಣಾಮಗಳೇನು ಎಂಬ ಮಾಹಿತಿಯನ್ನು ಸಾಮಾನ್ಯ ಸಾರ್ವಜನಿಕರಿಗೆ ಅರ್ಥವಾಗುವ ಹಾಗೆ ತಜ್ಞರಿಂದ ಸರಳೀಕರಿಸಿ ತಿಳಿಸುವುದು.
- ಹಿಂದಿನ ಕರಡು ಅಧಿಸೂಚನೆಗೂ ಈಗಿನ ಕರಡು ಅಧಿಸೂಚನೆಗೂ ಇರುವ ವ್ಯತ್ಯಾಸಗಳೇನು? ಏನೂ ವ್ಯತ್ಯಾಸ ಇಲ್ಲ ಮತ್ತು ಹಿಂದೆ ಸಾರ್ವಜನಿಕರು ಕೊಟ್ಟ ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ ಅಂತಾದರೆ ಪದೇಪದೇ ಕರಡು ಅಧಿಸೂಚನೆ ಮತ್ತು ಆಕ್ಷೇಪಣೆ ಸ್ವೀಕರಿಸುವ ಪ್ರಕ್ರಿಯೆಯ ವ್ಯರ್ಥ ಕಸರತ್ತಿನ ಉದ್ದೇಶ ಏನು ಎಂದು ಮಾಹಿತಿ ಸಂಗ್ರಹಿಸಿ ಸಾರ್ವಜನಿಕರಿಗೆ ಕೊಡುವುದು.
- 5ನೇ ಕರಡು ಅಧಿಸೂಚನೆಗೆ ಆಕ್ಷೇಪಣೆಗಳನ್ನು 60 ದಿನಗಳಲ್ಲಿ ಸಲ್ಲಿಸಲು ಒಂದು ಸರಳ ಆ್ಯಪ್/ವೆಬ್ಸೈಟ್ ಅಭಿವೃದ್ಧಿಪಡಿಸಿ ಆನ್ಲೈನ್ನಲ್ಲಿ ಆಕ್ಷೇಪಣೆ ಸಲ್ಲಿಸಲು ಅನುವು ಮಾಡಿಕೊಡುವುದು. (ಬೆಳೆ ವಿಮೆ ನೋಂದಣಿಗೆ ಮಾಡಿದ ಸಂವರಕ್ಷಣ ವೆಬ್ಸೈಟ್ ಅಥವಾ ಬೆಳೆಸರ್ವೆ ಆ್ಯಪ್ ರೀತಿ ಗೊಂದಲ, ಗೊಜಲುಗಳು ಈ ವೆಬ್ಸೈಟ್/ಆ್ಯಪ್ಗಳಲ್ಲಿ ಇರಬಾರದು)
- ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಕಾರಕವಾಗಿರುವ ಅಕೇಶಿಯ, ನೀಲಗಿರಿ ಮರಗಳೇ ‘ಒತ್ತುವರಿ’ ಮಾಡಿಕೊಂಡು ಬೆಳೆದಿವೆ! (ಅಥವಾ ಬೆಳಸಲಾಗಿದೆ). ಅವುಗಳನ್ನು ಮೊದಲು ‘ತೆರವು’ಗೊಳಿಸಿ, ಅಲ್ಲಿ ಪರಿಸರ ಸ್ನೇಹಿ ಸಹಜ ಕಾಡುಗಳನ್ನು ಬೆಳೆಯಲು ಕ್ರಮ ವಹಿಸುವುದು.
- ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿನ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಲು ಬೇಕಾದ ಕೆಲವು ಸಾಮಾನ್ಯ ಚಟುವಟಿಕೆಗಳಿಗೆ ತೀವ್ರವಾದ ಗಮನ ಕೊಟ್ಟು ಅನುಷ್ಠಾನಕ್ಕೆ ತರುವುದು. ಉದಾಹರಣೆಗೆ ಏಕ ಬಳಿಕೆ ಪ್ಲಾಸ್ಟಿಕ್ ನಿಷೇಧ, 50 ಮೈಕ್ರಾನ್ ಪ್ಲಾಸ್ಟಿಕ್ ಬಳಸಲು ನಿಷೇಧವಿದ್ದರೂ ಬಳಕೆ ಆಗುತ್ತಿರುವುದಕ್ಕೆ ಕಡಿವಾಣ, ಗ್ರಾಮ, ಪಟ್ಟಣ, ಜಿಲ್ಲಾ ಪಂಚಾಯಿತಿಗಳಲ್ಲಿ ಸಂಗ್ರಹವಾಗುತ್ತಿರುವ ಒಣ ಕಸಗಳನ್ನು ಹೆಚ್ಚಿನ ಕಡೆಗಳಲ್ಲಿ ಡಂಪಿಂಗ್ ಮಾಡಲಾಗುತ್ತಿದೆ – ವೈಜ್ಞಾನಿಕ ಸಂಸ್ಕರಣೆ ಮತ್ತು ವೈಜ್ಞಾನಿಕ ವಿಲೇವಾರಿಗೆ ಕ್ರಮ ಕೈಗೊಳ್ಳುವುದು.
- ಪರಿಸರ ಸೂಕ್ಷ್ಮ ಪ್ರದೇಶಗಳು ಹಾಳಾಗುತ್ತಿರುವುದು ಮರಳು ಮೈನಿಂಗ್, JCB, ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ ಕೊರತೆ ಮತ್ತು ಅರಿವಿನ ಕೊರತೆ, ವಿಪರೀತವಾದ ಬೋರ್ವೆಲ್ಗಳು, ಅವೈಜ್ಞಾನಿಕವಾಗಿ ಬೆಳೆಸುತ್ತಿರುವ ಅಕೇಶಿ ಮತ್ತು ನೀಲಗಿರಿ, ಅವೈಜ್ಞಾನಿಕ ಹೈಟೆಕ್ ರೆಸಾರ್ಟ್ಗಳು… ಇವುಗಳಿಂದ ಎನ್ನಲಾಗುತ್ತಿದೆ. ಇವುಗಳ ಮೇಲೆ ಸಮರ್ಪಕ ಕ್ರಮ ಕೈಗೊಳ್ಳುವುದು. (ಮರಳು ಮೈನಿಂಗ್, JCB ಕೆಲಸಗಳು, ಎಲ್ಲಾ ಪ್ಲಾಸ್ಟಿಕ್, ಬೋರ್ವೆಲ್ಗಳನ್ನು ನಿಷೇಧಿಸುವುದಲ್ಲ, ವೈಜ್ಞಾನಿಕವಾಗಿ ಪರಿಶೀಲನೆಯೊಂದಿಗೆ ಮತ್ತು ಭ್ರಷ್ಟತೆ ಇಲ್ಲದೆ ಪರವಾನಗಿ/ಅನುಮತಿಗಳೊಂದಿಗೆ ಸಮರ್ಪಕ ಕ್ರಮಕ್ಕೆ ಕ್ರಮ ಕೈಗೊಳ್ಳುವುದು)
ಕಸ್ತೂರಿ ರಂಗನ್ ವರದಿ, ಸೆಕ್ಷನ್ 4, ಸೆಕ್ಷನ್ 17, ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಿ ಎಂಬ ಸರಕಾರದ ಖಡಕ್ ಆದೇಶಗಳು ಒಂದು ಕಡೆ, ಅಭಿವೃದ್ಧಿಯ ಭಾಗವಾಗಿ ನೆಡೆಯುತ್ತಿರುವ ವಿಶಾಲ ಹೈವೇ ರಸ್ತೆಗಳು, ಕಾಡು ಕಡಿದು ನೂರಾರು ಎಕರೆ ಕಾಫಿ ತೋಟ ಮಾಡಿಕೊಳ್ಳುತ್ತಿರುವ ಶ್ರೀಮಂತರು, ಅಪಾಯಕಾರಿ ಅಕೇಶಿಯ ಕಾಡುಗಳು, ಮೈನಿಂಗ್… ಇತ್ಯಾದಿಗಳು ಇನ್ನೊಂದು ಕಡೆ. ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಯಾವುದೇ ದೊಡ್ಡ ತೊಂದರೆ ಮಾಡದೆ, ಸೂಕ್ಷ್ಮ ಪ್ರದೇಶದ ಭಾಗವಾಗಿ ಬದುಕುತ್ತಿರುವ, ತಲೆತಲಾಂತರಗಳಿಂದ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ರೈತರಾಗಿ, ರೈತ ಕಾರ್ಮಿಕಾರಾಗಿ ಬದುಕುತ್ತಿರುವ ಲಕ್ಷಾಂತರ ರೈತ, ರೈತ ಕಾರ್ಮಿಕರ ಬದುಕು ಮಗದೊಂದು ಕಡೆ. ಪರಿಸರ ಸೂಕ್ಷ್ಮ ಪ್ರದೇಶದ ವಿಚಾರ ಬಂದಾಗ ಆತಂಕಕ್ಕೆ ಒಳಗಾಗುವುದು, ಸಂಕಷ್ಟ ಒದಗುವುದು, ಗಾಬರಿಯಾಗುವುದು ಎಲ್ಲ ಸೂಕ್ಷ್ಮ ಪ್ರದೇಶದ ಭಾಗವಾಗಿ ಬದುಕುತ್ತಿರುವ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ರೈತರಿಗೆ, ರೈತ ಕಾರ್ಮಿಕರು. ಮತ್ತೆ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಇದೇ ಬಡ ರೈತರ, ರೈತ ಕಾರ್ಮಿಕರ ಅಂಗಳಕ್ಕೆ ಬಂದು ನಿಂತಿದೆ. ಸೂಕ್ಷ್ಮ ಪ್ರದೇಶಗಳ ಶಾಸಕರು, ಸಂಸದರು ಮಂತ್ರಿಗಳು ಮತ್ತು ಅಧಿಕಾರಿಗಳು ಈಗಲೂ ಏನಾದರು ಮಾಡಬಹುದು ಎಂಬ ಆಶಾ ಭಾವದಲ್ಲೇ ರೈತರು, ರೈತ ಕಾರ್ಮಿಕರು ಇದ್ದಾರೆ. ಒಳ್ಳೆಯದಾಗುವ ಹಾಗೆ, ಪರಿಸರ ಸೂಕ್ಷ್ಮ ಪ್ರದೇಶದ ಶಾಸಕರು, ಸಂಸದರು ಮಂತ್ರಿಗಳು ಮತ್ತು ಅಧಿಕಾರಿಗಳು ಏನಾದರು ಮಾಡಬಹುದಾ? ಇದು ರೈತರ, ಕೃಷಿಕರ ಕಳಕಳಿಯ ಪ್ರಶ್ನೆ.