| ಅರವಿಂದ ಸಿಗದಾಳ್, ಮೇಲುಕೊಪ್ಪ
ಉಜಿರೆ ಸಮೀಪದ ಒಂದು ಹಳ್ಳಿಯಿಂದ ಮಂಜುನಾಥ್ ಎನ್ನುವವರು ಫೋನ್ ಮಾಡಿ “ನಾನು ಅಡಿಕೆ ಬೆಳೆಗಾರ, ನಿಮ್ಮ ಅಡಿಕೆ ಬೆಳೆಗಾರರ ವಾಟ್ಸಪ್ ಗ್ರೂಪ್‌ನಲ್ಲಿದ್ದೇನೆ. ನನಗೆ ನನ್ನ ಬ್ಯಾಂಕಿಂದ ಒಂದು ಇ-ಮೇಲ್ ಬಂದಿದೆ. ಅದರಲ್ಲಿ ₹ 6,200 TDS ಕಟ್ಟಬೇಕು ಅಂತ ಬಂದಿದೆ. ಎನು ಮಾಡುವುದು? ಈ TDS ಅಂದ್ರೆ ಎಂತ?” ಅಂದ್ರು. “ಮೊದಲನೆಯದಾಗಿ, ಯಾವ ಬ್ಯಾಂಕ್ ಕೂಡ TDS ಕಟ್ಟಿ ಅಂತ ಕೇಳಲ್ಲ. ಗಾಬರಿ ಬೇಡ. TDS ಅಂದ್ರೆ TAX Deducted at Source ಅಂತ. ಅಂದ್ರೆ ಈಗಾಗಲೆ ನಿಮ್ಮ ಫಿಕ್ಸೆಡ್ ಡಿಪೋಸಿಟ್ (FD ಅಕೌಂಟ್) ಮೇಲೆ ಕೊಟ್ಟ ಒಟ್ಟು ಬಡ್ಡಿಯ ಮೇಲೆ 10% ಆದಾಯ ತೆರಿಗೆಯನ್ನು ನಿಮ್ಮ ಬಡ್ಡಿಯಿಂದ ಕಳೆದು, ಆದಾಯ ತೆರಿಗೆ ಇಲಾಖೆಗೆ ಕಟ್ಟಿರುತ್ತಾರೆ. ನಿಮಗೆ ಬಂದಿರೋ ಮಾಹಿತಿ ಬಹುಶಃ (Vistara Gramadani) ಅದೇ ಇರಬೇಕು” ಅಂದೆ.
ನಾನೊಬ್ಬ ಕೃಷಿಕ, ತೆರಿಗೆ ಕಟ್ಟಬೇಕಾ?
“ಅಯ್ಯೋ, ನನ್ನಿಂದ ಯಾಕೆ ಆದಾಯ ತೆರಿಗೆ ತಗೊಂಡಿದಾರೆ? ನಾನೊಬ್ಬ ಕೃಷಿಕ. ಈ ರೀತಿ ನನಗೆ ಗೊತ್ತಿಲ್ಲದೆ ಟ್ಯಾಕ್ಸ್ ತಗೊಂಡಿದ್ದು ತಪ್ಪಲ್ವಾ? ಅದರಲ್ಲೂ ನನಗೆ ಕೃಷಿ ಇನ್‌ಕಮ್ ಬಿಟ್ಟು ಬೇರೆ ಆದಾಯ ಇಲ್ಲ. ಕೃಷಿ ಆದಾಯಕ್ಕೆ ಟ್ಯಾಕ್ಸ್ ಇಲ್ಲ ಅಲ್ವಾ?” ಅಂದ್ರು. “ಹೌದು. ಕೃಷಿ ಆದಾಯಕ್ಕೆ ಟ್ಯಾಕ್ಸ್ ಇಲ್ಲ. ಕೃಷಿಕರಾದವರಿಗೆ ಕೃಷಿಯೇತರ ಆದಾಯ ಇದ್ರೆ, ಅದೂ ತೆರಿಗೆ ಮಿತಿಗೆ ಒಳ ಪಡುವ ಆದಾಯಕ್ಕಿಂತ ಹೆಚ್ಚಿದ್ದರೆ ಮಾತ್ರ ತೆರಿಗೆ ಬರುತ್ತದೆ. ನಿಮ್ಮ FD ಬಡ್ಡಿ ಕೃಷಿಯೇತರ ಆದಾಯ ಆಗಿದೆ. FDಯ ಮೂಲ ಇನ್ವೆಸ್ಟ್‌ಮೆಂಟ್ ಹಣ ಕೃಷಿಯದ್ದಾದರೂ, ಅದಕ್ಕೆ ಬಂದ ಬಡ್ಡಿ ಕೃಷಿಯೇತರ ಆದಾಯವಾಗಿರುತ್ತದೆ. ಹಾಗಾಗಿ ಬ್ಯಾಂಕ್‌ನವರು FD ಬಡ್ಡಿಗೆ 10% ತೆರಿಗೆಯನ್ನು ಬ್ಯಾಂಕಿನಲ್ಲಿ ಮುರಿದುಕೊಂಡಿದ್ದಾರೆ. ಜೊತೆಗೆ, ಬುಹುಶಃ ನೀವು FD ಮಾಡುವಾಗ ಕೊಡಬೇಕಿದ್ದ ಫಾರಂ 15G/ ಅಥವಾ 15H ನ್ನು ಕೊಟ್ಟಿರುವುದಿಲ್ಲ. ಇದರಿಂದ ನಿಮ್ಮ ಬಡ್ಡಿ ಹಣದಲ್ಲಿ 6,200 ರೂಪಾಯಿಗಳು TDS ಕಟ್ಟಾಗಿದೆ. ಏನೂ ಸಮಸ್ಯೆ ಇಲ್ಲ, ಹತ್ತಿರದ ಟ್ಯಾಕ್ಸ್ ಕನ್ಸಲ್ಟೆಂಟ್ ಅಥವಾ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಮಾಹಿತಿ ಇದ್ದವರ ಬಳಿಯಲ್ಲಿ ಟ್ಯಾಕ್ಸ್ ರಿಟರ್ನ್ಸ್ ಸಬ್‌ಮಿಶನ್ ಮಾಡ್ಸಿ, 45 ದಿನಗಳ ಒಳಗೆ 6,200 ವಾಪಾಸ್ ಬರುತ್ತೆ”
ಕೃಷಿ ಆದಾಯಕ್ಕೆ ಆದಾಯ ತೆರಿಗೆ ಇಲ್ಲ
ಭಾರತವು ತನ್ನ ಮೂಲಭೂತ ಆಹಾರದ ಅವಶ್ಯಕತೆಗಳಿಗಾಗಿ ಸಂಪೂರ್ಣವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ. ಈ ವಲಯದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರವು ಹಲವಾರು ಯೋಜನೆಗಳು, ನೀತಿಗಳು ಮತ್ತು ಇತರ ಕ್ರಮಗಳನ್ನು ಹೊಂದಿದೆ – ಅವುಗಳಲ್ಲಿ ಒಂದು ಕೃಷಿ ಆದಾಯವನ್ನು ಆದಾಯ ತೆರಿಗೆಯಿಂದ ವಿನಾಯಿತಿಗೊಳಿಸಲಾಗಿದೆ. ಕೃಷಿ ಆದಾಯಕ್ಕೆ ಆದಾಯ ತೆರಿಗೆ ಇಲ್ಲ.
ಕೃಷಿಯೇತರ ವ್ಯವಹಾರಗಳಿಂದ ಬರುವ ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೆ ಅದಕ್ಕೂ ತೆರಿಗೆ ಇರುವುದಿಲ್ಲ. ಉದಾಹರಣೆಗೆ ದೊಡ್ಡ ಮೊತ್ತವನ್ನು ಫಿಕ್ಸಡ್ ಡೆಪೋಸಿಟ್ ಮಾಡಿ ಅದಕ್ಕೆ ವಾರ್ಷಿಕ 1.8 ಲಕ್ಷ ರೂಪಾಯಿ ಆದಾಯ ಬಂದಿದ್ದರೂ ಅದಕ್ಕೆ ಆದಾಯ ತೆರಿಗೆ ಇರುವುದಿಲ್ಲ. ಯಾಕೆಂದರೆ, ಕೃಷಿಯೇತರ ಆದಾಯ, ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದೆ. (2023-24 ಕ್ಕೆ ಆದಾಯ ಮೂಲ ವಿನಾಯಿತಿ ಮಿತಿ ₹.3.00 ಲಕ್ಷ)
ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!
ಫಾರಂ 15G ಮತ್ತು 15H ಅಂದರೇನು?
ಸೂಕ್ಷ್ಮ ಇರುವುದು ಇಲ್ಲಿ. ವಾರ್ಷಿಕ FD ಇಂಟ್ರೆಸ್ಟ್ ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆ ಇರುವ ಸಂದರ್ಭದಲ್ಲಿ, ಬ್ಯಾಂಕಿನಲ್ಲಿ FD ಮಾಡುವಾಗ, ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದೆ ಎಂದು ಫಾರಂ 15G ಮತ್ತು 15H ನ್ನು ಭರ್ತಿ ಮಾಡಿ ಕೊಡಬೇಕು.
ಒಬ್ಬ ವ್ಯಕ್ತಿಯ ಬಡ್ಡಿ ಆದಾಯವು ವರ್ಷಕ್ಕೆ ರೂ. 10,000ಕ್ಕಿಂತ ಹೆಚ್ಚಿರುವಾಗ ಬ್ಯಾಂಕುಗಳು TDS ಅನ್ನು ಕಡಿತಗೊಳಿಸಬೇಕಾಗುತ್ತದೆ. ₹10,000 ಈ ಮಿತಿಯನ್ನು ನಿರ್ಧರಿಸಲು ಬ್ಯಾಂಕ್ ಎಲ್ಲಾ ಶಾಖೆಗಳಲ್ಲಿ ಹೊಂದಿರುವ ಠೇವಣಿಗಳನ್ನು ಒಳಗೊಂಡಿದೆ. ಒಬ್ಬ ವ್ಯಕ್ತಿಯ ಒಟ್ಟು ಆದಾಯವು ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೆ, ಅವನು/ಅವಳು ಬಡ್ಡಿ ಮೊತ್ತದ ಮೇಲೆ TDS ಕಡಿತಗೊಳಿಸದಂತೆ ವಿನಂತಿಸಲು ಬ್ಯಾಂಕ್‌ಗೆ ಫಾರ್ಮ್ 15G ಮತ್ತು ಫಾರ್ಮ್ 15H ಅನ್ನು ಸಲ್ಲಿಸಬಹುದು. ಈ ಫಾರಂ ಸಲ್ಲಿಸದಿದ್ದಲ್ಲಿ, ಬ್ಯಾಂಕುಗಳು ಸಹಜವಾಗಿ ಒಟ್ಟು ಬಡ್ಡಿಯಲ್ಲಿ 10% ಆದಾಯ ತೆರಿಗೆ ಎಂದು ಕಡಿತ ಮಾಡಿ, ತೆರಿಗೆಯನ್ನು ತೆರಿಗೆ ಇಲಾಖೆಗೆ ಕಟ್ಟುತ್ತದೆ. ಅದರ ಒಂದು ದಾಖಲಾತಿಯಾಗಿ TDS (ಟ್ಯಾಕ್ಸ್ ಡಿಡಕ್ಟೆಡ್ ಎಟ್ ಸೋರ್ಸ್) ಬ್ಯಾಂಕಿನವರು ಕೊಡುತ್ತಾರೆ. (ಬ್ಯಾಂಕಿನವರು ಕೇಳಿದರೆ ಕೊಡ್ತಾರೆ. ಕೆಲವು ಬ್ಯಾಂಕ್‌ಗಳಲ್ಲಿ ಇ-ಮೇಲ್ ಮಾಡಿರ್ತಾರೆ).
TDS ಅನ್ನು ಬ್ಯಾಂಕಿನವರು ಕೊಡುವುದೂ ಬೇಕಾಗಿಲ್ಲ. PAN ನಂಬರ್ ಬಳಸಿ, Incomtax portalನಲ್ಲಿ ಇದನ್ನು ಪಡೆದು ಪರಿಶೀಲಿಸಬಹುದು.
ಉಜಿರೆ ರೈತರ ಹಣ ಕಡಿತ ಆಗಿದ್ದೇಕೆ?
ಈಗ ಅಡಿಕೆ ಬೆಳೆಗಾರ ಉಜಿರೆ ಮಂಜುನಾಥ್ ಅವರ ವಿಷಯಕ್ಕೆ ಬರೋಣ. ಅವರು FD ಮಾಡುವಾಗ ಫಾರ್ಮ್ 15G ಮತ್ತು ಫಾರ್ಮ್ 15H ಕೊಟ್ಟಿಲ್ಲದ ಕಾರಣ ₹ 6,200 TDS ಕಟ್ಟಾಗಿದೆ.
ಮಂಜುನಾಥರವರು ಆ 6,200ನ್ನು ಹಿಂಪಡೆಯಲು ಜುಲೈ 31ರ ಒಳಗೆ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್‌ನ್ನು (ITR) ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು. ಕೃಷಿ ಆದಾಯ, ಕೃಷಿಯೇತರ (ಬಡ್ಡಿ) ಆದಾಯದ ಮಾಹಿತಿಗಳನ್ನು ITR ನಲ್ಲಿ ತೋರಿಸಬೇಕು. 45 ದಿನಗಳೊಳಗೆ ಬ್ಯಾಂಕ್ ಕಡಿತಗೊಳಿಸಿದ TDS ಮರು ಪಾವತಿಯಾಗಿ SB ಖಾತೆಗೆ ಜಮಾ ಆಗುತ್ತದೆ.
ITR ಸಲ್ಲಿಸುವಾಗ ಎಲ್ಲಾ SB ಖಾತೆಗಳ ಮಾಹಿತಿಯನ್ನು (ಅಕೌಂಟ್ ನಂಬರ್, IFSC ಕೋಡ್) ನಮೂದಿಸಬೇಕು. ಹಾಗಾಗಿ, ಇಂತಹ ಸಂದರ್ಭದಲ್ಲಿ, ಅಡಿಕೆ ಬೆಳೆಗಾರರು ಮತ್ತು ಎಲ್ಲಾ ಕೃಷಿಕರು ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಸಬ್‌ಮಿಷನ್ ಮಾಡಬೇಕು. ಎಷ್ಟೋ ಸಂದರ್ಭಗಳಲ್ಲಿ TDS ಕಡಿತಗೊಳಿಸಿದ ಮಾಹಿತಿ ತೆರಿಗೆದಾರನಿಗೆ ತಿಳಿಯದೇ ಹೋಗಬಹುದು. ಎಲ್ಲಾ ಬ್ಯಾಂಕುಗಳು TDS ಕಡಿತದ ಮಾಹಿತಿಯನ್ನು ಕೊಡುವುದಿಲ್ಲ (ಕೇಳಿದರೆ ಮಾತ್ರ ಕೊಡ್ತಾರೆ).
ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!
ಜಮೀನು, ಮನೆ ಮಾರಿದಾಗ?
ಇದಲ್ಲದೆ ಕೃಷಿ ಜಮೀನು, ಮನೆ ಮಾರಾಟ ಮಾಡುವಾಗ, ಮಾರಾಟದ ಬೆಲೆ ₹ 50 ಲಕ್ಷಕ್ಕಿಂತ ಹೆಚ್ಚಿದ್ದಾಗ, ಖರೀದಿಸುವವನು ಖರೀದಿ ಮೌಲ್ಯದ ಮೇಲೆ, ಸರಿ ಸುಮಾರು 0.75% (₹.37,500+)TDS ಕಟ್ಟಿರುತ್ತಾನೆ. ಇದೂ ಕೂಡ ತೆರಿಗೆ ಆದಾಯ ಮಿತಿಯ ಒಳಗೆ ಇದ್ದರೆ, ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಮಾಡುವುದರಿಂದ ಹಿಂಪಡೆಯಬಹುದಾಗಿರುತ್ತದೆ. ನಿಮ್ಮ ಯಾವುದೇ ಆದಾಯದಿಂದ ಟಿಡಿಎಸ್ ಕಡಿತಗೊಂಡಿದ್ದರೆ ನೀವು ತೆರಿಗೆ ಕ್ರೆಡಿಟ್ ಫಾರ್ಮ್ 26AS ಮೂಲಕ ಗಮನಿಸಬಹುದು . ಈ ಫಾರ್ಮ್ ಏಕೀಕೃತ TDS ಹೇಳಿಕೆಯಾಗಿದ್ದು ಅದು ಎಲ್ಲಾ PAN ಹೊಂದಿರುವವರಿಗೆ ಇನ್‌ಕಮ್ ಟ್ಯಾಕ್ಸ್ ಪೋರ್ಡಲ್‌ನಲ್ಲಿ ಲಭ್ಯವಿದೆ. ಹಾಗಾಗಿ ಅಡಿಕೆ ಬೆಳೆಗಾರರು ಮತ್ತು ಎಲ್ಲಾ ಕೃಷಿಕರು ಕೃಷಿ ಆದಾಯದ ಜೊತೆ, ಕೃಷಿಯೇತರ ಆದಾಯವೂ ಇದ್ದಲ್ಲಿ, ಮತ್ತು ಅದು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೂ, ರಿಟರ್ನ್ಸ್ ಸಲ್ಲಿಸಬೇಕು. ಕೃಷಿಯೇತರ ಆದಾಯ ಮೂಲ ವಿನಾಯಿತಿ ಮಿತಿಗಿಂತ ಹೆಚ್ಚಿದ್ದರೆ, ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಅಂದ ಹಾಗೆ, ITR ರಿಟರ್ನ್ಸ್ ಮಾಡಲು ಇನ್ನು 5 ದಿನಗಳು ಮಾತ್ರ ಬಾಕಿ ಇವೆ. ಕೊನೇಯ ದಿನಾಂಕ 31.07.2024.