ಬೆಂಗಳೂರು: ನಿಸರ್ಗವೆಂದರೆ ಸೋಜಿಗಗಳ ಸಂತೆಯಿದ್ದಂತೆ. ಪುಟ್ಟ ಆನೆ ಮರಿಯನ್ನು ಪೋಷಕ ಆನೆಗಳು ರಕ್ಷಿಸುವ ಸೋಜಿಗವನ್ನು ಹೊತ್ತ ಪುಟ್ಟ ವಿಡಿಯೋ (Viral Video) ಅಂತರ್ಜಾಲದಲ್ಲಿ ಸಂಚಲನ ಮೂಡಿಸುತ್ತಿದೆ. ತಮಿಳುನಾಡಿನ ಸತ್ಯಮಂಗಲದಲ್ಲಿ ತೆಗೆದ ವಿಡಿಯೋ ಇದೆಂದು ಹೇಳಲಾಗಿದ್ದು, ಆನೆಗಳ ಮಮತೆಯ ವರ್ತನೆ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡುತ್ತಿದೆ.
ಏನಿದೆ ವಿಡಿಯೋದಲ್ಲಿ?
ಕಾಡಂಚಿನ ರಸ್ತೆಯಲ್ಲಿ ಆನೆಗಳ ಹಿಂಡೊಂದು ಒಂದಕ್ಕೊಂದು ಅಂಟಿಕೊಂಡಂತೆ ನಡೆಯುತ್ತಿರುವುದು ಮೊದಲಿಗೆ ಕಾಣುತ್ತದೆ. ಕೆಲವೇ ಕ್ಷಣಗಳಲ್ಲಿ ಅವುಗಳ ನಡುವಿನಿಂದ ತಿಳಿಗುಲಾಬಿ ಬಣ್ಣದ ಚಿನ್ನಾರಿ ಮರಿಯೊಂದು ಗೋಚರಿಸುತ್ತದೆ. ಆ ಮರಿಯನ್ನು ಅತ್ಯಂತ ಜತನದಿಂದ ಕಾಪಿಡುತ್ತಾ ಸುತ್ತಲಿನ ಆನೆಗಳು ನಡೆಯುತ್ತಿದ್ದು, ಆ ಹಿರಿಯಾನೆಗಳು ನಡೆಯುವ ವೇಗಕ್ಕೆ ಓಡೋಡುತ್ತಾ ನಡೆಯುವ ಮರಿಯಾನೆ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಯಾವ ಮೂಲೆಯಿಂದಲೂ ಎರಗಬಹುದಾದ ಅಪಾಯಗಳಿಂದ ಮರಿಯನ್ನು ರಕ್ಷಿಸಲು ಈ ಹಿರಿಯಾನೆಗಳು ತೋರುವ ಕಾಳಜಿ ಮಾನವರಿಗೂ ಮಾದರಿಯಾಗುವಂತಹದ್ದು.
ಐಎಫ್‌ಎಸ್ ಅಧಿಕಾರಿ ಸುಸಾಂತ ನಂದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ʻತಮ್ಮ ನವಜಾತ ಮರಿಗೆ ಈ ಆನೆಗಳ ಹಿಂಡು ನೀಡುತ್ತಿರುವಂಥ ಭದ್ರತೆಯನ್ನು ಇಡೀ ಭೂಮಿಯ ಮೇಲೆ ಮತ್ತೊಬ್ಬರು ನೀಡಲಾರರು. ಇದು ಝೆಡ್+++ ಶ್ರೇಣಿಯ ಭದ್ರತೆʼ ಎಂಬ ಶೀರ್ಷಿಕೆಯನ್ನೂ ಅವರು ನೀಡಿದ್ದಾರೆ. ವಿಡಿಯೋ ತುಣುಕಿನ ೧೨ನೇ ಸೆಕೆಂಡಿನಲ್ಲಿ ಹೆಚ್ಚುವರಿ ಭದ್ರತೆಯನ್ನು ಒದಗಿಸುವ ಮಾದರಿಯಲ್ಲಿ ಇನ್ನಷ್ಟು ಆನೆಗಳು ಬಂದು ಈ ಹಿಂಡನ್ನು ಸೇರಿಕೊಳ್ಳುವುದನ್ನೂ ಅವರು ಉಲ್ಲೇಖಿಸಿದ್ದಾರೆ.
ಈ ಬೃಹದ್ದೇಹಿಗಳ ಕೋಮಲ ವರ್ತನೆಯನ್ನು ಸುಮಾರು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, “ಇದು ತೀರಾ ಸುಂದರವಾದ ವಿಡಿಯೋ. ಆನೆಗಳಲ್ಲಿ ಪರಸ್ಪರ ಬಾಂಧವ್ಯ ತೀರಾ ಗಟ್ಟಿಯಾಗಿರುತ್ತದೆ. ಹಿಂಡಿನಲ್ಲಿರುವ ಪ್ರತಿಯೊಂದು ಹೆಣ್ಣಾನೆಯೂ ಹಿಂಡಿನ ಎಲ್ಲಾ ಮರಿಗಳನ್ನೂ ತಮ್ಮದೆಂದೇ ಪಾಲಿಸುತ್ತವೆ ಎಂಬುದು ಈ ವೀಡಿಯೋದಲ್ಲೂ ಕಂಡುಬರುತ್ತದೆʼʼ ಎಂದು ವೀಕ್ಷಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ | 4 ಸಾವಿರ ಕಿ.ಮೀ ಕ್ರಮಿಸಿ ಮತ್ತೆ ಹುಟ್ಟೂರು ದುಬಾರೆಯಲ್ಲಿ ಆನೆ ಕುಶ ಪ್ರತ್ಯಕ್ಷ!