Site icon Vistara News

World Environment Day: ಇಂದು ವಿಶ್ವ ಪರಿಸರ ದಿನ; ಭೂಮಿಗೆ ಜ್ವರ, ನಮಗೆಲ್ಲ ಬರೆ!

World Environment Day

ನಮ್ಮ ಮನೆ ಯಾವುದು ಎಂದು ಕೇಳಿದರೆ, ಎಲ್ಲರೂ ತಂತಮ್ಮ ಮನೆಯ ವಿಳಾಸ ಹೇಳಿ, ʻಇದು ನನ್ನ ಮನೆʼ ಎಂದು ಹೇಳಬಹುದು. ಆದರೆ ನಮಗೆಲ್ಲ ಇರುವ ಮನೆಯೊಂದೇ- ಅದು ಭೂಮಿ. ಹುಟ್ಟಿದ ಘಳಿಗೆಯಿಂದ ಇರುವ ಕಡೆಯ ಕ್ಷಣದವರೆಗೆ ʻನಮನ್ನೆಲ್ಲʼ ಸಲಹುವಂಥ ನಿತ್ಯನೂತನ ಮನೆಯೀ ವಸುಂಧರೆ. ʻನಮ್ಮನ್ನುʼ ಎಂದರೆ ಮನುಷ್ಯರನ್ನು ಎಂದಷ್ಟೇ ಅರ್ಥ ಮಾಡಿಕೊಂಡಿದ್ದರಿಂದ ಈ ಪರಿಯಲ್ಲಿ ಸಮಸ್ಯೆ ಎದುರಾಗಿದೆ ಇಂದು. ಸಕಲ ಜೀವಜಂತುಗಳಿಗೆ ಇರುವುದೊಂದೇ ಮನೆ. ಆದರೆ ಮನುಷ್ಯರ ಹೊರತಾಗಿ ಇನ್ನಾವ ಜೀವಿಗಳೂ ತಮ್ಮ ಮನೆಯನ್ನು ಕೊಳೆ ಮಾಡಿದವರಲ್ಲ. ಇದನ್ನು ಮನವರಿಕೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನವನ್ನು (World Environment Day) ಆಚರಿಸಲಾಗುತ್ತದೆ. ಈ ದಿನದಂದು ಗಿಡವೊಂದನ್ನು ನೆಟ್ಟು, ʻಹೇಗಿದ್ದರೂ ಮಳೆಗಾಲ ಶುರುವಾಗುತ್ತಿದೆ; ನೀರು ಹಾಕುವುದೂ ಬೇಕಿಲ್ಲʼ ಎಂಬ ಉದಾಸೀನತೆಯಲ್ಲಿ ಸುಮ್ಮನಿದ್ದರೆ ಸಾಕು ಎಂದರ್ಥವಲ್ಲ. ವಿಶ್ವದ ಜೈವಿಕ ವೈಧ್ಯತೆಯನ್ನು ಉಳಿಸಬೇಕೆನ್ನುವ, ಕಾಡು ಕಡಿಮೆಯಾಗುತ್ತಿರುವ ಮತ್ತು ಉಳಿದಿರುವ ಕಾಡಿನಲ್ಲೂ ಮಾನವನ ಹಸ್ತಕ್ಷೇಪ ಹೆಚ್ಚುತ್ತಿರುವ ಬಗ್ಗೆ ತಿಳುವಳಿಕೆ ಮೂಡಿಸುವುದು ಇಂದಿನ ತುರ್ತು. ಜೊತೆಗೆ, ಭೂಮಿ ಬಿಸಿಯಾಗುತ್ತಿರುವುದರಿಂದ ಹವಾಮಾನದಲ್ಲಿ ಆಗುವ ಘೋರ ವೈಪರಿತ್ಯಗಳನ್ನು ಅರ್ಥ ಮಾಡಿಕೊಂಡು, ಜಾಗತಿಕ ತಾಪಮಾನ ಏರದಂತೆ ತಡೆಯುವ ಕ್ರಮಗಳನ್ನು ಮನಸ್ಪೂರ್ತಿಯಾಗಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಈ ಹಿನ್ನೆಲೆಯಲ್ಲಿ ಈ ಅರಿವಿನ ದಿನದ ಬಗ್ಗೆ ಇನ್ನಷ್ಟು ಮಾಹಿತಿಗಳಿವು.

ಈ ದಿನದ ಹಿನ್ನೆಲೆ

ಜೂನ್‌ 5ರಂದೇ ಪರಿಸರ ದಿನವನ್ನು ಏಕೆ ಆಚರಿಸಬೇಕೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ- ಸ್ವೀಡನ್‌ನ ಸ್ಟಾಕ್‌ಹೋಂನಲ್ಲಿ 1972ರ ಜೂನ್‌ 5ರಂದು ನಡೆಸಲಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಮ್ಮೇಳನದಲ್ಲಿ, ಪರಿಸರದ ಕುರಿತಾಗಿ ವಿಶ್ವದೆಲ್ಲೆಡೆ ಜಾಗೃತಿಯನ್ನು ಹೆಚ್ಚಿಸಬೇಕೆಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ಆ ದಿನದ ನೆನಪಿನಲ್ಲಿ, ಅದೇ ದಿನಾಂಕವನ್ನು ವಿಶ್ವ ಪರಿಸರ ದಿನ ಎಂದು ಗುರುತಿಸಲಾಗಿದೆ.

ಈ ವರ್ಷದ ಘೋಷ ವಾಕ್ಯ

ಭೂಮಿಯ ಪುನರುತ್ಥಾನ, ಮರುಭೂಮೀಕರಣ ಮತ್ತು ಬರ ನಿರೋಧಕತೆ. ಅಂದರೆ, ಬಂಜರು ಭೂಮಿ ವಿಸ್ತಾರವಾಗುತ್ತಿರುವುದನ್ನು ತಡೆದು, ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬೇಕು. ಜೊತೆಗೆ, ನೀರಿನ ಕೊರತೆಯನ್ನೂ ನೀಗಿಸಬೇಕೆಂಬ ಉದ್ದೇಶ ಈ ಘೋಷಣೆಯದ್ದು. ಮರುಭೂಮೀಕರಣ ಮಿತಿಮೀರಿದ್ದು, ಭೂಮಿಯ ಶೇ. 40ರಷ್ಟನ್ನು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿ ಇರಿಸಲಾಗಿದೆ. ಇದು ಜಗತ್ತಿನ ಅರ್ಧಕ್ಕಿಂತ ಹೆಚ್ಚಿನ ಜನರ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರಿದೆ. 21ನೇ ಶತಮಾನದ ಆರಂಭದಿಂದ ಗಮನಿಸಿದರೆ, ಬರಗಾಲದ ಅವಧಿ ಮತ್ತು ತೀವ್ರತೆ ಶೇ. 29ರಷ್ಟು ಹೆಚ್ಚಾಗಿದೆ. ಈ ಬಗ್ಗೆ ಸಮರೋಪಾಧಿಯಲ್ಲಿ ಕ್ರಮಗಳನ್ನು ಕೈಗೊಳ್ಳದಿದ್ದರೆ, 2050ರ ವೇಳೆಗೆ ಭೂಮಿಯ ಮುಕ್ಕಾಲು ಭಾಗ ಬರಗಾಲಕ್ಕೆ ತುತ್ತಾಗಲಿದೆ ಎಂದು ವಿಶ್ವಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಹವಾಮಾನ ವೈಪರಿತ್ಯ

ಈವರೆಗಿನ ಪರಿಸರ ದಿನಗಳಲ್ಲಿ ನಾನಾ ರೀತಿಯ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಲಾಗಿತ್ತು. ವಾಯು ಮಾಲಿನ್ಯ, ಹವಾಮಾನ ಬದಲಾವಣೆ, ಪ್ಲಾಸ್ಟಿಕ್‌ ಮಾಲಿನ್ಯ, ಅಕ್ರಮ ಕಾಡ್ಗಿಚ್ಚು, ಸುಸ್ಥಿರ ಬಳಕೆ, ಏರುತ್ತಿರುವ ಸಮುದ್ರಮಟ್ಟ, ಆಹಾರ ಭದ್ರತೆ ಮುಂತಾದ ಹಲವಾರು ವಿಚಾರಗಳು ವಿಶ್ವಮಟ್ಟದಲ್ಲಿ ಚರ್ಚೆಯಾಗಿದ್ದವು. ಸಮುದ್ರಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ಹವಾಮಾನ ವೈಪರಿತ್ಯ ತೀವ್ರವಾಗಿ ಬಾಧಿಸಿ, ಜಾಗತಿಕವಾಗಿ ಆಹಾರದ ಸ್ವರೂಪವೇ ಬದಲಾಗಲಿದೆ ಎನ್ನುವುದು ತಜ್ಞರ ಮುನ್ಸೂಚನೆ.

Exit mobile version