ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ, ತುಳಸಿ ಗೌಡ ಇವರೆಲ್ಲ ಶಾಲೆಗೆ ಹೋದವರಲ್ಲ. ಆದರೆ ಪರಿಸರವೇ ಅವರಿಗೆ ಶಾಲೆ. ತನಗೆ ಮಕ್ಕಳಿಲ್ಲ ಎಂಬ ದುಃಖವನ್ನು ಮರೆಯಲು ತಿಮ್ಮಕ್ಕ ತನ್ನ ಗ್ರಾಮದ ರಸ್ತೆಯ ಎರಡೂ ಬದಿಗಳಲ್ಲಿ ಸಾಲು ಮರಗಳನ್ನು ನೆಟ್ಟರು. ಅವರು ನೆಟ್ಟದ್ದು ಅಂತಿಂಥ ಮರಗಳನ್ನು ಅಲ್ಲ. ಪರಿಸರಕ್ಕೆ ಅತೀ ಹೆಚ್ಚು ಆಮ್ಲಜನಕ ಕೊಡುವ ಆಲದ ಮರಗಳನ್ನು! ಅವರಿಗೆ ಈ ಶಿಕ್ಷಣವನ್ನು ಯಾವ ಶಾಲೆ ಕೊಟ್ಟಿತ್ತು? ಆಕೆ ನೆಟ್ಟ ಯಾವ ಆಲದ ಮರವೂ ಸತ್ತಿಲ್ಲ! ಇಂದಿಗೂ ಅಜ್ಜಿಯ ಕೈ ಹಿಡಿದು ಆ ಆಲದ ಮರಗಳ ನೆರಳಿನಲ್ಲಿ ನಡೆದುಕೊಂಡು ಹೋದರೆ ಎಷ್ಟೊಂದು ಅದ್ಭುತ ಫೀಲ್ ದೊರೆಯಬಹುದು? ಅದೊಂದು ಅನೂಹ್ಯ ಅನುಭವ ಆದೀತು.
ಶಾಲೆಯ ಮೆಟ್ಟಿಲು ಹತ್ತದ ಉತ್ತರ ಕನ್ನಡದ ತುಳಸಿ ಗೌಡ ಸಾವಿರಾರು ಗಿಡಗಳನ್ನು ನೆಟ್ಟದ್ದು ಹೇಗೆ? ಆಕೆ ಕಾಡಿನ ಒಳಗೆ ಹೋಗಿ ಪ್ರತಿಯೊಂದು ಸಸ್ಯವನ್ನು ಗುರುತು ಹಿಡಿಯುವುದು, ಅದರ ಜೊತೆ ಮಾತಾಡುವುದು ಹೇಗೆ? ಅದಕ್ಕೆ ಅವರಿಗೆ ಯಾರು ಪಾಠ ಮಾಡಿದ್ದಾರೆ? ಅಕ್ಷರದ ಗುರುತು ಇಲ್ಲದ ಆ ಮಹಾ ತಾಯಿ ಅಷ್ಟೊಂದು ಜ್ಞಾನವನ್ನು ಪಡೆಯಲು ಕಾರಣವಾದ ಸ್ಫೂರ್ತಿ ಯಾವುದದು?
ಆಂಧ್ರ ಪ್ರದೇಶದ ಒಬ್ಬ ಸಾಮಾನ್ಯ ರೈತ ದಾರಿಪಲ್ಲಿ ರಾಮಯ್ಯ ಲಕ್ಷಾಂತರ ಗಿಡ ನೆಟ್ಟು ತನ್ನ ಇಡೀ ಗ್ರಾಮವನ್ನು ಹಸುರು ಮಾಡಿದ್ದಾರೆ. ಎಲ್ಲಿ ಖಾಲಿ ಜಾಗ ಕಂಡರೂ ಹಣ್ಣಿನ ಬೀಜ ಹಾಕಿ ಅದಕ್ಕೆ ನೀರು ಗೊಬ್ಬರ ಹಾಕಿ ಸಸಿ ಬೆಳೆಸುವ ಸಂಸ್ಕಾರ ಯಾವ ಶಾಲೆ ಕೊಟ್ಟಿತು? ಆತ ನೆಟ್ಟ ಅಷ್ಟೂ ಗಿಡಗಳು ಹಣ್ಣಿನ ಗಿಡಗಳೇ ಆಗಿವೆ! ಎಲ್ಲಿ ಹಣ್ಣಿನ ಬೀಜ ಬಿದ್ದಿದ್ದರೂ ಅದನ್ನು ಹೆಕ್ಕಿಕೊಂಡು ಹೋಗುವ ಅವರ ಚಿತ್ರಗಳು ಕಣ್ಣಿಗೆ ಕಟ್ಟಿದಂತಿವೆ.
ಕಾಡುಗಳನ್ನು ಉಳಿಸಲು ‘ದೇವರ ಕಾಡು’ ಎಂದು ಹೆಸರು ಕೊಟ್ಟು ಪರಿಸರ ಸಂರಕ್ಷಣೆ ಮಾಡಿದ ನಮ್ಮ ಹಿರಿಯರಿಗೆ ಯಾವ ಶಾಲೆ ಆ ಪಾಠವನ್ನು ಕಲಿಸಿತು? ಪರಿಸರ ಸ್ನೇಹಿ ‘ನಾಗ ಬನಗಳನ್ನು’ ಕಟ್ಟಿದ ನಮ್ಮ ಪೂರ್ವಜರಿಗೆ ಪರಿಸರದ ಪಾಠ ಮಾಡಿದ್ದು ಯಾರು?
ಪರಿಸರ ಶಿಕ್ಷಣವು ಭಾಷಣಗಳಿಂದ ಬರುವುದು ಅಲ್ಲ. ಬೋಧನೆಯಿಂದ ಬರುವುದು ಖಂಡಿತ ಅಲ್ಲ. ಅದು ಜೀವನ ಶಿಕ್ಷಣ ಆಗಬೇಕು. ಒಂದು ಮಗು ಹುಟ್ಟಿದಾಗ ನೆಟ್ಟ ಮರವು ಆ ಮಗುವಿನ ಜೊತೆ ಬೆಳೆಯಬೇಕು. ಮಗುವಿಗೆ ಆ ಸಸಿಯ ಜೊತೆ ಅನುಸಂಧಾನ ಆಗಬೇಕು. ಮಗು ಆ ಸಸಿಯನ್ನು ಪ್ರೀತಿ ಮಾಡಿ ಸಂರಕ್ಷಣೆ ಮಾಡಬೇಕು. ಪರಿಸರ ಪ್ರೇಮವು ಮಗುವಿನ ರಕ್ತದಲ್ಲಿ ಸೇರಿ ಹೋದರೆ ಮಗು ಪರಿಸರವನ್ನು ಸಹಜವಾಗಿ ಪ್ರೀತಿ ಮಾಡುತ್ತದೆ.
ಅಮೆರಿಕಾದಿಂದ ಬಂದಿದ್ದ ನನ್ನ ಒಬ್ಬ ಗೆಳೆಯ ನನ್ನ ಜೊತೆ ಐಸ್ ಕ್ರೀಂ ತಿಂದು ಅದರ ಕಪ್ ಕೈಯಲ್ಲಿ ಹಿಡಿದು ಅದನ್ನು ಹಾಕಲು ಬಾಕ್ಸ್ ಹುಡುಕುತ್ತ ಮಂಗಳೂರು ನಗರದ ಉದ್ದಕ್ಕೂ ನಡೆದ ನೆನಪು ನನಗಿದೆ. ಈ ಪರಿಸರ ಸಂಸ್ಕಾರವು ಪಠ್ಯ ಪುಸ್ತಕಗಳ ಮೂಲಕ ಬಂದದ್ದು ಅಲ್ಲ ಎಂದು ನನ್ನ ಭಾವನೆ. ಈ ಹಸುರು ಸಂಸ್ಕಾರವು ನಮ್ಮನ್ನು ಖಂಡಿತವಾಗಿ ಕಾಪಾಡುತ್ತದೆ. ಪರಿಸರವು ತನ್ನನ್ನು ಸಂರಕ್ಷಣೆ ಮಾಡಿದವರನ್ನು ಕೈಬಿಟ್ಟ ಉದಾಹರಣೆ ಸಿಗುವುದಿಲ್ಲ. ಪ್ರಕೃತಿಯನ್ನು ತಾಯಿ ಅಂತ ಹೇಳುವುದು ಅದಕ್ಕೇ ಅಲ್ವಾ?
-ರಾಜೇಂದ್ರ ಭಟ್ ಕೆ., ಜೇಸೀ ಅಂತಾರಾಷ್ಟ್ರೀಯ ತರಬೇತುದಾರರು
ಇದನ್ನೂ ಓದಿ| World Environment Day | ಇಂದು ವಿಶ್ವ ಪರಿಸರ ದಿನ: ಪ್ರಕೃತಿ ಸಂರಕ್ಷಣೆಗಾಗಿ ಈ ಅಭ್ಯಾಸ ಅನುಸರಿಸಿ