Site icon Vistara News

World Ozone Day 2022 | ಓಝೋನ್ ಪದರದ ಹೊಸ ಶತ್ರು ಅಯೋಡಿನ್‌!

World Ozone Day 2022

ಭೂಮಂಡಲದ ಸಕಲ ಜೀವಿಗಳ ರಕ್ಷಣೆ ಮಾಡುವ ಓಝೋನ್ (Ozone) ಎಂಬ ಕವಚ ನಮ್ಮ ವಾಯುಮಂಡಲದಲ್ಲಿದೆ. ಆ ಪದರ ಅಪಾಯವನ್ನೆದುರಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇದಕ್ಕೆ ಅಪಾಯವನ್ನುಂಟು ಮಾಡುವ ಅನಿಲಗಳೊಂದಿಗೆ ತೇವಾಂಶಯುಕ್ತ ಅಯೋಡಿನ್‌ ಕೂಡ ಈಗ ಸೇರ್ಪಡೆಯಾಗಿದೆ.

ಇದುವರೆಗೆ ಮುಖ್ಯವಾಗಿ ಕ್ಲೋರೋಫ್ಲೋರೋ ಕಾರ್ಬನ್‌ಗಳು (ಸಿಎಫ್‌ಸಿ) ಹಾಗೂ ಇತರ ಅನಿಲಗಳು ಓಝೋನ್ ಪದರಕ್ಕೆ ಹಾನಿಯನ್ನುಂಟು ಮಾಡುತ್ತಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದರು. ಈಗ ಈ ಅನಿಲಗಳ ಪಟ್ಟಿಗೆ ಅಯೋಡಿನ್‌ ಅನ್ನೂ ಮುಖ್ಯವಾಗಿ ಸೇರಿಸಬೇಕಾಗಿದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.

ಭಾರತ ಸೇರಿದಂತೆ 20 ದೇಶಗಳ ಸುಮಾರು ನೂರಕ್ಕೂ ಹೆಚ್ಚು ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ಓಝೋನ್ ಪದರದ ಈ ಹೊಸ ಶತ್ರು ಬೆಳಕಿಗೆ ಬಂದಿದೆ. ಪುಣೆಯ ಐಐಟಿಎಂನ ವಿಜ್ಞಾನಿಗಳೂ (Indian Institute of Tropical Meteorology) ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ನೇಚರ್‌ ಜಿಯೋಸೈನ್ಸ್‌ ಜರ್ನಲ್‌ನಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ.

2020ರ ಮಾರ್ಚ್‌ ನಿಂದ ಅಕ್ಟೋಬರ್‌ ವರೆಗೆ ಅಂಟಾರ್ಟಿಕಾದಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಐಯೋಡಿನ್‌ ಮತ್ತು ಓಝೋನ್ ಸಂಪರ್ಕ ಪಡೆದಾಗ ನಡೆಯುವ ರಾಸಾಯನಿಕ ಪ್ರಕ್ರಿಯೆಗಳನ್ನು ಗಮನಿಸಲಾಯಿತು. ಈ ಸಂದರ್ಭದಲ್ಲಿ ಓಝೋನ್‌ ಐಯೋಡಿನ್‌ ಕ್ಲೋರೋಫ್ಲೋರೋ ಕಾರ್ಬನ್‌ ನಂತರ ಹೆಚ್ಚು ಅಪಾಯಕಾರಿ ಎಂಬುದು ಸಾಬೀತಾಗಿದೆ.

ಸೆಪ್ಟೆಂಬರ್ 16ರಂದು ಜಗತ್ತಿನಾದ್ಯಂತ “ವಿಶ್ವ ಓಝೋನ್ ದಿನʼʼವನ್ನು (World Ozone Day 2022) ಆಚರಿಸುತ್ತಿರುವ ಹೊತ್ತಿನಲ್ಲಿ ಬಿಡುಗಡೆಯಾಗಿ ರುವ ಈ ಸಂಶೋಧನೆಯ ವರದಿಯು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.

ಏನಿದು ಓಝೋನ್?

ಓಝೋನ್ ನಮ್ಮ ವಾತಾವರಣದಲ್ಲಿರುವ ಒಂದು ಪದರ. ನಮ್ಮ ಭೂಮಿಯನ್ನು ಸುತ್ತುವರಿದಿರುವ ಗಾಳಿಯನ್ನೇ ವಾತಾವರಣ ಎನ್ನುತ್ತೇವೆ. ನಮ್ಮ ವಾತಾವರಣವನ್ನು ಹವಾಗೋಳ (troposphere), ವಾಯುಗೋಳ (Stratosphere), ಮಧ್ಯಗೋಳ (Mesosphere), ಉಷ್ಣಗೋಳ (Thermosphere), ಮತ್ತು ಹೊರಗೋಳ (Exosphere) ಎಂದು ಐದು ಪದರಗಳಾಗಿ ವಿಂಗಡಿಸಲಾಗಿದೆ.

ಭೂಮಿಯ ಮೇಲ್ಮೈನಿಂದ 10 ಕಿ.ಮೀ ನವರೆಗೆ ಹವಾಗೋಳವಿದೆ. 10 ಕಿ.ಮೀ ನಿಂದ 50 ಕಿ.ಮೀವರೆಗೆ ವಾಯುಗೋಳವಿದೆ. 50 ಕಿ.ಮೀ ನಿಂದ 85 ಕಿ.ಮೀ ವರೆಗೆ ಮಧ್ಯಗೋಳ, 85 ರಿಂದ 650 ಕಿ.ಮೀವರೆಗೆ ಉಷ್ಣಗೋಳ ಮತ್ತು 650 ಕಿ.ಮೀ ಮೇಲಿನ ಪದರವನ್ನು ಹೊರಗೋಳ ಎಂದು ಕರೆಯುತ್ತೇವೆ. ಓಝೋನ್ ಪದರ ನಮ್ಮ ವಾತಾವರಣದಲ್ಲಿನ ವಾಯುಗೋಳದಲ್ಲಿ ಅಂದರೆ ಭೂಮಿಯ ಮೇಲ್ಮೈನಿಂದ 15 ಕಿ.ಮೀ ನಿಂದ 50 ಕಿ.ಮೀ ಎತ್ತರದವರೆಗೆ ಹರಡಿದೆ. ಇದು ಅತ್ಯಂತ ಚಿಕ್ಕ ಪದರವಾದರು ಇದರ ಪ್ರಾಮುಖ್ಯತೆ ಹೆಚ್ಚು. ಏಕೆಂದರೆ ಇದು ಭೂ ಜೀವ ಸಂಕುಲಗಳಿಗೆ ಒಂದು ರಕ್ಷಾಕವಚದಂತೆ ಕೆಲಸಮಾಡುತ್ತದೆ.

ಯಾವುದರಿಂದ ರಕ್ಷಣೆ?

ಸೂರ್ಯನಿಂದ ನಮಗೆಲ್ಲಾ ಬೆಳಕು ಬರುತ್ತದೆ. ಈ ಬೆಳಕಿನ ಜತೆಗೇ ಕ್ಷ-ಕಿರಣ, ಗಾಮಾ ಕಿರಣ, ಬೀಟಾ ಕಿರಣ ಮುಂತಾದ ವಿಕಿರಣಗಳೂ ಬರುತ್ತಿರುತ್ತವೆ. ಅತ್ಯಂತ ಅಪಾಯಕಾರಿಯಾದ ನೇರಳಾತೀತ ಕಿರಣಗಳು(ಯುವಿ) ಇದರ ಜತೆಗೆ ಇರುತ್ತವೆ. ನೇರಳಾತೀತ ಕಿರಣಗಳ ತರಂಗವ್ಯಾಪ್ತಿಗೆ ಅನುಗುಣವಾಗಿ ಕಿರಣಗಳನ್ನು ಯುವಿಎ, ಯುವಿಬಿ, ಯುವಿಸಿ ಎಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

1. ಯುವಿ-ಎ (ತರಂಗಾಂತರ 400-315 ನ್ಯಾನೋ ಮೀಟರ್)
2. ಯುವಿ-ಬಿ (ತರಂಗಾಂತರ 315-280 ನ್ಯಾನೋ ಮೀಟರ್)
3. ಯುವಿ-ಸಿ (ತರಂಗಾಂತರ 280-100 ನ್ಯಾನೋ ಮೀಟರ್)
(100 ಕೋಟಿ ನ್ಯಾನೋ ಮೀಟರ್ = 1 ಮೀಟರ್)

ಓಝೋನ್ ಪದರ ಯುವಿಸಿ ಯನ್ನು ಭೂಮಿಗೆ ಬರದಂತೆ ಸಂಪೂರ್ಣವಾಗಿ ತಡೆಯುತ್ತದೆ. ಭೂಮಿಯ ಮೇಲಿನ ಜೀವ ಸಂಕುಲಕ್ಕೆ ಅತ್ಯಂತ ಹಾನಿಕಾರಿಯಾದ ಕಿರಣ ಯುವಿಬಿ. ಇದರ ಬಹುಭಾಗ ಭೂಮಿಗೆ ಬರದಂತೆ ಓಝೋನ್ ಪದರ ತಡೆಯುತ್ತದೆ. ಆದರೆ ಯುವಿಎ ಅತ್ಯಂತ ಕಡಿಮೆ ಅಪಾಯಕಾರಿ, ಇದರ ಬಹುಭಾಗ ಭೂಮಿಗೆ ಬರುತ್ತದೆ.

ಓಝೋನ್ ಪದರ ಇಲ್ಲದಿದ್ದರೆ ಯುವಿಬಿ ಕಿರಣ ಭೂವಾತಾವರಣ ಸೇರುತ್ತಿತ್ತು. ಇವು ಮನುಷ್ಯನ ಚರ್ಮದ ಮೇಲೆ ಬಿದ್ದರೆ, ಅಲ್ಲಿನ ಜೀವಕೋಶ ಕಾರ್ಯ ನಿಲ್ಲಿಸಿಬಿಡುತ್ತದೆ. ಯುವಿಬಿ ಕಿರಣ ದೇಹದ ಮೇಲೆ ಬಿದ್ದರೆ ಚರ್ಮ ಕ್ಯಾನ್ಸರ್ ಖಂಡಿತಾ. ಯುವಿಬಿ ಕಿರಣಗಳು ದೇಹದ ಕಣ್ಣು ಸೇರಿದಂತೆ ಯಾವುದೇ ಭಾಗದ ಮೇಲೆ ಬಿದ್ದರೂ ಮನುಷ್ಯನ ದೇಹದ ಮೇಲೆ ವಿವಿಧ ರೀತಿಯ ಪರಿಣಾಮಗಳನ್ನು ಬೀರುತ್ತವೆ. ಇವು ಮನುಷ್ಯನ ಮೇಲೆ ಮಾತ್ರವಲ್ಲ, ಭೂಮಿಯ ಮೇಲಿನ ಜೀವರಾಶಿಯ ಮೇಲೆಯೇ ಪರಿಣಾಮ ಬೀರಲಿದ್ದು, ಆಹಾರ ಸರಪಳಿಯೇ ತುಂಡಾಗುವ ಅಪಾಯವಿತ್ತು.

ಓಝೋನ್ ರಚನೆಯಾಗಿದ್ದು ಹೇಗೆ?
ಭೂಮಿಯ ಜೀವಸಂಕುಲವನ್ನು ರಕ್ಷಿಸಲೆಂದೇ ಪ್ರಕೃತಿ ನಿರ್ಮಿಸಿದ ರಕ್ಷಾಕವಚ ಓಝೋನ್. ವಿಜ್ಞಾನಿಗಳ ಪ್ರಕಾರ ಓಝೋನ್ ವಾತಾವರಣದಲ್ಲಿ 400 ಮಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾಗಿದೆ. ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು (ಯುವಿ-ರೇಸ್) ಆಮ್ಲಜನಕಕ್ಕೆ ಡಿಕ್ಕಿ ಹೊಡೆದುದರಿಂದ ಅದು ಹೋಳಾಗಿ ಮೂರು ಆಮ್ಲಜನಕ ಪರಮಾಣುಗಳಿಂದ ಉಂಟಾದ ಒಂದು ಅಣು (O2+O3 ಓಝೋನ್) ಓಝೋನ್. ಓಝೋನ್ ಒಂದು ರೀತಿ ಘಾಟು ವಾಸನೆ ಹೊಂದಿರುತ್ತದೆ. ಬಣ್ಣರಹಿತ ಅನಿಲ.

ಈಗಿನ ಅಪಾಯವೇನು?
ಅತಿಯಾದ ಕೈಗಾರಿಕೀಕರಣದ ಪರಿಣಾಮವಾಗಿ ಅಪಾಯಕಾರಿಯಾದ ಅನಿಲಗಳು ಇಂದು ವಾತಾವಣ ಸೇರುತ್ತಿವೆ. ಇವುಗಳಲ್ಲಿ ಮುಖ್ಯವಾಗಿ ಅಪಾಯಕಾರಿ ಅನಿಲಗಳಾದ ನೈಟ್ರಿಕ್ ಆಕ್ಸೈಡ್ (No), ನೈಟ್ರಸ್ ಆಕ್ಸೈಡ್ (N2O), ಹೈಡ್ರಾಕ್ಸಿಲ್ (OH), ಪರಮಾಣು ಕ್ಲೋರಿನ್ (CL) ಮತ್ತು ಪರಮಾಣು ಬ್ರೋಮಿನ್ (Br) ಸೇರಿವೆ. ಇವಲ್ಲದೆ ಇತ್ತೀಚೆಗೆ ಹ್ಯಾಲೋಜನ್ ಕ್ಲೋರೋಫ್ಲೋರೋ ಕಾರ್ಬನ್‌ಗಳು (ಸಿಎಫ್‌ಸಿ) ಮತ್ತು ಬ್ರೊಮೋ ಪ್ಲೋರೋ ಕಾರ್ಬನ್‌ಗಳು ನೇರವಾಗಿ ಆವಿಗೊಂಡು ಈ ಓಝೋನ್ ಪದರವನ್ನು ನಾಶ ಮಾಡುತ್ತಿವೆ.

ಸಿ.ಎಫ್.ಸಿ ಯನ್ನು ಸುಗಂಧಕಾರಕಗಳಲ್ಲಿ, ಕೀಟನಾಶಕಗಳಲ್ಲಿ ಬಳಸಲಾಗುತ್ತದೆ. ರೆಫ್ರಿಜರೇಟರ್‌ಗಳು, ಏರ್ ಕೂಲರ್ ಗಳು ಇದನ್ನು ಹೊರಸೂಸುತ್ತಿವೆ. ಇವುಗಳಿಂದ ವಾತಾವರಣ ಸೇರುವ ಸಿ.ಎಫ್.ಸಿ.ಯ ಪ್ರಮಾಣ ಅಧಿಕವಾಗಿದೆ. ಕೈಗಾರಿಕಾ ಚಟುವಟಿಕೆಯಿಂದಾಗಿ ಉತ್ಪನ್ನವಾಗುವ ಕಾರ್ಬನ್ ಟೆಟ್ರಾಕ್ಲೋರೈಡ್, ಮಿಥೈಲ್ ಕ್ಲೊರೋಫಾರ್ಮ್, ಮಿಥೈಲ್ ಬ್ರೋಮೈಡ್, ಬ್ರೋಮೋಕ್ಲೋರೋ ಮೀಥೇನ್, ಬ್ರೋಮೀನ್, ನೈಟ್ರಸ್ ಆಕ್ಸೈಡ್ ಮೊದಲಾದವು ಓಜೋನ್ ನಾಶಕ್ಕೆ ಬಹಳವಾದ ಕೊಡುಗೆ ನೀಡುತ್ತಿವೆ. ಪ್ರಕೃತಿಯಿಂದ ಸಹಜವಾಗಿ ಹೊರ ಸೂಸಲ್ಪಡುವ ಅನಿಲಗಳಿಗಿಂತ ಹೆಚ್ಚಾಗಿ ಮನುಷ್ಯನ ಚಟುವಟಿಕೆಗಳಿಂದ ಹೊರ ಸೂಸಲ್ಪಡುತ್ತಿರುವ ಅನಿಲದ ಪ್ರಮಾಣ ಅಧಿಕವಾಗಿದೆ. ಒಂದು ಅಧ್ಯಯನದ ಪ್ರಕಾರ ಓಝೋನ್ ನಾಶವಾಗುತ್ತಿರುವುದಕ್ಕೆ ಶೇ.77 ರಷ್ಟು ಮಾನವನ ವರ್ತನೆಯೇ ಕಾರಣ.

ಈಗಾಗಲೇ ರಂಧ್ರ ಬಿದ್ದಿದೆ!
ಓಝೋನ್ ನಾಶ ಮಾಡುವ ಅನಿಲಗಳ ಬಿಡುಗಡೆಯಿಂದಾಗಿ ಈಗಾಗಲೇ ಓಝೋನ್ ಪದರದಲ್ಲಿ ರಂಧ್ರ ಬಿದ್ದಿದೆ. ರಂಧ್ರ ಎಂದರೆ ಓಝೋನ್ ಪದರದಲ್ಲಿ ಸಂಪೂರ್ಣ ಓಝೋನ್ ನಾಶವಾಗಿ ರಂಧ್ರ ವೇನೂ ಉಂಟಾಗುವುದಿಲ್ಲ. ಆದರೆ ಈ ಪದರ ಅಪಾಯಕಾರಿಯಾದ ಅನಿಲಗಳಿಂದ ನಾಶಗೊಂಡಾಗ ತೆಳುವಾದ ಓಝೋನ್ ಪದರವು ಉಳಿಯುತ್ತದೆ. ಇಂತಹ ಕಡಿಮೆ ಸಾಂದ್ರತೆಯಿರುವ ಓಝೋನ್ ಪ್ರದೇಶವನ್ನು ಓಜೋನ್ ರಂಧ್ರ ಎಂದು ಕರೆಯಲಾಗುತ್ತದೆ. 1985ರಲ್ಲಿ ಮೊದಲ ಬಾರಿಗೆ ಅಂಟಾರ್ಟಿಕಾದಲ್ಲಿ ಈ ರೀತಿಯ ಓಝೋನ್ ರಂಧ್ರವನ್ನು ಗುರುತಿಸಲಾಗಿತ್ತು.

ಜಾಗೃತಿಗೊಂದು ದಿನ
1987ರ ಸೆ.16ರಲ್ಲಿ ವಿಯೆನ್ನಾದಲ್ಲಿ ಓಝೋನ್ ಪದರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಮಾವೇಶ ನಡೆಯಿತು (ಯುಎನ್‌ಜಿಎ). ಓಝೋನ್ ಬಗ್ಗೆ ಜಾಗೃತಿ ಮೂಡಿಸುವ ನಿರ್ಣಯವನ್ನು ಅಲ್ಲಿ ತೆಗೆದುಕೊಳ್ಳಲಾಗಿತ್ತು. ಈ ಸಂಬಂಧದ ಒಪ್ಪಂದವೋಂದಕ್ಕೆ 24 ದೇಶಗಳು ಸಹಿ ಹಾಕಿದವು. ಈ ಮಹತ್ವದ ದಿನವನ್ನು ನೆನೆಯುವ ಮತ್ತು ಓಝೋನ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಓಝೋನ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ| Air Pollution | ದೇಶದ ಮಾಲಿನ್ಯಯುಕ್ತ ನಗರಗಳ ಪೈಕಿ ಬೆಂಗಳೂರಿಗೆ ಆರನೇ ಸ್ಥಾನ!

Exit mobile version