ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ (Bilkis Bano Case) 11 ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ಮಾಡಿದೆ. ಪ್ರತಿಕ್ರಿಯೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ನೋಟಿಸ್ ಕೂಡ ನೀಡಿದೆ. ಈ ಅತ್ಯಾಚಾರ ಆರೋಪಿಗಳನ್ನು ಬಿಟ್ಟಿದ್ದು ತಪ್ಪು, ಇವರನ್ನೆಲ್ಲ ಮತ್ತೊಮ್ಮೆ ಜೈಲಿಗೆ ಕಳಿಸಿ ಎಂಬ ಅಗ್ರಹ ಬಲವಾಗಿ ಕೇಳಿಬರುತ್ತಿದೆ. ಸದ್ಯದ ಮಟ್ಟಿಗೆ ದೇಶದಲ್ಲಿ ಪ್ರಚಲಿತ ವಿಷಯ ಬಿಲ್ಕಿಸ್ ಬಾನೊ ರೇಪ್ ಕೇಸ್ ಆರೋಪಿಗಳನ್ನು ಬಿಡುಗಡೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ. 15 ವರ್ಷಗಳ ಹಿಂದಿನ ಕೇಸ್ ಇದೀಗ ಮತ್ತೆ ದೊಡ್ಡ ಮಟ್ಟದಲ್ಲಿ ಸುದ್ದಿ-ಸದ್ದು ಮಾಡುತ್ತಿರುವುದೇಕೆ? 2002ರಲ್ಲಿ ಏನಾಗಿತ್ತು? ಎಂಬ ಬಗ್ಗೆ ಸಮಗ್ರ ವಿವರ ಇಲ್ಲಿದೆ..
2002ರಲ್ಲೇನಾಯಿತು?
2002ನೇ ಇಸ್ವಿಯ ಫೆಬ್ರವರಿ 27ರಂದು ಗುಜರಾತ್ನಲ್ಲಿ ಸಾಬರಮತಿ ಎಕ್ಸ್ಪ್ರೆಸ್ ರೈಲಿಗೆ ಗೋದ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಕರಸೇವಕರು ಸಜೀವದಹನಗೊಂಡಿದ್ದರು. ಇವರೆಲ್ಲ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬರುತ್ತಿದ್ದರು. ಗೋದ್ರಾದಲ್ಲಿ ಗಲಾಟೆ-ಹಿಂಸಾಚಾರ ಹೆಚ್ಚಾದ ಬೆನ್ನಲ್ಲೇ ಅಲ್ಲಿನ ಅನೇಕರು ಊರು ತೊರೆಯಲು ಪ್ರಾರಂಭ ಮಾಡಿದರು. ಅಂತೆಯೇ 20 ವರ್ಷದ ಬಿಲ್ಕಿಸ್ ಬಾನೊ ಕೂಡ ಮಾರ್ಚ್ 3ರಂದು ತನ್ನ ಪತಿ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಸದಸ್ಯರೊಂದಿಗೆ ಹಳ್ಳಿಯನ್ನು ಬಿಟ್ಟು ಹೊರಡುತ್ತಿದ್ದರು. ಆಗವರು ಐದು ತಿಂಗಳ ಗರ್ಭಿಣಿ ಕೂಡ. ಆದರೆ ಅದೇ ಹೊತ್ತಲ್ಲಿ ದುರ್ದೈವ ಅವರ ಬೆನ್ನತ್ತಿತ್ತು. 20-30 ಮಂದಿ ಶಸ್ತ್ರಾಸ್ತ್ರಧಾರಿಗಳನ್ನು ಅವರನ್ನು ಮಾರ್ಗ ಮಧ್ಯೆಯೇ ತಡೆದರು. ಗರ್ಭಿಣಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಕುಟುಂಬದ ಏಳುಮಂದಿಯನ್ನು ಕೊಂದು ಹಾಕಿದರು. ಉಳಿದವರು ಬಿಲ್ಕಿಸ್ ಬಾನೊ ಮಗಳೂ ಜೀವ ಕಳೆದುಕೊಂಡಳು. ಉಳಿದವರು ಹೇಗೋ ಪಾರಾಗಿ ಓಡಿಹೋದರು.
ಬಿಲ್ಕಿಸ್ ಬಾನೊ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಬಹುದೊಡ್ಡ ಸುದ್ದಿಯಾಯಿತು. ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಯಿತು. 2004ರಲ್ಲಿ ಸುಪ್ರೀಂಕೋರ್ಟ್ ಈ ಕೇಸ್ನ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿತು. 2004ರಲ್ಲಿ ಎಲ್ಲ ಆರೋಪಿಗಳೂ ಬಂಧಿತರಾದರು. ಅಹ್ಮದಾಬಾದ್ ಕೋರ್ಟ್ನಲ್ಲಿ ವಿಚಾರಣೆಯೂ ಪ್ರಾರಂಭವಾಯಿತು. ಆದರೆ, ಮತ್ತೆ ಬಿಲ್ಕಿಸ್ ಬಾನೊ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ‘ಸಿಬಿಐನಿಂದ ಸಂಗ್ರಹಿಸಲ್ಪಟ್ಟ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇದೆ. ಪುರಾವೆಗಳು ನಾಶವಾಗುವ ಆತಂಕ ನನಗೆ ಕಾಡುತ್ತಿದೆ’ ಎಂದು ಹೇಳಿದರು. ಈ ಮೂಲಕ ಗುಜರಾತ್ನ ಅಹ್ಮದಾಬಾದ್ ಕೋರ್ಟ್ನಲ್ಲಿ ಈ ಕೇಸ್ನ ವಿಚಾರಣೆ ಬೇಡ ಎಂದೂ ಮನವಿ ಮಾಡಿದರು. ಹೀಗಾಗಿ 2004ರ ಆಗಸ್ಟ್ನಲ್ಲಿ ಸುಪ್ರೀಂಕೋರ್ಟ್, ವಿಚಾರಣೆಯನ್ನು ಮುಂಬೈ ಕೋರ್ಟ್ಗೆ ವರ್ಗಾಯಿಸಿತು.
ತಲೆಬುರುಡೆಗಳೇ ಇರಲಿಲ್ಲ !
ಆರೋಪಿಗಳು ಅರೆಸ್ಟ್ ಆಗಿದ್ದರೂ ತನಿಖೆ ಮುಂದುವರಿದಿತ್ತು. ಹತ್ಯೆಯಾದ ಏಳುಮಂದಿಯ (ಬಿಲ್ಕಿಸ್ ಬಾನೊ ಕುಟುಂಬದವರು) ಪೋಸ್ಟ್ಮಾರ್ಟಮ್ ರಿಪೋರ್ಟ್ ಸರಿಯಾಗಿಲ್ಲ. ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ಪೋಸ್ಟ್ ಮಾರ್ಟಮ್ನ್ನು ಸೂಕ್ತವಾಗಿ ನಡೆಸಲಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿದರು. ಅಷ್ಟೇ ಅಲ್ಲ, ಹೂಳಲಾಗಿದ್ದ ಅವರ ಮೃತದೇಹವನ್ನು ಮತ್ತೆ ಹೊರತೆಗೆಸಿದರು. ಹೀಗೆ ತೆಗೆಸಿದಾಗ ಆ ಶವಗಳಲ್ಲಿ ಒಂದಕ್ಕೂ ತಲೆ ಇರಲಿಲ್ಲ. ‘ಶವಪರೀಕ್ಷೆಯ ಬಳಿಕ ಅವುಗಳ ತಲೆ ಕತ್ತರಿಸಲಾಗಿದೆ. ಮೃತರ ಗುರುತು ಸಿಗಬಾರದು ಎಂಬ ಕಾರಣಕ್ಕೇ ಹೀಗೆ ಮಾಡಲಾಗಿದೆ. ಇಂಥ ಪ್ರಯತ್ನಗಳ ಮೂಲಕ ತನಿಖೆಯ ದಾರಿ ತಪ್ಪಿಸಿ, ಆರೋಪಿಗಳನ್ನು ಬಚಾವ್ ಮಾಡುವ ಪ್ರಯತ್ನ ನಡೆದಿತ್ತು’ ಎಂದು ವರದಿ ಕೊಟ್ಟರು.
2008ರಲ್ಲಿ ಜೈಲು ಶಿಕ್ಷೆ
2004ರಿಂದ 2008ರವರೆಗೆ ಸಿಬಿಐ ನಿರಂತರವಾಗಿ ವಿಚಾರಣೆ-ತನಿಖೆ ನಡೆಸಿ, 2008ರ ಜನವರಿ 1ರಂದು ಅದಕ್ಕೊಂದು ತಾರ್ಕಿಕ ಅಂತ್ಯ ನೀಡಿತು. ಬಂಧಿತರಾಗಿದ್ದ 19 ಆರೋಪಿಗಳಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. ಸರಿಯಾದ ಸಾಕ್ಷಿ ಇಲ್ಲದ ಕಾರಣ ಏಳು ಜನರಿಗೆ ಬಿಡಗಡೆ ಭಾಗ್ಯ ದೊರೆಯಿತು. ಹಾಗೇ, ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಒಬ್ಬಾತ ಮೃತಪಟ್ಟಿದ್ದ. ಬಿಲ್ಕಿಸ್ ಬಾನೊ ಅವರಿಗೆ ಒಂದು ಮನೆ, 50 ಲಕ್ಷ ರೂಪಾಯಿ ಪರಿಹಾರ, ಅವರ ಮನೆಯಲ್ಲಿ ಒಬ್ಬರಿಗೆ ಉದ್ಯೋಗ ಕೊಡುವಂತೆ ಸುಪ್ರೀಂಕೋರ್ಟ್ 2019ರಲ್ಲಿ ಗುಜರಾತ್ ಸರ್ಕಾರಕ್ಕೆ ಸೂಚನೆಯನ್ನೂ ನೀಡಿತ್ತು.
ಆರೋಪಿಗಳ್ಯಾರು
ಬಿಲ್ಕಿಸ್ ಬಾನೊ ಅತ್ಯಾಚಾರ ಕೇಸ್ನಲ್ಲಿ ಜೈಲು ಸೇರಿ, ಈ ಸಲ ಸ್ವಾತಂತ್ರ್ಯೋತ್ಸವದ ದಿನದಂದು ಬಿಡುಗಡೆಯಾದವರ ಹೆಸರು, ಜಸ್ವಂತ್ ಭಾಯ್ ನಾಯ್, ಗೋವಿಂದಭಾಯಿ ನಾಯ್, ಶೈಲೇಶ್ ಭಟ್, ರಾಧೇಶ್ಯಾಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯಿ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಎಂದಾಗಿದೆ. ಇವರಲ್ಲಿ ರಾಧೇಶ್ಯಾಮ್ ಶಾ, ಇತ್ತೀಚೆಗೆ ಗುಜರಾತ್ ಹೈಕೋರ್ಟ್ಗೆ ಮನವಿ ಸಲ್ಲಿಸಿ, ತಾವೀಗ 15 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇವೆ. ನಮ್ಮನ್ನು ಕ್ಷಮಾದಾನಕ್ಕೆ ಪರಿಗಣಿಸಬೇಕು. ಈ ಬಗ್ಗೆ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದ. ಆದರೆ ಆತನ ಅರ್ಜಿ ವಜಾಗೊಳಿಸಿದ್ದ ಕೋರ್ಟ್, ‘ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು ಮುಂಬೈನ ಸಿಬಿಐ ಕೋರ್ಟ್. ಹೀಗಾಗಿ ಇವರ ಕ್ಷಮಾದಾನದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿರುವುದು ಮಹಾರಾಷ್ಟ್ರ ಸರ್ಕಾರವೇ ಹೊರತು, ಗುಜರಾತ್ ಸರ್ಕಾರವಲ್ಲ’ ಎಂದು ಹೇಳಿತ್ತು.
ಗುಜರಾತ್ ಹೈಕೋರ್ಟ್ ಅರ್ಜಿ ವಿಚಾರಣೆಗೆ ಒಪ್ಪದ ಹಿನ್ನೆಲೆಯಲ್ಲಿ ಶಾ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ, ‘ಮಹಾರಾಷ್ಟ್ರ ಸರ್ಕಾರಕ್ಕೂ, ಇದಕ್ಕೂ ಸಂಬಂಧವಿಲ್ಲ. ಅಪರಾಧ ನಡೆದಿದ್ದು ಗುಜರಾತ್ನಲ್ಲಿ. ಆರೋಪಿಗಳು ಗುಜರಾತ್ನವರು. ಹೀಗಾಗಿ ಆರೋಪಿಗಳ ಬಿಡುಗಡೆ ವಿಚಾರವನ್ನು ಗುಜರಾತ್ ಸರ್ಕಾರವೇ ನಿರ್ಧರಿಸಬೇಕು’ ಎಂದು ಹೇಳಿತ್ತು. ಅಂತೆಯೇ ಈ 11 ಜನರನ್ನು ಕ್ಷಮಾಪಣೆಗೆ ಪರಿಗಣಿಸಬಹುದು ಎಂದೂ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಕ್ಷಮಾದಾನ ಕಾನೂನು ಏನು ಹೇಳುತ್ತದೆ?
ಭಾರತದ ಸಂವಿಧಾನದ 72 ಮತ್ತು 161ನೇ ಆರ್ಟಿಕಲ್ ಪ್ರಕಾರ, ಯಾವುದೇ ನ್ಯಾಯಾಲಯಗಳು ಅಪರಾಧಿಗಳಿಗೆ ನೀಡುವ ಶಿಕ್ಷೆಯನ್ನು ರದ್ದುಗೊಳಿಸುವ, ಅಮಾನತು ಮಾಡುವ, ಬದಲಾಯಿಸುವ ಮತ್ತು ಅಪರಾಧಿಗಳಿಗೆ ಕ್ಷಮಾದಾನ ನೀಡುವ ಅಧಿಕಾರವನ್ನು ರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳು ಹೊಂದಿರುತ್ತಾರೆ. ಹಾಗೇ, ಕಾರಾಗೃಹಗಳು ಎಂಬ ವಿಷಯ ಇರುವುದು, ಸಂವಿಧಾನದ ಏಳನೇ ಅನುಸೂಚಿಯಲ್ಲಿರುವ ರಾಜ್ಯ ಪಟ್ಟಿಯಲ್ಲಿ. ಹೀಗಾಗಿ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಕ್ಷಮಾದಾನ ನೀಡುವ, ಶಿಕ್ಷೆಯನ್ನು ಕಡಿಮೆ ಮಾಡುವ ಅಧಿಕಾರವನ್ನು ರಾಜ್ಯಸರ್ಕಾರಗಳು ಹೊಂದಿರುತ್ತವೆ. ಈಗ ಅದೇ ಅಧಿಕಾರದ ಅಡಿಯಲ್ಲಿ ಗುಜರಾತ್ ಸರ್ಕಾರ, ಈ 11 ಆರೋಪಿಗಳಿಗೆ ಕ್ಷಮಾದಾನ ಕೊಟ್ಟಿತ್ತು.
ಅಂದಹಾಗೇ, ಗುಜರಾತ್ ಸರ್ಕಾರ ಆರೋಪಿಗಳನ್ನು 1992ರ ಕ್ಷಮಾದಾನ ನೀತಿಯ ಅನ್ವಯ ಬಿಡುಗಡೆಗೊಳಿಸಿದೆ. ಅಂದರೆ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ, ಸನ್ನಡತೆ ತೋರಿದ್ದನ್ನೇ ಮುಖ್ಯ ಆಧಾರವನ್ನಿಟ್ಟುಕೊಂಡು ಅವರಿಗೆ ಜೈಲಿನಿಂದ ಮುಕ್ತಿಕೊಟ್ಟಿದೆ. ಆದರೆ ಈ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿದಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ (ಎಂ) ಸೇರಿ ಹಲವು ವಿಪಕ್ಷಗಳು ಗುಜರಾತ್ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿವೆ.
ಇದನ್ನೂ ಓದಿ: Bilkis Bano Case | 11 ಆರೋಪಿಗಳಿಗೆ ಕ್ಷಮಾದಾನ ಕೊಟ್ಟ ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್