ತಮಿಳುನಾಡಿನ ದೇವಾಲಯಗಳಲ್ಲಿ ಅರ್ಚಕರನ್ನು ನೇಮಿಸುವ ಬಗ್ಗೆ ಅಲ್ಲಿ ಸರ್ಕಾರ ಜಾರಿಗೆ ತಂದಿದ್ದ ಹೊಸ ನಿಯಮಾವಳಿ ಮಾನ್ಯತೆಯನ್ನು ಪ್ರಶ್ನಿಸಿ ಹಲವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಡಿಎಂಕೆ ಸರ್ಕಾರದ ಈ ನಿಯಮಾವಳಿಯನ್ನು ಎತ್ತಿ ಹಿಡಿದಿರುವ ಮದ್ರಾಸ್ ಹೈಕೋರ್ಟ್ (Madras High Court), ಆಗಮ ದೇವಾಲಯ(Agama Temple)ಗಳನ್ನು ಈ ಕಾಯಿದೆಯಿಂದ ಹೊರಗಿಟ್ಟಿದೆ. ಅಷ್ಟು ಮಾತ್ರವಲ್ಲದೇ, ಆಗಮ ಆಧರಿತ ದೇವಾಲಯಗಳನ್ನು ಗುರುತಿಸಲು ಐವರ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಹಾಗಾದರೆ, ಏನಿದು ಅರ್ಚಕರ ವಿವಾದ? ಆಗಮ ಆಧರಿತ ದೇವಾಲಯಗಳೆಂದರೇನು? ಇಲ್ಲಿದೆ ಮಾಹಿತಿ.
ಹಿಂದೂ ದೇವಾಲಗಳಲ್ಲಿ ಎಲ್ಲ ವರ್ಗದವರಿಗೂ ಅರ್ಚಕರಾಗಲು ಮತ್ತು ಇತರ ಉದ್ಯೋಗಕ್ಕೆ ಅವಕಾಶ ಕಲ್ಪಿಸುವ ತಮಿಳುನಾಡು ಸರ್ಕಾರದ 2020ರ ನಿಯಮಾವಳಿಯನ್ನು ಪ್ರಶ್ನಿಸಿ ಅಖಿಲ ಭಾರತ ಶೈವ ಶಿವಾಚಾರ್ಯಗಳು ಸೇವಾ ಸಂಗಮದ ಪ್ರಧಾನ ಕಾರ್ಯದರ್ಶಿ ಹಾಗೂ ಇತರ 14 ಜನರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಎಲ್ಲ ಅರ್ಜಿಗಳನ್ನು ಒಟ್ಟು ಗೂಡಿಸಿ ವಿಚಾರಣೆ ನಡೆಸಿದ ಹೈಕೋರ್ಟ್, ತಮಿಳುನಾಡು ಹಿಂದು ಧಾರ್ಮಿಕ ಸಂಸ್ಥೆಗಳ ಉದ್ಯೋಗಿಗಳ(ಸೇವಾ ಸ್ಥಿತಿಗತಿ) ನಿಯಮಾವಳಿಯ ಕೆಲವು ಸಂಗತಿಗಳನ್ನು ಎತ್ತಿ ಹಿಡಿದಿದೆ.
ಅರ್ಜಿದಾರರ ವಾದವೇನು?
ತಮಿಳುನಾಡು (Tamil Nadu) ಸರ್ಕಾರ ಜಾರಿಗೆ ತಂದಿರುವ ನಿಯಮಾವಳಿಯನ್ನು ಸಂಪೂರ್ಣವಾಗಿ ರದ್ದು ಮಾಡುವಂತೆ ಅರ್ಜಿದಾರರು ಕೋರಿದ್ದರು. ಹಿಂದೂ ದೇವಾಲಯಗಳಲ್ಲಿ ಅರ್ಚಕರು ಹಾಗೂ ಇತರರನ್ನು ನೇಮಿಸುವ ಸಂಬಂಧ ಆದಿ ಶೈವ ಶಿವಾಚಾರ್ಯಗಳ್ ನಲ್ ಸಂಗಮ್ ಮತ್ತು ತಮಿಳುನಾಡು ರಾಜ್ಯ ನಡುವಿನ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ತಮಿಳುನಾಡು ಸರ್ಕಾರ ಹೊಸದಾಗಿ ರೂಪಿಸಿರುವ ನಿಯಮಾವಳಿ ಸಂಪೂರ್ಣವಾಗಿ ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ತಮ್ಮ ವಾದವನ್ನು ಮಂಡಿಸಿದ್ದರು. ಆದರೆ, ಹೈಕೋರ್ಟ್ ಅರ್ಜಿದಾರರ ವಾದವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಬದಲಿಗೆ ಆಗಮ ಆಧರಿತ ದೇವಾಲಯಗಳನ್ನು ಹೊರತುಪಡಿಸಿ ಉಳಿದೆಡೆ ನಿಯಮಗಳು ಅನ್ವಯವಾಗಲಿವೆ ಎಂದು ಹೇಳಿದೆ. ಜತೆಗೆ ಆಗಮ ದೇವಾಲಯಗಳನ್ನು ಗುರುತಿಸಲು ಸಮಿತಿ ರಚಿಸುವಂತೆ ಸೂಚಿಸಿದೆ.
ಆಗಮ ಎಂದರೇನು?
ಆಗಮ ಎಂದರೆ ಪರಂಪರೆಯಿಂದ ಬಂದ ಶಾಸ್ತ್ರ ಎಂದು ಹೇಳಬಹುದು. ವೇದ, ಉಪನಿಷತ್ತು ಮುಂತಾದ ಗ್ರಂಥಗಳಲ್ಲಿ ಹೇಳಲ್ಪಟ್ಟ ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ತತ್ವಗಳನ್ನು ಪರಿಶೀಲಿಸಲು ನೆರವಾಗುವ ಶಾಸ್ತ್ರಗ್ರಂಥಗಳೇ ಆಗಮಗಳು. ಇವುಗಳು ಜನರ ಉಪಸನಾ ಸೌಕರ್ಯಕ್ಕಾಗಿ ದೇವರಿಗೆ ಗುಣಕಲ್ಪನೆ, ವಿವಿಧ ಸ್ವರೂಪಗಳ ಕಲ್ಪನೆಗಳನ್ನು ಮಾಡಿ ದೇವಾಲಯಗಳ ನಿರ್ಮಾಣ, ಅವುಗಳ ಸ್ವರೂಪ, ದೇವತಾವಿಗ್ರಹಗಳ ಪ್ರತಿಷ್ಠಾಪನೆ, ಅರ್ಚನೆ, ಉತ್ಸವ, ಸಾಮಾಜಿಕ ನೀತಿನಿಯಮಗಳು ಎಂಬ ಅನೇಕ ವಿಧದ ಕರ್ಮಗಳು, ಆಚಾರ ವಿಚಾರಗಳು ಇವೇ ಮೊದಲಾದ ವಿಷಯಗಳನ್ನು ತಿಳಿಸುತ್ತವೆ.
ಎಷ್ಟು ಪ್ರಕಾರದ ಆಗಮಗಳಿವೆ?
ಆಗಮದಲ್ಲಿ ಮೂರು ಪ್ರಕಾರಗಳಿವೆ. 1. ಶೈವ 2. ವೈಷ್ಣವ ಮತ್ತು 3. ಶಾಕ್ತ ಆಗಮ. ಈ ಬಗ್ಗೆ ಒಂದೊದಾಗಿ ತಿಳಿದುಕೊಳ್ಳೋಣ.
ಶೈವ ಆಗಮ: ಶಿವನನ್ನು ಆರಾಧಿಸುವುದು ಮುಖ್ಯವಾಗುತ್ತದೆ. ಇದರಲ್ಲಿ 28 ಪ್ರಮುಖ ಹಾಗೂ 108 ಉಪ ಆಗಮಗಳಿವೆ. 2ನೇ ಶತಮಾನದಿಂದಲೂ ಈ ಆಚರಣೆಗಳು ಜಾರಿಯಲ್ಲಿವೆ ಎಂಬುದು ತಜ್ಞರ ಅಭಿಮತ. ಶೈವ ಸಿದ್ಧಾಂತ ಅಂದರೆ ಮುಖ್ಯವಾಗಿ ದಕ್ಷಿಣ ಭಾರತದ ಶೈವರು ಆಚರಿಸುವಂಥ ಆಚರಣೆಗಳು. ಇದರಲ್ಲಿ ತಮಿಳು ಶೈವರು ಸೇರುತ್ತಾರೆ. ಅದೇ ರೀತಿ, ಪ್ರತ್ಯಭಿಜ್ಞ ಪದ್ಧತಿ. ಕಾಶ್ಮೀರಿ ಶೈವರು ಮತ್ತು ವೀರ ಶೈವರು ಆಚರಿಸುವ ಮಾರ್ಗ. ಶೈವದಲ್ಲಿ ಬಹಳ ಪ್ರಾಮುಖ್ಯ ಪಡೆದುಕೊಂಡಿರುವ ಆಚರಣೆಗಳು ಕಾಮಿಕಾಗಮಗಳು ಎಂದು ಗುರುತಿಸಲಾಗಿದೆ. ಇವುಗಳ ಪ್ರಕಾರ ಶಿವನೇ ಅತ್ಯುಚ್ಚ ದೇವರು ಎಂದು ನಂಬಲಾಗಿದೆ.
ವೈಷ್ಣವ ಆಗಮ: ಈ ಆಗಮದಲ್ಲಿ ವಿಷ್ಣು ಸರ್ವಶ್ರೇಷ್ಠ ಎಂದು ನಂಬಲಾಗಿದೆ. ಈ ಆಗಮದಲ್ಲಿ 1. ವೈಖನಾಸ 2. ಪಂಚರಾತ್ರ 3.ಪ್ರತಿಷ್ಠಾಸರ ಮತ್ತು 4. ವಿಜ್ಞಾನಲಲಿತಾ ಸೇರಿ ನಾಲ್ಕು ಪ್ರಕಾರಗಳಿವೆ. ಈ ಪೈಕಿ ವೈಖನಾಸ ಮತ್ತು ಪಂಚರಾತ್ರಗಳಿಗೆ ತುಂಬ ಪ್ರಾಮುಖ್ಯತೆ ಇದೆ. ಈ ಆಗಮಗಳನ್ನು ಸ್ವತಃ ನಾರಾಯಣನೇ ಹೇಳಿದನೆಂದು ನಂಬಲಾಗುತ್ತದೆ. ಪಂಚರಾತ್ರದಲ್ಲಿ ಮತ್ತೆ 7 ಪ್ರಕಾರಗಳಿವೆ. ವಿಷ್ಣವೇ ಜಗತ್ತಿನ ಸಾರ್ವತ್ರಿಕ ದೇವರು. ಅವನೇ ಎಲ್ಲದಕ್ಕೂ ಮೂಲ. ಮೋಕ್ಷವನ್ನು ಪಡೆಯಲು ನಾರಾಯಣ ನೆನೆಯುವುದೇ ದಾರಿ ಎಂದು ಹೇಳುತ್ತದೆ ಪಂಚರಾತ್ರ. ಅತ್ಯಂತ ಹಳೆಯ ಹಾಗೂ ಮುಖ್ಯವಾದ ಆಗಮ ಇದು.
ಶಾಕ್ತ ಆಗಮ: ಶಕ್ತಿ ದೇವತೆ ಕೇಂದ್ರವಾಗಿರುವ ಆಚರಣೆಗಳು. ಆರಾಧಾಕರು 27 ಆಗಮಗಳನ್ನು ಅನುಸರಿಸುತ್ತಾರೆ. ಶಾಕ್ತರನ್ನು ತಂತ್ರಗಳೆಂದೂ ಕರೆಯಲಾಗುತ್ತದೆ. ಇಲ್ಲಿ ಈಶ್ವರನಿಗೆ ದ್ವಿತೀಯ ಸ್ಥಾನವನ್ನು ನೀಡುತ್ತಾರೆ. ಶಾಕ್ತ ಆಗಮದಲ್ಲಿ ಆರಾಧಕರು ಶಕ್ತಿಯನ್ನು ಆರಾಧಿಸುತ್ತಾರೆ ಮತ್ತು ದೈವಿಕ ತಾಯಿಗೆ ನಾನಾ ರೀತಿಯ ಪೂಜಾ ವಿಧಾನಗಳನ್ನು ಅನುಸರಿಸುತ್ತಾರೆ. ಒಟ್ಟು 77 ಆಗಮಗಳಿವೆ. ಈ ಪೈಕಿ ಕೆಲವು ಪುರಾಣಗಳೊಂದಿಗೆ ಸಾಮ್ಯತೆಯನ್ನು ಹೊಂದಿವೆ. ಶಾಕ್ತ ಆಗಮದಲ್ಲಿರುವ ಪಠ್ಯ ಸಂಭಾಷಣೆ ರೂಪದಲ್ಲಿದೆ. ಶಿವ ಮತ್ತು ಪಾರ್ವತಿ ನಡುವಿನ ಸಂಭಾಣೆಯನ್ನು ಇಲ್ಲಿ ಕಾಣಬಹುದಾಗಿದೆ. ಪಾರ್ವತಿ ಕೇಳುವ ಪ್ರಶ್ನೆಗಳಿಗೆ ಶಿವ ಉತ್ತರ ನೀಡುತ್ತಾನೆ. ಮತ್ತೆ ಕೆಲವುಗಳಲ್ಲಿ ಪಾರ್ವತಿ ಉತ್ತರ ನೀಡುತ್ತಾನೆ.
ತಮಿಳುನಾಡಿನಲ್ಲೇಕೆ ಈ ವಿವಾದ?
ತಮಿಳುನಾಡಿನಲ್ಲಿನ ದೇವಾಲಯಗಳಿಗೆ ಎಲ್ಲ ವರ್ಗದ ಜನರನ್ನು ಅರ್ಚಕರಾಗಿ ನೇಮಕ ಮಾಡಬೇಕೆಂಬ ಬೇಡಿಕೆ ಮೊದಲಿನಿಂದಲೂ ಇದೆ. ಆದರೆ, ಇದಕ್ಕೆ ಸಂಪ್ರದಾಯಿವಾದಿಗಳು ವಿರೋಧವನ್ನು ವ್ಯಕ್ತಪಿಡಸುತ್ತಲೇ ಬಂದಿದ್ದಾರೆ. ಹಾಗಾಗಿ, ಹಾಲಿ ಡಿಎಂಕೆ ಸರ್ಕಾರವು ಹೊಸ ನಿಯಮಾವಳಿಗನ್ನು ಜಾರಿಗೆ ತರುವ ಮೂಲಕ ದೇವಾಲಯಗಳಲ್ಲಿ ಪೂಜಾವಿಧಾನ ತರಬೇತಿ ಪಡೆದ ವ್ಯಕ್ತಿಗಳನ್ನು ನೇಮಕ ಮಾಡಲು ಅವಕಾಶ ಕಲ್ಪಿಸಿದೆ. ಆದರೆ, ಇದಕ್ಕೆ ಯಾವುದೇ ಜಾತಿ ಅಡ್ಡಿಯಾಗುವಂತಿಲ್ಲ. ಇದು ವಿವಾದಕ್ಕೆ ಕಾರಣವಾಗಿದೆ. ಅದೇ ಕಾರಣಕ್ಕೆ ಸರ್ಕಾರದ ವ್ಯಾಪ್ತಿಯಿಂದ ಹಿಂದೂ ದೇವಾಲಯಗಳನ್ನು ಮುಕ್ತಗೊಳಿಸಬೇಕೆಂದ ಅಭಿಯಾನ ಆಗಾಗ ನಡೆಯುವುದನ್ನು ನೋಡಬಹುದು.
ಇದನ್ನು ಓದಿ | ನಂಬಿಕೆ ಇರುವ ಅನ್ಯಧರ್ಮೀಯರ ದೇವಸ್ಥಾನ ಪ್ರವೇಶವನ್ನು ತಡೆಯಲು ಆಗದು ಎಂದ ಮದ್ರಾಸ್ ಹೈಕೋರ್ಟ್