ನವ ದೆಹಲಿ: ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 47ನೇ ಸಭೆ ಜೂನ್ ಕೊನೇ ವಾರದಲ್ಲಿ ನಡೆದಿದೆ. ಈ ಹಿಂದೆ ತೆರಿಗೆ ಮುಕ್ತವಾಗಿದ್ದ ಹಲವು ವಸ್ತುಗಳನ್ನು ಜಿಎಸ್‌ಟಿಯಡಿ ತರುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಅದರ ಅನ್ವಯ, ಜುಲೈ 18ರಿಂದ ಪ್ಯಾಕ್ಡ್ ತಿಂಡಿಗಳು, ಹೋಟೆಲ್ ಕೋಣೆಗಳು, ಆಸ್ಪತ್ರೆ ಬೆಡ್‌ಗಳು, ಎಲ್‌ಇಡಿ ದೀಪ, ಲ್ಯಾಂಪ್ಸ್‌ಗಳೆಲ್ಲ ದುಬಾರಿಯಾಗುತ್ತಿವೆ. ಇದೆಲ್ಲದರ ಮಧ್ಯೆ ಕೇಂದ್ರ ಸರ್ಕಾರ ಶಾಲಾ ಪಠ್ಯಗಳ ಮೇಲೆಯೂ ಜಿಎಸ್‌ಟಿ ಹೇರಿದೆ ಎಂಬ ಮಾಹಿತಿಯೊಂದು ಹಬ್ಬುತ್ತಿದೆ. ಶಾಲಾ ಮಕ್ಕಳ ಪುಸ್ತಕಕ್ಕೂ ಜಿಎಸ್‌ಟಿ ಹೇರಿಕೆಯಾ? ಎಂಬರ್ಥದ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಸಿಕ್ಕಾಪಟೆ ಹರಿದಾಡುತ್ತಿವೆ. ಇಡೀ ವಿಶ್ವದಲ್ಲಿ ಮಕ್ಕಳ ಶಾಲಾ ಪಠ್ಯ ಪುಸ್ತಕಕ್ಕೂ ಜಿಎಸ್‌ಟಿ ವಿಧಿಸಿದ ಏಕೈಕ ದೇಶ ಭಾರತ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಮತ್ತೊಮ್ಮೆ ಸದ್ದು ಮಾಡುತ್ತಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ವ್ಯಂಗ್ಯ ಕೂಡ ಮಾಡಲಾಗುತ್ತಿದೆ.
ಆದರೆ ನಿಜಕ್ಕೂ ಕೇಂದ್ರ ಸರ್ಕಾರ ಶಾಲಾ ಪುಸ್ತಕಗಳ ಮೇಲೆ ಜಿಎಸ್‌ಟಿ ಹೇರುತ್ತಿದೆಯಾ? ಈ ಪ್ರಶ್ನೆಗೆ ಉತ್ತರ ʼಇಲ್ಲʼ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳೆಲ್ಲ ಪಕ್ಕಾ ಫೇಕ್. ಅಂದರೆ ತಪ್ಪು ಮಾಹಿತಿಯಿಂದ ಕೂಡಿದವಾಗಿವೆ ಎಂಬುದು ಇಂಡಿಯಾ ಟುಡೆ ಮಾಧ್ಯಮದ ಫ್ಯಾಕ್ಟ್‌ಚೆಕ್‌ನಿಂದ ಬೆಳಕಿಗೆ ಬಂದಿದೆ. ಶಾಲಾ ಮಕ್ಕಳ ಪುಸ್ತಕಕ್ಕೆ ಜಿಎಸ್‌ಟಿ ಹೇರಿಕೆ ವಿಚಾರವಾಗಿ ವೈರಲ್ ಆಗುತ್ತಿರುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಬಗ್ಗೆ ಇಂಡಿಯಾ ಟುಡೆ ಮಾಧ್ಯಮದ ಆ್ಯಂಟಿ ಫೇಕ್‌ನ್ಯೂಸ್ ವಾರ್ ರೂಮ್ ಫ್ಯಾಕ್ಟ್‌ಚೆಕ್ (ಸತ್ಯಶೋಧನೆ) ನಡೆಸಿತ್ತು. ಯಾವೆಲ್ಲ ಪದಾರ್ಥಗಳು, ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆಯಾಗಿದೆ, ಹೇರಿಕೆಯಾಗಿಲ್ಲ ಎಂಬುದನ್ನು ಪರಿಶೀಲಿಸಲು ಈ ಫ್ಯಾಕ್ಟ್‌ಚೆಕ್ ರೂಮ್ India Filings ವೆಬ್‌ಸೈಟ್ ಮತ್ತು ಜಿಎಸ್‌ಟಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳನ್ನು ಕೂಡ ಚೆಕ್ ಮಾಡಿ ವರದಿ ನೀಡಿದೆ.
ಇದನ್ನೂ ಓದಿ: Vistara Exclusive | ಬಿಜೆಪಿ ವಿರುದ್ಧ `ದೇಶದ್ರೋಹಿʼ ಅಸ್ತ್ರ: ದೇಶಾದ್ಯಂತ ಕಾಂಗ್ರೆಸ್ ಅಭಿಯಾನ
ಜಿಎಸ್‌ಟಿ ವೆಬ್‌ಸೈಟ್‌ನಲ್ಲಿ ಶಾಲಾ ಮಕ್ಕಳ ಪುಸ್ತಕದ ಮೇಲೆ ತೆರಿಗೆ ವಿಧಿಸಿದ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಯಾವೆಲ್ಲ ವಸ್ತುಗಳು ಜಿಎಸ್‌ಟಿಗೆ ಒಳಪಡುವುದಿಲ್ಲ ಎಂಬ ಕಾಲಂನಲ್ಲಿ, ʼಮುದ್ರಿತ ಪುಸ್ತಕಗಳು, ಬ್ರೈಲ್ ಲಿಪಿ, ಸುದ್ದಿ ಪತ್ರಿಕೆಗಳು, ಜರ್ನಲ್‌ಗಳು, ನಿಯತಕಾಲಿಕೆಗಳು, ಮಕ್ಕಳ ಬಣ್ಣದ ಮತ್ತು ಡ್ರಾಯಿಂಗ್ ಪುಸ್ತಕʼಗಳನ್ನು ಸೇರಿಸಲಾಗಿದೆ. ಅಂದರೆ ಇವು ಯಾವುದಕ್ಕೂ ಜಿಎಸ್‌ಟಿ ಹೇರಿಕೆಯಿಲ್ಲ. ಇಲ್ಲಿ ಶಾಲಾ ಪುಸ್ತಕ ಎಂದು ಪ್ರತ್ಯೇಕವಾಗಿ ಹೇಳದೆ ಇದ್ದರೂ, ಮುದ್ರಿತ ಪುಸ್ತಕದ ವಿಭಾಗದಲ್ಲಿ ಶಾಲಾ ಪಾಠ ಪುಸ್ತಕಗಳೂ ಒಳಪಡುತ್ತವೆ. ಹೀಗಾಗಿ ಶಾಲಾ ಪುಸ್ತಕಗಳ ಮೇಲೆ ತೆರಿಗೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಆ್ಯಂಟಿ ಫೇಕ್‌ನ್ಯೂಸ್ ವಾರ್ ರೂಮ್ ತಿಳಿಸಿದೆ.
ಈ ಹಿಂದೆ 2020ರಲ್ಲಿ ಒಂದು ಬಾರಿ ಇದೇ ರೀತಿಯ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ವೈರಲ್ ಆಗಿದ್ದವು. ಆಗ ಪಿಐಬಿ (Press Information Bureau) ಫ್ಯಾಕ್ಟ್ ಚೆಕ್ ನಡೆಸುವ ಮೂಲಕ ಸತ್ಯಾಂಶ ತಿಳಿಸಿತ್ತು. ಈ ಸಲವೂ ಕೂಡ ಸುಳ್ಳು ಸುದ್ದಿಗಳು ಹರಡುತ್ತಿವೆ. ಆದರೆ ನಕ್ಷೆಗಳು ಮತ್ತು ಚಾರ್ಟ್‌ಗಳ ಮೇಲೆ ಜಿಎಸ್‌ಟಿ ಹೇರಲಾಗಿದೆಯೇ ಹೊರತು ಸ್ಕೂಲ್ ಬುಕ್‌ಗಳ ಮೇಲಲ್ಲ ಎಂಬುದು ವೆಬ್‌ಸೈಟ್‌ನಲ್ಲಿ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇದನ್ನೂ ಓದಿ: ವಿಸ್ತಾರ Fact Check: ಆರ್ಥಿಕತೆ ಬೆಳವಣಿಗೆಯಲ್ಲಿ 3ನೇ ಸ್ಥಾನದಿಂದ 164ಕ್ಕೆ ಕುಸಿಯಿತಾ ಭಾರತ?