ಬೆಂಗಳೂರು: ನಮ್ಮ ರಾಜಧಾನಿ ಬೆಂಗಳೂರಿನಲ್ಲಿ 14ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಅಲ್ಲಿ ಯುದ್ಧ ವಿಮಾನಗಳು ತಮ್ಮ ಸಾಹಸ ಪ್ರದರ್ಶನ ಮಾಡುತ್ತಿರುವ ಅನೇಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗುತ್ತಿವೆ. ಅದರಂತೆಯೇ ಜೆಟ್ ಒಂದು ನೇರವಾಗಿ ಆಗಸಕ್ಕೆ ಮುಖ ಮಾಡಿ ಹಾರಾಟ ಆರಂಭಿಸುವ ವಿಡಿಯೊ ಒಂದು ವೈರಲ್ ಆಗಿದೆ. ಆದರೆ ಆ ವಿಡಿಯೊ ನಿಜಕ್ಕೂ ಬೆಂಗಳೂರಿನದ್ದಾ ಎನ್ನುವ ಬಗ್ಗೆ ಸತ್ಯಾಂಶ (Fact check) ಇಲ್ಲಿದೆ ನೋಡಿ.
ಈ ವಿಡಿಯೊ ಕುರಿಯತಾಗಿ ಎಎಫ್ಡಬ್ಲ್ಯೂಎ ಫ್ಯಾಕ್ಟ್ ಚೆಕ್ ಮಾಡಿದೆ. ಆಗ ಈ ವಿಡಿಯೊ ಬೆಂಗಳೂರಿನದ್ದಲ್ಲ, ಬದಲಾಗಿ ದುಬೈನದ್ದು ಎಂದು ತಿಳಿದುಬಂದಿದೆ. ಮೊದಲಿನ ಹಂತದ ಫ್ಯಾಕ್ಟ್ ಚೆಕ್ ಅಲ್ಲಿ ಈ ಜೆಟ್ ರಷ್ಯಾದ್ದಾಗಿದ್ದು, ರಷ್ಯಾದ ಪೈಲೆಟ್ ಇದನ್ನು ಓಡಿಸುತ್ತಿದ್ದಾಗಿ ತಿಳಿದುಬಂದಿದೆ. ಮತ್ತೆ ಫ್ಯಾಕ್ಟ್ ಚೆಕ್ ಮಾಡಿದಾಗ ಇದು ಒಂದು ರಿಮೋಟ್ ಕಂಟ್ರೋಲಡ್ ಜೆಟ್ ಎನ್ನುವ ವಿಚಾರ ಗೊತ್ತಾಗಿದೆ. ದುಬೈನಲ್ಲಿ ಪ್ರತಿ ವರ್ಷ ರಿಮೋಟ್ ಕಂಟ್ರೋಲಡ್ ಜೆಟ್ ಪ್ರದರ್ಶನ ನಡೆಯುತ್ತಿದ್ದು, ಅದರಲ್ಲಿ ರಷ್ಯಾದ ಈ ಮಾದರಿ ಜೆಟ್ ಹಾರಾಟ ನಡೆಸಿದ್ದಾಗಿ ತಿಳಿದುಬಂದಿದೆ.
ಈ ಜೆಟ್ ಅನ್ನು ತೋರಿಸುವಂತಹ ವಿಡಿಯೊ ಸೂಪರ್ ಕಾರ್ ಬ್ಲಾಂಡಿ ಹೆಸರಿನ ಯೂಟ್ಯೂಬ್ ಚಾನೆಲ್ ಅಲ್ಲಿ 2021ರಲ್ಲಿಯೇ ಹಂಚಿಕೊಂಡಿರುವುದು ಕಂಡುಬಂದಿದೆ. ವೈರಲ್ ವಿಡಿಯೊದಲ್ಲಿರುವ ಜೆಟ್ ಹಾಗೂ ಯುಟ್ಯೂಬ್ ವಿಡಿಯೊದಲ್ಲಿರುವ ಜೆಟ್ ಎರಡೂ ಒಂದೇ ಎನ್ನುವುದನ್ನು ಕಾಣಬಹುದಾಗಿದೆ. ಜೆಟ್ ಇರುವ ಸ್ಥಳವನ್ನೂ ಸಹ ಫ್ಯಾಕ್ಟ್ ಚೆಕ್ ಒಳಪಡಿಸಿದಾಗ ಅದು ದುಬೈನಲ್ಲಿ ನಡೆದ ಪ್ರದರ್ಶನದ್ದು ಎನ್ನುವುದು ದೃಢವಾಗಿದೆ.