ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಶುಕ್ರವಾರ (ಏಪ್ರಿಲ್ 19) ಚಾಲನೆ ಸಿಗಲಿದೆ. ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಳೆ ಮೊದಲ ಹಂತದ ಮತದಾನ (First Phase Voting) ನಡೆಯಲಿದ್ದು, ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆವರೆಗೆ ಜನರು ಹಕ್ಕು ಚಲಾಯಿಸಬಹುದಾಗಿದೆ. ಇದರ ಬೆನ್ನಲ್ಲೇ, ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದವರ ಬ್ಯಾಂಕ್ ಖಾತೆಯಿಂದ 350 ರೂ. ಕಡಿತವಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಈ ಸುದ್ದಿ ಎಷ್ಟು ನಿಜ? ಇಲ್ಲಿದೆ (Fact Check) ಸತ್ಯಾಂಶ.
ಏನಿದು ವದಂತಿ?
ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದವರ ಬ್ಯಾಂಕ್ ಖಾತೆಯಿಂದ 350 ರೂ. ಕಡಿತಗೊಳಿಸಲಾಗುತ್ತದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪತ್ರಿಕೆಯೊಂದರಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿದೆ ಎಂಬುದಾಗಿ ನಕಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ದೇಶದಲ್ಲಿ ಮತದಾನ ಮಾಡುವುದು ಕಡ್ಡಾಯವಾಗಿದೆ. ಯಾರು ಮತದಾನ ಮಾಡುವುದಿಲ್ಲವೋ, ಅವರ ಬ್ಯಾಂಕ್ ಖಾತೆಯಿಂದ 350 ರೂಪಾಯಿಯನ್ನು ಕಡಿತಗೊಳಿಸಲಾಗುತ್ತದೆ ಎಂಬುದಾಗಿ ಮಾಹಿತಿ ಹರಿದಾಡಿದೆ.
False claim: नहीं दिया वोट तो बैंक अकाउंट से करेंगे 350 रुपए: आयोग Reality: यह दावा फर्जी है, चुनाव आयोग द्वारा ऐसा कोई निर्णय नहीं लिया गया है।
— Dausa Police (@DausaPolice) April 3, 2024
इस तरह की खबरों को पहले जांचे-परखे, फिर करे विश्वास। #LokasabhaElection2024 #Dausapolice pic.twitter.com/ZGtWP6D5yT
ವಾಸ್ತವಾಂಶ ಏನು?
ಸಾಮಾಜಿಕ ಜಾಲತಾಣಗಳಲ್ಲಿ ವರದಿಯ ಪೋಸ್ಟ್ ವೈರಲ್ ಆಗುತ್ತಲೇ, ಚುನಾವಣಾ ಆಯೋಗ, ಹಲವು ಪೊಲೀಸ್ ಇಲಾಖೆಗಳು ಫ್ಯಾಕ್ಟ್ ಚೆಕ್ ಮಾಡಿವೆ. ಫ್ಯಾಕ್ಟ್ ಚೆಕ್ ಮಾಹಿತಿ ಪ್ರಕಾರ, ಮತದಾನ ಮಾಡದವರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುವುದಿಲ್ಲ. ಇದರ ಕುರಿತು ಯಾವುದೇ ಮಾಧ್ಯಮಗಳೂ ವರದಿ ಮಾಡಿಲ್ಲ. ಇವೆಲ್ಲ ನಕಲಿ ಸುದ್ದಿಯಾಗಿವೆ. ಯಾರೂ ಕೂಡ ಇಂತಹ ಪೋಸ್ಟ್‌ಗಳನ್ನು ಶೇರ್ ಮಾಡಬಾರದು ಎಂಬುದಾಗಿ ಪೊಲೀಸರು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ನಾಳೆ ಮೊದಲ ಹಂತದ ಮತದಾನ
ಶುಕ್ರವಾರ (ಏಪ್ರಿಲ್ 19) ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಪ್ರಜಾಪ್ರಭುತ್ವದ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ಆಚರಿಸಲು ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಮತಗಟ್ಟೆಗಳಿಗೆ ಮತಯಂತ್ರಗಳು ಸೇರಿ ಅಗತ್ಯ ಉಪಕರಣಗಳ ರವಾನೆ, ಸಿಬ್ಬಂದಿಯ ರವಾನೆ, ಮತದಾರರಿಗೆ ಸಕಲ ರೀತಿಯ ಸೌಲಭ್ಯ ಒದಗಿಸುವುದು ಸೇರಿ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಇನ್ನು ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಶಾಂತಿಯುತ ಮತದಾನ ಪ್ರಕ್ರಿಯೆಗೆ ಅನುವು ಮಾಡಿಕೊಡುತ್ತಿದೆ.
ಇದನ್ನೂ ಓದಿ: Fact Check: 10 ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟಕ್ಕೆ 200 ಸ್ಥಾನ ಎಂಬ ವರದಿ ನಿಜವೇ? ಇಲ್ಲಿದೆ ಸತ್ಯ!