-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಕ್ಷೇತ್ರಕ್ಕೆ (Fashion News) ನಾನು ಸದಾ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಕ್ಷೇತ್ರದಲ್ಲಿ ನಾನು ನಿರಂತರವಾಗಿ ತೊಡಗಿಸಿಕೊಂಡಿರುವುದು ಖುಷಿಯನ್ನು ನೀಡಿದೆ. ಭಾರತದ ಟಾಪ್ ಮೋಸ್ಟ್ ಫ್ಯಾಷನ್ ದಿಗ್ಗಜರ ಸಾಲಿನಲ್ಲಿ ನಾನಿರುವುದು ನನಗೆ ಹೆಮ್ಮೆಯೆಂದನಿಸುತ್ತದೆ ಎಂದು ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಹೇಳಿಕೊಂಡಿದ್ದಾರೆ.
ಅಂದಹಾಗೆ, ಅವರು ಈ ಕುರಿತಂತೆ ಹೇಳಿರುವುದಕ್ಕೂ ಕಾರಣವಿದೆ. ಅವರಿಗೆ ಫ್ಯಾಷನ್ ಕ್ಷೇತ್ರದಲ್ಲಿನ ಸಾಧನೆಗಾಗಿ ದಿಲ್ಲಿಯಲ್ಲಿ ನಡೆದ ಇಂಡಿಯಾ ಫ್ಯಾಷನ್ ಅವಾರ್ಡ್ ಸಮಾರಂಭದಲ್ಲಿ ಹಾಲ್ ಆಫ್ ಫೇಮ್ ಪ್ರಶಸ್ತಿ ಇತ್ತೀಚೆಗೆ ದೊರೆತಿದೆ. ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಇದನ್ನು ಬಿದ್ದಪ್ಪ ಅವರ ಕೈಗಿತ್ತಿದ್ದಾರೆ. ಈ ಸಂತಸವನ್ನು ಪ್ರಸಾದ್ ಬಿದ್ದಪ್ಪ ಕುಟುಂಬದೊಂದಿಗೆ ಮಾತ್ರವಲ್ಲ, ಫ್ಯಾಷನ್ ಇಂಡಸ್ಟ್ರೀ ಜನರೊಂದಿಗೂ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | Star Winter Fashion | ವಾಷಿಂಗ್ಟನ್ನಲ್ಲಿ ನಟಿ ನೇಹಾ ಶೆಟ್ಟಿಯ ಕ್ಲಾಸಿ ವಿಂಟರ್ ಫ್ಯಾಷನ್ ಝಲಕ್
ಫ್ಯಾಷನ್ ಗುರುವಿಗೆ ಸಂತಸ
ಇದು ಈ ಕ್ಷೇತ್ರದಲ್ಲಿ ದೊರೆತಿರುವ ಮೊದಲ ಪ್ರಶಸ್ತಿಯಲ್ಲದಿದ್ದರೂ, ಪ್ರಸಾದ್ ಬಿದ್ದಪ್ಪ ಅವರಿಗೆ ಮಾತ್ರ ಎಂದಿನಂತೆ ಹೆಮ್ಮೆಯಿದೆ. ಯಾಕೆಂದರೆ, ಇಂಡಿಯನ್ ಫ್ಯಾಷನ್ ಆವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹಿಂದಿನ ಹಾಗೂ ಈಗಿನ ದಿಗ್ಗಜರೊಂದಿಗೆ ಪಡೆದದ್ದು ಸಂತಸ ತಂದಿದೆಯಂತೆ. ಹಾಗೆನ್ನುತ್ತಾರೆ ಪ್ರಸಾದ್ ಬಿದ್ದಪ್ಪ.
ಕರ್ನಾಟಕ ಫ್ಯಾಷನ್ ವೀಕ್ ರೂವಾರಿ
ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಫ್ಯಾಷನ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪ್ರಸಾದ್ ಬಿದ್ದಪ್ಪ, ಕೇವಲ ಮೆಗಾ ಮಾಡೆಲ್ ಇವೆಂಟ್, ಕೊಲೊಂಬೊ ಫ್ಯಾಷನ್‌ನಂತಹ ಸಾವಿರಾರು ಇವೆಂಟ್‌ಗಳಿಗೆ ಮಾತ್ರ ಕಾರ್ಯನಿರ್ವಹಿಸಿಲ್ಲ, ಜತೆಗೆ ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಖಾದಿ ಪರಂಪರೆಗೆ ಉತ್ತೇಜನ ನೀಡಿ ಪ್ರಪಂಚದಾದ್ಯಂತ ಪಸರಿಸಿದ್ದಾರೆ. ಪ್ರತಿವರ್ಷ ಕರ್ನಾಟಕ ಫ್ಯಾಷನ್ ವೀಕ್ ಮೂಲಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಡಿಸೈನರ್‌ಗಳನ್ನು ಪರಿಚಯಿಸುತ್ತಾರೆ. ಹ್ಯಾಂಡ್‌ಲೂಮ್ ಹಾಗೂ ಸ್ಥಳೀಯ ಕಲಾವಿದರನ್ನು ಈ ಮೂಲಕ ಪ್ರೋತ್ಸಾಹಿಸುತ್ತಾರೆ.
ಫ್ಯಾಷನ್ ಕ್ಷೇತ್ರದ ಗುರು
ಇನ್ನು, ಸುಮಾರು ನಾಲ್ಕು ದಶಕಗಳಿಂದ ಫ್ಯಾಷನ್ ಕ್ಷೇತ್ರದಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿರುವ ಪ್ರಸಾದ್ ಬಿದ್ದಪ್ಪ ಅವರದ್ದೇ ಆದ ಫ್ಯಾಷನ್ ಇವೆಂಟ್ ಮ್ಯಾನೇಜ್‌ಮೆಂಟ್ ಇದೆ. ಇದುವರೆಗೂ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಸೇರಿದಂತೆ ಬಾಲಿವುಡ್ ನಟಿಯರು ಕೂಡ ಇವರ ಬಳಿ ಮಾಡೆಲಿಂಗ್ ಆರಂಭಿಸಿ, ಇದೀಗ ಉತ್ತುಂಗಕ್ಕೆ ಏರಿದ್ದಾರೆ. ಸಾವಿರಾರು ಮಾಡೆಲ್‌ಗಳು ಈ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ಕಂಡುಕೊಂಡಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Stars Holiday Fashion | ಹೊಸ ವರ್ಷದ ಆರಂಭದಲ್ಲೆ ಹಾಲಿಡೇ ಫ್ಯಾಷನ್ ಟ್ರೆಂಡಿಯಾಗಿಸಿದ ಬಾಲಿವುಡ್ ತಾರೆಯರು