-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ 6ನೇ ದಿನದ ಬಣ್ಣ ಹಸಿರು ವರ್ಣದಲ್ಲಿ ನೀವೂ ಹಸಿರುಮಯವಾಗಿ ಕಾಣಿಸಿಕೊಳ್ಳಿ. ಅಂದ ಹಾಗೆ, ಈ ವರ್ಣದಲ್ಲೂ ನಾನಾ ಶೇಡ್‌ಗಳಿವೆ. ಸ್ತ್ರೀಯರು ಅವರವರ ಅಭಿರುಚಿಗೆ ತಕ್ಕಂತೆ ಕಲರ್ ಹಾಗೂ ವಿನ್ಯಾಸವನ್ನು ಆಯ್ಕೆ ಮಾಡಿಕೊಂಡು ಒಂದಿಷ್ಟು ಫ್ಯಾಷನ್ ಟಿಪ್ಸ್ ಫಾಲೋ ಮಾಡಿದಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹಸಿರು ವರ್ಣದಲ್ಲಿ ಆಕರ್ಷಕ ಲುಕ್
ಹಸಿರು ವರ್ಣದ ಸೀರೆಯಲ್ಲಿ ಸಿಂಹದ ಮೇಲೆ ಆಸೀನಳಾಗಿರುವ ದುರ್ಗೆಯ ಅವತಾರ ಕಾತ್ಯಾಯನಿ ದೇವಿಯ ಆರಾಧನೆಯ ದಿನವಾದ ಈ ದಿನ ಪರಿಸರ, ಗೆಲುವು ಹಾಗೂ ಸಾಮರಸ್ಯವನ್ನು ಬಿಂಬಿಸುತ್ತದೆ. ಇದಕ್ಕೆ ಪೂರಕ ಎಂಬಂತೆ, ಫ್ಯಾಷನ್‌ಲೋಕವು ನಾನಾ ಬಗೆಯ ಹಸಿರು ಡಿಸೈನರ್‌ವೇರ್ ಹಾಗೂ ಸೀರೆಗಳನ್ನು ಬಿಡುಗಡೆಗೊಳಿಸಿದೆ. ಅಷ್ಟು ಮಾತ್ರವಲ್ಲದೇ, ಸ್ಟೈಲಿಸ್ಟ್ಗಳು ಮಹಿಳೆಯರು ತಮ್ಮ ಬಳಿಯಿರುವ ಹಸಿರು ಸೀರೆಯಲ್ಲೇ ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು ಅಥವಾ ವಾರ್ಡ್ ರೋಬ್‌ನಲ್ಲಿರುವ ಹಸಿರು ಔಟ್‌ಫಿಟ್‌ಗೆ ಹೇಗೆ ಹೊಸ ಲುಕ್ ನೀಡಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.
ಹಸಿರು ಸೀರೆಯ ಹೊಸ ಲುಕ್
ನಿಮ್ಮ ಬಳಿ ರೇಷ್ಮೆಯ ಹಸಿರು ಸೀರೆ ಇದ್ದಲ್ಲಿ ಹೊಸ ಶೈಲಿಯಲ್ಲಿ ಡ್ರೇಪಿಂಗ್ ಮಾಡಿ. ಇಲ್ಲವೇ ಹಳೆಯ ಬ್ಲೌಸನ್ನು ಬದಲಿಸಿ ಹೊಸ ಡಿಸೈನರ್ ಬ್ಲೌಸ್ ಧರಿಸಿ. ಆಗ ಸೀರೆಗೆ ಹೊಸ ಲುಕ್ ದೊರೆಯುವುದು. ಕಳೆದ ಬಾರಿಗಿಂತ ಬೇರೇ ಶೈಲಿಯಲ್ಲಿ ಸೀರೆಯನ್ನು ಉಡಿ. ಜ್ಯುವೆಲರಿಗಳನ್ನು ಅಷ್ಟೇ! ಡಿಫರೆಂಟ್ ಆಗಿ ಇರುವುದನ್ನು ಧರಿಸಿ. ಕಳೆದ ಬಾರಿ ಗೋಲ್ಡ್ ಜ್ಯುವೆಲರಿ ಧರಿಸಿದ್ದಲ್ಲಿ, ಈ ಬಾರಿ ಟೆರ್ರಾಕೋಟಾ ಅಥವಾ ಆಕ್ಸಿಡೈಸ್ಡ್ ಆಭರಣಗಳನ್ನು ಧರಿಸಿ. ಇದು ಹಳೆಯ ಹಸಿರು ಸೀರೆಗೆ ಹೊಸ ಲುಕ್ ನೀಡುತ್ತದೆ. ಪ್ರತಿನಿತ್ಯದ ಹೇರ್‌ಸ್ಟೈಲ್ ಹೊರತಾಗಿ ಹೊಸತನ್ನು ಪ್ರಯೋಗ ಮಾಡಿ. ಹಣೆಗೆ ಅಗಲವಾದ ಬಿಂದಿ ಇಡಿ. ಹೂ ಮುಡಿಯಿರಿ. ಮೇಕಪ್ ಹಿತ ಮಿತವಾಗಿರಲಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಇದನ್ನೂ ಓದಿ: Pets Fashion: ಮುದ್ದು ಶ್ವಾನಗಳ ಸಿಂಗಾರಕ್ಕೆ 3 ಫ್ಯಾಷನ್ ಆಕ್ಸೆಸರೀಸ್!
ಟ್ರೆಂಡ್‌ನಲ್ಲಿರುವ ಹಸಿರು ಬಣ್ಣದ ಡಿಸೈನರ್‌ವೇರ್ಸ್
ಎಮರಾಲ್ಡ್, ಪಾಚಿ ಗ್ರೀನ್, ಗಾಢ ಹಸಿರು, ನಿಯಾನ್ ಹಸಿರು, ಬಾಟಲ್ ಗ್ರೀನ್ ಹೀಗೆ ಆಡುಭಾಷೆಯಲ್ಲೆ ನಾನಾ ಹಸಿರು ಬಣ್ಣದ ಹೆಸರುಗಳನ್ನು ಕಾಣಬಹುದು. ಇವುಗಳಲ್ಲಿ ಇದೀಗ ಎಮರಾಲ್ಡ್ ಗ್ರೀನ್ ಹಾಗೂ ನಿಯಾನ್ ಗ್ರೀನ್ ಅತಿ ಹೆಚ್ಚು ಟ್ರೆಂಡ್‌ನಲ್ಲಿದೆ. ಈಗಾಗಲೇ ಎಲ್ಲೆಲ್ಲಿ ನೋಡಿದರೂ ಈ ಶೇಡ್‌ನ ಗಾಗ್ರ, ಲೆಹೆಂಗಾ, ಶರಾರಾ, ಗಾಗ್ರ, ಚೂಡಿದಾರ್ ಸೆಟ್, ಸೆಲ್ವಾರ್ ಸೆಟ್, ಅನಾರ್ಕಲಿ, ಲಾಂಗ್ ಕುರ್ತಾ, ಲಾಂಗ್ ಸ್ಕರ್ಟ್ ಸೆಟ್, ಸೆಮಿ ಎಥ್ನಿಕ್ ಡಿಸೈನರ್‌ವೇರ್‌ಗಳು ಆವರಿಸಿಕೊಂಡಿವೆ. ಅವರವರ ಆಯ್ಕೆ ತಕ್ಕಂತೆ ಚೂಸ್ ಮಾಡಿ, ಧರಿಸಬಹುದು. ಎಥ್ನಿಕ್‌ವೇರ್‌ಗೆ ಯಾವ ಬಗೆಯ ಹೇರ್‌ಸ್ಟೈಲ್ ಆದರೂ ಓಕೆ ಎನ್ನುತ್ತಾರೆ ಡಿಸೈನರ್ಸ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)