-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲಿಪ್‌ಸ್ಟಿಕ್ ಹಚ್ಚುವುದು ಒಂದು ಕಲೆ ಎನ್ನುತ್ತಾರೆ ಬ್ಯೂಟಿ ಎಕ್ಸ್ಪಟ್ರ್ಸ್. ಲಿಪ್‌ಸ್ಟಿಕ್ ಖರೀದಿಸುವವರೆಲ್ಲಾ, ಸರಿಯಾಗಿ ಹಚ್ಚಿಕೊಳ್ಳಬಲ್ಲರು ಎಂದಲ್ಲ! ತುಟಿ ಮೇಲೆ ಬಣ್ಣ ಹಚ್ಚಿಕೊಂಡವರೆಲ್ಲರೂ ಎಕ್ಸ್ಪರ್ಟ್ಗಳಲ್ಲ! ಇದಕ್ಕೂ ಒಂದಿಷ್ಟೂ ನಿಯಮಗಳಿವೆ. ಅದನ್ನು ಪಾಲಿಸಿ ಹಚ್ಚಿದವರು ಪರ್ಫೆಕ್ಷನಿಸ್ಟ್ ಗಳು ಎನ್ನಬಹುದು. ಸಮೀಕ್ಷೆಯೊಂದರ ಪ್ರಕಾರ, ಒಂದಿಷ್ಟು ಮಾನಿನಿಯರನ್ನು ಹೊರತುಪಡಿಸಿದಲ್ಲಿ, ಬಹುತೇಕರಿಗೆ ಸರಿಯಾಗಿ ಲಿಪ್‌ಸ್ಟಿಕ್ ಹಚ್ಚಲು ಬಾರದು! ಮೆತ್ತುವುದನ್ನೇ ಹಚ್ಚಿಕೊಳ್ಳುವುದು ಎಂದುಕೊಂಡಿದ್ದಾರೆ ಎನ್ನುತ್ತಾರೆ ಅವರು. ಪರ್ಫೆಕ್ಟ್ ಆಗಿ ಹಚ್ಚಲು ಬಯಸುವವರಿಗಾಗಿ ಒಂದಿಷ್ಟು ಟಿಪ್ಸ್ ನೀಡಿದ್ದಾರೆ ಎನ್ನುತ್ತಾರೆ.
ಮೊದಲಿಗೆ ಲಿಪ್‌ಲೈನರ್‌ನಿಂದ ಲೈನ್ ಹಾಕಿ
ಯಾವುದೇ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವ ಮುನ್ನ, ಮೊದಲಿಗೆ ಲಿಪ್‌ಲೈನರ್‌ನಿಂದ ನೀಟಾಗಿ ಲೈನ್ ಹಾಕಿ. ಇದು ಹಚ್ಚುವ ಲಿಪ್‌ಸ್ಟಿಕನ್ನು ಹಚ್ಚುವಾಗ ಆಚೆ ಹೋಗದಂತೆ ನಿರ್ಬಂಧಿಸುತ್ತದೆ. ಸರಿಯಾದ ಶೇಪ್ ಕಾಣುವಂತೆ ಬಿಂಬಿಸುತ್ತದೆ.
ತುಟಿಯ ಬಣ್ಣಕ್ಕೆ ತಕ್ಕಂತೆ ಮ್ಯಾಚ್
ಯಾವುದೋ ಒಂದು ಲಿಪ್‌ಸ್ಟಿಕ್ ಕೊಂಡು ಹಚ್ಚುವುದು ನಿಮ್ಮ ಅಭ್ಯಾಸವಾಗಬಾರದು. ನಿಮ್ಮ ತುಟಿಯ ಬಣ್ಣಕ್ಕೆ ಹಾಗೂ ಮುಖದ ವರ್ಣಕ್ಕೆ ಯಾವ ಬಣ್ಣ ಚೆನ್ನಾಗಿ ಕಾಣಿಸುತ್ತದೆ ಎಂಬುದನ್ನು ಮೊದಲೇ ಟೆಸ್ಟ್ ಮಾಡಿ, ಖರೀದಿಸಿ. ಇಲ್ಲವಾದಲ್ಲಿ ನೀವು ಹಚ್ಚುವ ಬಣ್ಣ ನಿಮ್ಮನ್ನು ಮುಜುಗರಕ್ಕಿಡು ಮಾಡಬಹುದು.
ಇದನ್ನೂ ಓದಿ: CM Siddaramaiah: ಕುಂಕುಮ ನಿರಾಕರಿಸಿದ ಸಿದ್ದರಾಮಯ್ಯಗೆ ಬಿಜೆಪಿ ನಾಯಕರ ತರಾಟೆ
ಲಿಪ್‌ಸ್ಟಿಕ್ ಮೆತ್ತಬೇಡಿ
ಲಿಪ್‌ಸ್ಟಿಕ್ ಹಚ್ಚುವುದು ಒಂದು ಕಲೆ. ಅದನ್ನು ಮೆತ್ತುವುದಲ್ಲ!ಅಥವಾ ಪೇಟಿಂಗ್‌ನಂತೆ ಬಳಿಯುವುದಲ್ಲ! ಹಾಗಾಗಿ ಸಮಯವಿದ್ದಾಗ ಮನೆಯಲ್ಲೆ ಲಿಪ್‌ಸ್ಟಿಕ್ ತೆಳುವಾಗಿ ಹಚ್ಚುವುದನ್ನು ಕಲಿಯಿರಿ. ಮೆತ್ತಬೇಡಿ.
ಹಲ್ಲಿಗೆ ತಾಗದಂತೆ ಲಿಪ್‌ಸ್ಟಿಕ್ ಹಚ್ಚಿ :
ಕೆಲವರು ತುಟಿಗೆ ಹಚ್ಚಿದ ಲಿಪ್‌ಸ್ಟಿಕ್ ಹಲ್ಲಿನ ಮೇಲೆ ಹತ್ತಿರುತ್ತದೆ. ಅದನ್ನು ಗಮನಿಸಿರುವುದೇ ಇಲ್ಲ! ಮಾತನಾಡಲು ಬಾಯಿ ತೆರೆದಾಗ ಅದು ಎದುರಿಗಿದ್ದವರಿಗೆ ಕಾಣಿಸುತ್ತದೆ. ಹಾಗಾಗಿ, ಪ್ರತಿಯೊಬ್ಬರು ಲಿಪ್‌ಸ್ಟಿಕ್ ಹಚ್ಚಿದ ನಂತರ, ಒಮ್ಮೆ ಕನ್ನಡಿಯ ಮುಂದೆ ನಿಂತು ಸರಿಯಾಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಹತ್ತಿದ್ದಲ್ಲಿ ಟಿಶ್ಯೂ ಪೇಪರ್ ಬಳಸಿ ತೆಗೆಯಬೇಕು.
ಲಿಪ್‌ಸ್ಟಿಕ್ ಹಚ್ಚಿದ ನಂತರ
ಲಿಪ್‌ಸ್ಟಿಕ್ ಹಚ್ಚಿದ ನಂತರ ಯದ್ವಾ ತದ್ವಾ ತಿನ್ನಬೇಡಿ! ಮೊದಲೇ ಸೇವಿಸಿ. ಸೇವಿಸುವ ಅಗತ್ಯವಿದ್ದಲ್ಲಿ ಆದಷ್ಟೂ ಸ್ಮಡ್ಜ್ ಪ್ರೂಫ್ ಆಯ್ಕೆ ಮಾಡಿ. ಇಲ್ಲವಾದಲ್ಲಿ ಈ ಲಿಪ್‌ಸ್ಟಿಕ್ ಬಾಯಿಯ ಸುತ್ತಮುತ್ತಲೆಲ್ಲಾ ಹರಡಬಹುದು. ನೋಡಲು ಅಸಹ್ಯವಾಗಿ ಕಾಣಿಸಬಹುದು.
( ಲೇಖಕಿ ಫ್ಯಾಷನ್ ಪತ್ರಕರ್ತೆ)