-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇನ್‌ಸ್ಟಂಟ್ ಫೇಸ್ ಶೀಟ್ ಮಾಸ್ಕ್ಗಳು ಇದೀಗ ಬ್ಯೂಟಿ ಲೋಕದಲ್ಲಿ ಹಂಗಾಮ ಎಬ್ಬಿಸಿವೆ. ಹೌದು. ಮುಖದ ಅಂದವನ್ನು ಕಾಪಾಡುವ ಹಾಗೂ ವೃದ್ಧಿಸುವ ನಾನಾ ಬಗೆಯ ಇನ್‌ಸ್ಟಂಟ್ ಫೇಸ್ ಶೀಟ್ ಮಾಸ್ಕ್‌ಗಳು ಮಹಿಳೆಯರ ಫಟಾಫಟ್ ಬ್ಯೂಟಿ ಆರೈಕೆಗೆ ಸಾಥ್ ನೀಡುತ್ತಿವೆ.
ಏನಿದು ಫೇಸ್ ಶೀಟ್ ಮಾಸ್ಕ್ ?
ಗಂಟೆಗಟ್ಟಲೇ ಬ್ಯೂಟಿ ಪಾರ್ಲರ್ ಹಾಗೂ ಸಲೂನ್‌ನಲ್ಲಿ ಕುಳಿತು ಬ್ಯೂಟಿ ಟ್ರೀಟ್‌ಮೆಂಟ್ ಅಥವಾ ಆರೈಕೆ ತೆಗೆದುಕೊಳ್ಳಲು ಸಾಧ್ಯವಿಲ್ಲದವರಿಗೆಂದೇ ಇನ್‌ಸ್ಟಂಟ್ ಫೇಸ್ ಶೀಟ್ ಮಾಸ್ಕ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ನೋಡಲು ಒದ್ದೆಯಾದ ಟಿಶ್ಯೂ ಪೇಪರ್‌ನಂತಿರುವ ಈ ರೆಡಿಮೇಡ್ ಬ್ಯೂಟಿ ಟ್ರೀಟ್‌ಮೆಂಟ್ ಮಾಸ್ಕ್‌ಗಳು ಒಂದೊಂದು ಬಗೆಯ ಚರ್ಮಕ್ಕೂ ಹೊಂದುವಂತಹ ಆರೋಗ್ಯಕರ ಅಂಶಗಳನ್ನು ಹೊಂದಿವೆ. ಕವರ್ ಮೇಲೆಯೇ ವಿವರಗಳೊಂದಿಗೆ ಯಾರೆಲ್ಲಾ ಬಳಸಬಹುದು, ಎಂತಹ ಸ್ಕಿನ್‌ನವರು ಬಳಸಬಹುದು ? ಯಾವ್ಯಾವ ಸಮಯಕ್ಕೆ ಉಪಯೋಗಿಸಬಹುದು ಎಂಬುದರ ಸವಿವರ ಹೊಂದಿರುತ್ತವೆ. ಕೆಲವು ಬ್ರಾಂಡ್‌ಗಳಲ್ಲಿ ಒಂದು ಶೀಟ್ ಮಾಸ್ಕ್ ಇದ್ದರೇ, ಇನ್ನು ಕೆಲವಲ್ಲಿ ಒಂದಕ್ಕಿಂತ ಹೆಚ್ಚು ಇರುತ್ತವೆ. ಹಾಗೆಂದು ಇವು ಕಡಿಮೆ ಬೆಲೆಯೇನಲ್ಲ! ದುಬಾರಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ
ನಮ್ಮ ರಾಷ್ಟ್ರದಲ್ಲಿ ಮೊದ ಮೊದಲು ಈ ಫೇಸ್ ಸ್ಕಿನ್ ಶೀಟ್‌ಗಳು ಅಷ್ಟಾಗಿ ಬೇಡಿಕೆ ಪಡೆದುಕೊಂಡಿರಲಿಲ್ಲ. ಬರಬರುತ್ತ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರಿಂದಾಗಿ ಇದು ಪ್ರಚಲಿತಕ್ಕೆ ಬಂತು. ಇದೀಗ ಎಲ್ಲಾ ಕ್ಷೇತ್ರದ ಉದ್ಯೋಗಸ್ಥ ಮಹಿಳೆಯರು ಹಾಗೂ ಯುವತಿಯರು ಇನ್‌ಸ್ಟಂಟ್ ಬ್ಯೂಟಿ ಟ್ರೀಟ್‌ಮೆಂಟ್ ಹಾಗೂ ಆರೈಕೆಗಾಗಿ ಇವನ್ನು ಬಳಸಲಾರಂಭಿಸಿದ್ದಾರೆ. ಕೆಲವು ಬ್ರ್ಯಾಂಡ್‌ಗಳಲ್ಲಿ ಒಂದು ಮಾಸ್ಕ್‌ಗೆ 50 ರೂ.ಗಳಿದ್ದರೇ, ಇನ್ನು ಕೆಲವು ಬ್ರ್ಯಾಂಡ್‌ಗಳಲ್ಲಿ 300-500 ರೂ. ಗಳವರೆಗಿನ ಮಾಸ್ಕ್‌ಗಳು ಲಭ್ಯ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್. ಅವರ ಪ್ರಕಾರ, ಇಂದಿನ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಕಾರ್ಯನಿರ್ವಹಿಸುವ ಪ್ರತಿ ಮಹಿಳೆಯು ಕಡಿಮೆ ಸಮಯದಲ್ಲಿ ಬ್ಯೂಟಿ ಆರೈಕೆ ಬಯಸುತ್ತಾರೆ. ಇದು ಇನ್‌ಸ್ಟಂಟ್ ಫೇಸ್ ಮಾಸ್ಕ್ ಶೀಟ್ ಬೇಡಿಕೆ ಹೆಚ್ಚಾಗಲು ಕಾರಣ ಎನ್ನುತ್ತಾರೆ.
ಇದನ್ನೂ ಓದಿ: Kids Dungrees Fashion: ಮುದ್ದು ಮಕ್ಕಳ ಫ್ಯಾಷನ್‌ನಲ್ಲಿ 3 ಶೈಲಿಯ ಕ್ಯೂಟ್ ಡಂಗ್ರೀಸ್
ಇನ್‌ಸ್ಟಂಟ್ ಫೇಸ್ ಮಾಸ್ಕ್ ಶೀಟ್ ಆಯ್ಕೆ ಹೇಗೆ?
- ನಿಮ್ಮ ಸ್ಕಿನ್ಟೋನ್ಗೆ ತಕ್ಕಂತೆ ಹೊಂದುವುದನ್ನು ಆರಿಸಿಕೊಳ್ಳಿ.
- ಪ್ರತಿ ಮಾಸ್ಕ್ ಕವರ್ ಮೇಲೆ ಅರ್ಥವಾಗುವಂತೆ ವಿವರ ನೀಡಲಾಗಿರುತ್ತದೆ . ಗಮನಿಸಿ.
- ಬೀದಿ ಬದಿಯಲ್ಲಿ ಯಾವುದೇ ಕಾರಣಕ್ಕೂ ಇವನ್ನು ಖರೀದಿಸಬೇಡಿ. ಕಳಪೆ ಗುಣಮಟ್ಟದ್ದಾಗಿರುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)