ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದ ಫ್ಯಾಷನ್ನಲ್ಲಿ ನಾನಾ ವಿನ್ಯಾಸದ ಕಲರ್ಫುಲ್ ಲೈಟ್ವೈಟ್ ಉಲ್ಲನ್ ಟೋಪಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವು ಕಿವಿಯನ್ನು ಬೆಚ್ಚಗಿಡುವುದು ಮಾತ್ರವಲ್ಲದೆ ಸ್ಟೈಲಿಶ್ ಆಗಿಯೂ ಬಿಂಬಿಸುತ್ತವೆ.
ವೆರೈಟಿ ಉಲ್ಲನ್ ಟೋಪಿಗಳು
ಮಕ್ಕಳು, ಟೀನೇಜ್ ಹುಡುಗ-ಹುಡುಗಿಯರು, ಮಹಿಳೆಯರು, ಪುರುಷರು, ಹಿರಿಯರು ಹೀಗೆ ಎಲ್ಲರಿಗೂ ಹೊಂದುವಂತಹ ವಿನ್ಯಾಸ ಹಾಗೂ ವೈಬ್ರೆಂಟ್ ಕಲರ್ನಲ್ಲಿ ಉಲ್ಲನ್ ಟೋಪಿಗಳು ಎಂಟ್ರಿ ನೀಡಿದ್ದು, ಚಳಿಗಾಲದ ಲೇಯರ್ ಲುಕ್ಗೆ ಸಾಥ್ ನೀಡುತ್ತಿವೆ.
ಮಕ್ಕಳಿಗೆ ಎಂದಿನಂತೆ, ವೈಬ್ರೆಂಟ್ ಡಿಸೈನ್ನ ಮಂಕಿ ಕ್ಯಾಪ್ ಮಾತ್ರವಲ್ಲ, ಸ್ಕಾರ್ಫ್ ಶೈಲಿಯವು, ಕಂಪ್ಲೀಟ್ ಕಿವಿ ಮುಚ್ಚುವ ಟೈಯಿಂಗ್ ಟೋಪಿಗಳು ಕಾರ್ಟೂನ್ ಕ್ಯಾರೆಕ್ಟರ್ ಚಿತ್ತಾರಗಳೊಂದಿಗೆ ಹಾಗೂ ಡಿಸೈನ್ ಪ್ರಿಂಟ್ನೊಂದಿಗೆ ಇರುವಂತವು ಆಗಮಿಸಿವೆ. ಇನ್ನು ಟೀನೇಜ್ ಹುಡುಗ-ಹುಡುಗಿಯರ ಫಂಕಿ ಸ್ಟೈಲ್ಗೆ ಸೂಟ್ ಆಗುವಂತೆ ಬೀನ್, ಫ್ರೆಂಚ್ ಸ್ಟೈಲ್, ಸ್ಕಲ್, ಟರ್ಬನ್, ಪೋಮ್ ಪೋಮ್, ಮಫ್ಲರ್ ಕ್ಯಾಪ್ ಸೇರಿದಂತೆ ನಾನಾ ಬಗೆಯವು ಯೂನಿಸೆಕ್ಸ್ ಡಿಸೈನ್ನಲ್ಲಿ ಬಿಡುಗಡೆಗೊಂಡಿವೆ.
ಇನ್ನು ಹಿರಿಯರಿಗೆ ಸೂಟ್ ಆಗುವ ಪೋಮ್ ಪೋಮ್ ಉಲ್ಲನ್ ಟೋಪಿಗಳು ಹೊಸ ಕಲರ್ನಲ್ಲಿ ಕಾಣಿಸಿಕೊಂಡಿವೆ. ಆದರೆ, ಹೆಚ್ಚೇನೂ ಬದಲಾವಣೆಯಾಗಿಲ್ಲ. ಮಹಿಳೆಯರ ವಿಷಯಕ್ಕೆ ಬಂದಲ್ಲಿ, ಎಥ್ನಿಕ್ ಸ್ಟೈಲ್ಗೆ ಉಲ್ಲನ್ ಟೋಪಿ ಧರಿಸದ ಕಾರಣ ಮಫ್ಲರ್ ಶೈಲಿಯವು ಮಾತ್ರ ಚಾಲ್ತಿಯಲ್ಲಿವೆ. ಪುರುಷರಿಗೆ ಎಂದಿನಂತೆ, ಲೈಟ್ವೈಟ್ನವು ಬಿಡುಗಡೆಗೊಂಡಿವೆ. ಒಟ್ಟಿನಲ್ಲಿ ಈ ವಿಂಟರ್ ಸೀಸನ್ನಲ್ಲಿ ಉಲ್ಲನ್ನವು ಕಿವಿಯನ್ನು ಬೆಚ್ಚಗಿಡುವುದರಿಂದ ಹೆಚ್ಚು ಟ್ರೆಂಡಿಯಾಗುತ್ತವೆ ಎಂದು ಹೇಳುತ್ತಾರೆ ಸ್ಟೈಲಿಸ್ಟ್ ಲೋಕಿ. ಅವರ ಪ್ರಕಾರ, ಸೀಸನ್ ಮುಗಿದ ನಂತರವೂ ಸೂಕ್ತ ನಿರ್ವಹಣೆ ಮಾಡಿದಲ್ಲಿ ಉಲ್ಲನ್ ಟೋಪಿಗಳನ್ನು ಮರು ಬಳಕೆ ಮಾಡಬಹುದು.
ಪ್ರವಾಸದಲ್ಲೂ ಉಲ್ಲನ್ ಟೋಪಿ ಬಳಕೆ
ಪ್ರವಾಸ ಅಥವಾ ಪ್ರಯಾಣಿಸುವಾಗ ಆದಷ್ಟೂ ಉಲ್ಲನ್ ಟೋಪಿ ಬಳಸುವುದು ಉತ್ತಮ. ಇವು ಕಿವಿಯನ್ನು ಬೆಚ್ಚಗಿಡುತ್ತವೆ. ಕಿವಿ ನೋವು, ತಲೆ ನೋವು ಬಾರದಂತೆ ತಡೆಯುತ್ತವೆ. ಟ್ರಾವೆಲಿಂಗ್ ಸಮಯದಲ್ಲಿ ಸ್ಟೈಲಿಶ್ ಆಗಿಯೂ ಇವನ್ನು ಧರಿಸಬಹುದು. ಫೋಟೋಗಳಲ್ಲೂ ನೋಡಲು ಆಕರ್ಷಕವಾಗಿ ಕಾಣುತ್ತವೆ ಎನ್ನುತ್ತಾರೆ ಡಿಸೈನರ್ ರಾಕಿ.
ಉಲ್ಲನ್ ಟೋಪಿ ಪ್ರಿಯರಿಗೆ ಗೊತ್ತಿರಲಿ
ಯೂನಿಸೆಕ್ಸ್ ಉಲ್ಲನ್ ಟೋಪಿಗಳನ್ನು ಎಲ್ಲರೂ ಬಳಸಬಹುದು.
ಉಲ್ಲನ್ ಟೋಪಿಗಳನ್ನು ಹೆಚ್ಚು ಉಜ್ಜಿ ವಾಶ್ ಮಾಡಬಾರದು.
ಈ ಬಾರಿ ಲೈಟ್ವೈಟ್ ಉಲ್ಲನ್ ಟೋಪಿಗಳು ಟ್ರೆಂಡಿಯಾಗಿವೆ.
ಹುಡುಗಿಯರು ಫ್ರೀ ಹೇರ್ಸ್ಟೈಲ್ಗೆ ಸ್ಟೈಲಿಶ್ ಆಗಿ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star travel Fashion | ಮಿಕ್ಸ್ ಮ್ಯಾಚ್ ವಿಂಟರ್ ಲುಕ್