ಬೆಂಗಳೂರು: ಕಳೆದ ಒಂದು ವಾರದಿಂದ ಸತತವಾಗಿ ಏರುಗತಿಯಲ್ಲಿದ್ದ ಬಂಗಾರದ ದರದಲ್ಲಿ 270 ರೂ. ಇಳಿಕೆ ಆಗಿದೆ. ಬೆಳ್ಳಿಯ ದರದಲ್ಲೂ ಪ್ರತಿ ಕೆಜಿಗೆ 500 ರೂ. ಇಳಿಕೆಯಾಗಿದೆ. ಹೀಗಾಗಿ ಮತ್ತಷ್ಟು ಇಳಿಕೆಯಾಗಲಿದೆಯೇ ಎಂಬ ಕುತೂಹಲ ಮೂಡಿದೆ.
ಬೆಂಗಳೂರಿನಲ್ಲಿ 10 ಗ್ರಾಮ್‌ನ 24 ಕ್ಯಾರಟ್ ಚಿನ್ನದ ದರ 51,980 ರೂ.ಗೆ ಇಳಿದಿದೆ. ಆಭರಣ ಚಿನ್ನ 10 ಗ್ರಾಮ್ ಗೆ 47,650 ರೂ.ಗೆ ತಗ್ಗಿದೆ. ಬೆಳ್ಳಿಯ ದರ ಕೆ.ಜಿಗೆ 66,000 ರೂ.ಗೆ ಇಳಿದಿದೆ. ಪ್ಲಾಟಿನಮ್ ದರ ಕೂಡ 10 ಗ್ರಾಮ್‌ಗೆ 23,530 ರೂ.ಗಳಾಗಿದ್ದು, 210 ರೂ. ತಗ್ಗಿದೆ. ಆದ್ದರಿಂದ ಮೂರೂ ಬೆಲೆ ಬಾಳುವ ಲೋಹಗಳ ದರದಲ್ಲಿ ಇಳಿಕೆ ಕಂಡು ಬಂದಿದೆ.
ಭಾರತದಲ್ಲಿ ಬಂಗಾರದ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳನ್ನು ಅವಲಂಬಿಸಿ ಬದಲಾಗುತ್ತಿರುತ್ತವೆ. ಪ್ರತಿ ಔನ್ಸ್ ಚಿನ್ನದ ದರ ಅಲ್ಲಿ 1,838 ಡಾಲರ್ ಗೆ ಇಳಿದಿದೆ.
ಫೋನ್ ಪೇನಲ್ಲಿ ಚಿನ್ನದ ಹೂಡಿಕೆ
ಫ್ಲಿಪ್ ಕಾರ್ಟ್ ಒಡೆತನದ ಫೋನ್‌ಪೇನಲ್ಲಿ ಇದೀಗ 24 ಕ್ಯಾರಟ್ ಚಿನ್ನದ ಮೇಲೆ ಸಿಪ್ (ಎಸ್‌ಐಪಿ) ಮೂಲಕ ಹೂಡಿಕೆ ಮಾಡಬಹುದು. ಬಳಕೆದಾರರು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಇನ್ವೆಸ್ಟ್ ಮಾಡಬಹುದು. ಚಿನ್ನವನ್ನು ಯಾವಾಗ ಬೇಕಾದರೂ ಮಾರಾಟಕ್ಕೂ ಇದರಲ್ಲಿ ಅವಕಾಶ ಇದೆ. ಹಾಗೂ ಗಳಿಸಿದ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಅಥವಾ ಹೂಡಿಕೆಯನ್ನು ಭೌತಿಕ ಚಿನ್ನವಾಗಿ ಬೇಕಾದರೂ ಪರಿವರ್ತಿಸಿ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.