ಬೆಂಗಳೂರು: ಬಂಗಾರದ ದರದಲ್ಲಿ ಸೋಮವಾರ 110 ರೂ. ಇಳಿಕೆಯಾಗಿದ್ದು, 24 ಕ್ಯಾರಟ್‌ನ 10 ಗ್ರಾಮ್ ಚಿನ್ನದ ದರ 57,920 ರೂ.ಗೆ (Gold rate) ತಗ್ಗಿದೆ. 22 ಕ್ಯಾರಟ್ ಅಥವಾ ಆಭರಣ ಚಿನ್ನದ ದರದಲ್ಲಿ 100 ರೂ. ತಗ್ಗಿದ್ದು, 53,100 ರೂ.ಗೆ ಇಳಿಕೆಯಾಗಿದೆ. ಬೆಳ್ಳಿಯ ಪ್ರತಿ ಕೆ.ಜಿ ದರದಲ್ಲಿ 500 ರೂ. ಏರಿಕೆಯಾಗಿದ್ದು 72,500 ರೂ.ಗೆ ವೃದ್ಧಿಸಿದೆ. ಕಳೆದ ಕೆಲ ದಿನಗಳಿಂದ ಸತತ ಏರಿಕೆಯನ್ನು ಚಿನ್ನದ ದರ ದಾಖಲಿಸಿತ್ತು.
62,000 ರೂ.ಗೆ ಏರಿಕೆ ಸಾಧ್ಯತೆ:
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1950 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.