ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು (7th Pay Commission) ಮಾರ್ಚ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿತ್ತು. ವರದಿ ಸ್ವೀಕರಿಸಿದ ನಂತರ ಅದರಲ್ಲಿರುವ ಅಂಶಗಳನ್ನು ಪರಿಶೀಲಿಸಿ, ಬಳಿಕ ವೇತನ ಹೆಚ್ಚಳದ ಸಂಬಂಧಿತ ಶಿಫಾರಸು ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು. ಇದೀಗ 7ನೇ ವೇತನ ಆಯೋಗ ಶಿಫಾರಸಿನಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಆಗಬಹುದಾದ ವೇತನ ರಚನೆ ಮತ್ತು ವೇತನ ವ್ಯತ್ಯಾಸದ ಮಾಹಿತಿ ಲಭ್ಯವಾಗಿದ್ದು, ಯಾರಿಗೆ ಎಷ್ಟು ವೇತನ ಹೆಚ್ಚಳವಾಗಲಿದೆ (Salary Hike) ಎಂಬ ಮಾಹಿತಿ ಇಲ್ಲಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗವು ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿತ್ತು. ಈ ಮೊದಲು ನೌಕರರಿಗೆ ಶೇ.40ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದಲ್ಲಿ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದರು. ಆದರೆ, ವರದಿಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ. 27ರಷ್ಟು ಹೆಚ್ಚಿಸಲು ಶಿಫಾರಸು ಮಾಡಲಾಗಿತ್ತು. ಇದರ ಜತೆಗೆ ಮೂಲ ವೇತನವನ್ನು (Basic salary) 27,000 ರೂ.ಗಳಿಗೆ ಹೆಚ್ಚಿಸುವಂತೆಯೂ ಶಿಫಾರಸು ಮಾಡಲಾಗಿತ್ತು.
ಎ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಿ ಮತ್ತು ಡಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು ಮೂಲ ವೇತನ 17,000 ರೂ. ಇದ್ದರೆ, ತುಟ್ಟಿಭತ್ಯೆ ಶೇ. 31 (5,270 ರೂ.) ಹಾಗೂ ಶೇ.27.50 (4,675 ರೂ. ) ಫಿಟ್ಮೆಂಟ್ ಸೇರಿ ಒಟ್ಟು 26,945 ಸಿಗುತ್ತಿತ್ತು. ಇನ್ನು 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27,000 ಇದ್ದರೆ, ಅಂದಾಜು ತುಟ್ಟಿ ಭತ್ಯೆ ಶೇ.8.5 (2295 ರೂ), ಮನೆ ಬಾಡಿಗೆ ಭತ್ಯೆ ಶೇ.20 (5,400 ರೂ.), ವೈದ್ಯಕೀಯ 500, ನಗರ ಪರಿಹಾರ ಭತ್ಯೆ (ಸಿಸಿಎ) 750 ರೂ. ಸೇರಿ ಒಟ್ಟು 35,945 (01-01-2024ಕ್ಕೆ) ರೂ. ಸಿಗಲಿದೆ. 6ನೇ ವೇತನ ಆಯೋಗದಲ್ಲಾದರೆ ಒಟ್ಟು 29,005 ರೂ. ಸಿಗುತ್ತಿತ್ತು. ಪರಿಷ್ಕೃತ ವೇತನದಲ್ಲಿ 6940 ರೂ. ಹೆಚ್ಚಳವಾಗಲಿದೆ.
ಅದೇ ರೀತಿ ಎ ವಲಯದಲ್ಲಿ ಕಾರ್ಯ ನಿರ್ವಹಿಸುವ ಎ ಮತ್ತು ಬಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು 17,000 ರೂ. ವೇತನ ಇದ್ದರೆ, ಶೇ. 31 ತುಟ್ಟಿ ಭತ್ಯೆ (5270 ರೂ.), ಫಿಟ್ಮೆಂಟ್ ಶೇ.27.50 (4675 ರೂ.) ಸೇರಿ ಒಟ್ಟು 26945 ರೂ ವೇತನ ಸಿಗುತ್ತಿತ್ತು. ಆದರೆ, 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27000 ಇದ್ದರೆ, ತುಟ್ಟಿ ಭತ್ಯೆ ಶೇ.8.5 (2298 ರೂ.), ಮನೆ ಬಾಡಿಗೆ ಭತ್ಯೆ ಶೇ.20 (5400 ರೂ.), ನಗರ ಪರಿಹಾರ ಭತ್ಯೆ(ಸಿಸಿಎ) 900 ಸೇರಿ ಒಟ್ಟು 35,595 ವೇತನ ಸಿಗಲಿದೆ. ಇದು 6ನೇ ವೇತನ ಆಯೋಗದ ಅವಧಿಯಲ್ಲಿ 27,545 ರೂ. ಆಗಿದೆ. ಪರಿಷ್ಕೃತ ವೇತನದಲ್ಲಿ 8,050 ರೂ. ಹೆಚ್ಚಳವಾಗಲಿದೆ.
ವೇತನ ರಚನೆ ಮತ್ತು ವ್ಯತ್ಯಾಸದ ಪಟ್ಟಿ ಇಲ್ಲಿದೆ
ಇದನ್ನೂ ಓದಿ | 7th Pay Commission: 7ನೇ ವೇತನ ಆಯೋಗದ ವರದಿ ಸ್ವೀಕಾರ; ಸಿಎಂಗೆ ರಾಜ್ಯ ಸರ್ಕಾರಿ ನೌಕರರ ಸಂಘ ಅಭಿನಂದನೆ