Site icon Vistara News

7th Pay Commission | 7ನೇ ವೇತನ ಆಯೋಗ ರಚನೆ; ಶಿಫಾರಸನ್ನು ನಾವೇ ಜಾರಿಗೆ ತರುತ್ತೇವೆ ಎಂದ ಸಿಎಂ

7th Pay Commission

ಬೆಂಗಳೂರು: ಎಲ್ಲ ಸರ್ಕಾರಿ ನೌಕರರಿಗೆ ನ್ಯಾಯಸಮ್ಮತವಾದ ವೇತನ ದೊರೆಯಬೇಕೆಂಬ ಒದ್ದೇಶದಿಂದ ಆರನೇ ವೇತನ ಆಯೋಗದ ಅವಧಿ ಮುಗಿಯುತ್ತಿದ್ದಂತೆಯೇ ಏಳನೇ ವೇತನ ಆಯೋಗವನ್ನು (7th Pay Commission) ರಚಿಸಲಾಗಿದೆ. ಇದಕ್ಕೆ ಪ್ರತಿಯಾಗಿ, ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ನೌಕರರು ಪ್ರತಿನಿತ್ಯ ಒಂದು ಗಂಟೆ ಹೆಚ್ಚು ಕೆಲಸ ಮಾಡಬೇಕೆಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಸರ್ಕಾರಿ ನೌಕರರ ವೇತನ ಪರಿಸಷ್ಕರಣೆಗೆ 7ನೇ ವೇತನ ಆಯೋಗ ರಚನೆ ಮಾಡಿರುವುದರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, “ನಿಮಗೆ ಎಲ್ಲ ರೀತಿಯ ಸೌಕರ್ಯವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ನೀವು ನನಗಾಗಿ ಪ್ರತಿದಿನ ಒಂದು ತಾಸು ಜಾಸ್ತಿ ಕೆಲಸ ಮಾಡಬೇಕು. ಈಗ ಮಾಡುತ್ತಿರುವ ಕೆಲಸದ ಜತೆಗೆ ಒಂದು ತಾಸು ಹೆಚ್ಚು ಹೊತ್ತು ಕರ್ತವ್ಯ ಮಾಡಿ, ಇದರಿಂದ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ನೀವೇ ನೋಡಿʼʼ ಎಂದು ಹೇಳಿದರು.

ಪ್ರಮಾಣಿಕತೆ, ನಿಷ್ಠೆ ಮತ್ತು ಕರ್ತವ್ಯ ಪ್ರಜ್ಞೆಯಿಂದ ನೀವು ಕೆಲಸ ಮಾಡಿದರೆ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ವಿವರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಾವು ನೀವು ಸೇರಿ ಈ ನಾಡು ಕಟ್ಟೋಣ. ಈ ನಾಡು ಸಮೃದ್ಧವಾಗಿದ್ದರೆ, ಶಕ್ತಿಶಾಲಿಯಾಗಿದ್ದರೆ, ಆರ್ಥಿಕತೆಯಿಂದ ಬಲಿಷ್ಠವಾಗಿದ್ದರೆ ನಾವೆಲ್ಲರೂ ಚೆನ್ನಾಗಿರಬಹುದು. ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ವಿವರಿಸಿದರು.

7th Pay Commission

ಸರ್ಕಾರದ ಕೆಲಸ ಮಾಡುವಾಗ ಇದರಿಂದ ಬಡವನಿಗೆ, ದೀನ ದಲಿತರಿಗೆ, ತುಳಿತಕ್ಕೊಳಗಾದವರಿಗೆ, ಸಾಮಾನ್ಯ ಜನರಿಗೆ, ಮಹಿಳೆಯರಿಗೆ, ಯುವಕರಿಗೆ ಏನು ಅನುಕೂಲವಾಗುತ್ತದೆ ಎಂದು ನೋಡಿ. ಅನುಕೂಲವಾಗುತ್ತದೆ ಎಂದರೆ ಯಾರಿಗೂ ಹೆದರದೆ ಆ ಕೆಲಸವನ್ನು ಧೈರ್ಯವಾಗಿ ಮಾಡಿ. ಇವರೆಲ್ಲರ ಅಭಿವೃದ್ಧಿಯಿಂದ ನಾಡು ಸಮೃದ್ಧಿಯಾಗುತ್ತದೆ. ನಾಡು ಸುಖ ಶಾಂತಿಯಿಂದ ಕೂಡಿರುತ್ತದೆ. ಅದೇ ನನ್ನ ಕನಸು ಕೂಡ. ನವ ಕರ್ನಾಟಕ ದೊಂದಿಗೆ ನಾವೆಲ್ಲರೂ ಸೇರಿ ನವ ಭಾರತ ನಿರ್ಮಾಣ ಮಾಡೋಣ ಎಂದು ಮುಖ್ಯಮಂತ್ರಿ ಹೇಳಿದರು.

ಭಾರತ 2030ರ ವೇಳೆಗೆ ಐದು ಟ್ರಿಲಿಯನ್‌ ಆರ್ಥಿಕತೆಯ ರಾಷ್ಟ್ರವಾಗಬೇಕೆಂಬುದು ನಮ್ಮ ಪ್ರಧಾನಿಯ ಕನಸು. ಇದು ಈಡೇರಬೇಕಾದರೆ ಕರ್ನಾಟಕ ಒಂದು ಟ್ರಿಲಿಯನ್‌ ಆರ್ಥಿಕತೆಯ ರಾಜ್ಯವಾಗಬೇಕು. ಇದನ್ನು ಸಾಧಿಸಲು ನಾವೆಲ್ಲರೂ ವೇಗವಾಗಿ ಕೆಲಸ ಮಾಡಬೇಕು. ರಾಜ್ಯದಲ್ಲಿ ಗುಣಮಟ್ಟದ ಕೆಲಸ ಆಗಬೇಕು. ನಾವು ಮತ್ತು ನೀವು ಒಗ್ಗಟ್ಟಾಗಿ ಕೆಲಸ ಮಾಡಿದರೆ ಇಲ್ಲಿ ಯಾವುದಕ್ಕೂ ಬರ ಬರುವುದಿಲ್ಲ. ರಾಜ್ಯ ಶ್ರೀಮಂತರ ನಾಡಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರಿಗೆ ಹೇಳಿದರು.

ವರ್ಷದಿಂದ ವರ್ಷಕ್ಕೆ ಹಣದುಬ್ಬರ ಹೆಚ್ಚಾಗುತ್ತಿದೆ. ಸರ್ಕಾರಿ ನೌಕರರಾಗಿ ಸೇವೆಗೆ ಸೇರಿದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ವ್ಯತ್ಯಾಸ ವಿರುತ್ತದೆ. ಸಮಯ ಮತ್ತು ಹಣ ಎರಡೂ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಸಂಪಾದನೆಯಾದರೆ ಬದುಕಿಗೆ ಪ್ರೇರಣೆ. ಅದಕ್ಕಾಗಿ ಆಯೋಗ ರಚಿಸುವ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಕೂಡ ಇದಕ್ಕೆ ಒತ್ತಾಸೆಯಾಗಿದ್ದರು. ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರೂ ಒತ್ತಾಯ ಮಾಡಿದ್ದರು ಎಂದು ಸಿಎಂ ಹೇಳಿದರು.

ಸಿ.ಎಸ್. ಷಡಕ್ಷರಿ ಉಡ ಇದ್ದಂಗೆ!
ಸರ್ಕಾರಿ ನೌಕರರಿಗೆ ನ್ಯಾಯಸಮ್ಮತವಾದ ವೇತನ ದೊರೆಯಬೇಕು. ಹೀಗಾಗಿಯೇ ಸರಿಯಾಗಿ ಪರಿಷ್ಕರಣೆ ಮಾಡುವ ಸಾಮರ್ಥ್ಯವಿರುವ ಅಧಿಕಾರಿಯನ್ನು ಆಯೋಗದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಕಳೆದ ಎಂಟೆತ್ತು ದಿನಗಳಿಂದ ಸೂಕ್ತ ವ್ಯಕ್ತಿಗಾಗಿ ಸರ್ಕಾರ ಹುಡುಕಾಟ ನಡೆಸಿತ್ತು. ಇದರಿಂದ ಆಯೋಗದ ಘೋಷಣೆ ಸ್ವಲ್ಪ ತಡವಾಯಿತು. ಆದರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಉಡ ಇದ್ದಂಗೆ ಆಯೋಗದ ಘೋಷಣೆ ಮಾಡುವವರೆಗೂ ಬಿಡಲೇ ಇಲ್ಲ. ಉಡ ಯಾವತ್ತೂ ಹಿಡಿದ ಪಟ್ಟು ಬಿಡುವುದಿಲ್ಲ. ಇವರೂ ಹಾಗೆಯೇ, ಬುಧವಾರ ನಾನು ದಾವಣಗೆರೆ ಪ್ರವಾಸದಲ್ಲಿದ್ದರೂ, ಅಲ್ಲಿಗೆ ಬಂದು ನನ್ನ ಮೇಲೆ ಒತ್ತಡ ಹೇರಿ ಈ ಘೋಷಣೆಯಾಗುವಂತೆ ಮಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಈಗ ಆಯೋಗದ ಅಧ್ಯಕ್ಷರಾಗಿರುವ ಕೆ. ಸುಧಾಕರ್‌ ರಾವ್‌ ಅತ್ಯಂತ ಪ್ರಮಾಣಿಕ, ನಿಷ್ಠ, ಧಕ್ಷತೆಯಿಂದ ಕೆಲಸ ಮಾಡುವ ಅಧಿಕಾರಿ. ಇವರು ಯಾರ ಪ್ರಭಾವಕ್ಕೂ ಒಳಗಾಗದೆ ಈ ಹಿಂದೆ ಕೆಲಸ ಮಾಡಿದ್ದಾರೆ. ಶುದ್ಧ ಅಂತಕರಣದ ಇವರು ನ್ಯಾಯಸಮ್ಮತವಾದ ಶಿಫಾರಸು ಮಾಡಲಿದ್ದಾರೆ ಎಂದು ಹೇಳಿದ ಸಿಎಂ, ಅವರಿಗೆ ನಿಮ್ಮೆಲ್ಲರ ಸಹಕಾರ ಬೇಕು. ನೀವು ಎಷ್ಟು ಬೇಗ ಸಹಕಾರ ಕೊಡಿತ್ತೀರೋ ಅಷ್ಟು ಬೇಗ ವರದಿ ಬರಲಿದೆ. ಶಿಫಾರಿಸಿನ ಜಾರಿಯ ಕುರಿತು ಚಿಂತೆ ಬೇಡ, ಮುಂದಿನ ಸರ್ಕಾರ ನಮ್ಮದೇ ಬರುತ್ತದೆ. ಇದರ ಅನುಷ್ಠಾನವನ್ನು ನಾವೇ ಮಾಡುತ್ತೇವೆ ಎಂದು ಘೋಷಿಸಿದರು.

ಸೇವೆ ಸ್ಮರಿಸಿದ ಸಿಎಂ
ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಆರೋಗ್ಯ, ಪೊಲೀಸ್, ಗ್ರಾಮೀಣಾಭಿವೃದ್ಧಿ, ಕಂದಾಯ ಇಲಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಕಂದಾಯ, ಲೋಕೋಪಯೋಗಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ಬಹುತೇಕ ಎಲ್ಲಾ ಇಲಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ನಾನು ಮುಖ್ಯ ಮಂತ್ರಿಯಾದ ಸಂದರ್ಭದಲ್ಲಿ ಐದು ಸಾವಿರ ಕೋಟಿ ಆದಾಯ ಸಂಗ್ರಹ ಕೊರತೆ ಇತ್ತು. ಇದನ್ನು ಭರ್ತಿ ಮಾಡುವಂತೆ ಸೂಚಿಸಿದಾಗ ತೆರಿಗೆ ಇಲಾಖೆ ಅಧಿಕಾರಿಗಳು ಇದಕ್ಕೆ ಸ್ಪಂದಿಸಿ ಆ ಮೊತ್ತವನ್ನು ತುಂಬಿದ್ದಷ್ಟೇ ಅಲ್ಲದೆ, ಆ ವರ್ಷದ ಗುರಿಗಿಂತಲೂ 13 ಸಾವಿರ ಕೋಟಿ ರೂ.ಗಳ ಹೆಚ್ಚಿನ ಆದಾಯ ಸಂಗ್ರಹ ಮಾಡಿದರು ಎಂದರು ಸರ್ಕಾರಿ ನೌಕರರ ಶ್ರಮವನ್ನು ಸ್ಮರಿಸಿದರು.

ಸರ್ಕಾರದ ಮುಖ್ಯಸ್ಥನಾಗಿ ಸರಕಾರಿ ನೌಕರರ ಈ ಸೇವೆಯನ್ನು ಗುರುತಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳು ಅದೇ ಸಂದರ್ಭದಲ್ಲಿ ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕೆಂಬ ತೀರ್ಮಾನ ಮಾಡಿದೆ. ಕೇಂದ್ರ ಸರ್ಕಾರ ಡಿಎ ಘೋಷಿಸಿದ 24 ಗಂಟೆಯೊಳಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಮತ್ತೊಂದು ಡಿಎ ಕೇಂದ್ರ ಸರ್ಕಾರಕ್ಕೆ ಬೆಳಿಗ್ಗೆ ಘೋಷಣೆ ಮಾಡಿದರೆ ಸಂಜೆ ರಾಜ್ಯ ದಲ್ಲಿ ಆದೇಶ ಹೊರಡಿಸಲಾಯಿತು. ಇದು ಕೂಡ ದಾಖಲೆ ಎಂದರು.

7th Pay Commission

ಕಾರ್ಯಕ್ರಮದಲ್ಲಿ ಸಚಿವರಾದ ಆರ್‌. ಅಶೋಕ್‌, ಮುನಿರತ್ನ, ಸಿ. ಸಿ. ಪಾಟೀಲ್‌ ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ ಸರ್ಕಾರಿ ನೌಕರರ, ನಿಗಮ ಮಂಡಳಿ, ಪ್ರಾಧಿಕಾರ ಹಾಗೂ ನಿವೃತ್ತ ನೌಕರರ 11 ಲಕ್ಷ ಕುಟುಂಬದ ಸದಸ್ಯರ ಪರವಾಗಿ ಸಂಘ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿತು. ಸಂಘದ ರಾಜ್ಯಾಧ್ಯಕ್ಷ ಸಿ. ಎಸ್‌. ಷಡಾಕ್ಷರಿ ಇದರ ನೇತೃತ್ವ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳು, ವೃಂದ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ | 7th Pay Commission | 7ನೇ ವೇತನ ಆಯೋಗ ರಚನೆಯ ಘೋಷಣೆ; ಅಧ್ಯಕ್ಷರಾಗಿ ಸುಧಾಕರ್‌ ರಾವ್‌ ನೇಮಕ

Exit mobile version