ಬೆಂಗಳೂರು: ಏಳನೇ ವೇತನ ಆಯೋಗವನ್ನು (7th Pay Commission) ರಚಿಸಿರುವ ರಾಜ್ಯ ಸರ್ಕಾರ ಆಯೋಗಕ್ಕೆ ಅಗತ್ಯವಾಗಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಮಂಜೂರಾತಿ ನೀಡಿದೆ.
ಆಯೋಗಕ್ಕೆ ಕಾರ್ಯನಿರ್ವಹಿಸಲು ಅಗತ್ಯವಾಗಿರುವ 44 ಹುದ್ದೆಗಳನ್ನು ಸೃಜಿಸಿ, ಮಂಜೂರಾತಿ ನೀಡಲಾಗಿದೆ. ಇದರಿಂದ ಆಯೋಗಕ್ಕೆ ಕೂಡಲೇ ಕಾರ್ಯಾರಂಭ ಮಾಡುವುದಕ್ಕೆ ಅನುಕೂಲವಾದಂತಾಗಿದೆ. ಆರ್ಥಿಕ ಇಲಾಖೆ ಈ ಮಂಜೂರಾತಿ ನೀಡಿ, ಆದೇಶ ಹೊರಡಿಸಿದೆ.
ಆಯೋಗದ ಕಾರ್ಯಗಳು ಸುಗಮವಾಗಿ ನಡೆಯುವಂತಾಗಲು ಮತ್ತು ಕಾರ್ಯ ನಿರ್ವಹಣೆಯಲ್ಲಿ ಅಂತರ್ ವಿನಿಮಯತೆಯ ದೃಷ್ಟಿಯಿಂದ ಅಪರ/ಜಂಟಿ/ಉಪ ಕಾರ್ಯದರ್ಶಿ/ ವಿಶೇಷಾಧಿಕಾರಿ ಹುದ್ದೆಗಳನ್ನು ಸೃಜಿಸಲಾಗಿದೆ. ಗ್ರೂಪ್ “ಸಿʼʼ ವೃಂದದ ಹುದ್ದೆಗಳನ್ನು ಒಟ್ಟಾರೆ ಸೃಜಿಸಲಾಗಿದ್ದು, ವೇತನ ಆಯೋಗವು ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಸ್ವಾತಂತ್ರವನ್ನು ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವುದು ಎಷ್ಟು ಹುದ್ದೆ?
1 | ಕಾರ್ಯದರ್ಶಿ (ಐಎಎಸ್‌ವೃಂದ)- | 1 |
2 | ಅಪರ/ಜಂಟಿ/ಉಪ ಕಾರ್ಯದರ್ಶಿ/ವಿಶೇಷಾಧಿಕಾರಿ | 3 |
3 | ಜಂಟಿ/ಉಪ/ಸಹಾಯಕ ನಿರ್ದೇಶಕರು (ಅಂಕಿಅಂಶ) | 1 |
4 | ಅಧೀನ ಕಾರ್ಯದರ್ಶಿ/ಆಪ್ತ ಕಾರ್ಯದರ್ಶಿ | 6 |
5 | ಶಾಖಾಧಿಕಾರಿ | 2 |
6 | ಹಿರಿಯ ಸಹಾಯಕರು/ಸಹಾಯಕರು/ಶೀಘ್ರಲಿಪಿಗಾರರು/ಕಿರಿಯ ಸಹಾಯಕರು/ಬೆರಳಚ್ಚುಗಾರರು/ಡಾಟಾ ಎಂಟ್ರಿ ಆಪರೇಟರ್ ಹಾಗೂ ಇತರೆ ಗ್ರೂಪ್ ಸಿ ವೃಂದದ ಹುದ್ದೆಗಳು. | 25 |
7 | ದಲಾಯತ್ | 6 |
ಒಟ್ಟು | 44 |
ಏಳನೇ ವೇತನ ಆಯೋಗದ ಉಪ ಕಾರ್ಯದರ್ಶಿಗಳಿಗೆ ಹಣ ಪಡೆಯುವ ಮತ್ತು ಬಟವಾಡೆ ಮಾಡುವ ಅಧಿಕಾರವನ್ನು ನೀಡಲಾಗಿದೆ. 44 ಹುದ್ದೆಗಳನ್ನು ಆಯೋಗದ ಅವಧಿಯವರೆಗೆ ತಾತ್ಕಾಲಿಕವಾಗಿ ಸೃಜಿಸಲಾಗಿದೆ. ಸೃಜಿಸಲಾದ ಹುದ್ದೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯ ಸರ್ಕಾರದ ಸಚಿವಾಲಯದ ಸೇವೆಯಿಂದ ಅಥವಾ ಸರ್ಕಾರದ ಇನ್ನಿತರ ಇಲಾಖೆಗಳಿಂದ ನಿಯೋಜನೆ ಮೇಲೆ ಭರ್ತಿ ಮಾಡಬೇಕು ಎಂದು ಆರ್ಥಿಕ ಇಲಾಖೆಯು ಹೊರಡಿಸಿದೆ ಆದೇಶದಲ್ಲಿ ಹೇಳಲಾಗಿದೆ.
ಈಗಾಗಲೇ ಪ್ರಕಟಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲ ಸೌಕರ್ಯ ಇಲಾಖೆಯ ಜಂಟಿ ಕಾರ್ಯರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ.ರಾಮಮೂರ್ತಿ ಮತ್ತು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕ ಶ್ರೀಕಾಂತ್ ಬಿ.ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸರ್ಕಾರದ ಸಂಪನ್ಮೂಲಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲ ಮತ್ತು ವಿತ್ತೀಯ ಹೊಣೆಗಾರಿಕೆ ಅಧಿನಿಯಮ-2002ರ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ವೇತನ ಆಯೋಗವು ಕಾರ್ಯನಿರ್ವಹಿಸಬೇಕೆಂದು ಸರ್ಕಾರ ಆಯೋಗಕ್ಕೆ ಸೂಚಿಸಿದೆ. ಆಯೋಗಕ್ಕೆ ಶಿಫಾರಸು ನೀಡಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.
ಈ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಲಾಭ ಪಡೆಯಲಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಏಳನೇ ವೇತನ ಆಯೋಗ ರಚಿಸಬೇಕೆಂದು ಸರ್ಕಾರಿ ನೌಕರರ ಸಂಘ ಒತ್ತಾಯಿಸುತ್ತಲೇ ಬಂದಿತ್ತು. ನೌಕರರ ಸಂಘದ ಒತ್ತಡಕ್ಕೆ ಮಣಿದ ಸರ್ಕಾರ ಆಯೋಗ ರಚಿಸಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ | 7th Pay Commission | 7ನೇ ರಾಜ್ಯ ವೇತನ ಆಯೋಗ ರಚನೆಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹರ್ಷ