ಬೆಂಗಳೂರು: ಏಳನೇ ವೇತನ ಆಯೋಗವನ್ನು (7th Pay Commission) ರಚಿಸುವುದಾಗಿ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಕೊನೆಗೂ ಈ ಸಂಬಂಧ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ. ಈಗಾಗಲೇ ಪ್ರಕಟಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಆಯೋಗದ ಅಧ್ಯಕ್ಷರಾಗಿರಲಿದ್ದು, ಮೂವರು ಸದಸ್ಯರನ್ನು ನೇಮಕ ಮಾಡಲಾಗಿದೆ.
ಮೂಲ ಸೌಕರ್ಯ ಇಲಾಖೆಯ ಜಂಟಿ ಕಾರ್ಯರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ.ರಾಮಮೂರ್ತಿ ಮತ್ತು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕ ಶ್ರೀಕಾಂತ್ ಬಿ.ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸರ್ಕಾರದ ಸಂಪನ್ಮೂಲಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲ ಮತ್ತು ವಿತ್ತೀಯ ಹೊಣೆಗಾರಿಕೆ ಅಧಿನಿಯಮ-2002ರ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ವೇತನ ಆಯೋಗವು ಕಾರ್ಯನಿರ್ವಹಿಸಬೇಕೆಂದು ಸರ್ಕಾರದ ಆದೇಶಲ್ಲಿ ಸೂಚಿಸಲಾಗಿದೆ.
ನಿರೀಕ್ಷೆಯಂತೆ ಆಯೋಗಕ್ಕೆ ಶಿಫಾರಸು ನೀಡಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಆದರೆ ಫೆಬ್ರವರಿಯಲ್ಲಿಯೇ ಮಧ್ಯಂತರ ಶಿಫಾರಸು ಮಾಡುವಂತೆ ಸ್ಪಷ್ಟವಾಗಿ ಸೂಚನೆಯನ್ನೇನೂ ನೀಡಲಾಗಿಲ್ಲ. ಆಯೋಗ ರಚನೆ ಕುರಿತು ಮುಖ್ಯಮಂತ್ರಿಗಳೇ ಪ್ರಕಟಿಸಿದ್ದರೂ ಆದೇಶ ಹೊರ ಬೀಳದೇ ಇರುವುದಕ್ಕೆ ನೌಕರರಲ್ಲಿ ಅಸಮಧಾನ ಉಂಟಾಗಿತ್ತು. ಪ್ರತಿಭಟನೆಗೆ ಕೆಲವರು ಮುಂದಾಗಿದ್ದರು.
ಈ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಲಾಭ ಪಡೆಯಲಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಏಳನೇ ವೇತನ ಆಯೋಗ ರಚಿಸಬೇಕೆಂದು ಸರ್ಕಾರಿ ನೌಕರರ ಸಂಘ ಒತ್ತಾಯಿಸುತ್ತಲೇ ಬಂದಿತ್ತು. ನೌಕರರ ಸಂಘದ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿಗಳು ಕಳೆದ ವಾರ ಈ ಸಂಬಂಧ ಅಧಿಕೃತ ಹೇಳಿಕೆ ನೀಡಿ, ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಆಯೋಗದ ಅಧ್ಯಕ್ಷರಾಗಿರಲಿದ್ದಾರೆ ಎಂದು ಪ್ರಕಟಿಸಿದ್ದರು.
ಏನು ಮಾಡಲಿದೆ ಈ ಆಯೋಗ?
* ಸರ್ಕಾರಿ ನೌಕರರ (ಅನುದಾನಿತ ಶಿಕ್ಷಣ ಸಂಸ್ಥೆ, ವಿವಿಗಳ ಬೋಧಕೇತರ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ) ವೇತನ ಹಾಗೂ ವಿವಿಧ ಭತ್ಯೆಗಳನ್ನು ಹಾಗೂ ನಿವೃತ್ತ ನೌಕರರಿಗೆ ನೀಡಲಾಗುವ ಸೌಲಭ್ಯಗಳನ್ನು ಪರಿಶೀಲಿಸಿ, ಕಾರ್ಯಸಾಧುವಾದ ವೇತನ ಶ್ರೇಣಿಯನ್ನು ಶಿಫಾರಸು ಮಾಡಲಿದೆ.
* ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವೆ ವೇತನದ ವಿಷಯದಲ್ಲಿರುವ ತಾರತಮ್ಯತೆಯನ್ನು ದೂರ ಮಾಡಲು ಶಿಫಾರಸು ಮಾಡುವುದು.
* ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ನೀಡಲು ಅನುಸರಿಸಬೇಕಾದ ಹೊಸ ಸೂತ್ರವನ್ನು ರೂಪಿಸುವುದು. ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಪ್ರವಾಸ ರಜೆ ಸೌಕರ್ಯ, ವೈದ್ಯಕೀಯ ಸೌಲಭ್ಯಗಳನ್ನು ನಿಗದಿಪಡಿಸಲು ಹಾಗೂ ಸುಧಾರಣೆ ತರಲು ಸಲಹೆ ನೀಡುವುದು.
* ನಿವೃತ್ತಿ ವೇತನ ಮತ್ತು ಇನ್ನಿತರ ಸೌಲಭ್ಯಗಳನ್ನು ಪರಿಷ್ಕರಣೆ ಮಾಡುವುದು.
* ಖಾಲಿ ಇರುವ ಹುದ್ದೆಗಳ ಭರ್ತಿ, ನೇಮಕಾತಿ ಮತ್ತು ಮುಂಬಡ್ತಿ ನಿಯಮಗಳ ಸರಳೀಕರಣಕ್ಕೆ ಶಿಫಾರಸು ಮಾಡುವುದು.
* ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಗೆ ಶಿಫಾರಸು ಮಾಡುವುದು.
ಹಾಲಿ ಪಡೆಯುತ್ತಿರುವ ಡಿಎಯನ್ನು ಮೂಲವೇತನದೊಂದಿಗೆ ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಮತ್ತು ಮೂಲ ವೇತನದ ಮೇಲೆ ಶೇ.30ರಿಂದ 40 ರಷ್ಟು ವೇತನ ಹೆಚ್ಚಳವಾಗಬೇಕು. 2022ರ ಜುಲೈ1 ರಿಂದ ಅನ್ವಯವಾಗುವಂತೆ ಪರಿಷ್ಕರಣೆಯಾಗಬೇಕು. 2023ರ ಜನವರಿಯಿಂದ ಆರ್ಥಿಕ ಅನುಕೂಲವಾಬೇಕು ಎಂದು ನೌಕರರ ಸಂಘ ಒತ್ತಾಯಿಸುತ್ತಿದೆ.
6ನೇ ವೇತನ ಆಯೋಗವನ್ನು 2017ರ ಜೂನ್‌ನಲ್ಲಿ ರಚಿಸಲಾಗಿತ್ತು. ವರದಿ ನೀಡಲು ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ ಆಯೋಗದ ಕೋರಿಕೆಯ ಮೇರೆಗೆ ಕೊನೆಗೆ ಇದಕ್ಕೆ ಒಟ್ಟು ಹನ್ನೊಂದು ತಿಂಗಳು ಕಾಲಾವಕಾಶ ನೀಡಲಾಗಿತ್ತು. 2018ರ ಜನವರಿಯಲ್ಲಿ ಆಯೋಗ ಮೊದಲ ಸಂಪುಟದ ವರದಿ ನೀಡಿತ್ತು. ಏಳನೇ ವೇತನ ಆಯೋಗಕ್ಕೆ ಆರು ತಿಂಗಳು ಕಾಲಾವಕಾಶ ನೀಡಲಾಗಿದೆ. ಈ ಕುರಿತು ನೌಕರರ ನಡುವೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ | ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ