Site icon Vistara News

7th Pay Commission | 7ನೇ ವೇತನ ಆಯೋಗಕ್ಕೆ ಕಚೇರಿಯ ಜಾಗವೂ ನಿಗದಿ; ಮುಂದಿನ ವಾರದಿಂದ ಕಾರ್ಯಾರಂಭ?

7th Pay Commission 7th Pay Commissionspecial meeting for discuss Govt employees demand

ಬೆಂಗಳೂರು: ಏಳನೇ ವೇತನ ಆಯೋಗಕ್ಕೆ (7th Pay Commission) ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಮಂಜೂರಾತಿ ನೀಡಿದ ಸರ್ಕಾರ ಇದರ ಬೆನ್ನಲ್ಲೇ ಆಯೋಗಕ್ಕೆ ಕಚೇರಿಯನ್ನು ತೆರೆಯಲು ಜಾಗವನ್ನೂ ನಿಗದಿಪಡಿಸಿದೆ.

ಬೆಂಗಳೂರಿನ ಔಷಧ ನಿಯಂತ್ರಕರ ಹಳೆಯ ಕಚೇರಿ ಕಟ್ಟಡದಲ್ಲಿನ 3ನೇ ಮಹಡಿಯಲ್ಲಿ ಆಯೋಗದ ಕಚೇರಿಯು ತಾತ್ಕಾಲಿಕವಾಗಿ ಆರಂಭವಾಗಲಿದೆ. ಈ ಸಂಬಂಧ ಸರ್ಕಾರದ ಆದೇಶ ಹೊರ ಬಿದ್ದಿದ್ದು, ಈ ಜಾಗದಲ್ಲಿ ಕಚೇರಿ ತೆರೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಒಪ್ಪಿಗೆ ನೀಡಿದೆ.

ಮೂರನೇ ಮಹಡಿಯಲ್ಲಿನ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಲಭ್ಯವಿರುವ 2500 ಚ.ಅಡಿ ಜಾಗವನ್ನು ಆಯೋಗದ ಕಚೇರಿಗೆ ನಿಗದಿಪಡಿಸಲಾಗಿದೆ. ಇಲ್ಲಿಯ ಕಾರಿಡಾರ್‌ ಅನ್ನೂ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. 7ನೇ ವೇತನ ಆಯೋಗವು ಜಾರಿಯಲ್ಲಿರುವವರೆಗೂ ಈ ಜಾಗವನ್ನು ಬಳಸಿಕೊಳ್ಳಬಹುದು. ಲೋಕೋಪಯೋಗಿ ಇಲಾಖೆಯು ನಿಗದಿಪಡಿಸಿರುವ ಬಾಡಿಗೆ ದರವನ್ನು ಆಯೋಗವು ಪಾವತಿಸಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.

ಆಯೋಗವು ಅಧ್ಯಕ್ಷರು, ಇಬ್ಬರು ಸದಸ್ಯರು ಮತ್ತು ಕಾರ್ಯದರ್ಶಿಯನ್ನು ಒಳಗೊಂಡಿದ್ದು, ಇವರುಗಳಿಗೆ ಒಂದು ಸಭಾಂಗಣ ಕೊಠಡಿ, ಪ್ರೇಕ್ಷಕರ ಕೊಠಡಿ ಮತ್ತು ಆರು ಕೊಠಡಿಗಳ ಅವಶ್ಯಕತೆ ಇದೆ. ಈಗಾಗಲೇ ಆಯೋಗ ರಚನೆಯಾಗಿ ಎರಡುವಾರ ಕಳೆದಿದ್ದು, ಆಯೋಗಕ್ಕೆ ಜಾಗ ನೀಡಲು ಹುಡುಕಾಟ ನಡೆಸಲಾಗಿತ್ತು. ಕೊನೆಗೂ ಕಚೇರಿಯ ಜಾಗವನ್ನು ಅಂತಿಮಗೊಳಿಸಲಾಗಿದೆ.

ಆಯೋಗಕ್ಕೆ ಕಾರ್ಯನಿರ್ವಹಿಸಲು ಅಗತ್ಯವಾಗಿರುವ 44 ಹುದ್ದೆಗಳನ್ನು ಸೃಜಿಸಿ, ಆರ್ಥಿಕ ಇಲಾಖೆ ಶುಕ್ರವಾರವಷ್ಟೇ ಆದೇಶ ಹೊರಡಿಸಿತ್ತು. ಇದೀಗ ಕಚೇರಿಯ ಜಾಗವನ್ನೂ ನಿಗದಿಪಡಿಸಲಾಗಿದೆ. ಹೀಗಾಗಿ ಮುಂದಿನ ವಾರದಿಂದಲೇ ಆಯೋಗವು ಕಾರ್ಯಾರಂಭಮಾಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಆಯೋಗದ ಕಾರ್ಯಗಳು ಸುಗಮವಾಗಿ ನಡೆಯುವಂತಾಗಲು ಮತ್ತು ಕಾರ್ಯ ನಿರ್ವಹಣೆಯಲ್ಲಿ ಅಂತರ್‌ ವಿನಿಮಯತೆಯ ದೃಷ್ಟಿಯಿಂದ ಅಪರ/ಜಂಟಿ/ಉಪ ಕಾರ್ಯದರ್ಶಿ/ ವಿಶೇಷಾಧಿಕಾರಿ ಹುದ್ದೆಗಳನ್ನು ಸೃಜಿಸಲಾಗಿದೆ. ಗ್ರೂಪ್‌ “ಸಿʼʼ ವೃಂದದ ಹುದ್ದೆಗಳನ್ನು ಒಟ್ಟಾರೆ ಸೃಜಿಸಲಾಗಿದ್ದು, ವೇತನ ಆಯೋಗವು ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಸ್ವಾತಂತ್ರವನ್ನು ಕಲ್ಪಿಸಲಾಗಿದೆ. ಇವರುಗಳಿಗೆ ಕಾರ್ಯನಿರ್ವಹಿಸಲು ಕಚೇರಿ ಅಗತ್ಯವಾಗಿತ್ತು.

ಈ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಲಾಭ ಪಡೆಯಲಿದ್ದಾರೆ. ಆಯೋಗಕ್ಕೆ ಶಿಫಾರಸು ನೀಡಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ | 7th Pay Commission | 7ನೇ ವೇತನ ಆಯೋಗಕ್ಕೆ ಸಿಬ್ಬಂದಿ ನೇಮಕ; ಸರ್ಕಾರದಿಂದ ಆದೇಶ

Exit mobile version