Site icon Vistara News

7th Pay Commission : ನೌಕರರ ಬೇಡಿಕೆ ಕುರಿತು ಚರ್ಚಿಸಲು ಆಯೋಗದಿಂದ ಮೇ 26ಕ್ಕೆ ಮಹತ್ವದ ಸಭೆ

7th Pay Commission 7th Pay Commissionspecial meeting for discuss Govt employees demand

ಬೆಂಗಳೂರು: ರಾಜ್ಯ ಸರ್ಕಾರವು 7ನೇ ವೇತನ ಆಯೋಗದ (7th Pay Commission) ಅವಧಿಯನ್ನು ಆರು ತಿಂಗಳು ವಿಸ್ತರಿಸಿದ ಬೆನ್ನಲ್ಲೇ ಆಯೋಗವು ಯಾವುದೇ ಗೊಂದಲಗಳಿಲ್ಲದೆ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಿದ್ದು, ಈಗಾಗಲೇ ಪ್ರಶ್ನೋತ್ತರ ಮಾದರಿಯಲ್ಲಿ ತಮ್ಮ ಅಭಿಪ್ರಾಯ, ಬೇಡಿಕೆ ಮಂಡಿಸಿರುವ ರಾಜ್ಯ ಸರ್ಕಾರಿ ನೌಕರರ ವಿವಿಧ ಸಂಘಟನೆಗಳಿಗೆ, ನೌಕರರಿಗೆ, ಸಾರ್ವಜನಿಕರಿಗೆ ಮತ್ತೊಮ್ಮೆ ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಲು ಅವಕಾಶ ನೀಡಿದೆ.

ಇದಕ್ಕಾಗಿ ಆಯೋಗವು ಮೇ. 26ರ ರಂದು ವಿಶೇಷ ಸಭೆ ಕರೆದಿದ್ದು, ಆಸಕ್ತರು ಬೇಡಿಕೆಗಳ ಸೂಕ್ತ ಪಿಪಿಟಿಯೊಂದಿಗೆ ಸಭೆಗೆ ಆಗಮಿಸಿ ತಮ್ಮ ವಾದವನ್ನು ಮಂಡಿಸಬೇಕೆಂದು ಆಯೋಗವು ಕೋರಿದೆ. ಈ ಸಂದರ್ಭದಲ್ಲಿ ಬೇಡಿಕೆಗಳ ಕುರಿತು ಚರ್ಚಿಸಲಾಗುತ್ತದೆ. ಪಿಪಿಟಿಯಲ್ಲಿ ಪ್ರಶ್ನಾವಳಿಯ ಉತ್ತರಗಳು, ಬೇಡಿಕೆಗಳು ಮತ್ತು ಇತರೆ ವಿಷಯಗಳ ಸಂಕ್ಷಿಪ್ತ ಮಾಹಿತಿ ಇರಬೇಕು. ಮಾಹಿತಿಯು ವಸ್ತುನಿಷ್ಠ ಹಾಗು ನಿರ್ದಿಷ್ಟವಾಗಿರಬೇಕು ಹಾಗೂ ಹತ್ತು ಸ್ಲೈಡ್‌ಗಳಿಗೆ ಸಮೀತವಾಗಿರಬೇಕು. ಮಾಹಿತಿಯು ಸ್ಲೈಡ್‌ಗಳಲ್ಲಿ ಪುನರಾವರ್ತನೆಯಾಗಬಾರದು ಎಂದು ಸೂಚಿಸಲಾಗಿದೆ.

ಈ ಸಭೆಯು ವೇತನ ಆಯೋಗದ ಕಚೇರಿಯ ಸಭಾ ಕೊಠಡಿಯಲ್ಲಿಯೇ ನಡೆಯಲಿದ್ದು, ಪೂರ್ವ ಸಿದ್ಧತೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಆಯೋಗದ ಕಾರ್ಯದರ್ಶಿ ಹಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಉಮಾ ಕೆ. ಏಳನೇ ವೇತನ ಆಯೋಗಕ್ಕೆ ತನ್ನ ಕಾರ್ಯ ಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುವಂತೆ ಆಯೋಗದ ಕಾಲಾವಧಿಯನ್ನು ಮೇ 19ರಿಂದ 6 ತಿಂಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದ್ದರು. ಈ ಆಯೋಗವನ್ನು ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್‌ ಅಧ್ಯಕ್ಷತೆಯಲ್ಲಿ 2022ರ ನವೆಂಬರ್‌ 19 ರಂದು ರಚಿಸಲಾಗಿತ್ತು. ಆಯೋಗಕ್ಕೆ 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯು ಮೇ. 19 ರಂದು ಅಂತ್ಯಗೊಳ್ಳಲಿದ್ದ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಿಸಲಾಗಿತ್ತು.

ರಾಜ್ಯದಲ್ಲಿ ಚುನಾವಣೆಯ ಚಟುವಟಿಕೆಗಳು ನಡೆಯುತ್ತಿದ್ದುದ್ದರಿಂದ ಮತ್ತು ನೀತಿ ಸಂಹಿತೆ ಜಾರಿಯಲ್ಲಿದ್ದುದ್ದರಿಂದ ಆಯೋಗಕ್ಕೆ ನಿಗಿದಿತ ಅವಧಿಯಲ್ಲಿ ವರದಿ ಸಿದ್ಧಪಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹೆಚ್ಚಿನ ಕಾಲಾವಕಾಶವನ್ನು ಕೋರಿ ಆಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ ಆಯೋಗದ ಅವಧಿಯನ್ನು ವಿಸ್ತರಿಸಲಾಗಿತ್ತು.
ನೂತನ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಏಳನೇ ವೇತನ ಆಯೋಗವು ಶಿಫಾರಸು ಮಾಡಲಿದ್ದು, ಇದನ್ನು ಸರ್ಕಾರ ಜಾರಿಗೆ ತರಲಿದೆ ಎಂಬ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಈ ತೀರ್ಮಾನದಿಂದಾಗಿ ನಿರಾಸೆಯಾಗಿದೆ.

6ನೇ ವೇತನ ಆಯೋಗವನ್ನು 2017ರ ಜೂನ್‌ನಲ್ಲಿ ರಚಿಸಲಾಗಿತ್ತು. ವರದಿ ನೀಡಲು ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ ಆಯೋಗದ ಕೋರಿಕೆಯ ಮೇರೆಗೆ ಕೊನೆಗೆ ಇದಕ್ಕೆ ಒಟ್ಟು ಹನ್ನೊಂದು ತಿಂಗಳು ಕಾಲಾವಕಾಶ ನೀಡಲಾಗಿತ್ತು. 2018ರ ಜನವರಿಯಲ್ಲಿ ಆಯೋಗ ಮೊದಲ ಸಂಪುಟದ ವರದಿ ನೀಡಿತ್ತು.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಏಳನೇ ವೇತನ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಲಾಭ ಪಡೆಯಲಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಏಳನೇ ವೇತನ ಆಯೋಗ ರಚಿಸಬೇಕೆಂದು ಸರ್ಕಾರಿ ನೌಕರರ ಸಂಘ ಒತ್ತಾಯಿಸುತ್ತಲೇ ಬಂದಿತ್ತು. ನೌಕರರ ಸಂಘದ ಒತ್ತಡಕ್ಕೆ ಮಣಿದ ಹಿಂದಿನ ಸರ್ಕಾರ ಆಯೋಗ ರಚಿಸಿ ಆದೇಶ ಹೊರಡಿಸಿತ್ತು. ಈಗಾಗಲೇ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರವಾಗಿ ಶೇ.17 ರಷ್ಟು ವೇತನ ಹೆಚ್ಚಳವನ್ನು ಕಳೆದ ಏಪ್ರಿಲ್‌ 1 ರಿಂದಲೇ ಜಾರಿಗೆ ತಂದಿದೆ.

ಇದನ್ನೂ ಓದಿ: Govt Employees Strike: ವೇತನ ಆಯೋಗ ವರದಿ ಜಾರಿಯಿಂದ ರಾಜ್ಯ ಬೊಕ್ಕಸಕ್ಕೆ ಹೊರೆ ಎನ್ನುವುದು ಸುಳ್ಳು: ಷಡಾಕ್ಷರಿ

Exit mobile version