ಸರ್ಕಾರಿ ನೌಕರರು ಮತ್ತು ಕುಟುಂಬದ ಅವಲಂಬಿತ ಸದಸ್ಯರುಗಳಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ʼಜ್ಯೋತಿ ಸಂಜೀವಿನಿʼ ಯೋಜನೆಯ ಪ್ರಯೋಜನವನ್ನು ಇನ್ನು ಮುಂದೆ ಎಲ್ಲ ಸರ್ಕಾರಿ ನೌಕರರೂ ಪಡೆದುಕೊಳ್ಳಬಹುದು.
2014ರಲ್ಲಿಯೇ ಜಾರಿಗೆ ಬಂದಿದ್ದ “ಜ್ಯೋತಿ ಸಂಜೀವಿನಿʼʼ ಯೋಜನೆಯ ಮುಂದುವರಿದ ಭಾಗವಾಗಿ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆʼʼ (KASS) ಜಾರಿಗೆ ಬರುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಪ್ಟೆಂಬರ್ 6ರಂದು ಚಾಲನೆ ನೀಡಲಿದ್ದಾರೆ.
ನೌಕರರ ಆರೋಗ್ಯ ರಕ್ಷಣೆಗಾಗಿ ರೂಪಿಸಿರುವ ಆರೋಗ್ಯ ಸಂಜೀವಿನಿ ಯೋಜನೆಯನ್ನು 2021ರ ಬಜೆಟ್‌ನಲ್ಲಿಯೇ ಘೋಷಿಸಲಾಗಿತ್ತು. 2021ರ ಜುಲೈ 22 ರಂದು ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈ ಯೋಜನೆಗಾಗಿ ಸರ್ಕಾರಿ ನೌಕರರ ಮಾಹಿತಿ ಸಂಗ್ರಹಿಸುವುದಕ್ಕಾಗಿ ಸರ್ಕಾರವೇ ಪ್ರತ್ಯೇಕ ಕೋಶವನ್ನು ಸ್ಥಾಪಿಸಿ, ಕೆಎಎಸ್ ದರ್ಜೆಯ ಅಧಿಕಾರಿಯನ್ನು ನೇಮಿಸಲಾಗಿತ್ತು. ಈಗ ಮಾಹಿತಿ ಸಂಗ್ರಹವಾಗಿರುವುದರಿಂದ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆ ಜಾರಿಯ ಹೊಣೆಯನ್ನೂ ಈ ಕೋಶಕ್ಕೇ ವಹಿಸಲಾಗಿದ್ದು, ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಈ ಕೋಶದಲ್ಲಿದ್ದಾರೆ.
1250 ಕೋಟಿ ವೆಚ್ಚ
ಈ ನಗದು ರಹಿತ ಚಿಕಿತ್ಸೆ ಯೋಜನೆಗಾಗಿ ಸರ್ಕಾರವು ವಾರ್ಷಿಕ 1,250 ಕೋಟಿ ರೂ.ಖರ್ಚು ಮಾಡಲಿದೆ. ಸರ್ಕಾರಿ ನೌಕರರು ವಾರ್ಷಿಕ ದೇಣಿಗೆಯನ್ನೂ ಇದಕ್ಕೆ ಪಾವತಿಸಲಿದ್ದಾರೆ. ನೌಕರರ ಮೂಲ ವೇತನದ ಶೇ.1 ರಷ್ಟು ಮೊತ್ತವನ್ನು ಇದಕ್ಕೆ ನಿಗದಿಪಡಿಸಲಾಗಿದೆ. ಇದರಿಂದ ಅಂದಾಜು 200ಕೋಟಿ ಸಂಗ್ರಹವಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಇದನ್ನು ಆರ್ಥಿಕ ಇಲಾಖೆಯೇ ಖಡಿತ ಮಾಡಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಪಾವತಿ ಮಾಡಲಿದೆ. ಉಳಿದ ಹಣ ಸರ್ಕಾರ ನೀಡಬೇಕಾಗುತ್ತದೆ. ಇದುವರೆಗೆ ಸರ್ಕಾರ ಚಿಕಿತ್ಸಾ ವೆಚ್ಚದ ಮರುಪಾವತಿಗಾಗಿ ಹೆಚ್ಚೆಂದರೆ 200 ಕೋಟಿ ರೂ. ಖರ್ಚು ಮಾಡುತ್ತಿತ್ತು. ಈಗ ಸುಮಾರ ಒಂದು ಸಾವಿರ ಕೋಟಿಯಷ್ಟು ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಬೀಳಲಿದೆ.
ರಾಜ್ಯ ಸರ್ಕಾರಿ ನೌಕರರ ಬಹುದೊಡ್ಡ ಕನಸೊಂದು ಈಡೇರುತ್ತಿದೆ. ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಇನ್ನು ಆರೋಗ್ಯ ಸೇವೆ ಪಡೆಯಲು ಪರದಾಡಬೇಕಾಗಿಲ್ಲ. ಯಾವುದೇ ಕಾಯಿಲೆಗಾದರೂ ಅತ್ಯುತ್ತಮ ಚಿಕಿತ್ಸೆ ಪಡೆದುಕೊಳ್ಳಬಹುದು. ವ್ಯವಸ್ಥಿತವಾಗಿ ಈ ಯೋಜನೆಯನ್ನು ಜಾರಿಗೆ ತರುತ್ತಿರುವ ಸರ್ಕಾರಕ್ಕೆ ಎಲ್ಲ ಸರ್ಕಾರಿ ನೌಕರರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ಸಿ.ಎಸ್. ಷಡಾಕ್ಷರಿ | ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು.
ಹೇಗಿದೆ ಈ ಯೋಜನೆ?
- ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಸೇರಿ ಒಟ್ಟು 30 ಲಕ್ಷ ಜನರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಒಳರೋಗಿ ಅಥವಾ ಹೊರ ರೋಗಿಗಳಾಗಿ ಅವರು ಉಚಿತ ಚಿಕಿತ್ಸೆ ಪಡೆಯಬಹುದಾಗಿರುತ್ತದೆ.
- ಒಂದು ಸಾವಿರಕ್ಕೂ ಅಧಿಕ ರೋಗಗಳಿಗೆ ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ. ಹಿಂದೆ ಹಲ್ಲು, ಕಣ್ಣು, ಹೊರರೋಗಿಗಳ ಚಿಕಿತ್ಸೆಗೆ ಮರುಪಾವತಿ ಇರಲಿಲ್ಲ. ಈ ಹೆಚ್ಚು ಕಡಿಮೆ ಎಲ್ಲ ರೀತಿಯ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯಲಿದೆ.
- ಪ್ರತಿ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದವರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ಅನ್ನು ತಾವು ಚಿಕಿತ್ಸೆ ಪಡೆಯುವ ಆಸ್ಪತ್ರೆಯವರಿಗೆ ನೀಡಿ, ಚಿಕಿತ್ಸೆ ಪಡೆಯಬಹುದು. ಇದಕ್ಕಾಗಿ ನೌಕರರ ಮಾಹಿತಿ ಇರುವ ಎಚ್ಆರ್ಎಂಎಸ್ ಅನ್ನು ಸುವರ್ಣ ಆರೋಗ್ಯ ಟ್ರಸ್ಟ್ ಜನತೆ ಲಿಂಕ್ ಮಾಡಲಾಗಿದೆ.
- ರಾಜ್ಯದಲ್ಲಿ ಮತ್ತು ರಾಜ್ಯದ ಗಡಿಗೆ ಹೊಂದಿಕೊಂಡಿರುವ ನಗರ ಮತ್ತು ಪಟ್ಟಣಗಳಲ್ಲಿರುವ ಸುಮಾರು 500 ಆಸ್ಪತ್ರೆಗಳಲ್ಲಿ ಈ ಕ್ಯಾಶ್‌ಲೆಸ್ ಯೋಜನೆ ಜಾರಿಗೆ ಬರಲಿದ್ದು, ಬಿಲ್ ಸಲ್ಲಿಕೆ, ಆಸ್ಪತ್ರೆಗಳಿಗೆ ಬಿಲ್ ಪಾವತಿ ಎಲ್ಲವೂ ಆನ್ಲೈನ್ನಲ್ಲಿಯೇ ನಡೆಯಲಿದೆ. ಹೆಲ್ತ್ ಇನ್ಷೂರೆನ್ಸ್ ನಂತೆಯೇ ಈ ಯೋಜನೆ ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ| ಸೆ.6ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಮತ್ತು ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ