Site icon Vistara News

CLT Exam : ಕಂಪ್ಯೂಟರ್‌ ಪರೀಕ್ಷೆಯಲ್ಲಿ ಈಗಾಗಲೇ ಉತ್ತೀರ್ಣರಾಗಿರುವ ನೌಕರರಿಗೆ ಐದು ಸಾವಿರ ಪ್ರೋತ್ಸಾಹ ಧನ

CLT Exam

ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ (CLT Exam) ಉತ್ತೀರ್ಣರಾಗಿರಲೇಬೇಕೆಂದು ಸರ್ಕಾರ ನಿಗದಿಪಡಿಸಿದ್ದ ಗಡುವನ್ನು ವಿಸ್ತರಿಸಿದ ಬೆನ್ನ ಹಿಂದೆಯೇ, ಈಗಾಗಲೇ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ನೌಕರರಿಗೆ ಐದು ಸಾವಿರ ರೂ. ಪ್ರೋತ್ಸಾಹ ಧನವನ್ನು ಘೋಷಿಸಿದೆ.

ಕರ್ನಾಟಕ ಸಿವಿಲ್‌ ಸೇವಾ (ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ) ನಿಯಮಗಳು -2012 ಜಾರಿಗೆ ಬಂದ 22-03-2012ರಂದು ಸೇವೆಯಲ್ಲಿದ್ದು, ದಿನಾಂಕ 17-04-2021 ರೊಳಗೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾ ನಿರತ ನೌಕರರಿಗೆ ಈ ಪ್ರೋತ್ಸಾಹ ಧನ ದೊರೆಯಲಿದೆ.

ಈ ಪ್ರೋತ್ಸಾಹ ಧನ ನೀಡುವ ಕುರಿತು 2012ರ ಆದೇಶದಲ್ಲಿಯೇ ತಿಳಿಸಲಾಗಿತ್ತು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಕುರಿತು ಪ್ರಮಾಣ ಪತ್ರವನ್ನು ನೀಡುವಲ್ಲಿ ಗೊಂದಲ ಉಂಟಾಗಿದ್ದರಿಂದ 2017 ರಲ್ಲಿಯೇ ಇದಕ್ಕೆ ತಡೆ ನೀಡಲಾಗಿತ್ತು. ಈಗ ಪ್ರಮಾಣ ಪತ್ರ ವಿತರಿಸಲು ಇ ಆಡಳಿತ ಕೇಂದ್ರದ ಯೋಜನಾ ನಿರ್ದೇಶಕರಿಗೆ (ಸಾಮರ್ಥ್ಯ ಸಂಘಟನೆ) ಸರ್ಕಾರ ಸೂಚಿಸಿದ್ದು, ಡಿಜಿಟಲ್‌ ಸಹಿ ಮಾಡಲ್ಪಟ್ಟ ಪ್ರಮಾಣ ಪತ್ರವನ್ನು ಒದಗಿಸಲಾಗುತ್ತದೆ. ಹೀಗಾಗಿ ಈ ಪ್ರೋತ್ಸಾಹ ಧನ ನೀಡುವಲ್ಲಿ ಇದ್ದ ಗೊಂದಲ ಬಗೆಹರಿದಂತಾಗಿದೆ. ಈಗಾಗಲೇ ಉತ್ತೀರ್ಣರಾಗಿರುವ ನೌಕರರು ಈ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ.

ಸರ್ಕಾರಿ ನೌಕರರು ಹಾಜರುಪಡಿಸುವ ಡಿಜಿಟಲ್‌ ಸಹಿ ಹೊಂದಿರುವ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ಪ್ರಮಾಣ ಪತ್ರವನ್ನು ಪರಿಶೀಲಿಸಿ ಉತ್ತೀರ್ಣರಾದ ದಿನಾಂಕವನ್ನು ಖಚಿತಪಡಿಸಿಕೊಂಡು ಪ್ರೋತ್ಸಾಹ ಧನ ಮಂಜೂರು ಮಾಡಬೇಕೆಂದು ಸರ್ಕಾರವು ಮಂಗಳವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಈ ಪ್ರೋತ್ಸಾಹ ಧನವನ್ನು ಸರ್ಕಾರಿ ನೌಕರರು ವೇತನ ಪಡೆಯುವ ಲೆಕ್ಕಶೀರ್ಷಿಕೆಯಡಿಯ subsidiary expenses ಉಪ ಶೀರ್ಷಿಕೆಯಡಿಯಲ್ಲಿ ಭರಿಸಬೇಕೆಂದು ಸೂಚಿಸಲಾಗಿದೆ. ಈ ಪ್ರೋತ್ಸಾಹ ಧನವನ್ನು ನೀಡಲು ಆರ್ಥಿಕ ಇಲಾಖೆಯು ಕಳೆದ ಡಿಸೆಂಬರ್‌ನಲ್ಲಿಯೇ ಅನುಮತಿ ನೀಡಿತ್ತು.

ರಾಜ್ಯದ 5.40 ಲಕ್ಷ ನೌಕರರ ಪೈಕಿ ಸುಮಾರು 3.50 ಲಕ್ಷ ನೌಕರರು ಈ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿದೆ. ಈ ಪರೀಕ್ಷೆ ಬರೆಯಲು 2.55 ಲಕ್ಷಕ್ಕೂ ಹೆಚ್ಚು ನೌಕರರು ನೋಂದಣಿ ಮಾಡಿಕೊಂಡಿದ್ದರೂ 1.5 ಲಕ್ಷ ನೌಕರರು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆಯಾಗಿ ಸುಮಾರು ನಾಲ್ಕು ಲಕ್ಷ ನೌಕರರು ಇನ್ನೂ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕಿದೆ.

ಇದನ್ನೂ ಓದಿ: CLT Exam | ಸರ್ಕಾರಿ ನೌಕರರ ಕಂಪ್ಯೂಟರ್‌ ಟೆಸ್ಟ್‌; ಗಡುವು ಮಾ.31ರ ವರೆಗೆ ವಿಸ್ತರಣೆ

Exit mobile version