Site icon Vistara News

CLT Exam | ಸರ್ಕಾರಿ ನೌಕರರ ಕಂಪ್ಯೂಟರ್‌ ಟೆಸ್ಟ್‌; ಮತ್ತೆ ಗಡುವು ವಿಸ್ತರಣೆಯಾಗುತ್ತಾ?

CLT Exam

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ (CLT Exam) ಉತ್ತೀರ್ಣರಾಗಿರಲೇಬೇಕೆಂದು ಸರ್ಕಾರ ನಿಗದಿಪಡಿಸಿದ ಗಡುವು ಹತ್ತಿರ ಬರುತ್ತಿರುವುದರಿಂದ ಇನ್ನೂ ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯದೇ ಇರುವ ಬಹುಸಂಖ್ಯಾತ ನೌಕರರು ಆತಂಕಗೊಂಡಿದ್ದಾರೆ.

ಕಳೆದ ಮೇ 5ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಸರ್ಕಾರಿ ನೌಕರರು ದಿನಾಂಕ 31-12-2022ರೊಳಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ಉತ್ತೀರ್ಣರಾಗದೇ ಇದ್ದಲ್ಲಿ ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿಗಳಿಸಲು ಅನರ್ಹರಾಗುತ್ತಾರೆ.

ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012 ರಲ್ಲಿ “ಈ ನಿಯಮದ ಪ್ರಾರಂಭದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿಗೆ ಅನರ್ಹರಾಗುತ್ತಾರೆʼʼ ಎಂದು ತಿಳಿಸಲಾಗಿತ್ತು. 2014ರ ಡಿಸೆಂಬರ್‌ನಲ್ಲಿಯೇ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ (ಡಿಪಿಎಆರ್ 104 ಇ-ಆಡಳಿತ 2014) ಹೊರಡಿಸಿತ್ತು. ಇದಕ್ಕೆ ಕಳೆದ ಮೇನಲ್ಲಿ ತಿದ್ದುಪಡಿ ತಂದು, “ಹತ್ತು ವರ್ಷಗಳ ಅವಧಿಯೊಳಗೆʼʼ ಎಂಬುದಕ್ಕೆ ಬದಲಾಗಿ, “ಯಾವುದೇ ಸರ್ಕಾರಿ ನೌಕರನು ದಿನಾಂಕ:31-12-2022ರೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿಗಳಿಸಲು ಅನರ್ಹನಾಗತಕ್ಕದ್ದಲ್ಲʼʼ ಎಂದು ಹೇಳಲಾಗಿದೆ.

ಈಗ ಈ ಗಡುವು ದಿನಾಂಕ ಸಮೀಪಿಸುತ್ತಿರುವುದರಿಂದ ಇನ್ನೂ ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯದೇ ಇರುವ ನೌಕರರು ಮುಂಬಡ್ತಿ ಮತ್ತು ವೇತನ ಬಡ್ತಿಯಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ. 5.40 ಲಕ್ಷ ನೌಕರರ ಪೈಕಿ ಸುಮಾರು 3.50 ಲಕ್ಷ ನೌಕರರು ಈ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿದೆ. ಈ ಪರೀಕ್ಷೆ ಬರೆಯಲು 2.55 ಲಕ್ಷಕ್ಕೂ ಹೆಚ್ಚು ನೌಕರರು ನೋಂದಣಿ ಮಾಡಿಕೊಂಡಿದ್ದರೂ 1.5 ಲಕ್ಷ ನೌಕರರು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆಯಾಗಿ ಸುಮಾರು ನಾಲ್ಕು ಲಕ್ಷ ನೌಕರರು ಇನ್ನೂ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕಿದೆ.

ನೌಕರರ ಸಂಘದಿಂದ ಗಡುವು ವಿಸ್ತರಣೆಗೆ ಪ್ರಯತ್ನವಿಲ್ಲ
ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ) ನಿಯಮಗಳು ಜಾರಿಯಾಗಿ ಎಂಟು ವರ್ಷಗಳಾಗಿವೆ. ಕಳೆದ ಎಂಟು ವರ್ಷಗಳಲ್ಲಿ ಎಲ್ಲರೂ ಈ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕೆಂದು ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸುತ್ತಲೇ ಬಂದಿದೆ. ಎಲ್ಲ ನೌಕರರು ಪರೀಕ್ಷೆ ಬರೆಯುವಂತೆ ಮಾಡಲು ಉತ್ತೀರ್ಣರಾದ ನೌಕರರಿಗೆ ಐದು ಸಾವಿರ ಪ್ರೋತ್ಸಾಹ ಧನವನ್ನೂ ಘೋಷಿಸಲಾಗಿತ್ತು. ಆದರೂ ನೌಕರರು ಈ ಪರೀಕ್ಷೆ ಬರೆಯುವ ರಿಸ್ಕ್‌ ತೆಗೆದುಕೊಳ್ಳಲೇ ಇಲ್ಲ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಕಾರ್ಯಾಗಾರಗಳನ್ನು ನಡೆಸಿ, ಈ ಪರೀಕ್ಷೆ ಎದುರಿಸಲು ನೌಕರರಿಗೆ ಮಾರ್ಗದರ್ಶನ ದೊರೆಯುವಂತೆ ಮಾಡಿದೆ. ಅಲ್ಲದೆ, ಈ ಹಿಂದೆ ಎರಡು ಬಾರಿ ನಿಗದಿಯಾಗಿದ್ದ ಗಡುವನ್ನು ಸರ್ಕಾರದ ಮೇಲೆ ಒತ್ತಡವನ್ನು ಹೇರಿ ವಿಸ್ತರಣೆಯಾಗುವಂತೆ ಮಾಡಿತ್ತು. ಈಗ ಕೂಡ ಸರ್ಕಾರಿ ನೌಕರರ ಸಂಘ ಮತ್ತೆ ಗಡುವು ವಿಸ್ತರಿಸುವಂತೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ನೌಕರರಿದ್ದಾರೆ. ಆದರೆ ಈ ರೀತಿಯ ಯಾವ ಪ್ರಯತ್ನವನ್ನೂ ಸಂಘ ಮಾಡುವುದಿಲ್ಲ ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ವಿಸ್ತಾರ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ. ಸಂಘ 2018 ಮತ್ತು 2020 ರಲ್ಲಿ ಗಡುವು ವಿಸ್ತರಣೆ ಮಾಡಿಸಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದೆ. ಇನ್ನು ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಷಡಾಕ್ಷರಿ ಹೇಳಿದ್ದಾರೆ.

ಪರೀಕ್ಷೆಗಾಗಿ ವಿಶೇಷ ವೆಬ್‌ಸೈಟ್‌
ಕಿಯೋನಿಕ್ಸ್ ಸಂಸ್ಥೆಯು ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ಆನ್ ಲೈನ್ ನಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸುತ್ತಿದೆ. ಇದಕ್ಕಾಗಿ ವಿಶೇಷವಾದ ವೆಬ್‌ಸೈಟ್‌ ಪ್ರಾರಂಭಿಸಲಾಗಿದೆ. ನೌಕರರು ಇದರಲ್ಲಿ ಮೊದಲಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಯಶಸ್ವಿಯಾಗಿ ಹೆಸರು ನೊಂದಾಯಿಸಿಕೊಂಡವರು, ಮುಂದೆ ಪರೀಕ್ಷೆಯ ಸ್ಲಾಟ್‌ ಅನ್ನು ಬುಕ್‌ ಮಾಡಿಕೊಂಡು ನಿಗದಿತ ದಿನದಂದು ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಮಾತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ವೆಬ್‌ ವಿಳಾಸ ಇಂತಿದೆ: https://clt.karnataka.gov.in

ಮೊದಲ ಬಾರಿಗೆ ಉಚಿತವಾಗಿ ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಒಂದು ವೇಳೆ ಇದರಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ, ಮುಂದೆ ಪರೀಕ್ಷೆ ಬರೆಯಲು 359 ರೂ. ಹಾಗೂ ಬ್ಯಾಂಕ್‌ ಸೇವಾ ಶುಲ್ಕವನ್ನು ನೌಕರರು ಪಾವತಿಸ ಬೇಕಾಗಿರುತ್ತದೆ. ಶುಲ್ಕ ಪಾವತಿಸಿದ ದಿನಾಂಕದಿಂ­­­­ದ 90 ದಿನಗಳೊಳಗೆ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಕಷ್ಟವಿರುತ್ತದೆ ಈ ಪರೀಕ್ಷೆ
ಬಹುತೇಕ ಸರ್ಕಾರಿ ನೌಕರರು ಈ ಪರೀಕ್ಷೆ ಬರೆಯಲು ಆಸಕ್ತಿ ತೋರದೇ ಇರುವುದಕ್ಕೆ “ಈ ಪರೀಕ್ಷೆ ಕಷ್ಟʼʼ ಎಂಬ ಪ್ರಚಾರವೇ ಕಾರಣವಾಗಿದೆ. ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಇ-ಆಡಳಿತ ಜಾರಿಗೆ ಬಂದಿದ್ದರೂ, ಕಂಪ್ಯೂಟರ್‌ ಸಾಕ್ಷರತೆ ವಿಷಯಲ್ಲಿ ನೌಕರರು ಹಿಂದೆ ಬಿದ್ದಿದ್ದಾರೆ. ಪೊಲೀಸ್‌, ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ನೌಕರರೇ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಹೀಗೆ ಪರೀಕ್ಷೆ ಬರೆದವರು, ಪರೀಕ್ಷೆ ಕಷ್ಟವಿತ್ತು ಎಂದು ಹೇಳುತ್ತಿರುವುದರಿಂದ ಪರೀಕ್ಷೆ ಬರೆಯಲು ಬೇರೆಯವರು ಉತ್ಸಾಹ ತೋರುತ್ತಿಲ್ಲ ಎನ್ನಲಾಗಿದೆ.

ಬಹುತೇಕರಿಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವುದು ಗೊತ್ತಿದ್ದರೂ, ಈ ಪರೀಕ್ಷೆಯಲ್ಲಿ ಥಿಯರಿಯ ಪ್ರಶ್ನೆಗಳಿರುವುದರಿಂದ, ತಾಂತ್ರಿಕ ಪದಗಳನ್ನು ಬಳಸಿರುವುದರಿಂದ ಉತ್ತರಿಸಲು ಕಷ್ಟವಾಗುತ್ತಿದೆ. 80 ಅಂಕಗಳಿಗೆ ಈ ಪರೀಕ್ಷೆ ನಡೆಯುತ್ತಿದ್ದು, ಉತ್ತರಿಸಲು ಒಂದೂವರೆ ಗಂಟೆ ಅಂದರೆ 90 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಶೇ.50 ರಷ್ಟು ಅಂಕ ಪಡೆದವರನ್ನು ಈ ಪರೀಕ್ಷೆಯಲ್ಲಿ ಉತ್ತೀರ್ಣರೆಂದು ಪರಿಗಣಿಸಲಾಗುತ್ತದೆ. ಟೆಕ್ನಿಕಲ್‌ ಕೋರ್ಸ್‌ ಮಾಡಿದವರು, ಕಂಪ್ಯೂಟರ್‌ ಕಲಿತವರು ಮಾತ್ರ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಉಳಿದವರಿಗೆ ಕಬ್ಬಿಣದ ಕಡಲೆಯಾಗಿದೆ.

ಸರ್ಕಾರಿ ನೌಕರರಾಗಿರುವ ಚಾಲಕರಿಗೆ, ಪೊಲೀಸ್‌ ಕಾನ್ಸ್‌ಟೇಬಲ್‌, ನರ್ಸ್‌, ಫಾರೆಸ್ಟ್‌ ಗಾರ್ಡ್‌, ಫಾರೆಸ್ಟ್‌ ವಾಚರ್ಸ್‌, ಅಬಕಾರಿ ರಕ್ಷಕರಿಗೆ ಮತ್ತು “ಡಿʼʼ ದರ್ಜೆಯ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. 45 ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಬೇಕೆಂದೂ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಈ ಕುರಿತು ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಡಿಸೆಂಬರ್‌ನಲ್ಲಿ ಸಾಕಷ್ಟು ಅವಕಾಶ

ಇನ್ನೂ ಸಿಎಲ್‌ಟಿ ಪರೀಕ್ಷೆ ಬರೆಯದ ನೌಕರರಿಗೆ ಡಿಸೆಂಬರ್‌ ತಿಂಗಳಿನಲ್ಲಿ ಪರೀಕ್ಷೆ ಬರೆಯಲು 52,564 ಸ್ಲಾಟ್‌ಗಳು ಲಭ್ಯವಿವೆ. ಬೆಂಗಳೂರು, ಬಾಗಲಕೋಟೆ, ವಿಜಯಪುರ, ಕಲಬುರಗಿ, ಹುಬ್ಬಳ್ಳಿ, ಮಂಡ್ಯ, ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಮಾತ್ರ ಸ್ಲಾಟ್‌ ಬುಕ್‌ಮಾಡಿಕೊಂಡು ಪರೀಕ್ಷೆ ಬರೆಯಬಹುದಿರುತ್ತದೆ. ಪರೀಕ್ಷೆಗೆ ಹೆಸರು ನೋಂದಾಯಿಸಲು ಡಿಸೆಂಬರ್‌31 ಕೊನೆಯ ದಿನವಾಗಿರುತ್ತದೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಡಿಸೆಂಬರ್ 9,10,11,16,17,18 ಮತ್ತು 23 ರಂದು ಬೆಂಗಳೂರು ಮತ್ತು ಹತ್ತಿರದ ಜಿಲ್ಲೆಗಳು (ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಹಾಸನ, ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಹುಬ್ಬಳ್ಳಿಯಲ್ಲಿ ಡಿಸೆಂಬರ್ 9,10,11,16,17,18 ಮತ್ತು 23 ರಂದು ಸ್ಲಾಟ್‌ಗಳನ್ನು ತೆರೆಯಲಾಗುತ್ತದೆ. ಹುಬ್ಬಳ್ಳಿ ಮತ್ತು ಸಮೀಪ ಜಿಲ್ಲೆಗಳ (ಧಾರವಾಡ, ಗದಗ, ಬೆಳಗಾವಿ, ಕಾರವಾರ, ಕೊಪ್ಪಳ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಶಿವಮೊಗ್ಗದಲ್ಲಿ ಡಿಸೆಂಬರ್ 9,10,11,16,17,18 ಮತ್ತು 23ರಂದು ಸ್ಲಾಟ್‌ಗಳನ್ನು ತೆರೆಯಲಾಗುತ್ತದೆ. ಶಿವಮೊಗ್ಗ ಮತ್ತು ಹತ್ತಿರದ ಜಿಲ್ಲೆಗಳು (ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಕಾರವಾರ, ಉಡುಪಿ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಕಲಬುರಗಿಯಲ್ಲಿ ಡಿಸೆಂಬರ್ 9,10,11,16,17,18 ಮತ್ತು 23ರಂದು ಸ್ಲಾಟ್‌ಗಳನ್ನು ತೆರೆಯಲಾಗುತ್ತದೆ. ಕಲಬುರಗಿ ಮತ್ತು ಹತ್ತಿರದ ಜಿಲ್ಲೆಗಳು (ಯಾದಗಿರಿ, ಬೀದರ್, ರಾಯಚೂರು ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ವಿಜಯಪುರದಲ್ಲಿ ಡಿಸೆಂಬರ್ 9,10,11,16,17,18 ಮತ್ತು 23ರಂದು ಸ್ಲಾಟ್‌ಗಳನ್ನು ತೆರೆಯಲಾಗುತ್ತದೆ ವಿಜಯಪುರ ಮತ್ತು ಹತ್ತಿರದ ಜಿಲ್ಲೆಗಳು (ಬೆಳಗಾವಿ ,ಬಾಗಲಕೋಟೆ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಬಾಗಲಕೋಟೆಯಲ್ಲಿ ಡಿಸೆಂಬರ್ 10,11,17,18 ಮತ್ತು 23ರಂದು ಸ್ಲಾಟ್‌ಗಳನ್ನು ತೆರೆಯಲಾಗುತ್ತದೆ. ವಿಜಯಪುರ ಮತ್ತು ಹತ್ತಿರದ ಜಿಲ್ಲೆಗಳು (ಬೆಳಗಾವಿ , ಕೊಪ್ಪಳ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ | 7th Pay Commission | 7ನೇ ವೇತನ ಆಯೋಗಕ್ಕೆ ಕಚೇರಿಯ ಜಾಗವೂ ನಿಗದಿ; ಮುಂದಿನ ವಾರದಿಂದ ಕಾರ್ಯಾರಂಭ?

Exit mobile version