ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು (7th Pay Commission) ಶನಿವಾರ ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಸಲ್ಲಿಸಿದೆ. ವರದಿಯನ್ನು ಸ್ವೀಕರಿಸಿದ ಸಿದ್ದರಾಮಯ್ಯ ಅವರು ವರದಿಯಲ್ಲಿರುವ ಅಂಶಗಳನ್ನು ಆರ್ಥಿಕ ಇಲಾಖೆಯ (Finance department) ಪರಿಶೀಲನೆ ಒಪ್ಪಿಸಲಾಗುವುದು, ಬಳಿಕ ವೇತನ ಹೆಚ್ಚಳದ (Recommendation for salary hike) ಸಂಬಂಧಿತ ಶಿಫಾರಸನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗವು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿತು. ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ , ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾ ಡಾ.ಕೆ.ವಿ. ತ್ರಿಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಫ್ಸಿಬಾರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು.
ಈ ವರದಿಯಲ್ಲಿ ರಾಜ್ಯ ಸರ್ಕಾರಿ (Government Employees) ನೌಕರರ ವೇತನವನ್ನು ಶೇ. 27ರಷ್ಟು ಹೆಚ್ಚಿಸಲು ಶಿಫಾರಸು (Recommendation for Salary hike) ಮಾಡಲಾಗಿದೆ. ಇದರ ಜತೆಗೆ ಮೂಲ ವೇತನವನ್ನು (Basic salary) 27,000 ರೂ.ಗಳಿಗೆ ಹೆಚ್ಚಿಸುವಂತೆಯೂ ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ : 7th Pay Commission : 7ನೇ ವೇತನ ಆಯೋಗದ ವರದಿ ಸಲ್ಲಿಕೆ; 27.5 % ವೇತನ ಹೆಚ್ಚಳಕ್ಕೆ ಶಿಫಾರಸು
ವರದಿ ಸ್ವೀಕರಿಸಿ ಸಿದ್ದರಾಮಯ್ಯ ಹೇಳಿದ್ದೇನು?
7ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ವರದಿ ಸಲ್ಲಿಸಿದ್ದಾರೆ. ನೌಕರರ ಬೇಡಿಕೆಗಳನ್ನು ಆಧರಿಸಿ ವರದಿ ನೀಡಲು ಸರ್ಕಾರ ಸಮಿತಿ ರಚಿಸಲಾಗಿತ್ತು. ಆಯೋಗ ರಚನೆಯ ಬೆನ್ನಿಗೇ ರಾಜ್ಯ ಸರ್ಕಾರ ಈಗಾಗಲೇ ಮೂಲ ವೇತನದ ಮೇಲೆ ಶೇಕಡಾ 17ರಷ್ಟು ವೇತನ ಹೆಚ್ಚಳಕ್ಕೆ ಆದೇಶ ನೀಡಿತ್ತು. ಇದೀಗ ಶೇಕಡಾ 27.5ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ. ವರದಿಯನ್ನ ಆರ್ಥಿಕ ಇಲಾಖೆ ಪರಿಶೀಲನೆ ಮಾಡಬೇಕು ಎಂದು ವರದಿ ಸ್ವೀಕರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದರು.
ಆಯೋಗದ ವರದಿಯನ್ನು ಒಂದು ಬಾರಿ ಮೂರು ತಿಂಗಳ ಮಟ್ಟಿಗೆ ವಿಸ್ತರಿಸಲಾಗಿತ್ತು. ಆಯೋಗದ ಅವಧಿ ಮಾರ್ಚ್ 15ಕ್ಕೆ ಮುಕ್ತಾಯವಾಗಿದ್ದು, ಅಂದೇ ವರದಿ ಸ್ವೀಕರಿಸಬೇಕಾಗಿತ್ತು. ಆದರೆ, ಶುಕ್ರವಾರ ಮೈಸೂರು ಪ್ರವಾಸದಲ್ಲಿದ್ದ ಕಾರಣ ವರದಿ ಸ್ವೀಕಾರ ಮಾಡಲು ಆಗಿರಲಿಲ್ಲ. ಇದೀಗ ಅಂತಿಮ ವರದಿಯನ್ನು ಕೊಟ್ಟಿದ್ದಾರೆ. ವರದಿಯಲ್ಲಿನ ಎಲ್ಲ ಶಿಫಾರಸುಗಳನ್ನು ಹೇಳಲಾಗದು. ಆದರೆ, ಮೂಲ ವೇತನ ಹೆಚ್ಚಳ ಮತ್ತು ವೇತನವನ್ನು ಶೇ. 27.5ರಷ್ಟು ಹೆಚ್ಚಿಸಲು ಶಿಫಾರಸು ಮಾಡಿರುವುದು ಹೌದು ಎಂದರು.
ಎಲ್ಲ ಶಿಫಾರಸುಗಳನ್ನು ಆರ್ಥಿಕ ಇಲಾಖೆ ಪರಿಶೀಲನೆ ಮಾಡುತ್ತದೆ. ಪರಿಶೀಲನೆ ಮಾಡಿ ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಎಲ್ಲರ ಸಲಹೆಗಳನ್ನು ಪಡೆದು ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.