ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹುದ್ದೆ ಬಗೆಗಿನ ತಿಕ್ಕಾಟ, ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದ್ದು, ನೂತನ ಅಧ್ಯಕ್ಷ ನಾಗೇಶ್ ಆಯ್ಕೆಯನ್ನು ಪ್ರಶ್ನಿಸಿ ತಡೆಯಾಜ್ಞೆ ನೀಡುವಂತೆ ಕೋರಿದ್ದ ಹಿಂದಿನ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಅವರ ಅರ್ಜಿಯನ್ನು ನ್ಯಾಯಾಲಯ (Court Verdict) ತಿರಸ್ಕರಿಸಿದೆ.
ಹೀಗಾಗಿ ಈಗ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಕೆ. ನಾಗೇಶ್ ಅವರ ವಾದವನ್ನು ಎತ್ತಿಹಿಡಿದಂತಾಗಿದೆ. ಕಳೆದ ಮೇ 28 ರಂದು ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ನಾಗೇಶ್ ಆಯ್ಕೆಗೊಂಡಿದ್ದು, ಅಧಿಕಾರ ಸ್ವೀಕರಿಸಿದ್ದರು. ಆದರೆ ಹಿಂದೆ ಅಧ್ಯಕ್ಷರಾಗಿದ್ದ ಶಂಭುಲಿಂಗನ ಗೌಡ ಪಾಟೀಲ, ತಾವು 2020 ರಲ್ಲಿಯೇ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ತಮ್ಮ ಅಧಿಕಾರದ ಅವಧಿ ಮುಕ್ತಾಯವಾಗಿಲ್ಲ. ಹೀಗಾಗಿ ನಾಗೇಶ್ ಅವರ ಆಯ್ಕೆ ಕಾನೂನು ಪ್ರಕಾರ ಸರಿಯಲ್ಲ. ಈಗಲೂ ನಾನೇ ಸಂಘದ ಅಧ್ಯಕ್ಷನಾಗಿದ್ದೇನೆ ಎಂದು ವಾದಿಸುತ್ತಿದ್ದರಲ್ಲದೆ, ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ 2020 ರಲ್ಲಿ ನಡೆದಿದ್ದ ಚುನಾವಣೆಯೇ ಅಕ್ರಮ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಕಳೆದ ಫೆಬ್ರವರಿಯಲ್ಲಿ ಆದೇಶ ಹೊರಡಿಸಿದ್ದರು. ಸಂಘದ ಬೈಲಾದಂತೆ ಸದಸ್ಯರ ಪರಿಷ್ಕೃತ ಪಟ್ಟಿ ತಯಾರಿಸಿ ಮರು ಚುನಾವಣೆ ನಡೆಸುವಂತೆ ಕೂಡ ಸೂಚಿಸಿದ್ದರು. ಇಡೀ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸುವಂತೆ ಆದೇಶ ನೀಡಲಾಗಿದ್ದರೂ ಇತ್ತೀಚೆಗೆ ಕೇವಲ ಅಧ್ಯಕ್ಷರನ್ನು ಮಾತ್ರ ಬದಲಾವಣೆ ಮಾಡಲಾಗಿದೆ. ಇದು ಗೊಂದಲಕ್ಕೆ ಕಾರಣವಾಗಿದ್ದು, ಸಂಘ ಈಗ ಇಬ್ಭಾಗವಾಗಿದೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಈ ನಡುವೆ ಸೋಮವಾರದಂದು ಸುತ್ತೋಲೆ ಹೊರಡಿಸಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸಂಘದ ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ ಕೆ.ನಾಗೇಶ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ನೂತನ ಅಧ್ಯಕ್ಷ ಕೆ. ನಾಗೇಶ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿರುವ ಚಂದ್ರಶೇಖರ ನುಗ್ಗಲಿ ಅವರು ನೀಡುವ ಸೂಚನೆ, ನಿರ್ದೇನಗಳನ್ನು ಮಾತ್ರ ಪಾಲಿಸುವಂತೆ ಸೂಚಿಸಿದೆ.
ಮೇ.28 ರಂದು ನಡೆದ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಒಂಬತ್ತು ಮಂದಿ ನಿರ್ದೇಶಕರು ಮತ್ತು 70 ಸದಸ್ಯರು ಕೆ. ನಾಗೇಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಜಯರಂಗ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಈ ಆಯ್ಕೆ ಅಕ್ರಮವಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಇದನ್ನೂ ಓದಿ: Govt Employees News : ರಾಜ್ಯ ಸರ್ಕಾರಿ ನೌಕರರಿಗೂ ಜಿಪಿಎಫ್ ವಂತಿಗೆ ಮಿತಿ; ಐದು ಲಕ್ಷ ರೂ.ಗಳಿಗೆ ನಿಗದಿ