Site icon Vistara News

CS Shadakshari : ನೆನಪಿರಲಿ, ಸರ್ಕಾರಿ ನೌಕರರು ಸರ್ಕಾರವನ್ನೇ ಉರುಳಿಸಬಲ್ಲರು; ಷಡಾಕ್ಷರಿ ಎಚ್ಚರಿಕೆ

CS shadakshari in power point programme

ಬೆಂಗಳೂರು: ಸರ್ಕಾರಗಳು ರಾಜ್ಯ ಸರ್ಕಾರಿ ನೌಕರರನ್ನು ಎದುರು ಹಾಕಿಕೊಂಡ ಸಂದರ್ಭದಲ್ಲಿ ಏನೇನಾಗಿದೆ ಎಂದು ದೇಶಾದ್ಯಂತ ಹಲವಾರು ಉದಾಹರಣೆಗಳು ಸಿಗುತ್ತವೆ. ನಮ್ಮ ಸರ್ಕಾರಿ ನೌಕರರು ಪ್ರಬುದ್ಧರಿದ್ದಾರೆ. ಸಮಯಕ್ಕೆ ಸರಿಯಾಗಿ ತೀರ್ಮಾನ ಕೈಗೊಳ್ಳುತ್ತಾರೆ. ತಮಿಳುನಾಡಿನಲ್ಲಿ, ಆಂಧ್ರದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಅವರು ತೀರ್ಮಾನ ಮಾಡಬಲ್ಲರು: ಹೀಗೊಂದು ಎಚ್ಚರಿಕೆಯನ್ನು ತಣ್ಣಗೆ ದಾಟಿಸಿದ್ದಾರೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ (Karnataka State Employees Association President) ಸಿ.ಎಸ್‌. ಷಡಾಕ್ಷರಿ (CS Shadakshari) ಅವರು.

ಷಡಾಕ್ಷರಿ ಅವರು ಶಿವಮೊಗ್ಗದಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿ ಬೆಳೆಯುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾವಣೆ (Shadakshari Transfer) ಮಾಡಲಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿವೆ. ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa), ಶಾಸಕ ಬಿ.ವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ ಅವರಿಗೆ ಆಪ್ತರಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್‌ ಸರ್ಕಾರ ಅವರನ್ನು ಟಾರ್ಗೆಟ್‌ ಮಾಡಿದೆ ಎನ್ನುವ ಚರ್ಚೆಗಳಿವೆ. ಇದರ ಬಗ್ಗೆ ಸಿ.ಎಸ್‌. ಷಡಾಕ್ಷರಿ ಅವರೇ ಮಾತನಾಡಿದ್ದಾರೆ. ವಿಸ್ತಾರ ನ್ಯೂಸ್‌ನ (Vistara News) ಪೊಲಿಟಿಕಲ್‌ ಬ್ಯೂರೋ ಹೆಡ್‌ ಮಾರುತಿ ಪಾವಗಡ ಅವರು ನಡೆಸಿದ ಪವರ್‌ ಪಾಯಿಂಟ್‌ ಸಂದರ್ಶನದಲ್ಲಿ (Power point Programe) ಹಲವಾರು ವಿಚಾರಗಳನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಮಾರುತಿ ಪಾವಗಡ ಪ್ರಶ್ನೆ: ಷಡಾಕ್ಷರಿ ಅವರು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು. ಕಾರ್ಯಾಂಗ ಮತ್ತು ಶಾಸಕಾಂಗವನ್ನು ಬೆಸೆಯುವವರು. ಎಲ್ಲರ ಜತೆಗೆ ಚೆನ್ನಾಗಿ ಇರಬೇಕಾಗುತ್ತದೆ. ಆದರೆ, ಒಂದು ವಿಷಯ ಏನೆಂದರೆ ನೀವು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ ವಿಜಯೇಂದ್ರ ಮತ್ತು ಬಿ.ವೈ ರಾಘವೇಂದ್ರ ಅವರ ಅತ್ಯಾಪ್ತರು. ಶಿವಮೊಗ್ಗದಲ್ಲಿ ನಿಮ್ಮದೇ ಆದ ಒಂದು ಪ್ರಭಾ ವಲಯವನ್ನು ಹೊಂದಿದ್ದೀರಿ. ಇದೇ ಕಾರಣಕ್ಕೆ ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾದ್ರಾ ನೀವು? ಈ ವಿಷಯದಲ್ಲಿ ಏನಾದರೂ ದ್ವೇಷ ಅಥವಾ ವೈಷಮ್ಯ ಇದೆಯಾ? ಅದರ ಜತೆಗೆ ಷಡಾಕ್ಷರಿ ಅವರು ಸರ್ಕಾರಿ ಕೆಲಸ ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಹೀಗಾಗಿ ಅವರನ್ನು ಶಿವಮೊಗ್ಗ ಬಿಟ್ಟು ಕೋಲಾರಕ್ಕೆ ಟ್ರಾನ್ಸ್‌ಫರ್‌ ಮಾಡಿ ಎಂಬ ಶಿಫಾರಸನ್ನು ಮಧು ಬಂಗಾರಪ್ಪ ಅವರು ಮಾಡಿದ್ದಾರೆ. ಇದರ ಆಧಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕ್ರಮ ಕೈಗೊಂಡಿದ್ದಾರೆ. ಇದು ಸರಿಯಾ? ತಪ್ಪಾ?

ಸಿ.ಎಸ್‌. ಷಡಾಕ್ಷರಿ: ನನ್ನನ್ನು ಪ್ರಭಾವಿ ಎಂಬ ಕಾರಣಕ್ಕಾಗಿ ವರ್ಗಾವಣೆ ಮಾಡಿದ್ರಾ ಹಾಗಾದ್ರೆ. ನಾನು ಇಷ್ಟೊಂದು ಪ್ರಭಾವಿ ಅಂತ ನನಗೇ ಗೊತ್ತಿರಲಿಲ್ಲ. ಇದನ್ನೆಲ್ಲ ಕೇಳುವಾಗ ಸಂತೋಷವೂ ಆಗುತ್ತದೆ. ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ನನಗೆ ಸಾರ್ವಜನಿಕರ ನಡುವೆ ಒಳ್ಳೆಯ ಒಡನಾಟವಿದೆ. ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಪರಿಚಯವಿರುತ್ತಾರೆ. ನಾನು ನಾಗರಿಕರ ಸಮಸ್ಯೆಗಳಿಗೆ, ಸರ್ಕಾರಿ ಸಿಬ್ಬಂದಿಗಳಿಗೆ ಸ್ಪಂದಿಸಿದ್ದೇನೆ. ಇದರ ಪರಿಣಾಮವಾಗಿ ನನಗೆ ಒಳ್ಳೆಯ ಹೆಸರು ಇದೆ. ಬಹುಶಃ ಆ ಪ್ರಭಾವವೂ ಇದೆ ನನಗೆ.

ನಾನು ಕಳೆದ ಹತ್ತು ವರ್ಷಗಳಲ್ಲಿ ಯಾವುದಾದರೂ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದರೆ, ಮಾತನಾಡಿದ್ದರೆ ಒಂದು ದಾಖಲೆ ಕೊಡಿ ಸರ್‌. ನಾನು ಅಂಥ ಯಾವುದೇ ಕೆಲಸ ಮಾಡಿಲ್ಲ. ಆದರೆ, ಪ್ರಭಾವ ಇದೆ ಎಂಬ ಕಾರಣಕ್ಕಾಗಿ ಈ ರೀತಿ ಮಾಡುವುದು ಎಷ್ಟು ಸರಿ ಎನ್ನುವುದನ್ನು ಅವರೇ ತೀರ್ಮಾನಿಸಬೇಕು. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಬಹುದು.

ರಾಜ್ಯ ಸರ್ಕಾರಿ ನೌಕರರನ್ನು ಎದುರು ಹಾಕಿಕೊಂಡ ಸಂದರ್ಭದಲ್ಲಿ ಏನೇನಾಗಿದೆ ಎಂದು ದೇಶಾದ್ಯಂತ ಹಲವಾರು ಉದಾಹರಣೆಗಳು ಸಿಗುತ್ತವೆ. ಕ್ಷೇತ್ರವಾರು ಹಲವಾರು ಸಮಸ್ಯೆಗಳು ಆಗಿದ್ದನ್ನು ಗಮನಿಸಿದ್ದೇವೆ. ನಮ್ಮ ಸರ್ಕಾರಿ ನೌಕರರು ಪ್ರಬುದ್ಧರಿದ್ದಾರೆ. ಸಮಯಕ್ಕೆ ಸರಿಯಾಗಿ ತೀರ್ಮಾನ ಕೈಗೊಳ್ಳುತ್ತಾರೆ. ತಮಿಳುನಾಡಿನಲ್ಲಿ, ಆಂಧ್ರದಲ್ಲಿ ಏನೇನಾಗಿದೆ ಎಂದು ಇತಿಹಾಸವೇ ತಿಳಿಸುತ್ತದೆ. ಕರ್ನಾಟಕದಲ್ಲೂ ಸರ್ಕಾರಿ ನೌಕರರು ತೀರ್ಮಾನ ಮಾಡಬಲ್ಲರು. ಬೇರೆ ರಾಜ್ಯಗಳಲ್ಲಿ ಆಗಿದೆ ನಮ್ಮ ರಾಜ್ಯದಲ್ಲೂ ಆಗಬಹುದು.

ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳು ಶಾಸಕಾಂಗ ಮತ್ತು ಕಾರ್ಯಾಂಗ ನಡುವಿನ ಕೊಂಡಿಗಳಾಗಿ ಕೆಲಸ ಮಾಡುವವರು. ಯಾರೇ ಆಡಳಿತದಲ್ಲಿರಲಿ, ನಾವು ಒಂದೇ ರೀತಿ ಇರುತ್ತೇವೆ. ಈಗ ಈ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾಗಿವೆ. ನಾವು ಒಂದೇ ಒಂದಾದರೂ ವಿರೋಧದ ಹೇಳಿಕೆಗಳನ್ನು ಕೊಟ್ಟಿದ್ದೇವಾ? ಎನ್ನುವುದನ್ನು ಗಮನಿಸಬೇಕು.

ನನ್ನ ವರ್ಗಾವಣೆಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ

ಒಂದು ವೇಳೆ ಸರ್ಕಾರ ವರ್ಗಾವಣೆಯನ್ನು ಹಿಂಪಡೆಯದೆ ಹೋದರೆ ನಿಮ್ಮ ಮತ್ತು ಸಂಘಟನೆಯ ಮುಂದಿನ ನಡೆ ಏನು ಎಂದು ಕೇಳಿದಾಗ, ದಯವಿಟ್ಟು ನನ್ನ ವರ್ಗಾವಣೆಗೂ ಸಂಘಟನೆಗೂ ಯಾವುದೇ ಕಾರಣಕ್ಕೂ ಸಂಬಂಧ ಕಲ್ಪಿಸಬೇಡಿ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ನೌಕರರು, ಪ್ರತಿನಿಧಿಗಳು ಬಂದಿದ್ದಾರೆ. ನಾವು ಪ್ರತಿಭಟನೆ ಮಾಡಬೇಕು, ಒಂದು ದಿನ ಮುಷ್ಕರ ಮಾಡಬೇಕು ಎಂಬ ಒತ್ತಾಯ ಮಾಡಿದ್ದಾರೆ. ಆದರೆ, ನಾನು ಅವರೆಲ್ಲರಿಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡುವ ಮಾತೇ ಇಲ್ಲ ಎಂದಿದ್ದೇನೆ ಎಂದು ಸಿ.ಎಸ್‌. ಷಡಾಕ್ಷರಿ ಹೇಳಿದ್ದಾರೆ.

ನಾನು ಮಾಧ್ಯಮದ ಮೂಲಕ ಒಂದು ಮಾತನ್ನು ಅತ್ಯಂತ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಸಂಘಟನೆಯನ್ನು ಷಡಾಕ್ಷರಿ ಎನ್ನುವ ಒಬ್ಬ ನೌಕರನ ವರ್ಗಾವಣೆಯ ವಿಚಾರಕ್ಕೆ ಯಾವ ಕಾರಣಕ್ಕೂ ಬಳಸಿಕೊಳ್ಳಬಾರದು. ಅದಕ್ಕೆ ನನ್ನದೇ ವಿರೋಧವಿದೆ. ನಾನು ಸ್ಪಷ್ಟವಾಗಿ ಲಿಖಿತ ಹೇಳಿಕೆಯನ್ನೇ ನೀಡಿದ್ದೇನೆ. ವೈಯಕ್ತಿಕ ಕಾರಣಕ್ಕಾಗಿ ನಡೆದಿರುವ ಈ ವರ್ಗಾವಣೆಯನ್ನು ಯಾವ ಕಾರಣಕ್ಕೂ ಸಂಘಟನೆಗೆ ತಳುಕು ಹಾಕಬಾರದು ಎಂದು.

ನಾನೊಬ್ಬ ಸರ್ಕಾರಿ ನೌಕರ. ನನ್ನನ್ನು ದುಬೈಗೆ ವರ್ಗಾವಣೆ ಮಾಡಿಲ್ಲ, ಬೇರೆ ದೇಶಕ್ಕೆ ಮಾಡಿಲ್ಲ. ಕೋಲಾರಕ್ಕೆ ಮಾಡಿದ್ದಾರೆ. ನನಗೆ ಇದೊಂದು ದೊಡ್ಡ ಸಂಗತಿಯಲ್ಲ. ಸರ್ಕಾರಿ ನೌಕರನಾಗಿ ನನಗೆ ಇದು ಸಾಮಾನ್ಯ ಪ್ರಕ್ರಿಯೆ. ಇದಕ್ಕೂ ಸಂಘಟನೆಗೂ ತಳುಕು ಹಾಕಬೇಕಾಗಿಲ್ಲ.

ಬಹಳಷ್ಟು ಜನರು ಇದು ಸಂಘಟನೆಗೆ ಮಾಡಿದ ಅಪಮಾನ, ಇದರ ವಿರುದ್ಧ ಹೋರಾಡಬೇಕು ಎಂದು ಹೇಳಿದರು. ಆದರೆ, ಇದನ್ನು ನಾನು ಒಪ್ಪುವುದೇ ಇಲ್ಲ. ಸರ್ಕಾರಕ್ಕೆ ಪರಮಾಧಿಕಾರವಿದೆ. ಈ ರಾಜ್ಯದಲ್ಲಿ ಒಂದು ಕಾನೂನು ಇದೆ. ಇದರ ಬಗ್ಗೆ ಒಂದು ತನಿಖೆ ನಡೆಯುತ್ತದೆ. ಒಂದಲ್ಲ ಒಂದು ದಿನ ಇದರಲ್ಲಿ ಕ್ಲೀನ್‌ ಚಿಟ್‌ ಸಿಗುತ್ತದೆ. ಆಗ ಇದರ ಸತ್ಯಾಸತ್ಯತೆ ಸರ್ಕಾರಕ್ಕೆ ತಿಳಿಯುತ್ತದೆ. ಜನರಿಗೆ, ನೌಕರರಿಗಂತೂ ತಿಳಿದೇ ತಿಳಿಯುತ್ತದೆಯಲ್ವಾ? ಸರ್ಕಾರ ತಪ್ಪು ಮಾಡಿತು ಎಂದು ಜನರಿಗೆ ತಿಳಿಯುತ್ತದಲ್ವಾ?

ಈ ಸರ್ಕಾರಿ ನೌಕರರ ಸಂಘಟನೆಗೆ ಒಂದು ದೊಡ್ಡ ಇತಿಹಾಸವಿದೆ. ಸಿಪ್ಪೇ ಗೌಡರು ಅಧ್ಯಕ್ಷರಾಗಿದ್ದರು. ಅವರನ್ನು ಸರ್ಕಾರ ವಜಾ ಮಾಡಿತು. ಮೇರಿ ದೇವಸ್ಯ ಎಂಬವರನ್ನೂ ಉಚ್ಚಾಟನೆ ಮಾಡಿತು. ಆದರೆ, ನಾವು ಹೋರಾಟ ಮಾಡಲಿಲ್ಲ. ನಮ್ಮದು ತತ್ವಾಧಾರಿತ ಸಂಘಟನೆ. ನನ್ನನ್ನು ಬೇಕಾದರೂ ವಜಾ ಮಾಡಲಿ. ನೌಕರರಿದ್ದಾರೆ. ಇನ್ನೊಬ್ಬರು ಯಾರೋ ಬಂದು ಮುನ್ನಡೆಸಿಕೊಂಡು ಹೋಗುತ್ತಾರೆ.

ಸಾಕಷ್ಟು ಜನರು ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಷಡಾಕ್ಷರಿ ಅವರಿಗೆ ಈ ರೀತಿ ಆಗಬಾರದಿತ್ತು ಎಂದು ಹೇಳಿದ್ದಾರೆ. ಅವರಿಗೆ ನಾನು ಕೃತಜ್ಞತೆ ಹೇಳುತ್ತೇನೆ. ನಾನು ಕೂಡಾ ಸರ್ಕಾರಕ್ಕೆ ಅದೇ ಮನವಿಯನ್ನು ಮಾಡುತ್ತೇನೆ. ದಯವಿಟ್ಟು ಮರುಪರಿಶೀಲನೆ ಮಾಡಿ ಎನ್ನುತ್ತೇನೆ. ಆಗಲ್ಲ ಎಂದರೆ ಒಪ್ಪಿಕೊಳ್ಳುತ್ತೇನೆ. ಆದರೆ, ನೌಕರರ ಬೇಡಿಕೆಗಳನ್ನು ಇದೇ ರೀತಿಯಾಗಿ ಮುಂದಿಡುತ್ತೇವೆ. ಸರ್ಕಾರ ಒಪ್ಪದೆ ಇದ್ದರೆ ಹೋರಾಟ ಮಾಡಿಯಾದರೂ ನೌಕರರ ಹಕ್ಕುಗಳನ್ನು ಪಡೆದೇ ತೀರುತ್ತೇವೆ.

ಇದನ್ನೂ ಓದಿ: CS Shadakshari : ಹಾಗಿದ್ದರೆ ಮಣ್ಣು ಸಾಗಾಟದ ಕಥೆ ಸುಳ್ಳಾ? ಷಡಾಕ್ಷರಿ ಶಿಫಾರಸು ಪತ್ರ ಸುಳ್ಳಾ?
ಇದನ್ನೂ ಓದಿ: CS Shadakshari : ಸಂಘಟನೆ ಹೆಸರಲ್ಲಿ 1 ರೂ. ಗಳಿಸಿದ್ದರೆ ಈ ಕ್ಷಣವೇ ರಾಜೀನಾಮೆ; ಷಡಾಕ್ಷರಿ ಸವಾಲ್‌

ಇದನ್ನೂ ಓದಿ: CS Shadakshari : ನನಗೆ ಕ್ಲೀನ್‌ ಚಿಟ್‌ ಸಿಕ್ಕಿದೆ, ಇನ್ನೇನು ಕ್ರಮ ಕೈಗೊಳ್ತಾರೆ: ಷಡಾಕ್ಷರಿ ಪ್ರಶ್ನೆ

ಏಳನೇ ವೇತನ ಆಯೋಗದ ವರದಿ ಜಾರಿಗೆ ಹೋರಾಟ ಹೇಗೆ?

ಏಳನೇ ವೇತನ ಆಯೋಗದ ವರದಿ ಬರಬೇಕಾಗಿತ್ತು. ಆದರೆ, ಅದರ ಅವಧಿ ವಿಸ್ತರಣೆಯಾಗಿದೆ. ಈಗ ಷಡಾಕ್ಷರಿ ಅವರ ವರ್ಗಾವಣೆ ಆಗಿದೆ. ಈಗ ಈ ವಿಚಾರದಲ್ಲಿ ಏನಾದರೂ ತಯಾರಿ ನಡೆಸಿದ್ದೀರಾ? ಎಂಬ ವಿಸ್ತಾರ ನ್ಯೂಸ್‌ ಪ್ರಶ್ನೆಗೆ ಷಡಾಕ್ಷರಿ ಹೇಳಿದ್ದು ಹೀಗೆ:

ನಮ್ಮದು ತಯಾರಿ ನಿರಂತರ ಸರ್.‌ 2022ರಿಂದಲೇ ತಯಾರಿ ನಡೆದಿದೆ. 2022ರ ನವೆಂಬರ್‌ನಲ್ಲಿ ಒಂದು ಮನವಿ ಕೊಟ್ಟಿದ್ದೇವೆ. ಡಿಸೆಂಬರ್‌ನಲ್ಲಿ ತಾಲೂಕು ಮತ್ತು ಡಿಸಿ ಆಫೀಸಿಗೆ ಮನವಿ ಕೊಟಿದ್ದೇವೆ. ಈ ವರ್ಷದ ಫೆಬ್ರವರಿಯಲ್ಲಿ ಬಜೆಟ್‌ ಮಂಡನೆಯಾದಾಗ ಅದರಲ್ಲಿ ಏಳನೇ ವೇತನ ಆಯೋಗದ ಉಲ್ಲೇಖವೇ ಇರಲಿಲ್ಲ. ಬಜೆಟ್‌ ಮಂಡಿಸಿದ ದಿನವೇ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದೆವು. ಅವರಿಗೆ ಮನವರಿಕೆ ಮಾಡಿಕೊಟ್ಟಾಗಲೂ ಅವರು ಸ್ಪಂದಿಸಲಿಲ್ಲ. ಆಗ ನಾವು ಹೋರಾಟಕ್ಕೆ ಕರೆ ಕೊಟ್ಟಿದ್ದೆವು. ಆಗ ಸರ್ಕಾರ ನಮ್ಮನ್ನು ಮತ್ತೆ ಮಾತುಕತೆಗೆ ಕರೆದು ಈಗಷ್ಟೇ ವೇತನ ಆಯೋಗ ರಚನೆಯಾಗಿದೆ. ಅದರ ವರದಿ ಬರಲು ಐದಾರು ತಿಂಗಳು ಬೇಕು. ಅದು ಬಂದ ನಂತರ ಪರಿಶೀಲಿಸುತ್ತೇವೆ. ಈಗ ಮಧ್ಯಂತರ ಪರಿಹಾರ ನೀಡುತ್ತೇವೆ ಎಂದು ತಿಳಿಸಿತ್ತು. ಎಲ್ಲರೂ ಕುಳಿತು ತೀರ್ಮಾನ ಮಾಡಿ 17 ಶೇಕಡಾ ಮಧ್ಯಂತರ ಪರಿಹಾರವನ್ನು ಸರ್ಕಾರ ಕೊಟ್ಟಿದೆ. ಮುಂದೆ ರಾಷ್ಟ್ರೀಯ ಪಿಂಚಣಿ ಯೋಜನೆಯ ಬಗ್ಗೆಯೂ ಬೇಡಿಕೆ ಮಂಡಿಸಿದ್ದೇವೆ. ಬೇರೆ ರಾಜ್ಯಗಳಲ್ಲಿ ಅನುಷ್ಠಾನ ಗಮನಿಸಿ ಮುಂದುವರಿಯೋಣ ಎಂಬ ಸಲಹೆಯನ್ನೂ ನಾವು ಒಪ್ಪಿದ್ದೇವೆ. ಮುಂದಿನ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ ಬಜೆಟ್‌ ಮಂಡನೆ ಮಾಡುವ ಸಂದರ್ಭದಲ್ಲಿ ಏಳನೇ ವೇತನ ಆಯೋಗದ ವರದಿ ಜಾರಿಗೆ ತೀವ್ರವಾದ ಒತ್ತಾಯ ಮಾಡಲಿದ್ದೇವೆ.

ನಾನು ಗಮನಿಸಿರುವ ಪ್ರಕಾರ ಈಗ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಸ್ವಲ್ಪ ಸಂಪನ್ಮೂಲದ ಕೊರತೆ ಎದುರಿಸುತ್ತಿದೆ. ಅದು ನಮಗೂ ಅರ್ಥವಾಗುತ್ತದೆ. ಹಾಗಾಗಿ ನಾವೇನೂ ಜಗಳಕ್ಕೆ ನಿಲ್ಲುವುದಿಲ್ಲ. ಬಜೆಟ್‌ ಬಳಿಕವೇ ಜಾರಿ ಮಾಡಿ ಎಂದು ಕೋರುತ್ತೇವೆ.

ಷಡಾಕ್ಷರಿ ಅವರ ಸಂದರ್ಶನದ ಪೂರ್ಣ ವಿಡಿಯೊ ಇಲ್ಲಿದೆ

Exit mobile version