ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ (Karnataka State Employees Association President) ಸಿ.ಎಸ್. ಷಡಾಕ್ಷರಿ (CS Shadakshari) ಅವರನ್ನು ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾವಣೆ ಮಾಡಲು ಕಾರಣವಾಗಿದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಬರೆದಿರುವ ಒಂದು ಪತ್ರ. ಆ ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖವಾಗಿದ್ದು ಷಡಾಕ್ಷರಿ ಅವರು ಶಿವಮೊಗ್ಗದ ಕೆರೆಯೊಂದರಿಂದ ಲೇಔಟ್‌ಗೆ ಮಣ್ಣು ಸಾಗಾಟಕ್ಕೆ ಅವಕಾಶ ಮಾಡಿಕೊಡುವ ಮೂಲಕ ರಾಜ್ಯ ಸರ್ಕಾರಕ್ಕೆ 71 ಲಕ್ಷ ರೂ. ನಷ್ಟ ಉಂಟು ಮಾಡಿದ್ದಾರೆ ಎನ್ನುವುದು. ಅಂದರೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ಅವರು ಅಧಿಕಾರಿಗಳಿಗೆ ಪ್ರಭಾವ ಬೀರಿ ಮಣ್ಣು ಸಾಗಾಟಕ್ಕೆ ಅನುಮತಿ ಕೊಡಿಸಿದ್ದಾರೆ ಎಂಬುದು ಆರೋಪ. ಇದರ ಬಗ್ಗೆ ಸಿ.ಎಸ್. ಷಡಾಕ್ಷರಿ ಅವರು ವಿಸ್ತಾರ ನ್ಯೂಸ್‌ನ ಪೊಲಿಟಿಕಲ್ ಬ್ಯೂರೊ ಹೆಡ್ ಮಾರುತಿ ಪಾವಗಡ ಅವರು ನಡೆಸಿಕೊಟ್ಟ ಪವರ್ ಪಾಯಿಂಟ್ ಕಾರ್ಯಕ್ರಮದಲ್ಲಿ (Power point Programme) ವಿವರಣೆಯನ್ನು ನೀಡಿದ್ದಾರೆ.
ಷಡಾಕ್ಷರಿ ಅವರು ಹೇಳಿದ ಮಣ್ಣು ಸಾಗಾಟದ ಕಥೆ ಮತ್ತು ನಂತರದ ತನಿಖೆಯ ಕಥೆ ಇಲ್ಲಿದೆ
ನೀವು ಶಿವಮೊಗ್ಗದ ಕೆರೆಯಿಂದ ಲೇಔಟ್‌ಗೆ ಮಣ್ಣು ಹೊಡೆದಿದ್ದೀರಿ, ಸರ್ಕಾರದ ಬೊಕ್ಕಸಕ್ಕೆ 70 ಲಕ್ಷ ರೂ. ನಷ್ಟ ಮಾಡಿದ್ದೀರಿ ಎಂಬ ಆರೋಪವಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಷಡಾಕ್ಷರಿ ಅವರು, ನಾನು ಮಣ್ಣು ಹೊಡೆಯಲು ನನ್ನ ಬಳಿ ಭೂಮಿ ಬೇಕಲ್ಲ ಎಂದು ಪ್ರಶ್ನಿಸಿದರು.
ಇದು ಲೇಔಟ್ ಮಾಲೀಕರು ಮತ್ತು ಸರ್ಕಾರದ ನಡುವಿನ ವಿಷಯ. ನಾನು ಇದರಲ್ಲಿ ಮಣ್ಣು ಸಾಗಾಟದಲ್ಲಿ ಭಾಗಿಯಾಗಿದ್ದೇನಾ? ನನ್ನ ಜಾಗದ ಮಣ್ಣು ಕೊಟ್ಟಿದ್ದೇನಾ? ಅಥವಾ ನಾನು ಮಣ್ಣು ಮೈನಿಂಗ್ ಮಾಫಿಯಾ ಮಾಡಿ ಎಲ್ಲಿಂದಾದರೂ ಮಣ್ಣು ಸಾಗಾಟ ಮಾಡಿ ತುಂಬಿಸಿದ್ದೇನಾ? ಏನೂ ಇಲ್ಲ. ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಎಂದು ನಾನೇ ಸರ್ಕಾರಕ್ಕೆ ಮನವಿ ಮಾಡಿದ್ದೇವೆ, ಮುಕ್ತವಾಗಿ ಆಹ್ವಾನ ಮಾಡಿದ್ದೇನೆ.
ಹಾಗಿದ್ದರೆ ಲೇಔಟ್‌ಗೆ ಮಣ್ಣು ಹಾಕಿಸುವುದಕ್ಕೆ ಸಂಬಂಧಿಸಿ ನೀವು ಯಾವುದೇ ಶಿಫಾರಸು ಪತ್ರ ಕೊಟ್ಟಿಲ್ವಾ? ಎಂದು ವಿಸ್ತಾರ ನ್ಯೂಸ್ ಕೇಳಿದಾಗ ಷಡಾಕ್ಷರಿ ಅವರು ವಿವರಣೆ ನೀಡಿದರು.
ಇದನ್ನೂ ಓದಿ: CS Shadakshari : ಸಂಘಟನೆ ಹೆಸರಲ್ಲಿ 1 ರೂ. ಗಳಿಸಿದ್ದರೆ ಈ ಕ್ಷಣವೇ ರಾಜೀನಾಮೆ; ಷಡಾಕ್ಷರಿ ಸವಾಲ್
ʻʻಶಿವಮೊಗ್ಗದಲ್ಲಿ ಪತ್ರಕರ್ತರಿಗೆ ಕಡಿಮೆ ದರದಲ್ಲಿ ಸೈಟುಗಳನ್ನು ನೀಡುವ ಒಂದು ಹೌಸಿಂಗ್ ಸೊಸೈಟಿ ಇದೆ. ಶುಡಾ, ಹೌಸಿಂಗ್ ಸೊಸೈಟಿಯ ದರದಲ್ಲಿ ಸೈಟು ನೀಡಲು ಸಹಕಾರ ಕಾಯಿದೆಯಡಿ ಅವಕಾಶವಿದೆ. ಅದರ ಪ್ರಕಾರ ಒಂದು ಸೊಸೈಟಿ ಮಾಡಿದ್ದೇವೆ. ಸೊಸೈಟಿಯಲ್ಲಿ ಒಬ್ಬರು ಡೆವಲಪರ್ ಅವರು ನಮಗೆ 500 ಲೋಡ್ ಮಣ್ಣು ಬೇಕು ಎಂದು ಕೇಳಿದ್ದರು. ನಾನೇನು ಮಾಡಿದ್ದೇನೆ ಎಂದರೆ ಈ ರೀತಿ ಮಣ್ಣಿನ ಅಗತ್ಯತೆ ಬಗ್ಗೆ ಮನವಿ ಮಾಡಿದ್ದಾರೆ. ಕಾನೂನು ಪ್ರಕಾರ ಅವಕಾಶವಿದ್ದರೆ ರಾಯಲ್ಟಿ ಕಟ್ಟಿಸಿಕೊಂಡು ಪರ್ಮಿಷನ್ ಕೊಡಿ ಎಂದು ಅಧಿಕಾರಿಗಳಿಗೆ ಶಿಫಾರಸು ಪತ್ರ ನೀಡಿದ್ದೇನೆ. ಅವರು ಪರ್ಮಿಷನ್ ಕೊಟ್ಟಿದ್ದಾರೆ. ಅಧಿಕೃತ ಪರ್ಮಿಷನ್ ಪಡೆದಿದ್ದಾರೆ, ರಾಯಲ್ಟಿ ಕೂಡಾ ಕಟ್ಟಿಸಿಕೊಂಡಿದ್ದಾರೆ. ಅವರದೇ ಸಮ್ಮುಖದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ವರದಿ ಬಂದಿದೆ. ಅದನ್ನು ಬಿಟ್ಟು ಬೇರೆ ಯಾರಾದರೂ ತೆಗೆದುಕೊಂಡು ಹೋಗಿದ್ದರೆ ಅದಕ್ಕೆ ನಾನು ಹೊಣೆಗಾರನಾ?ʼʼ ಎಂದು ಷಡಾಕ್ಷರಿ ಪ್ರಶ್ನೆ ಮಾಡಿದ್ದಾರೆ.
ಹಾಗಿದ್ದರೆ ಮಧು ಬಂಗಾರಪ್ಪ ಅವರು ತಿಳುವಳಿಕೆ ಇಲ್ಲದೆ ಪತ್ರ ಬರೆದಿದ್ದಾರಾ? ಎಂಬ ವಿಸ್ತಾರ ನ್ಯೂಸ್ ಪ್ರಶ್ನೆಗೆ ಈ ಬಗ್ಗೆ ನಡೆದ ತನಿಖೆಯ ವಿವರಗಳನ್ನು ನೀಡಿದರು ಷಡಾಕ್ಷರಿ.
ʻʻಈ ವಿಚಾರದಲ್ಲಿ ಮೂರು ಹಂತಗಳಲ್ಲಿ ತನಿಖೆ ಆಗಿ ಜುಲೈ, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಕ್ಲೀನ್ ಚಿಟ್ ಕೊಡಲಾಗಿದೆ. ಅದರ ಬಳಿಕ ಇವರು ಸೆ. 22ರಂದು ಮತ್ತೆ ಪತ್ರ ಬರೆಯುತ್ತಾರೆ ಎಂದರೆ ಏನರ್ಥ. ಫೈಲ್ ಕ್ಲೋಸ್ ಆದ ಮೇಲೆ ಅದೇ ಉದ್ದೇಶವನ್ನು ಇಟ್ಟುಕೊಂಡು 72 ಲಕ್ಷ ನಷ್ಟದ ತನಿಖೆ ಮಾಡಬೇಕು ಅಂದರೆ ಏನು ತನಿಖೆ ನಡೆಸಲು ಆಗುತ್ತದೆ. ನಾನು ಏನಾದರೂ ಬ್ಯೂಸಿನೆಸ್ ಮಾಡಿದ್ದೇನಾ? ನನ್ನ ಭೂಮಿ ಏನಾದರೂ ಇದೆಯಾ?ʼʼ ಎಂದು ಪ್ರಶ್ನಿಸಿದರು.
ಇದರ ಲೋಕಾಯುಕ್ತ ತನಿಖೆಯೂ ನಡೆಯುತ್ತಿದೆ! ನಾನು ಪಾರ್ಟಿಯೇ ಅಲ್ಲ
ಮತ್ತೊಂದು ವಿಷಯ ಹೇಳಬಯಸುತ್ತೇನೆ, ಇದೇ ವಿಷಯಕ್ಕೆ ಸಂಬಂಧಿಸಿ ಲೋಕಾಯುಕ್ತ ಕೂಡಾ ತನಿಖೆ ನಡೆಯುತ್ತಿದೆ. ಪಂಚಾಯಿತಿ ಪಿಡಿಒ, ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಎಂಜಿನಿಯರ್, ಮೈನ್ಸ್ ಎಂಡ್ ಜಿಯೋಲಜಿ ಎಂಜಿನಿಯರ್‌ಗೆ ನೋಟಿಸ್ ನೀಡಲಾಗಿದೆ. ನನ್ನ ವಿರುದ್ಧವೂ ಸ್ಥಳೀಯರೊಬ್ಬರು ದೂರು ನೀಡಿದ್ದರು. ಆದರೆ, ಲೋಕಾಯುಕ್ತ ನನ್ನನ್ನು ಪಾರ್ಟಿ ಮಾಡಿಲ್ಲ. ಎರಡು ತಿಂಗಳಿನಿಂದ ತನಿಖೆ ನಡೆಯುತ್ತಿದೆ. ಅದರ ವರದಿ ಬರಲಿ. ಆ ವರದಿಗಳಲ್ಲಿ ಷಡಾಕ್ಷರಿ ತಪ್ಪಿತಸ್ಥ ಎಂದು ಬಂದರೆ ಅದರ ಬಗ್ಗೆ ಚರ್ಚೆ ಮಾಡೋಣ. ಈಗ ನಾನು ಆರೋಪಿಯೂ ಅಲ್ಲ, ಅಪರಾಧಿಯೂ ಅಲ್ಲ. ಹಾಗಿರುವಾಗ ಇದೆಲ್ಲ ಯಾಕೆ ನಡೆಯಬೇಕು? ಎಂದು ಷಡಾಕ್ಷರಿ ಪ್ರಶ್ನಿಸಿದರು.
ʻʻಮಾನ್ಯ ಶಿಕ್ಷಣ ಸಚಿವರು ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಕಾನೂನು ಗೆಲ್ಲಲಿ ಎಂದಿದ್ದಾರೆ. ನಾವು ಕೂಡಾ ಅದನ್ನೇ ಹೇಳುತ್ತಿದ್ದೇವೆ ಸತ್ಯ, ಧರ್ಮ ನ್ಯಾಯ ಮಾತ್ರ ಗೆಲ್ಲೋದು. ಇಲ್ಲದ್ದೇನೋ ಮಾಡಲು ಹೋದರೆ ನಮಗೂ ಕಾನೂನು ಗೊತ್ತಿದೆಯಲ್ವಾ? ಈ ದೇಶದಲ್ಲಿ ನ್ಯಾಯ ಇದೆಯಲ್ವಾ? ಶಿಕ್ಷಣ ಸಚಿವರು ಏನೋ ತಪ್ಪಾಗಿ ಅರ್ಥ ಮಾಡಿಕೊಂಡು ಈ ರೀತಿ ಮಾಡಿರಬಹುದು ಎಂದು ಭಾವಿಸುತ್ತೇನೆ. ನಾನೇನೂ ಅದರ ಬಗ್ಗೆ ತಕರಾರು ಮಾಡುವುದಿಲ್ಲ, ವಿರೋಧವನ್ನು ವ್ಯಕ್ತಪಡಿಸುವುದಿಲ್ಲ. ನೋಡೋಣʼʼ ಎಂದು ಹೇಳಿದರು.
ಷಡಾಕ್ಷರಿ ಅವರಿಗೆ ಶಿವಮೊಗ್ಗದಲ್ಲಿರುವ ಆಸ್ತಿ ಎಷ್ಟು?
ಷಡಾಕ್ಷರಿ ಅವರು ತನಗೆ ಶಿವಮೊಗ್ಗದಲ್ಲಿ ಒಂದು ಅಡಿ ಜಾಗವೂ ಇಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ಅದರ ಬಗ್ಗೆ ವಿಸ್ತಾರ ನ್ಯೂಸ್ ಸ್ಪಷ್ಟನೆ ಬಯಸಿದಾಗ, ʻʻನಾನು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಡಿಯಲ್ಲಿ ಒಂದು 30*40 ಸೈಟ್ ಪಡೆದುಕೊಂಡಿದ್ದೇನೆ. ಇದನ್ನು ಸರ್ಕಾರದ ಅನುಮತಿಯನ್ನು ಪಡೆದೇ ಮಾಡಿದ್ದೇನೆ. ಅದು ಕೂಡಾ 14 ವರ್ಷಗಳ ಕೆಳಗೆ. ಅದನ್ನು ಬಿಟ್ಟರೆ ಶಿವಮೊಗ್ಗದಲ್ಲಿ, ಇಡೀ ರಾಜ್ಯದಲ್ಲಿ ಒಂದಡಿ ಜಾಗವೂ ನನ್ನ ಹೆಸರಿನಲ್ಲಿ ಇಲ್ಲ. ಇದ್ದರೆ ನಾನು ಯಾವುದೇ ತನಿಖೆಗೂ ಸಿದ್ಧನಿದ್ದೇನೆʼʼ ಎಂದು ಸವಾಲು ಹಾಕಿದರು.