Site icon Vistara News

CS Shadakshari : ಸಂಘಟನೆ ಹೆಸರಲ್ಲಿ 1 ರೂ. ಗಳಿಸಿದ್ದರೆ ಈ ಕ್ಷಣವೇ ರಾಜೀನಾಮೆ; ಷಡಾಕ್ಷರಿ ಸವಾಲ್‌

CS Shadakshari in Power point programme

ಬೆಂಗಳೂರು: ನಾನು ಒಬ್ಬೇ ಒಬ್ಬ ನೌಕರನಿಂದ ಒಂದೇ ಒಂದು ರೂಪಾಯಿ ಸಂಗ್ರಹ ಮಾಡಿದ್ದೇನೆ ಎಂದು ಆರು ಲಕ್ಷ ಜನರಲ್ಲಿ ಒಬ್ಬನೇ ಒಬ್ಬ ಹೇಳಿದರೆ ಸಾಕು ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಮಾಧ್ಯಮದ ಮುಂದೆ ಸವಾಲು ಹಾಕುತ್ತೇನೆ; ಹೀಗೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ (Karnataka State Employees Association President) ಸಿ.ಎಸ್‌. ಷಡಾಕ್ಷರಿ (CS Shadakshari) ಅವರು.

ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರು ಬರೆದ ಪತ್ರದ ಆಧಾರದಲ್ಲಿ ಸಿ.ಎಸ್‌. ಷಡಾಕ್ಷರಿ ಅವರನ್ನು ಶಿವಮೊಗ್ಗದಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಈ ಪತ್ರದಲ್ಲಿ ಉಲ್ಲೇಖವಾದ ಹಲವಾರು ಅಂಶಗಳಿಗೆ ಸಂಬಂಧಿಸಿ ವಿಸ್ತಾರ ನ್ಯೂಸ್‌ ಪವರ್‌ ಪಾಯಿಂಟ್‌ ಪ್ರೋಗ್ರಾಂನಲ್ಲಿ (Power point Programe) ಅವರು ಉತ್ತರ ನೀಡಿದರು. ಶಿವಮೊಗ್ಗದಲ್ಲಿ ಮಣ್ಣು ಸಾಗಾಟ ಮಾಡಿದ ಆರೋಪ, ಅದರಿಂದ ಸರ್ಕಾರಕ್ಕೆ ಆದ ನಷ್ಟದ ಬಗ್ಗೆಯೂ ಉತ್ತರ ನೀಡಿದರು.

ಈ ನಡುವೆ, ಪ್ರತಿಭಟನೆ ಹೆಸರಿನಲ್ಲಿ ಷಡಾಕ್ಷರಿ ಅವರು ಕಲೆಕ್ಷನ್‌ ಮಾಡುತ್ತಾರೆ ಎಂಬ ಆರೋಪ ಪದೇಪದೆ ಕೇಳಿಬರುತ್ತಿದೆಯಲ್ಲಾ ಎಂಬ ವಿಸ್ತಾರ ನ್ಯೂಸ್‌ ಪೊಲಿಟಿಕಲ್‌ ಬ್ಯೂರೊ ಹೆಡ್‌ ಮಾರುತಿ ಪಾವಗಡ ಅವರ ಪ್ರಶ್ನೆಗೆ ನೇರ ಮಾತುಗಳಲ್ಲಿ ಷಡಾಕ್ಷರಿ ಉತ್ತರ ನೀಡಿದರು.

ʻʻʻನೀವು ಈ ಪ್ರಶ್ನೆಯನ್ನು ನನ್ನನ್ನು ತಪ್ಪಾಗಿ ಕೇಳಿದ್ದೀರಿ. ಸಂಘಟನೆಯ ಹೆಸರಿನಲ್ಲಿ, ಪ್ರತಿಭಟನೆಯ ಹೆಸರಿನಲ್ಲಿ 5,000 ರೂ. ಹತ್ತು ಸಾವಿರ ರೂ. ಸಂಗ್ರಹ ಮಾಡಿ ಕೊನೆಗೆ ಏನೂ ಮಾಡದೆ ಹೋದವರು ತುಂಬ ಜನ ಇದ್ದಾರೆ. ಆದರೆ, ನಾನು ಹಾಗಲ್ಲ. ಸಂಘಟನೆಯ ಹೆಸರಿನಲ್ಲಿ ನಾನು ಒಂದು ರೂಪಾಯಿ ಗಳಿಸಿದ್ದೇನೆ ಎಂದು ಸಾಬೀತಾದರೆ ಮಾಧ್ಯಮದ ಮುಂದೆಯೇ ರಾಜೀನಾಮೆ ಕೊಡುತ್ತೇನೆ. ಒಬ್ಬನೇ ಒಬ್ಬ ನೌಕರ ನನ್ನ ಮೇಲೆ ಲಿಖಿತವಾಗಿ ದೂರು ನೀಡಿದರೆ ಹುದ್ದೆಯನ್ನು ತ್ಯಜಿಸುತ್ತೇನೆʼʼ ಎಂದು ಅವರು ಹೇಳಿದರು.

ಇದನ್ನೂ ಓದಿ: CS Shadakshari : ನನಗೆ ಕ್ಲೀನ್‌ ಚಿಟ್‌ ಸಿಕ್ಕಿದೆ, ಇನ್ನೇನು ಕ್ರಮ ಕೈಗೊಳ್ತಾರೆ: ಷಡಾಕ್ಷರಿ ಪ್ರಶ್ನೆ

ನಮ್ಮದು ಒಂದೇ ಒಂದು ಅಪಸ್ವರವಿಲ್ಲದ ತೀರ್ಮಾನ

ʻʻನಮ್ಮ ಸಂಘಟನೆಯ ಎಲ್ಲ ಆಡಿಟ್‌ ರಿಪೋರ್ಟ್‌ ಎಲ್ಲ ಆರು ಲಕ್ಷ ನೌಕರರಿಗೆ ತಲುಪುತ್ತದೆ. ಯಾರಾದರೂ ಒಬ್ಬರು ಇದರಲ್ಲಿ ತಪ್ಪಿದೆ ಎಂದು ಬರಹದ ಮೂಲಕ ಹೇಳಿಕೆ ನೀಡಲಿ ನೋಡೋಣ ಸರ್‌. ನಾನು ಅಧ್ಯಕ್ಷನಾದ ಬಳಿಕ 18 ಪ್ರಮುಖ ಮೀಟಿಂಗ್‌ಗಳನ್ನು ಮಾಡಿದ್ದೇನೆ. ಅದರಲ್ಲಿ ಒಂದೇ ಒಂದು ಅಪಸ್ವರ ಇಲ್ಲದೆ ಸರ್ವಾನುಮತದ ತೀರ್ಮಾನವನ್ನು ಮಾಡಿದ್ದೇವೆ. ಇದು ನನ್ನ ಅಧ್ಯಕ್ಷತೆಯ ಅವಧಿಯ ವಿಶೇಷʼʼ ಎಂದು ಷಡಾಕ್ಷರಿ ಹೇಳಿದರು.

ನಾನು ಅಧ್ಯಕ್ಷನಾದ ಹೊತ್ತಿನಲ್ಲಿ ಸಂಘದಲ್ಲಿ ಹಣವೇ ಇರಲಿಲ್ಲ

ʻʻನಾನು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡಿದ್ದೇನೆ ಎಂದು ಈ ರಾಜ್ಯದ ಆರು ಲಕ್ಷ ಜನ ಸರ್ಕಾರಿ ನೌಕರರು ಒಪ್ಪಿಕೊಂಡಿದ್ದಾರೆ. ನಿಜ ಹೇಳಬೇಕು ಎಂದರೆ ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದಾಗ ಸಂಘದಲ್ಲಿ ಹಣವೇ ಇರಲಿಲ್ಲ. ಈಗ ನಾಲ್ಕುವರೆ ವರ್ಷದಲ್ಲಿ 22.5 ಕೋಟಿ ರೂ. ಉಳಿಸಿದಂಥ ವ್ಯಕ್ತಿ ನಾನುʼʼ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳು ಅಂತಲ್ಲ, ಯಾರಾದರೂ ಕೇಳಿದರೆ ಒಳ್ಳೆಯದಿತ್ತು

ನಿಮ್ಮನ್ನು ವರ್ಗಾವಣೆ ಮಾಡುವ ಹಂತದಲ್ಲಿ ಮುಖ್ಯಮಂತ್ರಿಗಳಾದರೂ ಕರೆದು ಒಂದು ಮಾತು ಕೇಳಬೇಕಿತ್ತಲ್ಲ.. ಯಾಕೆ ಕೇಳಿಲ್ಲ? ಅವರಿಗೂ ನೀವು ತಪ್ಪು ಮಾಡಿದ್ದೀರಿ ಎಂದೇ ತೀರ್ಮಾನವಾಗಿ ಗೊತ್ತಾಯ್ತಾ? ಎಂಬ ಪ್ರಶ್ನೆಗೆ ಷಡಾಕ್ಷರಿ ಉತ್ತರಿಸಿದ್ದು ಹೀಗೆ:

ʻʻಈಗ ಚರ್ಚೆಯಾಗುತ್ತಿರುವ ಈ ವಿವಾದ ಕಳೆದ ಜೂನ್‌ನಿಂದಲೇ ಚಾಲ್ತಿಯಲ್ಲಿದೆ. ಈ ವಿಚಾರದಲ್ಲಿ ನನಗೆ ಇದುವರೆಗೂ ಒಂದೇ ಒಂದು ನೋಟಿಸ್‌ ಕೂಡಾ ಬಂದಿಲ್ಲ. ನಾನು ಇದರಲ್ಲಿ ಇದ್ದೇನೆ ಎಂದರೆ ಒಂದು ನೋಟಿಸ್‌ ಆದರೂ ಬಂದಿರಬೇಕಲ್ಲ. ಇನ್ನು ಮುಖ್ಯಮಂತ್ರಿಗಳೇ ಕೇಳಬೇಕು ಎಂದು ನಾನೂ ಬಯಸುವುದಿಲ್ಲ. ಕೆಳಮಟ್ಟದ ಅಧಿಕಾರಿಗಳಾದರೂ ಕ್ರಮ ಕೈಗೊಳ್ಳುವ ಮುನ್ನ ಇದು ಏನು ಎನ್ನುವ ಬಗ್ಗೆ ನನ್ನಲ್ಲಿ ಕೇಳಬಹುದಿತ್ತುʼʼ ಎಂದು ಷಡಾಕ್ಷರಿ ಹೇಳಿದರು.

ʻʻಈಗಲೂ ಕಾಲ ಮಿಂಚಿಲ್ಲ. ಉನ್ನತ ಮಟ್ಟದ ತನಿಖೆಯನ್ನು ನಡೆಸಿ. ನಾನು ಅದಕ್ಕೆ ಸಿದ್ಧ ಎಂದು ನೇರವಾಗಿಯೇ ಹೇಳಿದ್ದೇನೆ. ಒಂದು ವೇಳೆ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ನಾನು ಸಿದ್ಧನಿದ್ದೇನೆ. ನಾನು ಪಲಾಯನವಾದಿಯಲ್ಲ. ಮುಖ್ಯಮಂತ್ರಿಗಳನ್ನು ನಾನು ಸೂಕ್ತ ಸಮಯದಲ್ಲಿ ಭೇಟಿ ಮಾಡುತ್ತೇನೆ. ನೌಕರರ ಸಮಸ್ಯೆಗೆ ಸ್ಪಂದಿಸುವವರು ಮುಖ್ಯಮಂತ್ರಿಗಳು. ಈ ವಿಷಯವನ್ನು ಅವರ ಗಮನಕ್ಕೆ ತರುವುದು ನಮ್ಮ ಜವಾಬ್ದಾರಿ. ತೀರ್ಮಾನ ಅವರಿಗೆ ಬಿಟ್ಟದ್ದು. ಏ ಇಲ್ಲಪ್ಪ ನೀನು ಹೋಗ್ಲೇಬೇಕು ಅಂದರೆ ಖಂಡಿತವಾಗಿಯೂ ಹೋಗುತ್ತೇನೆ. ಆದರೆ, ಅವರ ಗಮನಕ್ಕೆ ತರುವ ಕೆಲಸವನ್ನಂತೂ ನಾನು ಮಾಡಿಯೇ ಮಾಡುತ್ತೇನೆʼʼ ಎಂದು ಹೇಳಿದರು ಷಡಾಕ್ಷರಿ.

ನಾನೇ ಬೆಂಗಳೂರಿಗೆ ಡೆಪ್ಯುಟೇಷನ್‌ ಕೊಡಿ ಎಂದು ಕೇಳಿದ್ದೆ

ನಿಜವೆಂದರೆ ನನ್ನನ್ನು ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾವಣೆ ಮಾಡುವುದರಿಂದ ನನಗೆ ವ್ಯತ್ಯಾಸ ಆಗುವುದಿಲ್ಲ. ಸಂಘದ ಕಚೇರಿ ಬೆಂಗಳೂರಿನಲ್ಲೇ ಇರುತ್ತದೆ. ನಾನು ಈಗ ಶಿವಮೊಗ್ಗ ಕಚೇರಿ ಬದಲು ಕೋಲಾರ ಕಚೇರಿ ಮಾಡಬೇಕಾಗುತ್ತದೆ ಅಷ್ಟೇ ವ್ಯತ್ಯಾಸ. ಉಳಿದಂತೆ ನನ್ನ ಓಡಾಟ ಇಡೀ ರಾಜ್ಯಾದ್ಯಂತ ಇದ್ದೇ ಇರುತ್ತದೆ. ನಿಜವೆಂದರೆ ನಾನೇ ಬೆಂಗಳೂರಿಗೆ ಡೆಪ್ಯೂಟೇಷನ್‌ ಕೊಡಿ. ಇಲ್ಲಿದ್ದರೆ ಅನುಕೂಲವಾಗುತ್ತದೆ ಎಂದು ಕೇಳಿದ್ದೆ. ಈಗ ಈ ಕಾರಣ ನೀಡಿ ಕೋಲಾರಕ್ಕೆ ಯಾಕೆ ವರ್ಗಾವಣೆ ಮಾಡಿದರೋ ಗೊತ್ತಿಲ್ಲ ಎಂದರು ಷಡಾಕ್ಷರಿ.

ಪೂರ್ಣ ಸಂದರ್ಶನಕ್ಕೆ ಈ ವಿಡಿಯೊ ನೋಡಿ

Exit mobile version